Site icon Vistara News

ಕ್ಯಾಂಟರ್‌-ಸ್ಕೂಟರ್‌ ಅಪಘಾತದಲ್ಲಿ ತಂದೆ-ಮಗ ಮೃತ್ಯು, ತುಂಬಿದ ಕೆರೆಗೆ ನುಗ್ಗಿದ ಬಸ್‌, ಪ್ರಯಾಣಿಕರು ಪಾರು

son and father

ಮೈಸೂರು/ಚಾಮರಾಜ ನಗರ: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಎರಡು ರಸ್ತೆ ದುರಂತಗಳಲ್ಲಿ, ಒಂದರಲ್ಲಿ ತಂದೆ ಮಗ ಮೃತಪಟ್ಟಿದ್ದಾರೆ, ಇನ್ನೊಂದರಲ್ಲಿ ೫೦ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೈಕ್ ಸವಾರರು ಸ್ಥಳದಲ್ಲೇ ಸಾವು
ಮೈಸೂರು ಜಿಲ್ಲೆಯ ನಂಜನಗೂಡು- ತಿ.ನರಸೀಪುರ ಮುಖ್ಯ ರಸ್ತೆಯ ಅಲಸ್ತ್ರಿ ಕಟ್ಟೆಹುಂಡಿ ಕ್ಯಾಂಟರ್ ವಾಹನ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಬೈಕ್ ನಲ್ಲಿ ತೆರಳುತ್ತಿದ್ದ ತಂದೆ, ಮಗ ದಾರುಣವಾಗಿ ಮೃತಪಟ್ಟಿದ್ದಾರೆ. ಅಲಸ್ತ್ರಿಕಟ್ಟೆಹುಂಡಿ ಗ್ರಾಮದ ನಾಗ(45), ಪುತ್ರ ಕಾರ್ತಿಕ್(15) ಮೃತ ದುರ್ದೈವಿಗಳು. ಇವರಿಬ್ಬರು ಜಮೀನಿನ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಬೈಕ್‌ ಮತ್ತು ಕ್ಯಾಂಟರ್‌ ನಡುವೆ ಡಿಕ್ಕಿ ಸಂಭವಿಸಿದೆ. ಸ್ಥಳದಲ್ಲೇ ಮೃತಪಟ್ಟ ಅವರ ಮೃತದೇಹಗಳನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ತಿ.ನರಸೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯೊಡೆಯ ಮತ್ತು ಮಗನನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

ತುಂಬಿದ ಕೆರೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್
ಚಾಮರಾಜನಗರ ಜಿಲ್ಲೆ ಸಂತೇಮರಹಳ್ಳಿ ಬಳಿಯಲ್ಲಿ ೫೦ಕ್ಕೂ ಅಧಿಕ ಪ್ರಯಾಣಿಕರಿದ್ದ ಕೆಎಸ್‌ಆರ್‌ಟಿಸಿ ಬಸ್‌ ಒಂದು ತುಂಬಿದ ಕೆರೆಗೆ ಬಿದ್ದು ಅರ್ಧ ಮುಳುಗಿದೆ. ಆದರೆ, ಅದೃಷ್ಟವಶಾತ್‌ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಕೆರೆಗೆ ನುಗ್ಗಿದ ಬಸ್‌

ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಬಸ್ ಸಂತೇಮರಹಳ್ಳಿ ರೇಷ್ಮೆ ಕಾರ್ಖಾನೆ ಪಕ್ಕದಲ್ಲಿರುವ ಕೆರೆ ಬಳಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕೆರೆಯೊಳಗೆ ನುಗ್ಗಿದೆ. ಬಸ್ ಕೆರೆಗೆ ನುಗ್ಗುತ್ತಿದ್ದಂತೆ ಪ್ರಯಾಣಿಕರು ಕಿಟಕಿ ಹಾಗು ಹಿಂಬದಿ ಬಾಗಿಲಿನಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಂದೊಮ್ಮೆ ಬಸ್‌ ಇನ್ನಷ್ಟು ಆಳಕ್ಕೆ ಹೋಗುತ್ತಿದ್ದರೆ ಹಲವರು ಪ್ರಾಣ ಕಳೆದುಕೊಳ್ಳುವ ಅಪಾಯವಿತ್ತು.

Exit mobile version