ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ (Election 2023) ಜೆಡಿಎಸ್ ಗೆ 30-40 ಸ್ಥಾನ ಬಂದರೆ ನಾನು ಅಧಿಕಾರದಿಂದ ದೂರ ಇರುತ್ತೇನೆ. ಇದು ನನ್ನ ನಿರ್ಧಾರ. ನಮ್ಮಲ್ಲೇ ಯಾರಾದರೂ ಒಬ್ಬರನ್ನು ಆ ಸ್ಥಾನದಲ್ಲಿ ಕೂರಿಸಿ ನಾನು ಮಾರ್ಗದರ್ಶನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
30-40 ಸ್ಥಾನ ಬಂದರೂ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ನಮ್ಮ ಪಕ್ಷದ ಶಾಸಕರು ಅಂದುಕೊಳ್ಳುವುದು ಬೇಡ. ಇದು ನನ್ನ ಗಟ್ಟಿ ನಿರ್ಧಾರ ಎಂದು ಸುದ್ದಿಗಾರರಿಗೆ ಮಾಜಿ ಸಿಎಂ ತಿಳಿಸಿದರು. ಅಲ್ಲದೆ, ಈಗಾಗಲೇ ಮೈಸೂರು ಭಾಗದ ಅಭ್ಯರ್ಥಿಗಳ ಬಹುತೇಕ ಪಟ್ಟಿ ಸಿದ್ಧವಿದೆ ಎಂದೂ ಅವರು ತಿಳಿಸಿದರು.
ಸಂಪೂರ್ಣ ಬಹುಮತ ಕೊಡಿ
ನನಗೆ ಈ ಬಾರಿ ಸಂಪೂರ್ಣ ಬಹುಮತ ಕೊಡಿ. ಪಂಚರತ್ನ ಯೋಜನೆಗಳನ್ನು 5 ವರ್ಷಗಳಲ್ಲಿ ಅನುಷ್ಠಾನ ಮಾಡುತ್ತೇನೆ. ಕಾರ್ಯಕ್ರಮ ಅನುಷ್ಠಾನ ಮಾಡದೆ ಇದ್ದರೆ ನಾನು ಪಕ್ಷ ವಿಸರ್ಜನೆ ಮಾಡುತ್ತೇನೆ. ಚಾಮುಂಡಿ ಸನ್ನಿಧಾನದಲ್ಲಿ ನಿಂತು ಈ ಮಾತು ಹೇಳುತ್ತಿದ್ದೇನೆ. ಪಂಚ ರತ್ನ ಯೋಜನೆ ಅನುಷ್ಠಾನ ಆಗಬೇಕಾದರೆ ಸಮ್ಮಿಶ್ರ ಸರ್ಕಾರದಿಂದ ಸಾಧ್ಯವಿಲ್ಲ. ಸಂಪೂರ್ಣ ಬಹುಮತದಿಂದ ಮಾತ್ರ ಸಾಧ್ಯ. ಈ ಕಾರಣ ನಾನು ಸಮ್ಮಿಶ್ರ ಸರ್ಕಾರ ಸಂದರ್ಭ ಬಂದರೆ ಸಿಎಂ ಆಗುವುದಿಲ್ಲ ಎಂದು ಹೇಳುತ್ತಿದ್ದೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ | ಜಿ.ಟಿ. ದೇವೇಗೌಡ ಮನೆ ಬಾಗಿಲಿಗೆ ಎಚ್.ಡಿ. ದೇವೇಗೌಡ; ಕಾಲಿಗೆ ಬಿದ್ದು ಕಣ್ಣೀರಿಟ್ಟ ಜಿಟಿಡಿ, ಮುಗಿದ ಮುನಿಸು
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು ಜೆಡಿಎಸ್ ಕಾರ್ಯಾಗಾರಕ್ಕೆ ಬಾರದೇ ಇರುವುದಕ್ಕೆ ಸ್ಥಳೀಯವಾಗಿ ಒಂದಿಷ್ಟು ಸಮಸ್ಯೆಗಳಿವೆ. ಆ ಕಾರಣಕ್ಕಾಗಿ ಅವರು ಪಕ್ಷದ ಕಾರ್ಯಾಗಾರಕ್ಕೆ ಬರಲಾಗಿಲ್ಲ. ನಮ್ಮ ಜತೆಯೇ ಇರುತ್ತೇನೆ ಎಂದು ಅವರು ಹೇಳಿದ್ದಾರೆ. ಆದರೆ, ಇರುವುದು ಬಿಡಿವುದು ಅವರ ವೈಯುಕ್ತಿಕ ನಿರ್ಧಾರ. ಅವರನ್ನು ಸೋಲಿಸಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಈ ಬಾರಿ ಹುನ್ನಾರಗಳನ್ನು ನಡೆಸಿವೆ. ಅದೆಲ್ಲದರ ಲೆಕ್ಕಚಾರದಲ್ಲಿ ಅವರು ತೊಡಗಿದ್ದಾರೆ ಎಂದು ಕುಮಾರಸ್ವಾಮಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಿದ್ದರಾಮಯ್ಯ ವಿರುದ್ಧ ದಾಖಲೆ ಇದ್ದರೆ ಸಿಎಂ ತನಿಖೆ ಮಾಡಿಸಲಿ
ಸಿದ್ದರಾಮಯ್ಯ ಅವರ ಕಾಲದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ಮುಖ್ಯಮಂತ್ರಿಯವರು ತನಿಖೆ ನಡೆಸಬೇಕು. ನೀವೇಕೆ ವಿಳಂಬ ಮಾಡುತ್ತಿದ್ದೀರಿ? ನಿಮ್ಮ ಆರೋಪ ಭಾಷಣಕ್ಕೆ ಸೀಮಿತವಾಗಬಾರದು. ಸಿದ್ದರಾಮಯ್ಯ ಕೂಡ ತನಿಖೆಗೆ ಆಗ್ರಹಿಸಿದ್ದಾರೆ. ನೀವು ಮೊದಲು ತನಿಖೆ ಮಾಡಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ.
ಕಾಂಗ್ರೆಸ್-ಬಿಜೆಪಿಗೆ ಜೆಡಿಎಸ್ ಬೇಕು
ಇತ್ತೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪರಸ್ಪರ ಟೀಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಜೆಡಿಎಸ್ ವಿಚಾರವನ್ನು ಯಾರೂ ಎತ್ತುತ್ತಿಲ್ಲ. ಅದರ ಅರ್ಥವನ್ನು ಜನ ಸೂಕ್ಷ್ಮವಾಗಿ ಗಮನಿಸಬೇಕಿದೆ. ಜೆಡಿಎಸ್ ಪಕ್ಷವನ್ನು ಬಳಸಿಕೊಳ್ಳುವ ಚಿಂತನೆ ಕಾಂಗ್ರೆಸ್ ಹಾಗೂ ಬಿಜೆಪಿಯದವರಿಗೆ ಇದೆ. ಕಾಂಗ್ರೆಸ್ ಬಿಜೆಪಿಗೆ ಸ್ವತಂತ್ರ ಸರ್ಕಾರ ಬರುವ ಯಾವ ವಿಶ್ವಾಸವೂ ಇಲ್ಲ. ಜೆಡಿಎಸ್ ಅವಶ್ಯಕತೆ ಬೇಕಾಗಬಹುದು ಎಂದು ನಮ್ಮನ್ನು ಯಾರು ಟೀಕೆ ಮಾಡುತ್ತಿಲ್ಲ. ಇದೆಲ್ಲವೂ ನನಗೆ ಅರ್ಥವಾಗಿದೆ. ಈ ಕಾರಣಕ್ಕಾಗಿಯೇ ನಮಗೆ ಪೂರ್ಣ ಬಹುಮತ ಕೊಡಿ ಎಂದು ಎಚ್‌ಡಿಕೆ ಮನವಿ ಮಾಡಿದರು.
ಖರ್ಗೆ ಆಯ್ಕೆಗೆ ಸಂತಸ
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಬಗ್ಗೆ ಹೆಚ್ಚೇನೂ ಪ್ರತಿಕ್ರಿಯೆ ನೀಡುವುದಿಲ್ಲ. ಅದು ಆ ಪಕ್ಷದ ಆಂತರಿಕ ವಿಚಾರ. ಆದರೆ, ಕನ್ನಡಿಗರೊಬ್ಬರು ಆ ಸ್ಥಾನಕ್ಕೆ ಆಯ್ಕೆಯಾಗಿರುವುದು ಸಂತೋಷ ನೀಡಿದೆ. ಹಿಂದೆ ನಿಜಲಿಂಗಪ್ಪ ಎಐಸಿಸಿ ಅಧ್ಯಕ್ಷರಾಗಿದ್ದರು. ಆಗಿನ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ. ಖರ್ಗೆ ಅವರು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಆಗುತ್ತದೆಯೇ ಎಂದು ಕಾದುನೋಡಬೇಕು. ಕರ್ನಾಟಕದ ಮಟ್ಟಿಗೆ ಅವರು ಇನ್ನೊಂದು ಪವರ್ ಸೆಂಟರ್ ಆಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ | Election 2023 | ಮುಂದಿನ ವಿಧಾನಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ; ಸುಳಿವು ನೀಡಿದ ಎಚ್‌ಡಿಕೆ