ಬೆಂಗಳೂರು: ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿರುವ ಕುರಿತು, ಬಿಜೆಪಿ ಮುಖಂಡ ಬಿ.ಎಲ್ ಸಂತೋಷ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ʼʼಅಂಕಿಸಂಖ್ಯೆಗಳು ನಿಮ್ಮ ಊಹೆಯಷ್ಟೇʼʼ ಎಂದಿದ್ದಾರೆ.
ʼʼಎಲ್ಲ ಸಮೀಕ್ಷೆದಾರರಿಗೆ ಗೌರವದಿಂದ ಹೇಳಬಯಸುತ್ತೇನೆ- ಬಿಜೆಪಿಗೆ 2014ರಲ್ಲಿ 282 ಸ್ಥಾನ, 2019ರಲ್ಲಿ 303 ಸ್ಥಾನ, 2022ರಲ್ಲಿ 156 ಸ್ಥಾನ, ಅಥವಾ 2018ರಲ್ಲಿ 104 ಸ್ಥಾನ ದೊರೆಯಬಹುದು ಎಂದು ಯಾವ ಸಮೀಕ್ಷೆಯೂ ನುಡಿದಿರಲಿಲ್ಲ. 2018ರಲ್ಲಿ 24,000 ಬೂತ್‌ಗಳಲ್ಲಿ ನಾವು ಲೀಡ್ ಪಡೆದಿದ್ದೆವು. ಆದರೆ 14 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಯಾವ ಬೂತ್‌ನಲ್ಲಿಯೂ ಮುನ್ನಡೆ ಸಾಧಿಸಿರಲಿಲ್ಲ. ಈ ಸಲ ಈ ಎಲ್ಲ ವಿಧಾನಸಭಾ ಕ್ಷೇತ್ರಗಳೂ ನಮ್ಮ ಪರವಾಗಿರಲಿದ್ದು, 31,000 ಬೂತ್‌ಗಳಲ್ಲಿ ನಾವೇ ಲೀಡ್ ಪಡೆಯಲಿದ್ದೇವೆ. ಉಳಿದ ಅಂಕಿಸಂಖ್ಯೆಗಳು ನಿಮ್ಮ ಊಹೆಯಷ್ಟೇʼʼ ಎಂದು ಸಂತೋಷ್ ಟ್ವೀಟ್ ಮಾಡಿದ್ದಾರೆ.
ಮತದಾನಕ್ಕೆ ಮುನ್ನಾ ದಿನ ಅವರು ಬಹುಚರ್ಚಿತ ಪುತ್ತೂರು ವಿಧಾನಸಭೆ ಕ್ಷೇತ್ರದ ಬಗ್ಗೆ ಸುದೀರ್ಘ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಮತದಾರರಿಗಿಂತಲೂ ಹೆಚ್ಚಾಗಿ ಹಿಂದುತ್ವ ಕಾರ್ಯಕರ್ತರನ್ನೇ ಉದ್ದೇಶಿಸಿದಂತಿತ್ತು:
ʼʼನಿರಂತರ ದಾಳಿಗಳ ನಡುವೆಯೂ ಪುತ್ತೂರಿನಲ್ಲಿ ಬಿಜೆಪಿ ಗೆದ್ದರೆ ಏನು ಮಾಡುತ್ತೀರಿ? ಕಟು ಟೀಕೆ, ಮುಸುಕಿನ ಗುದ್ದು, ಸೋಶಿಯಲ್ ಮೀಡಿಯಾ ಪ್ರಚಾರ, ಅತ್ಯುಚ್ಛ ಸ್ವರದ ಭಾಷಣಗಳು, ಇವುಗಳಿಗೆಲ್ಲ ಏನು ಬೆಲೆ? ನಮ್ಮ ವೈಯಕ್ತಿಕ ಜೀವನದಲ್ಲೂ ನಾವು ಎಲ್ಲರಿಗೂ ಸ್ವೀಕಾರಾರ್ಹವಲ್ಲದ ಕೆಲವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ ಎಲ್ಲ ಕಡೆಯೂ ನಾವು ಬಂಡಾಯ ಏಳುತ್ತೇವಾ?ʼʼ
“ಸಮಾಜ ಇಷ್ಟೊಂದು ಸವಾಲುಗಳನ್ನು ಎದುರಿಸುತ್ತಿರುವಾಗ ವೈಯಕ್ತಿಕ ಮಹತ್ವಾಕಾಂಕ್ಷೆಗಳು ಮುಖ್ಯವಾಗಬಾರದು. ಆದರೆ ಇವು ಮಹತ್ವದ ಬಣ್ಣ ಪಡೆದು ವೈಯಕ್ತಿಕ ಹಿತಾಸಕ್ತಿಗಳೊಂದಿಗೆ ವಿಜೃಂಭಿಸಿವೆ. ರಾಜ್ಯ ಬಿಜೆಪಿ ಅಧ್ಯಕ್ಷರನ್ನು ʼಪಿಟೀಲುʼ ಎಂದು ಸದಾ ವ್ಯಂಗ್ಯವಾಡುವುದನ್ನು ಹೇಗೆ ಸಮರ್ಥಿಸುತ್ತೀರಿ? ಅವರೇನು ತಪ್ಪು ಮಾಡಿದ್ದಾರೆ? ಇದರಿಂದ ಏನು ಸಾಧಿಸಿದಂತಾಯಿತು? ಸಮಗ್ರ ವಿವೇಕ ಹಾಗೂ ವೈಯಕ್ತಿಕ ಪ್ರತಿಭೆಗಳ ನಡುವೆ ನಾವು ಮೊದಲಿನದನ್ನೇ ಆರಿಸಬೇಕು.ʼʼ
ʼʼಇಂದು ಅಂತಿಮ ದಿನ. ನಮ್ಮ ಶಕ್ತಿ ತಳಮಟ್ಟದಲ್ಲಿದೆ. ಸೋಶಿಯಲ್ ಮೀಡಿಯಾ ಅಥವಾ ರಸ್ತೆ ಮೇಲಿನ ಸದ್ದುಗಳಿಗಿಂತ ನಮ್ಮ ವಿಶ್ವಾಸ ಇರುವುದು ಚುನಾವಣೆ ವಿಧಾನದಲ್ಲಿ. ಬಿಜೆಪಿ ಗೆಲ್ಲಲಿದೆ. ಆದರೆ ಒಂದು ವೇಳೆ ಫಲಿತಾಂಶ ಇದಕ್ಕೆ ವಿರುದ್ಧವಾದರೆ, ಅಥವಾ ಕಾಂಗ್ರೆಸ್ ಗೆದ್ದರೆ (ಅಸಾಧ್ಯ) ಅನೇಕ ಕಾರ್ಯಕರ್ತರು ಮುಂದಿನ ತಲೆಮಾರುಗಳಿಗೆ ಉತ್ತರದಾಯಿಗಳಾಗಬೇಕಾಗುತ್ತದೆ. ಜಾತಿ, ವೈಯಕ್ತಿಕ ಮಹತ್ವಾಕಾಂಕ್ಷೆ, ದ್ವೇಷ, ಇಗೋಗಳಿಗಿಂತಲೂ ದೊಡ್ಡ ವಿವೇಕವೇ ಉಳಿಯಲಿ. ಬಿಜೆಪಿಯೇ ಭರವಸೆ.ʼʼ ಎಂದು ಸಂತೋಷ್ ಟ್ವೀಟ್ ಮಾಡಿದ್ದರು.
ಪುತ್ತೂರಿನಲ್ಲಿ ಹಿಂದುತ್ವ ಕಾರ್ಯಕರ್ತ ಅರುಣ್‌ಕುಮಾರ್ ಪುತ್ತಿಲ ಅವರು ಬಿಜೆಪಿ ಟಿಕೆಟ್ ಸಿಗದುದರಿಂದ ಬಂಡಾಯವೆದ್ದು ಸ್ವತಂತ್ರರಾಗಿ ಸ್ಪರ್ಧಿಸಿದ್ದಾರೆ. ದೊಡ್ಡ ಪ್ರಮಾಣದ ಹಿಂದುತ್ವ ಕಾರ್ಯಕರ್ತರು ಅವರನ್ನು ಬೆಂಬಲಿಸಿದ್ದು, ಪುತ್ತಿಲ ಅವರಿಗೆ ಭಾರಿ ಬೆಂಬಲ ಕಣದಲ್ಲಿ ಕಂಡುಬಂದಿತ್ತು.
ಇದನ್ನೂ ಓದಿ: ಬಿ.ಎಲ್. ಸಂತೋಷ್ ವಿರುದ್ಧ ಪೋಸ್ಟ್: ದಿನೇಶ್ ಅಮಿನ್ ಮಟ್ಟು ವಿರುದ್ಧ ಕೇಸ್, ಒಬ್ಬನ ಬಂಧನ