Site icon Vistara News

ಶ್ರೀಕಾಂತ್ ಪೂಜಾರಿ ಬೆಂಬಲಿಸಿ ಪ್ರತಿಭಟನೆ; ಆರ್‌. ಅಶೋಕ್‌ ಸೇರಿ 43 ಬಿಜೆಪಿ ಮುಖಂಡರ ವಿರುದ್ಧ ಎಫ್ಐಆರ್‌

R Ashok

ಹುಬ್ಬಳ್ಳಿ: ಕರಸೇವಕ ಶ್ರೀಕಾಂತ್ ಪೂಜಾರಿ ಬೆಂಬಲಿಸಿ ಪ್ರತಿಭಟನೆ (BJP Protest) ನಡೆಸಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌, ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಸೇರಿ 43 ಬಿಜೆಪಿ ಮುಖಂಡರ ವಿರುದ್ಧ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್‌ ದಾಖಲಾಗಿದೆ.

ಹುಬ್ಬಳ್ಳಿ -ಧಾರವಾಡ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಎ1 ಆರ್ ಅಶೋಕ (ವಿಪಕ್ಷ ನಾಯಕ), ಎ2 ಅರವಿಂದ ಬೆಲ್ಲದ್ (ವಿಪಕ್ಷ ಉಪನಾಯಕ), ಎ3 ಮಹೇಶ್ ಟೆಂಗಿನಕಾಯಿ ( ಹು-ಧಾ ಸೆಂಟ್ರಲ್ ಶಾಸಕ), ಎ7 ಎಂ.ಆರ್. ಪಾಟೀಲ್ (ಕುಂದಗೋಳ ಶಾಸಕ), ಎ8 ಪ್ರದೀಪ್ ಶೆಟ್ಟರ್ (ವಿಪ ಸದಸ್ಯ), ಎ9 ಅಶೋಕ ಕಾಟವೆ (ಮಾಜಿ ಶಾಸಕ), ಎ18 – ಪ್ರಭು ಕುಂದಗೋಳಮಠ (ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ) ಸೇರಿ 43 ಬಿಜೆಪಿ ಮುಖಂಡರ ವಿರುದ್ಧ IPC U/S 290, 504 ಅಡಿಯಲ್ಲಿ ಕೇಸ್‌ ದಾಖಲಾಗಿದೆ. ಕೋರ್ಟ್‌ನಿಂದ ಅನುಮತಿ ಪಡೆದು ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ.

ರೌಡಿಶೀಟರ್ ಶ್ರೀಕಾಂತ್‌ ಪೂಜಾರಿ ಬಂಧನವನ್ನು ವಿರೋಧಿಸಿ ಜ.3ರಂದು ನಡೆಸಿದ ಪ್ರತಿಭಟನೆ ವೇಳೆ ಹುಬ್ಬಳ್ಳಿ ಶಹರ ಪೊಲೀಸ ಠಾಣೆಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಪ್ರಯತ್ನಿಸಿ, ಪ್ರಚೋದನಕಾರಿ ಭಾಷಣವನ್ನು ಮಾಡಿ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ತೊಂದರೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್‌, ಲುಚ್ಚಾ, ಹೇಡಿ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿ, ಅವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಪಮಾನ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಹೀಗಾಗಿ ಪ್ರತಿಭಟನಾಕಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ | Ram Mandir : 65 ಲಕ್ಷ ರೂ. ಬೆಲೆಯ ಸ್ವರ್ಣ ಪಾದುಕೆಯೊಂದಿಗೆ ಅಯೋಧ್ಯೆಗೆ 8000 ಕಿ.ಮೀ ಪಾದಯಾತ್ರೆ!

ಜೈಲಿನಿಂದ ಶ್ರೀಕಾಂತ್ ಪೂಜಾರಿ ಬಿಡುಗಡೆ

ಹುಬ್ಬಳ್ಳಿ: 31 ವರ್ಷಗಳ ಹಿಂದೆ ಅಯೋಧ್ಯೆಯ ರಾಮ ಜನ್ಮಭೂಮಿಯ ವಿವಾದಿತ ಕಟ್ಟಡವನ್ನು ಧ್ವಂಸಗೊಳಿಸಿದ ಬಳಿಕ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣ (Hubballi Riots case) ಸಂಬಂಧ 2023ರ ಡಿಸೆಂಬರ್‌ 29ರಂದು ಬಂಧನಕ್ಕೊಳಗಾಗಿದ್ದ ಶ್ರೀಕಾಂತ್ ಪೂಜಾರಿ (Srikanth Poojary) ಅವರು ಜೈಲಿನಿಂದ ಶನಿವಾರ ಬಿಡುಗಡೆಯಾಗಿದ್ದಾರೆ.

ಡಿಸೆಂಬರ್ 29ರಂದು ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಲಾಗಿತ್ತು. ಇದು ಭಾರಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತು. ಬಿಜೆಪಿಯಿಂದ “ನಾನು ಕರಸೇವಕ, ನನ್ನನ್ನೂ ಬಂಧಿಸಿ” ಅಭಿಯಾನ ಹಾಗೂ ಪ್ರತಿಭಟನೆಗಳು ನಡೆದಿವೆ. ಇದೆಲ್ಲದರ ನಡುವೆ ಪ್ರಕರಣದ ವಿಚಾರಣೆ ನಡೆಸಿದ ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು (1st Additional District Court Hubballi) ಶುಕ್ರವಾರ ಜಾಮೀನು ಮಂಜೂರು ಮಾಡಿತ್ತು.

ಇದನ್ನೂ ಓದಿ | Ram Mandir: ರಾಮಮಂದಿರ ಲೋಕಾರ್ಪಣೆ; ಜ.22ಕ್ಕೆ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಅಯೋಧ್ಯೆಗೆ ಹೋಗುತ್ತೇನೆ ಎಂದ ಶ್ರೀಕಾಂತ್‌ ಪೂಜಾರಿ

ಶ್ರೀಕಾಂತ್‌ ಪೂಜಾರಿ ಅವರು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಶನಿವಾರ ಜೈಲಿನ ಎದುರು ಹಿಂದು ಕಾರ್ಯಕರ್ತರು ಭಾರಿ ಸಂಭ್ರಮಾಚರಣೆ ನಡೆಸಿದರು. ಈ ಹೊತ್ತಿನಲ್ಲಿ ಮಾತನಾಡಿದ ಶ್ರೀಕಾಂತ್‌ ಪೂಜಾರಿ ಅವರು ನಾನು ಯಾವುದೇ ತಪ್ಪು ಮಾಡಿಲ್ಲ ಎಂದರು. ಜತೆಗೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಅಯೋಧ್ಯೆಗೆ ತೆರಳುವುದಾಗಿ ತಿಳಿಸಿದರು.

Exit mobile version