ಮಂಡ್ಯ: ಫೈಟರ್ ರವಿ ಎಂದೇ ಕರೆಯಲ್ಪಡುವ ಬಿ.ಎಂ. ಮಲ್ಲಿಕಾರ್ಜುನ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಬೇಸರಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜೀನಾಮೆ ಪತ್ರ ಬರೆದಿರುವ ಅವರು, ಪಕ್ಷಕ್ಕೆ ವಿದಾಯ ಹೇಳುತ್ತಿರುವುದಾಗಿ ಉಲ್ಲೇಖಿಸಿದ್ದಾರೆ.
ನಾಗಮಂಗಲ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಫೈಟರ್ ರವಿ ಕೆಲವು ತಿಂಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅಲ್ಲದೆ, ಕ್ಷೇತ್ರದಲ್ಲಿ ಬಿಜೆಪಿ ಪರ ಚುರುಕಿನ ಪ್ರಚಾರವನ್ನು ಕೈಗೊಂಡಿದ್ದರು. ಹೀಗಾಗಿ ಬಿಜೆಪಿ ಟಿಕೆಟ್ ಅವರಿಗೇ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ರೌಡಿಶೀಟರ್ ಹಿನ್ನೆಲೆಯನ್ನು ಹೊಂದಿರುವ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.
ಈ ನಡುವೆಯೂ ನಾಗಮಂಗಲದಿಂದ ಬಿಜೆಪಿ ಟಿಕೆಟ್ ದೊರೆಯುವ ವಿಶ್ವಾಸದಲ್ಲಿ ಫೈಟರ್ ರವಿ ಇದ್ದರು. ಆದರೆ, ರೌಡಿಶೀಟರ್ ಎಂಬ ಕಾರಣಕ್ಕೆ ಪ್ರತಿಪಕ್ಷಗಳು ವ್ಯಾಪಕ ಟೀಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಇವರಿಗೆ ಟಿಕೆಟ್ ಕೈತಪ್ಪಿತು. ಈ ಕಾರಣಕ್ಕಾಗಿ ನಾಗಮಂಗಲ ಕ್ಷೇತ್ರದ ಜೆಡಿಎಸ್ ಉಚ್ಚಾಟಿತ ನಾಯಕ, ಮಾಜಿ ಸಂಸದ ಶಿವರಾಮೇಗೌಡ ಅವರಿಗೆ ಬಿಜೆಪಿ ಗಾಳ ಹಾಕಿತ್ತು. ಅಂತಿಮವಾಗಿ ಅವರ ಪತ್ನಿ ಸುಧಾ ಶಿವರಾಮೇಗೌಡರಿಗೆ ಟಿಕೆಟ್ ಅನ್ನು ಬಿಜೆಪಿ ಘೋಷಣೆ ಮಾಡಿತ್ತು. ಇದು ರವಿ ಆಕ್ರೋಶಕ್ಕೆ ಕಾರಣವಾಗಿತ್ತು.
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ?
ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಫೈಟರ್ ರವಿ, ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧೆ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಕ್ಷೇತ್ರದ ಜನರಿಗೆ ಪರಿಚಿತವಾಗಿರುವ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗರ ಜತೆ ಚರ್ಚಿಸಿ ಚುನಾವಣೆ ಸ್ಪರ್ಧೆ ಮಾಡಬೇಕೋ? ಬೇಡವೋ ಎಂಬ ಬಗ್ಗೆ ನಿರ್ಧಾರವನ್ನು ಪ್ರಕಟ ಮಾಡಲಿದ್ದಾರೆ ಎನ್ನಲಾಗಿದೆ.
ಮೋದಿಯನ್ನು ಸ್ವಾಗತಿಸಿದ್ದ ಫೈಟರ್ ರವಿ
ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆ ಹಾಗೂ ಮಂಡ್ಯದಲ್ಲಿ ನಡೆದ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದಾಗ ಅವರನ್ನು ಫೈಟರ್ ರವಿ ಸ್ವಾಗತಿಸಿದ್ದರು. ಈ ವೇಳೆ ಅವರಿಗೆ ಮೋದಿ ಸಹ ಕೈ ಮುಗಿದು ಪ್ರತಿ ಗೌರವವನ್ನು ನೀಡಿದ್ದರು. ಇದು ಪ್ರತಿಪಕ್ಷಗಳ ಸಹಿತ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಒಬ್ಬ ರೌಡಿಶೀಟರ್ ಪ್ರಧಾನಿಯನ್ನು ಸ್ವಾಗತ ಮಾಡುವುದು ಎಂದರೆ ಏನು? ಹೀಗಾಗಿ ಬಿಜೆಪಿ ರೌಡಿ ಮೋರ್ಚಾವನ್ನು ತೆರೆಯಲು ಮುಂದಾಗಿದೆಯೇ ಎಂಬಿತ್ಯಾದಿ ಮಾತುಗಳು, ಚರ್ಚೆಗಳು ಸಹ ನಡೆದಿದ್ದವು. ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದ ಬಿಜೆಪಿ, ಈ ವಿಷಯ ಮೋದಿಗೆ ಗೊತ್ತೇ ಇರಲಿಲ್ಲ ಎಂದು ಸಹ ಹೇಳಿಕೆ ನೀಡಿತ್ತು.
ಇದನ್ನೂ ಓದಿ: Karnataka Elections : ವರುಣ, ಕನಕಪುರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ ಆದ ನಂತರ ಕಾಂಗ್ರೆಸ್‌ಗೆ ನಡುಕ: ನಳಿನ್
ಇದೀಗ ಫೈಟರ್ ರವಿಗೆ ಟಿಕೆಟ್ ನಿರಾಕರಣೆ ಮಾಡಿದ್ದರಿಂದ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.