Site icon Vistara News

Karnataka Election 2023: ಬಿಜೆಪಿ ಟಿಕೆಟ್‌ ಕೈ ತಪ್ಪುವ ಆತಂಕ; ಬೆಂಬಲಿಗರ ಮುಂದೆ ಶಾಸಕ ಎಸ್‌.ಎ. ರಾಮದಾಸ್ ಕಣ್ಣೀರು

Ramdas refuses to meet BJP MP Pratap Simha and candidate srivatsa at his house in mysore

ಮೈಸೂರು: ಈ ಬಾರಿಯ ವಿಧಾನಸಭಾ ಚುನಾವಣೆ (Karnataka Election 2023) ಸಂಬಂಧ ಬಿಜೆಪಿ 2 ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೂ ಕೃಷ್ಣರಾಜ ಕ್ಷೇತ್ರದ ಟಿಕೆಟ್‌ ಮಾತ್ರ ಘೋಷಣೆಯಾಗಿಲ್ಲ. ಹೀಗಾಗಿ ಶಾಸಕ ಎಸ್.ಎ. ರಾಮದಾಸ್‌ ಆತಂಕಗೊಂಡಿದ್ದು, ಶನಿವಾರ ರಾತ್ರಿ ತಮ್ಮ ನಿವಾಸದೆದುರು ಬೆಂಬಲಿಗರು ಜಮಾಯಿಸಿದ ವೇಳೆ ಕಣ್ಣೀರು ಹಾಕಿದ್ದಾರೆ.

ತಮ್ಮ ನಾಯಕನಿಗೆ ಟಿಕೆಟ್‌ ಕೈತಪ್ಪುವ ಆತಂಕದಿಂದ ನೂರಾರು ಬೆಂಬಲಿಗರು, ನಗರದ ಶಾಸಕ ಎಸ್.ಎ. ರಾಮದಾಸ್‌ ನಿವಾಸದ ಮುಂದೆ ಸೇರಿದ್ದರು. ಈ ವೇಳೆ ಶಾಸಕ ಮಾತನಾಡುತ್ತಾ, ಕೃಷ್ಣರಾಜ ಕ್ಷೇತ್ರ ಬಹಳ ಅಪರೂಪದ ಕ್ಷೇತ್ರ. ರಾಜಕಾರಣ ಎಂದರೆ ವೋಟು, ನೋಟು ಎಂಬಂತೆ ನಡೆಯುತ್ತದೆ. ಯಾವುದೋ ಜನ್ಮದ ಋಣ, ಕ್ಷೇತ್ರದ ಜನ ಮನೆಯ ಮಗ, ಅಣ್ಣ ಎಂದು ನನ್ನನ್ನು ಸ್ವೀಕರಿಸಿ ಗೆಲ್ಲಿಸಿದ್ದಾರೆ. ಆದರೆ ಕ್ಷೇತ್ರದಲ್ಲಿ ನಾನು ಮಾಡಬೇಕಿರುವ ಕೆಲಸಗಳು ಬಾಕಿ ಇವೆ ಎಂದು ಹೇಳಿದಾಗ, ಅಲ್ಲಿ ಸೇರಿದ್ದ ಜನರು ನೀವೇ ಚುನಾವಣೆಗೆ ನಿಲ್ಲಬೇಕು ಎಂದು ಕೂಗಿದರು. ಈ ವೇಳೆ ರಾಮದಾಸ್‌ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ | Karnataka Election 2023: ಪ್ರಧಾನಿ ನರೇಂದ್ರ ಮೋದಿ ಕೈಕುಲುಕಿದ್ದ ಫೈಟರ್‌ ರವಿ ಬಿಜೆಪಿಗೆ ಗುಡ್‌ ಬೈ; ಟಿಕೆಟ್‌ ಕೈತಪ್ಪಿದ್ದಕ್ಕೆ ಆಕ್ರೋಶ

2019ರಲ್ಲಿ ಮೂರು ಬಾರಿ ಸಚಿವ ಸ್ಥಾನ ತಪ್ಪಿತ್ತು. ಆಗಲೂ ಹೊರಗಿನಿಂದ ಬಂದವರಿಗೆ ಅವಕಾಶ ಕೊಡಲಿ ಎಂದಿದ್ದೆ. ಪಕ್ಷ ನನಗೆ ತಾಯಿ ಇದ್ದ ಹಾಗೆ. ಪಕ್ಷ ಸಂಘಟನೆ ಜತೆಗೆ ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಕ್ಷೇತ್ರ ದೇಶಕ್ಕೆ ಮೊದಲು ಇತ್ತು. ನನಗೆ ತಾಳ್ಮೆ ಇದೆ. ಮಾಧ್ಯಮ ವರದಿಗಳು, ಎಲ್ಲ ಸರ್ವೆಗಳು ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ‌ ಗೆಲ್ಲುತ್ತದೆ ಅಂತ ಇದೆ ಎಂದು ಹೇಳಿದ್ದಾರೆ.

ಕೇಂದ್ರ ಸಚಿವರ ಬಳಿ ಇದು ನನ್ನ ಕೊನೆ ಚುನಾವಣೆ ಎಂದು ಹೇಳಿ ಬಂದಿದ್ದೇನೆ. ಇನ್ನೂ ಉನ್ನತ ಅವಕಾಶ ಇದೆ ಎಂದಿದ್ದಾರೆ. ಅದ್ಯಾವುದು ಬೇಡ ಎಂದು ಹೇಳಿ ಬಂದಿದ್ದೇನೆ. ಅನ್ಯಪಕ್ಷದವರು ಫೋನ್‌ ಮಾಡಿದ್ದರು. ಅವರಿಗೆ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದೇನೆ. ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೆ ಕಾರ್ಯಕರ್ತರು, ಬೆಂಬಲಿಗರ ಜತೆ ಮಾತನಾಡಬೇಕಿದೆ. ಕಾರ್ಯಕರ್ತರು ಏನು ಹೇಳುತ್ತಾರೋ ಅದರಂತೆ ನಿರ್ಧಾರ ತೆಗೆದುಕೊಳ್ಳುವೆ ಎಂದು ತಿಳಿಸಿದ್ದಾರೆ.

ಎಸ್.ಎಂ. ಕೃಷ್ಣ ಕುಟುಂಬಸ್ಥರಿಗೆ ಸಿಗದ ಟಿಕೆಟ್‌; ಮದ್ದೂರಿನಲ್ಲಿ ಕಾರ್ಯಕರ್ತರ ಆಕ್ರೋಶ

ಮಂಡ್ಯ: ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಮಾಜಿ ಸಿಎಂ ಎಸ್.ಎಂ. ಕೃಷ್ಣ ಕುಟುಂಬಸ್ಥ ಗುರುಚರಣ್‌ರನ್ನು ಕಡೆಗಣಿಸಿ ಕದಲೂರು ಉದಯ್‌ಗೆ ಟಿಕೆಟ್ ನೀಡಿರುವುದಕ್ಕೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮದ್ದೂರು ಕಾಂಗ್ರೆಸ್ ಕಚೇರಿ ಬಳಿ ಕಟ್ಟಿದ್ದ ಫ್ಲೆಕ್ಸ್, ಬ್ಯಾನರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಾಂಗ್ರಸ್‌ ಬ್ಯಾನರ್‌, ಫ್ಲೆಕ್ಸ್‌ಗಳಿಗೆ ಬೆಂಕಿ ಹಚ್ಚಿ, ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದ ಕಾರ್ಯಕರ್ತರು, ಟಿಕೆಟ್ ಮಾರಾಟವಾಗಿದೆ. ಗುರುಚರಣ್‌ರನ್ನು ನಿರ್ಲಕ್ಷಿಸಿ ಕದಲೂರು ಉದಯ್‌ಗೆ ಟಿಕೆಟ್ ನೀಡಿರುವುದಕ್ಕೆ ಸ್ಪಷ್ಟೀಕರಣ ನೀಡಬೇಕು ಎಂದು ಕೈ ನಾಯಕರನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Karnataka Elections 2023 : ಕಾಂಗ್ರೆಸ್‌ನಲ್ಲಿ ಮತ್ತೆ ಮುಂದಿನ ಸಿಎಂ ಚರ್ಚೆ; ಡಿ.ಕೆ ಶಿವಕುಮಾರ್‌ರನ್ನು 2ನೇ ಸಾಲಿಗೆ ತಳ್ಳಿದ ಎಂ.ಬಿ ಪಾಟೀಲ್‌!

ಟಿಕೆಟ್‌ ಆಕಾಂಕ್ಷಿ ಗುರುಚರಣ್‌, ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರ ಸಹೋದರನ ಪುತ್ರರಾಗಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್‌ ನೀಡಬೇಕು ಎಂದು ಈ ಹಿಂದಿನಿಂದ ಕಾರ್ಯಕರ್ತರು ಒತ್ತಾಯಿಸುತ್ತಿದ್ದರು. ಆದರೆ, ಟಿಕೆಟ್‌ ನಿರಾಕರಿಸಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

Exit mobile version