Site icon Vistara News

EYE ON PFI | ಬಂಧಿತ ಪಿಎಫ್‌ಐ ನಾಯಕರ ಮನೆಯಲ್ಲಿ ಸಿಕ್ಕಿದ್ದೇನು? 40 ಲಕ್ಷ ಹಣ, ಹಿಂದು ವಿರೋಧಿ ಬರಹ, ಮೊಬೈಲ್ಸ್‌

KG Halli PFI

ಬೆಂಗಳೂರು: ರಾಜ್ಯದ ಏಳು ಜಿಲ್ಲೆಗಳಲ್ಲಿ ನಡೆದ ಸಿಸಿಬಿ ಮತ್ತು ನಗರ ಪೂರ್ವ ಠಾಣೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ೧೫ ಮಂದಿ ಪಿಎಫ್‌ಐ ಮುಖಂಡರನ್ನು ಬಂಧಿಸುವುದರ ಜತೆಗೆ ಹಲವು ಮಹತ್ವದ ದಾಖಲೆಗಳನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.

ಶಿವಮೊಗ್ಗದ ಸಾದಿಕ್‌ ಎಂಬವರ ಮನೆಯಲ್ಲಿ ೨೦ ಲಕ್ಷ ರೂ. ನಗದು ಸೇರಿದಂತೆ ರಾಜ್ಯಾದ್ಯಂತ ಒಟ್ಟು ೪೦ ಲಕ್ಷ ರೂ. ವಶವಾಗಿದೆ. ಕೋಮುವಾದಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳು, ಹಿಂದೂ ಧರ್ಮ ಮತ್ತು ಕೋಮುವಾದ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳು ದೊರಕಿವೆ. ಇವುಗಳ ಮೂಲಕ ಹಿಂದೂ ಧರ್ಮದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ.

ಪಿಎಫ್‌ಐ ಮುಖಂಡರ ಮನೆಯಲ್ಲಿ ಪತ್ತೆಯಾದ ಕಂಪ್ಯೂಟರ್‌ ಮತ್ತು ಪುಸ್ತಕಗಳು

ವೀರ ಸಾವರ್ಕರ್ ಕುರಿತ ಪುಸ್ತಕ, ಹಿಂದೂ ಟೆರರಿಸಮ್ ಆನ್ ಮೈನಾರಿಟಿ, ಕೋಮುವಾದ ಮತ್ತು ಭಯೋತ್ಪಾದನೆ ಮೊದಲಾದ ಪುಸ್ತಕಗಳು, ಇದೇ ವಿಚಾರಗಳಿಗೆ ಸಂಬಂಧಿಸಿ ಪತ್ರಿಕೆಗಳಲ್ಲಿ ಬಂದಿರುದ ಲೇಖನಗಳು ಮತ್ತು ಟ್ಯಾಬ್ಲಾಯ್ಡ್‌ ಪತ್ರಿಕೆಗಳು ದೊಡ್ಡ ಸಂಖ್ಯೆಯಲ್ಲಿ ಸಿಕ್ಕಿವೆ. ಇವುಗಳ ಮೂಲಕ ಹಿಂದೂ ಧರ್ಮದ ವಿರುದ್ಧ ತಾವು ಒಂದು ಕೆಟ್ಟ ಅಭಿಪ್ರಾಯ ಮೂಡಿಸಿಕೊಳ್ಳುವ ಜತೆಗೆ ಇತರರಿಗೂ ಅದನ್ನು ಹಂಚುವ ಪ್ರಯತ್ನ ಎದ್ದು ಕಾಣುತ್ತಿದೆ.

ಅಪಾರ ಪ್ರಮಾಣದ ಹಣ ವಶ
ನಲವತ್ತು ಲಕ್ಷ ರೂ. ನಗದು ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಕೂಡಾ ಜಪ್ತಿ ಮಾಡಲಾಗಿದೆ. ನಾನಾ ದೇಶಗಳ ಕರೆನ್ಸಿಗಳು, ಬ್ಯಾಂಕ್‌ ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೂಲಕ ಅವರ ಹಣಕಾಸು ವ್ಯವಹಾರಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

ಅನ್ಯ ದೇಶಗಳ ಜತೆ ಸಂಪರ್ಕ
ಬಂಧಿತರ ಮನೆಯಿಂದ ನೂರಾರು ಮೊಬೈಲ್‌ ಮತ್ತು ಹತ್ತಾರು ಕಂಪ್ಯೂಟರ್‌ ಸಿಪಿಯುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೂಲಕ ಅವರು ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಸಂಪರ್ಕ ಸಾಧಿಸುತ್ತಿದ್ದರು ಎನ್ನಲಾಗಿದೆ. ಈ ಮೊಬೈಲ್‌ ಮತ್ತು ಕಂಪ್ಯೂಟರ್‌ಗಳನ್ನು ರಿಟ್ರೀವ್‌ ಮಾಡಿ ಜಾಲಾಡಲಾಗುತ್ತಿದೆ.

ಕೇಂದ್ರ ಸರಕಾರದ ಸೂಚನೆ ಮೇಲೆ ಕಣ್ಣು
ಪಿಎಫ್‌ಐ ಸಂಘಟನೆ ಹಲವು ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಗಳಿಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಅದರ ಮೇಲೆ ಕಣ್ಣಿಡುವಂತೆ ಕೇಂದ್ರ ಸರಕಾರ ಸೂಚಿಸಿತ್ತು. ಅದರಲ್ಲೂ ರಾಜ್ಯದಲ್ಲಿ ಹಿಜಾಬ್ ವಿವಾದ, ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆ, ಧಾರ್ಮಿಕ ಸ್ಥಳಗಳಲ್ಲಿ ಮುಸ್ಲಿಂ ಅಂಗಡಿಗಳ ತೆರವು ಮೊದಲಾದ ಹಲವು ವಿಷಯಗಳಲ್ಲಿ ಪಿಎಫ್‌ಐ ಪಾತ್ರ ಮಹತ್ತರವಾಗಿತ್ತು.

ಚಾಮರಾಜಪೇಟೆ ಮೈದಾನ ಗಲಾಟೆ ಇಂತಹ ಹಲವು ಕೋಮು ಸಂಘರ್ಷಗಳಿಗೆ ರಾಜ್ಯ ಸಾಕ್ಷಿಯಾಗಿತ್ತು. ಈ ಎಲ್ಲ ಹಿನ್ನೆಲೆಗಳಲ್ಲಿ ಕೆಲವು ಸಂಘಟನೆಗಳು ವಿಧ್ವಂಸಕ ಕೃತ್ಯಕ್ಕೆ ರೆಡಿಯಾಗುತ್ತಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಹೀಗಾಗಿಯೇ ಬೆಂಗಳೂರು ಸೇರಿದಂತೆ ರಾಜ್ಯ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆ ಖಡಕ್ ಎಚ್ಚರಿಕೆ ನೀಡಿತ್ತು.

ಕಳೆದ ಏಪ್ರಿಲ್ ನಿಂದ ಹಲವು ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಇತ್ತೀಚಿಗೆ ವಿದೇಶಗಳಿಂದ ಫಂಡಿಂಗ್ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಫಂಡಿಂಗ್ ಹೆಚ್ಚಾಗುತ್ತಿರುವುದರಿಂದಶೀಘ್ರದಲ್ಲೇ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿರುವ ಅನುಮಾನ ಬಂದಿತ್ತು. ಇದೇ ಕಾರಣಕ್ಕೆ ಕೆಜಿ ಹಳ್ಳಿ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿ ರಾಜ್ಯಾದ್ಯಂತ ದಾಳಿ ಮಾಡಲಾಗಿದೆ.

ಇದನ್ನೂ ಓದಿ PFIಗೆ CCB ಶಾಕ್‌ | ಕೆ.ಜಿ. ಹಳ್ಳಿ ಪ್ರಕರಣದ 15ನೇ ಆರೋಪಿ ದಿಲ್ಲಿಯಲ್ಲಿ ಸೆರೆ, ಇನ್ನೂ ನಾಲ್ವರಿಗಾಗಿ ಹುಡುಕಾಟ

Exit mobile version