ಬೆಂಗಳೂರು: ಬೇಸಿಗೆಯಲ್ಲಿ ಬಿಸಿಲ ಝಳದಿಂದ ಜನರು ಹೈರಾಣಾಗುತ್ತಿದ್ದಾರೆ. ಇದರೊಂದಿಗೆ ತಾಪಮಾನ ಏರಿಕೆ ಹಾಗೂ ಶಾರ್ಟ್ ಸರ್ಕ್ಯೂಟ್‌ನಿಂದ ವಿವಿಧೆಡೆ ಬೆಂಕಿ ಅವಘಡಗಳೂ (Fire Accident) ಹೆಚ್ಚುತ್ತಿವೆ. ಈ ನಡುವೆ ಶುಕ್ರವಾರ ರಾಜ್ಯದ ವಿವಿಧೆಡೆ ಆಕಸ್ಮಿಕ ಬೆಂಕಿ ಹಾಗೂ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗಳು ಹಾಗೂ ವಾಹನಗಳು ಸುಟ್ಟು ಕರಕಲಾಗಿರುವುದು ಕಂಡುಬಂದಿದೆ.
ಆಕಸ್ಮಿಕ ಬೆಂಕಿ: ಏಕಕಾಲಕ್ಕೆ ಹೊತ್ತಿ ಉರಿದ ನಾಲ್ಕು ವಾಹನಗಳು
ಬೆಳಗಾವಿ: ನಗರದ ರೈಲು ನಿಲ್ದಾಣದ ಎರಡನೇ ಗೇಟ್ ಸಮೀಪದ ಹೆರವಾಡ್ಕರ್ ಶಾಲೆಯ ಬಳಿ ಆಕಸ್ಮಿಕ ಬೆಂಕಿ ಅವಘಡ ಅಂಭವಿಸಿ, ಏಕಕಾಲಕ್ಕೆ ನಾಲ್ಕು ವಾಹನಗಳು ಹೊತ್ತಿ ಉರಿದಿವೆ. ಟಾಟಾ ಓಮಿನಿ, ಟಾಟಾ ಏಸ್ ಸೇರಿ ನಾಲ್ಕು ವಾಹನಗಳು ಬೆಂಕಿಗಾಹುತಿಯಾಗಿವೆ. ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ವ್ಯಾಪಿಸಿದ್ದರಿಂದ ವಾಹನಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಇದನ್ನೂ ಓದಿ | Road Accident: ಸಾಗರದಲ್ಲಿ ಕಾರು ಡಿಕ್ಕಿಯಾಗಿ ಪಾದಚಾರಿ ಸಾವು; ಚಾಲಕ ಪರಾರಿ
ಆಕಸ್ಮಿಕ ಬೆಂಕಿ ತಗುಲಿ ಮನೆ ಹಾಗು ಬೈಕ್ ಭಸ್ಮ
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಹಾರೋಗೂಳಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರಳಿಮಠ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮನೆ ಹಾಗು ಬೈಕ್ ಭಸ್ಮವಾಗಿದೆ. ರಾಮಪ್ಪ ಎಂಬುವರ ಮನೆ ಬೆಂಕಿಗಾಹುತಿಯಾಗಿದ್ದು, ಮನೆಯಲ್ಲಿದ್ದ ದವಸ ಧಾನ್ಯ ಸೇರಿದಂತೆ ಇತರೆ ವಸ್ತುಗಳು ನಾಶವಾಗಿದೆ. ಗುರುವಾರ ರಾತ್ರಿ ರಾಮಪ್ಪ ಮನೆಯವರು ಮಲಗಿದ್ದ ವೇಳೆ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು, ನೆರೆಯ ನಿವಾಸಿಗಳು ಕೂಡಲೇ ಮನೆಯೊಳಗೆ ಇದ್ದವರನ್ನು ಹೊರಗೆ ಕರೆ ತಂದಿದ್ದಾರೆ. ಸ್ಥಳೀಯರ ನೆರವಿನಿಂದ ರಾಮಪ್ಪ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಸ್ಥಳೀಯರು ಹಾಗೂ ಕೆಲ ಯುವಕರು ಸೇರಿ ನಂದಿಸಿದ್ದಾರೆ.
ತುಮಕೂರಲ್ಲಿ ಸುಟ್ಟು ಕರಕಲಾದ ಮನೆ
ತುಮಕೂರಿನ ಪಾವಗಡ ತಾಲೂಕಿನ ಕಣಿವೇನಹಳ್ಳಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಯೊಂದು ಸುಟ್ಟು ಕರಕಲಾಗಿದೆ. ನೇತ್ರಾವತಿ ಎಂಬುವವರಿಗೆ ಸೇರಿದ ಮನೆಯು ಬೆಂಕಿಗಾಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಯಲ್ಲಿದ್ದ ಟಿ.ವಿ, ಫ್ಯಾನ್, ಫ್ರಿಡ್ಜ್‌ಗೆ ಹಾನಿಯಾಗಿದೆ. ಮಾತ್ರವಲ್ಲದೆ ಮನೆಯಲ್ಲಿದ್ದ ಬಟ್ಟೆ, ಅಕ್ಕಿ ಚೀಲಗಳು ಸುಟ್ಟು ಕರಕಲಾಗಿದೆ. ಸುಮಾರು 2 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಇದನ್ನೂ ಓದಿ: Weather Report: ಬಿಸಿಲೇ ಇರಲಿ ಮಳೆಯೇ ಬರಲಿ.. ನೀವು ಈ ಮುನ್ನೆಚ್ಚರಿಕೆ ವಹಿಸಿ!
ಮೂರು ಬಸ್‌ಗಳು ಬೆಂಕಿಗಾಹುತಿ
ಬೆಂಗಳೂರಿನ ಆರ್.ಆರ್ ನಗರದ ಐಟಿಐ ಲೇಔಟ್‌ನ ಇಂಡೆನ್ ಗ್ಯಾಸ್ ಏಜೆನ್ಸಿ ಸಮೀಪ ಇರುವ ಸ್ಕ್ರಾಪ್ ಗೋಡೌನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಗೋಡೌನ್‌ನಲ್ಲಿದ್ದ ಮೂರು ಬಸ್‌ಗಳು ಬೆಂಕಿಗಾಹುತಿ ಆಗಿದೆ. ಬೆಂಕಿ ತಗುಲಿದ ಪರಿಣಾಮ ಇಡಿ ಗೋಡೌನ್ ಧಗ ಧಗನೆ ಹೊತ್ತಿ ಉರಿದಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.