ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ (Election 2023) ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆಯೆ ಎಂಬ ಚರ್ಚೆ ಪ್ರಾರಂಭವಾಗಿದೆ. ಸೋಲಿನ ಭೀತಿ ಹಿನ್ನೆಲೆಯಲ್ಲಿ ತಮ್ಮ ಪುತ್ರನನ್ನು ಹಿಂದೆ ಸರಿಸಿ ಭದ್ರಕೋಟೆಯಲ್ಲಿಯೇ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ವರುಣ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯು ಇಷ್ಟೆಲ್ಲ ಚರ್ಚೆಗಳಿಗೆ ಕಾರಣವಾಗಿದೆ. ಆದರೆ, ಈ ಮಾತನ್ನು ಸಿದ್ದರಾಮಯ್ಯ ಅಲ್ಲಗಳೆದಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆ ಸಂಬಂಧ ಬಹು ಚರ್ಚಿತ ವಿಷಯಗಳಲ್ಲಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರ ಹುಡುಕಾಟವೂ ಒಂದು. ಹಾಲಿ ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅವರು, ಈ ಬಾರಿ ಬೆಂಗಳೂರು ಸುತ್ತಮುತ್ತ ಸ್ಪರ್ಧೆ ಮಾಡಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಅದರ ಜತೆಗೆ ಕೋಲಾರ ಜಿಲ್ಲೆಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆಂಬ ಸುದ್ದಿಯೂ ಹರಿದಾಡಿತ್ತು. ಈಗ ಸಿದ್ದರಾಮಯ್ಯ ಅವರ ಪುತ್ರ ನೀಡಿರುವ ಹೇಳಿಕೆಯು, ವರುಣದಲ್ಲಿಯೇ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿದ್ದಾರೆ ಎಂಬ ಅಂಶವನ್ನು ಪುಷ್ಟೀಕರಿಸುತ್ತಿದೆ.
ಸೋಲಿನ ಭೀತಿಗೆ ಈ ನಿರ್ಧಾರ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಐದೂವರೆ ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ, ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನುಭವಿಸಿದ್ದರು. ಆದರೆ, ಈ ಬಾರಿ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ, ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ.
ಇದನ್ನೂ ಓದಿ | Congress President Poll | ಬಳ್ಳಾರಿಯಲ್ಲಿ ಮತ ಹಾಕಿದ ರಾಹುಲ್; ಖರ್ಗೆ, ಸಿದ್ದು, ಡಿಕೆಶಿ ಬೆಂಗಳೂರಲ್ಲಿ
ಮುಂದಿನ ಸಿಎಂ ಗಲಾಟೆ
ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಬಹಿರಂಗವಾಗಿದ್ದು, ಕಳೆದ ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿದ್ದವು. ಇದೇ ವೇಳೆ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಬೆಂಬಲಿಗ ಶಾಸಕರ ಸಹಿತ ಹಲವು ಬಹಿರಂಗ ಹೇಳಿಕೆ ನೀಡಿದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವತಃ ಹೋದ ಸಭೆ-ಸಮಾರಂಭಗಳಲ್ಲಿ ಒಕ್ಕಲಿಗ ಸಮುದಾಯದವನಾದ ನನಗೆ ಒಂದು ಅವಕಾಶ ಕೊಡಿ ಎಂದು ಹೇಳಿಕೆ ನೀಡುತ್ತಿದ್ದರು. ಚುನಾವಣೆ ಬಳಿಕವೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಒಳ ಏಟಿನ ಭಯ!
ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೇ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನಲ್ಲಿ ಒಂದು ಬಣ ಬಿಂಬಿಸುತ್ತಿದೆ. ಈ ಹಿನ್ನೆಲೆಯಲ್ಲಿ ತಮಗೆ ಸುರಕ್ಷಿತವಾದ ಕ್ಷೇತ್ರ ಬೇಕೇ ಬೇಕು ಎಂದು ಹುಡುಕಾಟದಲ್ಲಿರುವ ಮಾಜಿ ಸಿಎಂಗೆ ಎದುರಾಳಿ ಪಕ್ಷದವರಿಗಿಂತ ಸ್ವಪಕ್ಷೀಯರ ಭಯವೇ ಜಾಸ್ತಿಯಾಗಿದೆ ಎಂದು ಹೇಳಲಾಗಿದೆ.
2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಒಳ ಏಟು ಅನುಭವಿಸಿದ್ದರು. ಅಲ್ಲದೆ, 2013ರ ಚುನಾವಣೆಯಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿ ಡಾ. ಜಿ. ಪರಮೇಶ್ವರ್ ಸಹ ಇದ್ದರು. ಆದರೆ, ಅವರು ಕೊರಟಗೆರೆ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಈ ಸೋಲಿಗೆ ಸ್ವಪಕ್ಷೀಯರ ಒಳಸಂಚೇ ಕಾರಣ ಎಂದು ಸ್ವತಃ ಪರಮೇಶ್ವರ್ ಅವರೇ ಹಲವು ಬಾರಿ ಹೇಳಿಕೊಂಡಿದ್ದರು. ಸೋಲಿನ ಕಾರಣಕ್ಕಾಗಿ ಆಗ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿತ್ತು. ಈ ಅನುಭವಗಳಿಂದ ಎಚ್ಚರಿಕೆ ಹೆಜ್ಜೆ ಇಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
ವರುಣ ಕ್ಷೇತ್ರದ ಲೆಕ್ಕಾಚಾರ
ಈಗ ಸಿದ್ದರಾಮಯ್ಯ ವರುಣ ಕ್ಷೇತ್ರವನ್ನೇ ಆಯ್ದುಕೊಳ್ಳಲು ಹಲವು ಲೆಕ್ಕಾಚಾರಗಳು ಕೆಲಸ ಮಾಡಿವೆ ಎಂದು ಹೇಳಲಾಗಿದೆ. ಚಾಮರಾಜಪೇಟೆ ಅಥವಾ ಕೋಲಾರದಲ್ಲಿ ಸ್ಪರ್ಧೆ ಮಾಡಲು ಮುಂದಾದರೆ ಆತಂಕವನ್ನು ಎದುರಿಸಲೇಬೇಕಿದೆ. ಅದೇ ವರುಣ ಕ್ಷೇತ್ರವಾದರೆ ಎಲ್ಲ ದೃಷ್ಟಿಯಿಂದಲೂ ಸುರಕ್ಷಿತ ಎಂದು ಸಿದ್ದರಾಮಯ್ಯ ಆಪ್ತರು ಹೇಳಿದ್ದಾರೆನ್ನಲಾಗಿದೆ.
ವರುಣದಿಂದ ಸ್ಪರ್ಧೆ ಮಾಡಿದರೆ ಪುತ್ರ ಯತೀಂದ್ರ ಅವರು ಕ್ಷೇತ್ರವನ್ನು ನೋಡಿಕೊಳ್ಳುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾದರೂ ಯಾವುದೇ ಸಮಸ್ಯೆಯಾಗದು. ಸುಲಭವಾಗಿ ರಾಜ್ಯ ಪ್ರವಾಸ ಮಾಡಬಹುದು ಎಂಬ ಲೆಕ್ಕಾಚಾರ ಇದರ ಹಿಂದೆ ಅಡಗಿದೆ. ಈ ಹಿನ್ನೆಲೆಯಲ್ಲಿ ವರುಣ ಕ್ಷೇತ್ರದಲ್ಲಿಯೇ ಸ್ಪರ್ಧೆ ಮಾಡುವ ಬಗ್ಗೆ ಸಿದ್ದರಾಮಯ್ಯ ಮನಸ್ಸು ಮಾಡಿದ್ದರೂ ಇನ್ನೂ ತೀರ್ಮಾನವನ್ನು ಪ್ರಕಟಿಸಿಲ್ಲ ಎನ್ನಲಾಗಿದೆ.
ಕ್ಷೇತ್ರ ತ್ಯಾಗ ಮಾಡುವೆ: ಯತೀಂದ್ರ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ವರುಣದಲ್ಲಿ ಸ್ಪರ್ಧೆ ಮಾಡಿದರೆ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಯತೀಂದ್ರ ಹೇಳಿದ್ದಾರೆ. ತಂದೆಯವರು ಎಲ್ಲಿ ನಿಲ್ಲಬೇಕು ಎಂದು ತೀರ್ಮಾನ ಮಾಡಿಲ್ಲ. ಎಲ್ಲಿ ನಿಲ್ಲಬೇಕು ಎಂದು ತೀರ್ಮಾನ ಮಾಡಿದರೂ ಅದಕ್ಕೆ ನಾವು ಬದ್ಧವಾಗಿದ್ದೇವೆ. ವರುಣದಲ್ಲಿಯಾದರೂ ಸ್ಪರ್ಧೆ ಮಾಡಬಹುದು, ಬೇರೆ ಯಾವುದೇ ಕ್ಷೇತ್ರದಲ್ಲಿ ಬೇಕಿದ್ದರೂ ಸ್ಪರ್ಧೆ ಮಾಡಬಹುದು. ಒಂದು ವೇಳೆ ವರುಣ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಅಪ್ಪ ತೀರ್ಮಾನ ಮಾಡಿದರೆ, ನಾನು ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಅಪ್ಪನಿಗಾಗಿ ಪ್ರಚಾರ ಮಾಡುತ್ತೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮಿಬ್ಬರ ಅಭಿಪ್ರಾಯ ಬೇರೆ: ಸಿದ್ದರಾಮಯ್ಯ
ಸಿದ್ದರಾಮಯ್ಯ ವರುಣದಿಂದ ಸ್ಪರ್ಧೆ ಮಾಡುವ ವಿಷಯದ ಬಗ್ಗೆ ಯತೀಂದ್ರ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಅವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದಾಗ, “ಅದು ಅವರ ಅಭಿಪ್ರಾಯ. ನನ್ನ ಅಭಿಪ್ರಾಯ ಬೇರೆ, ಅವರ ಅಭಿಪ್ರಾಯ ಬೇರೆ” ಎಂದಷ್ಟೇ ಉತ್ತರ ನೀಡಿದ್ದಾರೆ.
ಇದನ್ನೂ ಓದಿ | Congress President Poll | ಶೇ.99 ಮತದಾನ; ಖರ್ಗೆಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ ಸಿದ್ದು