ಮಂಡ್ಯ: ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ಜೋರಾಗಿದೆ. ಈ ಮಧ್ಯೆ ಮುಂದಿನ ಮುಖ್ಯಮಂತ್ರಿ ವಿಚಾರಕ್ಕೆ ದೊಡ್ಡ ಪೈಪೋಟಿಯೇ ನಡೆದಿದೆ. ಇದೀಗ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಜತೆಗೆ ಉಪ ಮುಖ್ಯಮಂತ್ರಿಯನ್ನೂ ತಾವೇ ನಿರ್ಧರಿಸಿಕೊಂಡು, ಘೋಷಣೆ ಕೂಗಿದ್ದಾರೆ.
ಸಿದ್ದರಾಮಯ್ಯ ಅವರು ಚಲುವರಾಯಸ್ವಾಮಿ ಜತೆಗೂಡಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರು ಕಡೆಯಿಂದ ನಾಗಮಂಗಲಕ್ಕೆ ತೆರಳುತ್ತಿದ್ದರು. ಈ ವೇಳೆ ಪಾಂಡವಪುರದಲ್ಲಿ ಸ್ವಾಗತ ಕೋರಿದ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಂದಿನ ಉಪ ಮುಖ್ಯಮಂತ್ರಿ ಚಲುವರಾಯಸ್ವಾಮಿಗೆ ಜೈ ಎನ್ನುತ್ತಾ ಘೋಷಣೆ ಕೂಗಿ ಸಂಭ್ರಮಿಸಿದರು.
ಇದುವರೆಗೆ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಎನ್ನುವ ಘೋಷಣೆ ಮಾತ್ರವೇ ಮೊಳಗುತ್ತಿತ್ತು. ಇದೀಗ ಮುಂದಿನ ಉಪ ಮುಖ್ಯಮಂತ್ರಿಗೂ ಒಬ್ಬರನ್ನು ಹೆಸರಿಸಿ ಜಯಘೋಷ ಮೊಳಗುವಂತಾಗಿದೆ. ಇದಕ್ಕೂ ಮುನ್ನ ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಅವರ ಕಚೇರಿಯನ್ನು ಉದ್ಘಾಟಿಸಲು ಮಾಜಿ ಸಿಎಂ ಸಿದ್ದರಾಮಯ್ಯ ತೆರಳಿದ್ದಾಗ ಅಲ್ಲಿಯೂ ಅಭಿಮಾನಿಗಳು, ಕಾರ್ಯಕರ್ತರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು. ಈ ವೇಳೆ ಸಿದ್ದರಾಮಯ್ಯ ಅಭಿಮಾನಿಗಳತ್ತ ಕೈಬೀಸಿ ಮುಂದೆ ಸಾಗಿದರು.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುವುದು ಕೂತೂಹಲ ಮೂಡಿಸಿದೆ. ಈಗಾಗಲೇ ಒಂದು ಬಾರಿ ಸಿಎಂ ಆಗಿ ಆಡಳಿತ ನಡೆಸಿರುವ ಅನುಭವವಿರುವ ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ಸಿಎಂ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಪ್ರಬಲ ಆಕಾಂಕ್ಷಿಯಾಗಿರುವುದರಿಂದ ಪಕ್ಷದಲ್ಲಿ ಬಣ ರಾಜಕೀಯ ಜೋರಾಗುವ ಸಾಧ್ಯತೆಯಿದೆ.
ಇದನ್ನೂ ಓದಿ | ಬಿಜೆಪಿಯವರು ಆರ್‌ಎಸ್‌ಎಸ್ ಮುಖ್ಯಸ್ಥರಾಗಿ ಮಹಿಳೆಯನ್ನು ಆಯ್ಕೆ ಮಾಡಲಿ ಎಂದ ಸಿದ್ದರಾಮಯ್ಯ