ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನಡುವಿನ ವಾಕ್ಸಮರ ಶನಿವಾರವೂ ಮುಂದುವರಿದಿದೆ. ಮಾತ್ರವಲ್ಲ ಅದು ವಿಧಾನಸೌಧಕ್ಕೂ ಬಂದು ತಲುಪಿದೆ.
ಸೆಪ್ಟೆಂಬರ್ ೮ರಂದು ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಸರಕಾರದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಟಿ. ರವಿ ಅವರು ಸಿದ್ದರಾಮಯ್ಯ ಅವರನ್ನು ರಾಜಕೀಯ ಟಾಂಗ್‌ಗಳ ಮೂಲಕ ಕೆಣಕಿದ್ದರು. ಅದಕ್ಕೆ ಭಾನುವಾರ ಬಾಗಲಕೋಟೆಯಲ್ಲಿ ಉತ್ತರ ಕೊಟ್ಟಿದ್ದ ಸಿದ್ದರಾಮಯ್ಯ, ಸಿ.ಟಿ. ರವಿಯನ್ನು ಚಿಕ್ಕಮಗಳೂರಿನಲ್ಲಿ ಲೂಟಿ ರವಿ ಅಂತಾರೆ. ಇದು ನಾನು ಹೇಳೋದಲ್ಲ. ಚಿಕ್ಕಮಗಳೂರಿನ ಜನರೇ ಹೇಳುವುದು ಎಂದಿದ್ದರು.
ಮೈಸೂರಿನ ಜನ ಹೀಗೂ ಹೇಳ್ತಾರೆ!
ಇದಕ್ಕೆ ಭಾನುವಾರ ಸಂಜೆಯ ವೇಳೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ ಅವರು, ʻʻಸಿದ್ದರಾಮಯ್ಯ ಅವರನ್ನು ಮೈಸೂರಿನಲ್ಲಿ ಕಚ್ಚೆಹರುಕ ಅಂತಾರೆ. ಇದು ನಾನು ಹೇಳುವ ಮಾತಲ್ಲ. ಮೈಸೂರಿನ ಜನ ಹೇಳುವ ಮಾತು. ಹೀಗೆ ನಾನೂ ಹೇಳಬಹುದಲ್ವಾ? ಒಂದು ಮಾತನ್ನು ನಾನು ಹೇಳಿದ ಮೇಲೆ ಅದು ನನ್ನದೇ ಮಾತಾಗುತ್ತದೆ. ಯಾರೋ ಹೇಳುತ್ತಾರೆ ಎಂದು ಏನೋ ಹೇಳುವುದು ಗೌರವದ ನಡವಳಿಕೆ ಅಲ್ಲ. ಸಿದ್ದರಾಮಯ್ಯ ಅವರು ಎಂಎಲ್‌ಎ ಆಗಿದ್ದಾಗ ಏನು ಮಾಡಿದ್ರು, ಎಂಎಲ್‌ಎ ಆಗಿಲ್ಲದಿದ್ದಾಗ ಏನು ಮಾಡುತ್ತಿದ್ದರು ಎನ್ನುವುದೆಲ್ಲ ನನಗೂ ಗೊತ್ತು. ಅದೆಲ್ಲ ಹೇಳಿದರೆ ಯಾರ ಮರ್ಯಾದೆ ಹೋಗುತ್ತದೆ? ನನ್ನನ್ನು ಲೂಟಿ ರವಿ ಅಂತಾರೆ, ಚಿಕ್ಕಮಗಳೂರಿನಲ್ಲಿ ಹಾಗಂತಾರೆ ಅಂತಾರಲ್ವಾ.. ಚಿಕ್ಕಮಗಳೂರಿನಲ್ಲಿ ನಾನು ನಾಲ್ಕು ಬಾರಿ ಗೆದ್ದಿದ್ದೇನೆ. ಪ್ರತಿ ಬಾರಿಯೂ ಹೆಚ್ಚೆಚ್ಚು ಮತ ಕೊಟ್ಟು ಆಶೀರ್ವಾದ ಮಾಡಿದ್ದಾರೆ ಜನ. ಯಾರೋ ನನಗಾದವರು ಏನೋ ಹೇಳುತ್ತಾರೆ ಅನ್ನೋದನ್ನು ಸಿದ್ದರಾಮಯ್ಯ ಹೀಗೇ ಹೇಳುತ್ತಾರೆ ಅಂದರೆ ನಾನು ಕೂಡಾ ಕೇಳಿದ್ದನ್ನು ಹೇಳಬಹುದಲ್ವಾ? ನಾನು ಯಾರ ಮನೆ ಲೂಟಿ ಮಾಡಿದ್ದೇನೆ ಎಂದು ಅವರು ಹೇಳಲಿ. ಅದು ಬಿಟ್ಟು ಕಲ್ಲು ಹೊಡೆದು ಓಡೋದನ್ನು ನೋಡ್ಕೊಂಡು ಕೂತಿರೋ ಕಾಲ ಅಲ್ಲ ಇದುʼʼ ಎಂದು ಸಿ.ಟಿ. ರವಿ ಹೇಳಿದ್ದರು.
ವಿಧಾನಸೌಧದಲ್ಲೂ ಅದೇ ದಾಳಿ
ಈ ನಡುವೆ ವಿಧಾನ ಮಂಡಲದ ಅಧಿವೇಶನದಲ್ಲಿ ಭಾಗವಹಿಸುವುದಕ್ಕಾಗಿ ವಿಧಾನಸೌಧಕ್ಕೆ ಆಗಮಿಸಿದ ಶಾಸಕ ಸಿ.ಟಿ. ರವಿ ಮತ್ತು ಸಿದ್ದರಾಮಯ್ಯ ಮೇಲೆ ವಾಗ್ದಾಳಿ ಮಾಡಿದರು.
ʻʻಸಿ.ಟಿನ ಲೂಟಿ ಅನ್ಬೇಕಾದ್ರೆ, ಇವರನ್ನು ಏನೆಂದು ಕರೆಯಬೇಕು? ಪ್ರಾಸಬದ್ಧವಾಗಿ ಸಿ.ಟಿ.ನ ಲೂಟಿ ಅನ್ನುವುದಾದರೆ ಸಿದ್ದುನ ಪೆದ್ದ ಅನ್ನಬಹುದು ಅಲ್ವಾʼʼ ಎಂದು ಅವರು ಪ್ರಶ್ನಿಸಿದರು.
ʻʻಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ? ಟೆಬಲ್ ಗುದ್ದಿ ಕೇಳ್ತಿದ್ರು. ನಾನು ಏನು ಹೇಳಬೇಕೋ ಅದನ್ನ ಸೂಕ್ಷ್ಮವಾಗಿ ಹೇಳಿದ್ದೇನೆ. ಸಮಾಜವಾದಿಗಳ ಮಜವಾದಿತನ ನೋಡ್ತಿದ್ದೇನೆ. ಸೆಂಟ್ ಹೊಡೆದುಕೊಂಡು ವಾಸನೆ ಮುಚ್ಚಿ ಹಾಕಲು ಸಾಧ್ಯವಿಲ್ಲʼʼ ಎಂದು ಸಿ.ಟಿ. ರವಿ ದಾಳಿ ಮಾಡಿದರು.
ʻʻಈ ವಿಚಾರ ಯಾವುದೂ ನನ್ನದಲ್ಲ. ಮೈಸೂರಿನ ಜನ ಮಾತಾಡೋದು. ಜಾಸ್ತಿ ವಿಷಯ ಬೇಕು ಅಂದ್ರೆ ವಿಶ್ವನಾಥ್ ಬರ್ತಾರೆ. ಸಿದ್ದರಾಮಯ್ಯ ಹಾಗೂ ವಿಶ್ವನಾಥ್ ಬ್ಲಡ್ ಗ್ರೂಪ್ ಒಂದೇʼʼ ಎಂದು ಗೇಲಿ ಮಾಡಿದರು ಸಿ.ಟಿ. ರವಿ.
ಇದನ್ನೂ ಓದಿ | ಭ್ರಷ್ಟಾಚಾರಕ್ಕೆ ಬೂಸ್ಟ್ ನೀಡಿದ್ದೇ ಸಿದ್ದರಾಮಯ್ಯ, ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣನೂ ಹುಚ್ಚ: ಬಿ.ಸಿ. ಪಾಟೀಲ