ಮೈಸೂರು: ದಸರೆಯ ಮಹಾ ಸಂಭ್ರಮಕ್ಕಾಗಿ ಕಾಡಿನಿಂದ ಕರೆ ತರಲಾಗಿರುವ ಆನೆಗಳ ಪೈಕಿ ಒಬ್ಬಳಾಗಿರುವ ಲಕ್ಷ್ಮಿ ಅರಮನೆಯ ಅಂಗಳದಲ್ಲೇ ಮರಿಗೆ ಜನ್ಮ ನೀಡಿದ್ದಾಳೆ. ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇಗುಲದ ಬಳಿ ಲಕ್ಷ್ಮಿ ಗಂಡು ಮರಿಯನ್ನು ಹೆತ್ತಿದ್ದಾಳೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಪ್ರಸಕ್ತ ಬಾಣಂತಿ ಲಕ್ಷ್ಮಿ ಮತ್ತು ಮರಿಯನ್ನು ಆನೆಗಳ ಪಡೆಯಿಂದ ಬೇರೆ ಮಾಡಿದ್ದು ಪಾಲನೆಗೆ ಬೇರೆ ವ್ಯವಸ್ಥೆ ಮಾಡಿದ್ದಾರೆ. ನಿರ್ಬಂಧಿತ ಪ್ರದೇಶದಲ್ಲಿ ಆರೈಕೆ ನಡೆಯುತ್ತಿದೆ. ಅಲ್ಲಿಗೆ ಯಾರೂ ಹೋಗದಂತೆ ಫೋಟೊ ತೆಗೆಯದಂತೆ, ವಿಡಿಯೊ ಚಿತ್ರೀಕರಣ ನಡೆಸದಂತೆ ಡಿಸಿಎಫ್ ಕರಿಕಾಳನ್ ಮನವಿ ಮಾಡಿದ್ದಾರೆ.
ಆದರೆ, ವಿಷಯ ಅದಲ್ಲ. ಲಕ್ಷ್ಮಿ ಅರಮನೆಯ ಆವರಣದಲ್ಲಿ ಮರಿಗೆ ಜನ್ಮ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಯಾಕೆ? ಆಕೆ ಗರ್ಭಿಣಿ ಎಂದು ತಿಳಿದೂ ಅಧಿಕಾರಿಗಳು ಯಾಕೆ ಆಕೆಯನ್ನು ದಸರಾ ಮಹೋತ್ಸವಕ್ಕೆ ಕರೆತಂದರು ಎಂಬ ಪ್ರಶ್ನೆಗಳು ಎದುರಾಗಿವೆ.
ಸಾಗಣೆ ಮಾರ್ಗಸೂಚಿ ಉಲ್ಲಂಘನೆ
ಈ ನಡುವೆ, ಗರ್ಭಿಣಿ ಆನೆಯನ್ನು ಕರೆತರುವ ಮೂಲಕ ಅಧಿಕಾರಿಗಳು ಲಕ್ಷ್ಮಿಗೆ ಅನಗತ್ಯ ಹಿಂಸೆ ನೀಡಿದರಾ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ. ಇದು ಆನೆ ಸಾಗಣೆ ಮಾರ್ಗಸೂಚಿಗಳ ಉಲ್ಲಂಘನೆಯೂ ಹೌದು ಎನ್ನಲಾಗುತ್ತಿದೆ.
ಆನೆಗಳ ಸಾಗಣೆ ಮಾರ್ಗಸೂಚಿ ಪ್ರಕಾರ, ಗರ್ಭ ಧರಿಸಿರುವ ಆನೆಗಳನ್ನು ಸ್ಥಳಾಂತರ ಮಾಡಲು ಅವಕಾಶ ಇಲ್ಲ. ಹಾಗಿದ್ದರೂ ತುಂಬು ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಲಕ್ಷ್ಮಿಯನ್ನು ಕರೆತಂದ ಅಧಿಕಾರಿಗಳು ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಧಿಕಾರಿಗಳಿಗೆ ಗೊತ್ತಾಗಲೇ ಇಲ್ಲವೇ?
ಒಂದು ಆನೆಯ ಗರ್ಭಾವಸ್ಥೆ ಸುಮಾರು ೨೦ರಿಂದ ೨೪ ತಿಂಗಳು. ಅಂದರೆ ಎರಡು ವರ್ಷದ ಹಿಂದೆಯೇ ಆಕೆ ಗರ್ಭಿಯಾಗಿದ್ದಾಳೆ. ಕಳೆದ ದಸರಾ ಸಂದರ್ಭದಲ್ಲೇ ಆಕೆಯ ಗರ್ಭಕ್ಕೆ ಒಂದು ವರ್ಷ ಆಗಿರುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ತಂದಿದ್ದೇ ಸ್ವಲ್ಪ ಮಟ್ಟಿಗೆ ತಪ್ಪು. ಒಂದೊಮ್ಮೆ ಆಗ ಗೊತ್ತಾಗಿರಲಿಲ್ಲ ಎಂದಾದರೂ ಈ ಬಾರಿಯಂತೂ ಗೊತ್ತಾಗಲೇ ಬೇಕಿತ್ತು. ಅದ್ಕಕಿಂತಲೂ ಹೆಚ್ಚಾಗಿ ಒಂದು ಆನೆಯನ್ನು ಕಾಡಿನಿಂದ ಕರೆ ತರುವಾಗ ಅದರ ಆರೋಗ್ಯ ಸ್ಥಿತಿ, ವರ್ತನೆ ಸೇರಿದಂತೆ ಎಲ್ಲ ಅಂಶಗಳನ್ನೂ ಪರಿಗಣಿಸಲಾಗುತ್ತದೆ, ಪರಿಗಣಿಸಬೇಕಾಗುತ್ತದೆ. ಹಾಗಿದ್ದರೆ ಲಕ್ಷ್ಮಿ ತುಂಬು ಗರ್ಭಿಣಿಯಾಗಿದ್ದು ಅಧಿಕಾರಿಗಳಿಗೆ ಗೊತ್ತಾಗಲೇ ಇಲ್ಲವೇ ಎಂಬ ಪ್ರಶ್ನೆ ಗೊತ್ತಾಗಿದೆ.
ಒಂದು ಆನೆ ಮರಿ ಹಾಕಿದ ಬಳಿಕ ಮರಿಯ ಆರೈಕೆಗಾಗಿ ಕನಿಷ್ಠ ಒಂದು ವರ್ಷ ಬೇಕು. ಹೀಗಾಗಿ ಒಂದು ಗರ್ಭಿಣಿ ಆನೆಯನ್ನು ಮೂರು ವರ್ಷ ನಗರಕ್ಕೆ ಕರೆ ತರುವಂತಿಲ್ಲ. ಗರ್ಭವತಿ ಎನ್ನುವ ಕಾರಣಕ್ಕೆ ಕುಂತಿ ಆನೆಯನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಹಾಗಿದ್ದರೆ ಲಕ್ಷ್ಮಿಯನ್ನೇಕೆ ಕರೆತಂದರು?
ಅಧಿಕಾರಿಗಳು ಗರ್ಭ ಧರಿಸಿದ್ದ ಆನೆಯನ್ನು ತಪಾಸಣೆ ನಡೆಸದೆ ಕರೆತಂದರೇ ಎಂಬುದು ಮುಖ್ಯಪ್ರಶ್ನೆ. ಆನೆಯ ಆರೋಗ್ಯ ಮತ್ತು ಇತರ ವಿಚಾರಗಳಿಗೆ ಸಂಬಂಧಿಸಿ ಮಾವುತರು, ಕಾವಾಡಿಗೆ ಮಾಹಿತಿ ಇರಲೇಬೇಕು. ಆನೆಯ ದೈಹಿಕ ಬದಲಾವಣೆಯ ಮಾಹಿತಿ ಗೊತ್ತಿರಬೇಕು. ಒಂದೊಮ್ಮೆ ಅವರ ಗಮನಕ್ಕೆ ಬಾರದೆ ಇದ್ದರೂ ಸುಶಿಕ್ಷಿತ ಪಶು ವೈದ್ಯರಿಗಂತೂ ಗೊತ್ತಾಗಲೇ ಬೇಕು. ಇದನ್ನು ಗಮನಿಸಿದರೆ ಆನೆ ವೈದ್ಯರಾಗಿರುವ ಮಜೀಬ್, ಡಿಸಿಎಫ್ ಕರಿಕಾಳನ್ ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣುತ್ತದೆ.
ಒಂದು ವೇಳೆ, ಗರ್ಭಿಣಿ ಆನೆಯನ್ನು ಗುಂಪಿನಿಂದ ಬೇರೆ ಮಾಡುವುದು ಬೇಡ. ಜತೆಯಾಗಿ ಇರಲಿ ಎಂಬ ಕಾರಣಕ್ಕೆ ಕರೆ ತಂದಿರಬಹುದು ಎಂದು ಕಾರಣವನ್ನು ನೀಡಿದರೆ ಅದೂ ತಪ್ಪಾಗುತ್ತದೆ. ಯಾಕೆಂದರೆ ಆನೆಗೆ ಒಂದು ತಿಂಗಳಿನಿಂದ ನಡಿಗೆ ತಾಲೀಮು ನಡೆಸಲಾಗಿದೆ. ಕುಶಾಲು ತೋಪು ಸಿಡಿಸುವ ತಾಲೀಮಿನಲ್ಲೂ ಲಕ್ಷ್ಮಿ ಭಾಗವಹಿಸಿದ್ದಳು. ಮಾತ್ರವಲ್ಲ ಕುಶಾಲು ತೋಪಿನ ಸದ್ದಿಗೆ ಸಿಕ್ಕಾಪಟ್ಟೆ ಬೆದರಿದ್ದಳು.
ಇದನ್ನೂ ಓದಿ | Mysore Dasara 2022 | ದಸರಾ ಉದ್ಘಾಟನೆಗೆ ಹೊಸ ಸಂಪ್ರದಾಯ; ಶುರುವಾಯ್ತು ನಾನಾ ಲೆಕ್ಕಾಚಾರ!