Site icon Vistara News

ಫಾಜಿಲ್‌ ಹತ್ಯೆಗೆ ಮಿಸ್ಟೇಕನ್‌ ಐಡೆಂಟಿಟಿ ಕಾರಣವೇ?: ಪೊಲೀಸರಲ್ಲಿ ಹೀಗೊಂದು ಅನುಮಾನ

Fazil

ಮಂಗಳೂರು: ಸುಳ್ಯದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಬೆನ್ನಿಗೇ ಸುರತ್ಕಲ್‌ನಲ್ಲಿ ಗುರುವಾರ ನಡೆದ ಫಾಜಿಲ್‌ ಕೊಲೆ ಪ್ರಕರಣವು ಮಿಸ್ಟೇಕನ್‌ ಐಡೆಂಟಿಟಿಯ (Mistaken Identity) ಫಲಶ್ರುತಿಯೇ ಎಂಬ ಅನುಮಾನ ಶುರುವಾಗಿದೆ.

ಯಾವುದೇ ವ್ಯಕ್ತಿಯನ್ನು ಹತ್ಯೆ ಅಥವಾ ಅಪಹರಣ ಮಾಡುವ ಸಮಯದಲ್ಲಿ, ಆತನನ್ನೇ ಹೋಲುವ ಮತ್ತೊಬ್ಬನನ್ನು ಹತ್ಯೆ ಅಥವಾ ಅಪಹರಣ ಮಾಡುವುದಕ್ಕೆ ಮಿಸ್ಟೇಕನ್‌ ಐಡೆಂಟಿಟಿ ಎಂದು ಕರೆಯಲಾಗುತ್ತದೆ. ಅಪರಾಧ ಪ್ರಕರಣಗಳಿಂದ ತಪ್ಪಿಸಿಕೊಳ್ಳಲೂ ಅನೇಕ ಬಾರಿ ಆರೋಪಿಗಳು ತಮ್ಮ ನೆರವಿಗೆ ಮಿಸ್ಟೇಕನ್‌ ಐಡೆಂಟಿಟಿಯನ್ನೇ ಬಳಕೆ ಮಾಡಿಕೊಳ್ಳುತ್ತಾರೆ.

ಪ್ರತ್ಯಕ್ಷದರ್ಶಿಯೊಬ್ಬರು ಈತನೇ ಹತ್ಯೆ ಮಾಡಿದ್ದಾನೆ, ಕಳ್ಳತನ ಮಾಡಿದ್ದಾನೆ ಎಂದು ಹೇಳಿದಾಗ, ಆ ಪ್ರತ್ಯಕ್ಷದರ್ಶಿ ಮಿಸ್ಟೇಕನ್‌ ಐಡೆಂಟಿಟಿ ಮಾಡಿಕೊಂಡಿದ್ದಾನೆ ಎಂದು ಆರೋಪಿ ವಾದಿಸುತ್ತಾರೆ. ಈ ಸಮಯದಲ್ಲಿ ತಾನು ಯಾವ ಸ್ಥಳದಲ್ಲಿದ್ದೆ, ತನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ, ಪ್ರತ್ಯಕ್ಷದರ್ಶಿಯು ನನ್ನನ್ನು ತಪ್ಪಾಗಿ ಗುರುತಿಸಿದ್ದಾರೆ ಎಂದು ನಿರೂಪಿಸಲು ಪ್ರಯತ್ನಿಸುತ್ತಾರೆ. ಇದೀಗ ಫಾಜಿಲ್‌ ಹತ್ಯೆ ಪ್ರಕರಣದಲ್ಲಿ, ಹತ್ಯೆ ಮಾಡಿದವರು ಮಿಸ್ಟೇಕನ್‌ ಐಡೆಂಟಿಟಿ ಮಾಡಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ | ಫಾಜಿಲ್‌ ಕುಟುಂಬಕ್ಕೂ ₹25 ಲಕ್ಷ ನೀಡಲು ಯು.ಟಿ. ಖಾದರ್‌ ಆಗ್ರಹ: ಪ್ರಮೋದ್‌ ಮುತಾಲಿಕ್‌ಗೆ ನಿರ್ಬಂಧ

ಅಸಲಿಗೆ ಸುರತ್ಕಲ್‌ನಲ್ಲಿ ಹತ್ಯೆಗೀಡಾದ ಫಾಜಿಲ್‌ ನಿಜವಾದ ಟಾರ್ಗೆಟ್‌ ಆಗಿರಲಿಲ್ಲ. ಹಂತಕರು ಎಸ್‌.ಕೆ. ಮೊಬೈಲ್ಸ್‌ ಅಂಗಡಿ ಮಾಲೀಕ ಎಸ್‌.ಕೆ. ಫಾರೂಕ್‌ನನ್ನು ಗುರಿಯಾಗಿಸಿ ದಾಳಿ ಮಾಡಿದ್ದರು. ಈ ಹಿಂದೆ ಎಸ್‌.ಕೆ. ಫಾರೂಕ್‌ ಕೆ.ಎಫ್‌.ಡಿ. ಸಂಘಟನೆಯಲ್ಲಿ ನಾಯಕನಾಗಿದ್ದ.

ಆ ಸಮಯದಲ್ಲಿ ಈತನ ಅಂಗಡಿಯೇ ಕೆಎಫ್‌ಡಿ ಸಂಘಟನೆಯ ಕಾರ್ಯಕರ್ತರ ಅಡ್ಡಾವಾಗಿತ್ತು. ಹಿಂದು ಸಂಘಟನೆಗಳ ಕಾರ್ಯಕರ್ತರ ವಿರೋಧವನ್ನು ಈತ ಕಟ್ಟಿಕೊಂಡಿದ್ದ. ಕೆಎಫ್‌ಡಿ ನಿಷೇಧದ ನಂತರ ಸಂಘಟನೆಯಿಂದ ಅಂತರವನ್ನು ಕಾಯ್ದುಕೊಂಡಿದ್ದ. ಆದರೂ ಹಿಂದು ಸಂಘಟನೆಯ ಕಾರ್ಯಕರ್ತರಲ್ಲಿ ಆತನ ಮೇಲಿನ ಸಿಟ್ಟು ಕಡಿಮೆ ಆಗಿರಲಿಲ್ಲ. ಅವನನ್ನು ಹತ್ಯೆ ಮಾಡಬೇಕೆಂದು ಪ್ಲ್ಯಾನ್‌ ಮಾಡಿದ್ದಾರೆ.

ಹತ್ಯೆ ಮಾಡಲು ಬಂದಾಗ ಅಂಗಡಿಯ ಬಳಿ ಫಾಜಿಲ್‌ ನಿಂತಿದ್ದ. ತಕ್ಷಣಕ್ಕೆ ನೋಡಲು ಎಸ್‌.ಕೆ. ಫಾರೂಕ್‌ ಹಾಗೂ ಫಾಜಿಲ್‌ ನಡುವೆ ಸಾಕಷ್ಟು ಸಾಮ್ಯತೆ ಇದೆ. ಫಾಜಿಲ್‌ನನ್ನೇ ಫಾರೂಕ್‌ ಎಂದುಕೊಂಡ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆಯೇ ಎಂಬ ಅನುಮಾನ ಪೊಲೀಸ್‌ ತನಿಖೆ ವೇಳೆ ವ್ಯಕ್ತವಾಗುತ್ತಿದೆ. ಫಾಜಿಲ್‌ ಕುಟುಂಬದ ಆಪ್ತ ಮೂಲಗಳೂ ಇದೇ ರೀತಿ ಹೇಳುತ್ತಿವೆ ಎನ್ನಲಾಗಿದೆ. ಈ ಕುರಿತು ಮತ್ತಷ್ಟು ತನಿಖೆ ನಡೆಸಬೇಕಿದೆ. ನಂತರವಷ್ಟೆ ಖಚಿತವಾಗುತ್ತದೆ. ಎಲ್ಲ ದೃಷ್ಟಿಕೋನದಲ್ಲೂ ಪ್ರಕರಣವನ್ನು ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಈ ರೀತಿ ಅನುಮಾನಗಳಿದ್ದರೂ, ಆರೋಪಿಗಳು ಸಿಗದೇ ಏನನ್ನೂ ಹೇಳಲಾಗದು ಎಂದು ಕಮಿಷನರ್‌ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ | Praveen Nettaru | ಪ್ರವೀಣ್‌ ಹತ್ಯೆಗೆ ವ್ಯಾಪಕ ಆಕ್ರೋಶ; ದಕ್ಷಿಣ ಕನ್ನಡದ ವಿವಿಧೆಡೆ ಬಂದ್

Exit mobile version