ಬೆಂಗಳೂರು: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಬರೋಬ್ಬರಿ ಮೂರೂವರೆ ವರ್ಷಗಳ ಬಳಿಕ ಬೆಂಗಳೂರಿನಲ್ಲಿರುವ ಜೆಡಿಎಸ್ ಕಚೇರಿಯ ಮೆಟ್ಟಿಲು ಹತ್ತಿದ್ದಾರೆ. ಈ ಮೂಲಕ ಜೆಡಿಎಸ್ ಪರವಾಗಿ ಚುನಾವಣಾ (Election 2023) ಅಖಾಡಕ್ಕಿಳಿಯುವ ಸೂಚನೆಯನ್ನೂ ನೀಡಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜಿಟಿಡಿಗೆ ಸಿಹಿ ತಿನ್ನಿಸಿ ಬರಮಾಡಿಕೊಂಡಿದ್ದಾರೆ.
ವೈಮನಸ್ಸಿನ ಕಾರಣ ಜಿ.ಟಿ. ದೇವೇಗೌಡ ಅವರು ಮೂರೂವರೆ ವರ್ಷದಿಂದ ಬೆಂಗಳೂರಿನ ಜೆಡಿಎಸ್ ಕಚೇರಿಯ ಜೆಪಿ ಭವನಕ್ಕೆ ಭೇಟಿ ನೀಡಿದರು. ಜತೆಗೆ ಸಿಹಿತಿಂಡಿಯ ಬಾಕ್ಸ್ ಅನ್ನೂ ಹೊತ್ತು ತಂದಿದ್ದರು. ಕಚೇರಿಗೆ ಬರುತ್ತಿದ್ದಂತೆ ಎದುರುಗೊಂಡ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಿಹಿ ತಿನ್ನಿಸಿ ಶುಭ ಕೋರಿದರು. ಇದಕ್ಕೂ ಮೊದಲು ಜಿಟಿಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ತೆರಳಿ ಸಿಹಿ ತಿನ್ನಿಸಿ ಬಂದಿದ್ದರು.
ಮುಂಬರುವ ವಿಧಾನಸಭಾ ಚುನಾವಣೆ (Election 2023) ನಿಮಿತ್ತ ಸಕಲ ರೀತಿಯಲ್ಲಿ ತಯಾರಿಗೆ ಮುಂದಾಗಿರುವ ಜೆಡಿಎಸ್ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಇದರ ಭಾಗವಾಗಿ ಕಳೆದ ಮೂರೂವರೆ ವರ್ಷದಿಂದ ಪಕ್ಷದಿಂದ ದೂರವೇ ಉಳಿದಿದ್ದ ಶಾಸಕ ಜಿ.ಟಿ. ದೇವೇಗೌಡ ಅವರ ಮನವೊಲಿಕೆ ಕಾರ್ಯವೂ ನಡೆದಿತ್ತು. ಇದಕ್ಕೆ ಸ್ವತಃ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೇ ಅಖಾಡಕ್ಕೆ ಇಳಿದಿದ್ದರು. ಈಚೆಗೆ ಮೈಸೂರಿನಲ್ಲಿ ಏರ್ಪಡಿಸಿದ್ದ ಜೆಡಿಎಸ್ ಆಂತರಿಕ ಸಭೆಗೆ ಭೇಟಿ ನೀಡಿದ್ದ ಎಚ್‌ಡಿಡಿ, ಖುದ್ದು ಜಿಟಿಡಿ ಮನೆಗೆ ಭೇಟಿ ನೀಡಿದ್ದರು.
ಪಕ್ಷ ಬಿಡುವ ಬಗ್ಗೆ ಎದ್ದಿದ್ದ ಊಹಾಪೋಹ
ಕಾರಣಾಂತರಗಳಿಂದ ಜೆಡಿಎಸ್ ಜತೆಗೆ ವೈಮನಸ್ಸು ಮೂಡಿ ಪಕ್ಷದಿಂದ ದೂರವೇ ಉಳಿದಿದ್ದ ಜಿ.ಟಿ. ದೇವೇಗೌಡ ಅವರು ಮೈಸೂರು ಭಾಗದ ಪ್ರಭಾವಿ ನಾಯಕರಲ್ಲೊಬ್ಬರು. ಆದರೆ, ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾಧ್ಯಮಗಳು ಹಲವು ಬಾರಿ ಪ್ರಶ್ನಿಸಿದಾಗಲೂ ಜಿಟಿಡಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ಕೊಡುತ್ತಿದ್ದರು. ಅಲ್ಲದೆ, ಎಚ್.ಡಿ. ಕುಮಾರಸ್ವಾಮಿ ಅವರೂ “ಪಕ್ಷ ಬಿಟ್ಟು ಹೋಗುವವರನ್ನು ತಡೆಯಲಾಗದು” ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದರು. ಈ ಮಧ್ಯೆ ಜಿಟಿಡಿ ಕಾಂಗ್ರೆಸ್ ಇಲ್ಲವೇ ಬಿಜೆಪಿಯಿಂದ ಸ್ಪರ್ಧೆ ಮಾಡಲಿದ್ದು, ಪುತ್ರ ಹರೀಶ್ ಗೌಡ ಅವರಿಗೆ ಹುಣಸೂರು ಕ್ಷೇತ್ರದಲ್ಲಿ ಟಿಕೆಟ್ ಕೊಡಿಸುತ್ತಾರೆಂಬ ಸುದ್ದಿ ಹರಡಿತ್ತು.
ಇದನ್ನೂ ಓದಿ | JDS Workshop | ಗೆಲ್ಲುವ ವಿಶ್ವಾಸವಿದ್ದರೆ ಬಿ ಫಾರಂ ಪಡೆಯಿರಿ, ಇಲ್ಲದಿದ್ದರೆ ಹಣ ನಷ್ಟ ಮಾಡಿಕೊಳ್ಳಬೇಡಿ: ಎಚ್‌ಡಿಕೆ
ಆಗಿತ್ತು ಮಾತುಕತೆ
ಕಾಂಗ್ರೆಸ್ ಸೇರ್ಪಡೆಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಹಲವು ಸುತ್ತಿನ ಮಾತುಕತೆಗಳು ನಡೆದಿತ್ತು ಎನ್ನಲಾಗಿದೆ. ಇನ್ನು ಅವರನ್ನು ಬಿಜೆಪಿಗೆ ಕರೆತರಲು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕೂಡ ಪ್ರಯತ್ನ ಪಟ್ಟಿದ್ದರು. ಆದರೆ, ಈ ಎಲ್ಲದಕ್ಕೂ ಕಾದು ನೋಡುವ ತಂತ್ರವನ್ನು ಜಿಟಿಡಿ ಅನುಸರಿಸಿದ್ದರು.
ಕಣ್ಣೀರಾಗಿದ್ದ ಜಿಟಿಡಿ
ಈ ಎಲ್ಲ ಬೆಳವಣಿಗೆ ಮಧ್ಯೆ ಈಚೆಗೆ ಎಚ್.ಡಿ. ದೇವೇಗೌಡರು ಜಿ.ಟಿ. ದೇವೇಗೌಡ ಅವರ ಮನೆಗೆ ಭೇಟಿ ನೀಡಿ ಮಾತನಾಡಿಸಿದಾಗ ಜಿಟಿಡಿ ಕಣ್ಣೀರಾಗಿದ್ದರು. ಅಲ್ಲದೆ, ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಕೊನೆಗೆ ಜಿಟಿಡಿಗೆ ಚಾಮುಂಡೇಶ್ವರಿಯಿಂದ, ಜಿಟಿಡಿ ಪುತ್ರ ಹರೀಶ್‌ಗೆ ಹುಣಸೂರಿನಿಂದ ಟಿಕೆಟ್ ನೀಡುವುದಾಗಿ ಜೆಡಿಎಸ್ ಘೋಷಣೆ ಮಾಡಿದ್ದು, ಮೂಡಿದ್ದ ವೈಮನಸ್ಸು ಸಹ ಶಮನವಾಗಿತ್ತು. ಬಳಿಕ ಜಿ.ಟಿ. ದೇವೇಗೌಡ ಅವರು ಜೆಡಿಎಸ್‌ನಲ್ಲಿಯೇ ಉಳಿಯುವುದಾಗಿ ಘೋಷಿಸಿದ್ದರು.
ಪಕ್ಷ ಸಂಘಟನೆಗೆ ಒತ್ತು ಕೊಡುವುದಾಗಿ ಹೇಳಿಕೆ
ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ಎಚ್.ಡಿ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಪ್ರಯತ್ನ ಪಡುತ್ತೇನೆ ಎಂದು ಎಚ್‌ಡಿಡಿ ಭೇಟಿ ವೇಳೆ ಜಿ.ಟಿ. ದೇವೇಗೌಡ ಹೇಳಿಕೆ ನೀಡಿದ್ದರು. ಅಲ್ಲದೆ, 2018ರ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಜಿಟಿಡಿ ಗೆದ್ದುಬೀಗಿದ್ದರು.
ಇದನ್ನೂ ಓದಿ | ಜಿ.ಟಿ. ದೇವೇಗೌಡ ಮನೆ ಬಾಗಿಲಿಗೆ ಎಚ್.ಡಿ. ದೇವೇಗೌಡ; ಕಾಲಿಗೆ ಬಿದ್ದು ಕಣ್ಣೀರಿಟ್ಟ ಜಿಟಿಡಿ, ಮುಗಿದ ಮುನಿಸು
ಜೆಡಿಎಸ್ ಕಚೇರಿಯಲ್ಲಿ ದೀಪಾವಳಿ ಆಚರಿಸಿದ ಜಿಟಿಡಿ
ಜೆಡಿಎಸ್ ಕಚೇರಿ ಜೆಪಿ ಭವನಕ್ಕೆ ಮೂರೂವರೆ ವರ್ಷದ ಬಳಿಕ ಬುಧವಾರ (ಅ.೧೬) ಭೇಟಿ ನೀಡಿದ ಜಿ.ಟಿ. ದೇವೇಗೌಡ ಅವರನ್ನು ಸಿಹಿ ತಿನ್ನಿಸಿ ಎಚ್.ಡಿ. ಕುಮಾರಸ್ವಾಮಿ ಬರಮಾಡಿಕೊಂಡಿದ್ದಾರೆ. ಈ ಮೂಲಕ ಜಿಟಿಡಿ ಜತೆ ದೀಪಾವಳಿ ಆಚರಿಸಿಕೊಂಡಿದ್ದಾರೆ.
ಗ್ರಹಣ ಮೋಕ್ಷವಾಗಿದೆ- ಜಿ.ಟಿ. ದೇವೇಗೌಡ
ಮಂಗಳವಾರ (ಅ.೨೫) ಸಂಜೆವರೆಗೂ ಸೂರ್ಯ ಗ್ರಹಣ ಇತ್ತು. ಬಳಿಕ ಮೋಕ್ಷ ಆಗಿದೆ. ನಾಡಿಗೆ ಒಳ್ಳೆಯದು ಆಗಬೇಕು ಎಂಬುದು ನನ್ನ ಆಶಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುಂಜಾನೆ ಭೇಟಿ ನೀಡಿ ಅವರಿಗೆ ಸಿಹಿ ತಿನ್ನಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೂ ಸಿಹಿ ತಿನ್ನಿಸಿದ್ದೇನೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದೇನೆ. ನಾಡಿಗೆ, ಆಡಳಿತ ಪಕ್ಷ, ವಿರೋಧ ಪಕ್ಷ ಎಲ್ಲರಿಗೂ ಒಳ್ಳೆಯದಾಗಲಿ. ಮರಳಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದು ಖುಷಿ ತಂದಿದೆ ಎಂದು ಜಿ.ಟಿ. ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಮಳೆ ಬಂದು ರಸ್ತೆಗಳು, ನಾಲೆಗಳು ಹಾಳಾಗಿವೆ. ಅವೆಲ್ಲವನ್ನೂ ಸರಿಪಡಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನೀಡಲಿ ಎಂದೂ ಜಿಟಿಡಿ ಕೋರಿದ್ದಾರೆ.
ಇದನ್ನೂ ಓದಿ | Election 2023 | ಜಿ.ಟಿ. ದೇವೇಗೌಡ ನಡೆ, ಮೀನಿನ ಹೆಜ್ಜೆಯ ಕಂಡುಹಿಡಿಯಲಾಗೋಲ್ಲ: ಎಸ್.ಟಿ. ಸೋಮಶೇಖರ್