Site icon Vistara News

Election 2023 | ಬಿಜೆಪಿ ಜತೆಗೆ ಆರ್‌ಎಸ್‌ಎಸ್‌ ಸಭೆ: ಸಂಘಟನೆ ಮನವೊಲಿಕೆ ಯತ್ನ?

bjp chintana meeting

ಬೆಂಗಳೂರು: ವಿಧಾನಸಭೆ ಚುನಾವಣೆ (Election 2023) ಸಮೀಪಿಸುತ್ತಿರುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌) ಹಾಗೂ ಬಿಜೆಪಿ ನಾಯಕರು ಮಹತ್ವದ ಸಭೆಯಲ್ಲಿ ಪಾಳ್ಗೊಳ್ಳುತ್ತಿದ್ದಾರೆ.

ದೇವನಹಳ್ಳಿಯ ಜೆಡಬ್ಲ್ಯು ಮ್ಯಾರಿಯೆಟ್‌ ಪ್ರೆಸ್ಟೀಜ್‌ ಗಾಲ್ಫ್‌ಶೈರ್‌ ರೆಸಾರ್ಟ್‌ನಲ್ಲಿ ಚಿಂತನ ಸಭೆ ಆರಂಭವಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶೀ ಬಿ.ಎಲ್‌. ಸಂತೋಷ್‌, ರಾಜ್ಯ ಬಿಜೆಪಿ ಪ್ರಭಾರಿ ಅರುಣ್‌ ಸಿಂಗ್‌ ಭಾಗವಹಿಸಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಜಿಲ್ಲಾ ಮಟ್ಟದಲ್ಲೂ ಸಮಿತಿಗಳನ್ನು ರಚಿಸಿ ಕಾರ್ಯಕರ್ತರ ನಿಯೋಜನೆ ಮಾಡಲಾಗಿತ್ತು. ಇದಕ್ಕೂ ಮುನ್ನ 2017ರಲ್ಲಿ ನಡೆದಿದ್ದ ಸಭೆಯಲ್ಲಿ ಅಂದಿನ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಭಾಗವಹಿಸಿದ್ದರು. ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಅದಕ್ಕೆ ಆರ್‌ಎಸ್‌ಎಸ್‌ ಪ್ರಮುಖರು ಒಪ್ಪಿಗೆ ನೀಡಿದ್ದರು.

ಇದನ್ನೂ ಓದಿ | ಬಿಜೆಪಿಯವರು ಆರ್‌ಎಸ್‌ಎಸ್‌ ಮುಖ್ಯಸ್ಥರಾಗಿ ಮಹಿಳೆಯನ್ನು ಆಯ್ಕೆ ಮಾಡಲಿ ಎಂದ ಸಿದ್ದರಾಮಯ್ಯ

ಚುನಾವಣೆ ಹತ್ತಿರವಾಗುತ್ತಿರುವಂತೆ ಸಂಘಟನಾತ್ಮಕವಾಗಿ ಅನೇಕ ನಿರ್ಧಾರ ಕೈಗೊಳ್ಳಬೇಕಾಗಿದೆ. ಸಾಮಾನ್ಯವಾಗಿ ಲೋಕಸಭೆ ಚುನಾವಣೆಯನ್ನು ಆರ್‌ಎಸ್‌ಎಸ್‌ ಕಾರ್ಯಕರ್ತರು ಹೆಚ್ಚು ಗಂಭೀರವಾಗಿ ಸ್ವೀಕರಿಸುತ್ತಾರೆ. ದೇಶದ ಭದ್ರತೆ, ಭಯೋತ್ಪಾದನೆ, ಆರ್ಥಿಕತೆ, ವಿದೇಶಾಂಗ ನೀತಿಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಅನಿವಾರ್ಯ ಎಂದು ಒಪ್ಪುತ್ತಾರೆ. ಆದರೆ ರಾಜ್ಯ ಸರ್ಕಾರದ ಮಟ್ಟಿಗೆ ಅಷ್ಟು ಒತ್ತು ನೀಡುವುದಿಲ್ಲ.

ಇದೆಲ್ಲದರ ಜತೆಗೆ ಈಗಿನ ರಾಜ್ಯ ಸರ್ಕಾರದ ಮೇಲೆ ಅನೇಕ ಆರೋಪಗಳಿವೆ. ೪೦% ಸರ್ಕಾರ ಎಂಬ ಆರೋಪ, ಹಿರಿಯ ಸಚಿವ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ, ಹಿಂದುತ್ವದ ಕುರಿತು ಈ ಸರ್ಕಾರ ಗಂಭೀರವಾಗಿಲ್ಲ ಎಂಬ ಭಾವನೆ ಆರ್‌ಎಸ್‌ ಕಾರ್ಯಕರ್ತರಲ್ಲಿದೆ.

ಸಭೆಯಲ್ಲಿ ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಸಿ.ಆರ್‌. ಮುಕುಂದ, ಕ್ಷೇತ್ರೀಯ ಪ್ರಚಾರಕ್‌ ಸುಧೀರ್‌ ಮುಂತಾದವರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲ ವಿವಾದಗಳು ಉಂಟಾಗಿವೆ. ಮುಖ್ಯವಾಗಿ ಪೂರ್ಣ ಪ್ರಮಾಣದಲ್ಲಿ ಬಹುಮತ ಲಭಿಸದಿರುವುದೂ ಇದಕ್ಕೆ ಕಾರಣ. ಪೂರ್ಣ ಬಹುಮತ ಲಭಿಸಿ ಸದೃಢ ಸರ್ಕಾರ ರಚನೆ ಆದರೆ ಗುಜರಾತ್‌, ಮಧ್ಯಪ್ರದೇಶ ಮುಂತಾದ ರಾಜ್ಯಗಳಂತೆಯೇ ಉತ್ತಮ ಆಡಳಿತ ನೀಡಲು ಸಾಧ್ಯವಿದೆ. ಇದಕ್ಕಾಗಿ ಆರ್‌ಎಸ್‌ಎಸ್‌ ಸಂಪೂರ್ಣ ಸಹಕಾರ ನೀಡಬೇಕು ಎಂದು ಬಿಜೆಪಿ ನಾಯಕರು ಮನವಿ ಮಾಡಲಿದ್ದಾರೆ. ಈ ಹಿಂದಿನ ಚುನಾವಣೆಗಳ ಅವಲೋಕನವೂ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | ಯಡಿಯೂರಪ್ಪ ಸರ್ಜಿಕಲ್‌ ಸ್ಟ್ರೈಕ್‌ ಫೇಲ್‌: ಬಿಜೆಪಿಯಲ್ಲಿ ಸಂತೋಷ್‌ ಮೇಲುಗೈ

Exit mobile version