ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆ (Election 2023) ಹಿನ್ನೆಲೆಯಲ್ಲಿ ಬಿಜೆಪಿಯವರು ಕರೆದರೆ ಹೋಗಬೇಡಿ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಆರೋಪ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಒಬ್ಬ ಜೋಕರ್ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಳಿಕ ಕಾರು ಹತ್ತಿ ಅಲ್ಲಿಂದ ತೆರಳುವಾಗ ಕಾರ್ಯಕರ್ತರತ್ತ ನೋಡಿ, “ಹೇ ಕೇಳಯ್ಯ ಇಲ್ಲಿ, ಬಿಜೆಪಿಯವರು ಕರೆದರೆ ಹೋಗಬೇಡಿ..” ಎಂದು ಎರಡೆರಡು ಬಾರಿ ಎಚ್ಚರಿಕೆ ಕೊಟ್ಟರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾರ್ಯಕರ್ತರು, ಇಲ್ಲ ನಾವು ಪಕ್ಷ ಬಿಟ್ಟು ಹೋಗುವುದಿಲ್ಲ. ಬಿಜೆಪಿ ಕರೆದರೂ ಹೋಗಲಾರೆವು. ಈ ಬಗ್ಗೆ ಭಾನುವಾರ (ಅ. ೩೦) ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿದ್ದೇವೆ” ಎಂದು ಹೇಳಿದರು.
ಪತ್ರಕರ್ತರಿಗೆ ಹಣ ಹಂಚಿಕೆ ನ್ಯಾಯಾಂಗ ತನಿಖೆಯಾಗಲಿ
ಇದು 40% ಸರ್ಕಾರ ಎಂಬುದು ಮತ್ತೆ ಸಾಬೀತಾಗಿದೆ. ಗುತ್ತಿಗೆದಾರರೊಬ್ಬರು ದಯಾಮರಣಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಹಲವಾರು ಗುತ್ತಿಗೆದಾರರು ಪ್ರಧಾನಿಗೇ ಪತ್ರ ಬರೆದಿದ್ದಾರೆ. ಬಿಜೆಪಿಯವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಇದೀಗ ಪತ್ರಕರ್ತರಿಗೇ ಉಡುಗೊರೆ ಕೊಟ್ಟಿದ್ದಾರೆ. ಇವರ ಹಗರಣಗಳನ್ನು ಬಿಂಬಿಸದಂತೆ ಕೋರಲು ಪತ್ರಕರ್ತರಿಗೆ ಗಿಫ್ಟ್ ರೂಪದಲ್ಲಿ ಹಣ ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಪತ್ರಕರ್ತರಿಗೆ ಹಂಚಿಕೆಯಾಗಿರುವ ಹಣದ ಮೂಲವನ್ನು ಪತ್ತೆ ಹಚ್ಚಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಇದನ್ನೂ ಓದಿ | ನರಹಂತಕ ಸಿದ್ದರಾಮಯ್ಯ, ಖಳನಾಯಕ ಸಿದ್ದರಾಮಯ್ಯ: ತೀವ್ರ ವಾಗ್ದಾಳಿ ನಡೆಸಿದ ನಳಿನ್ ಕುಮಾರ್ ಕಟೀಲ್
ನನ್ನನ್ನು ಟಾರ್ಗೆಟ್ ಮಾಡುವಂತೆ ಆರ್‌ಎಸ್‌ಎಸ್ ಹೇಳಿಕೊಟ್ಟಿದೆ
ಬಿಜೆಪಿಯವರು ಮಹಾನ್ ಭ್ರಷ್ಟರು, ಭಂಡರಾಗಿದ್ದು, ಅವರ ತಪ್ಪನ್ನೂ ಸಮರ್ಥಿಸಿಕೊಳ್ಳುವಂತಹ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಇಟ್ಟಿದ್ದಾರೆ. ಆರ್‌ಎಸ್ಎಸ್ ಸುಳ್ಳಿನ ಫ್ಯಾಕ್ಟರಿಯ ರೂವಾರಿಯಾಗಿದೆ. ಆರ್‌ಎಸ್ಎಸ್ ನಾಯಕರು ಹೇಳಿದಂತೆ ಬಿಜೆಪಿ ನಾಯಕರು ಕೇಳುತ್ತಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡುವಂತೆ ಸಂಘದವರೇ ಬಿಜೆಪಿಯವರಿಗೆ ಹೇಳಿಕೊಡುತ್ತಿದ್ದಾರೆ. ಶ್ರೀರಾಮುಲು ಕೂಡ ಅದನ್ನೇ ಮಾಡುತ್ತಿದ್ದಾರೆ. ಇನ್ನು ನನ್ನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿರುವ ನಳಿನ್ ಕುಮಾರ್ ಕಟೀಲ್ ಯಾವುದೇ ಹೋರಾಟ ಮಾಡಿದವನಲ್ಲ. ಅವನೊಬ್ಬ ಜೋಕರ್ ಇದ್ದಂತೆ ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.
ಇನ್ಸ್‌ಪೆಕ್ಟರ್ ನಂದೀಶ್ ಒತ್ತಡದಲ್ಲಿದ್ದರಿಂದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆ. ಖುದ್ದು ಸಚಿವ ಎಂಟಿಬಿ ನಾಗರಾಜ್ ಹೇಳಿದಂತೆ ನಂದೀಶ್ ಲಂಚ ಕೊಟ್ಟು ಕೆಲಸಕ್ಕೆ ಸೇರಿದ್ದಾರೆ. ಅದೂ 70- 80 ಲಕ್ಷ ರೂ. ಕೊಟ್ಟು ಬಂದಿದ್ದ ಅಂತ ಹೇಳಿದ್ದಾರೆ. ಈ ಹಣ ಸಿಎಂಗೆ ಹೋಗಿರಬೇಕು ಅಥವಾ ಗೃಹ ಮಂತ್ರಿಗೆ ಹೋಗಿರಬೇಕು. ಹೀಗಾಗಿ ಇವರೇ ಆತನ ಸಾವಿಗೆ ಹೊಣೆಗಾರರು. ಇಬ್ಬರೂ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ನವೆಂಬರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನವೆಂಬರ್ ಅಂತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಲಿದೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಿದರು.
ಇದನ್ನೂ ಓದಿ | ಸಿದ್ದರಾಮಯ್ಯ ಅವರು ಈ ಸಾರಿ ಗೆಲ್ಲೋದು ಬಿಡಿ, ಟಿಕೆಟ್ ಸಿಗೋದೇ ಡೌಟು ಎಂದ ನಳಿನ್ ಕುಮಾರ್ ಕಟೀಲ್!