Site icon Vistara News

ಮನೆಗೆ ಬೆಂಕಿ ಹಾಕುವ ಬೆದರಿಕೆ: ಸಚಿವ ಆನಂದ್‌ ಸಿಂಗ್‌ ಮತ್ತು ಬೆಂಬಲಿಗರ ಮೇಲೆ ಎಫ್‌ಐಆರ್‌

Anand sing case

ಹೊಸಪೇಟೆ: ಸಚಿವ ಆನಂದ್‌ ಸಿಂಗ್‌ ಅವರು ತಮ್ಮ ಮನೆಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬವೊಂದು ಆರೋಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಚಿವರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಹೊಸಪೇಟೆ ೦೬ ವಾರ್ಡ್‌ನ ನಿವಾಸಿಯಾಗಿರುವ, ಕಿರುಕ್ಕುಳಕ್ಕೊಳಗಾದ ಪೊಲಪ್ಪ ಎಂಬವರ ದೂರಿನ ಆಧಾರದಲ್ಲಿ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಸಚಿವ ಆನಂದ ಸಿಂಗ್ ಅವರಲ್ಲದೆ, ಮರಿಯಪ್ಪ, ಹನುಮಂತಪ್ಪ ಹಾಗೂ ಹುಲುಗಪ್ಪ ಎಂಬುವರ ಮೇಲೆ ಎಫ್ಐಆರ್‌ ದಾಖಲಿಸಿದ್ದಾರೆ.
ಸಚಿವ ಆನಂದ್ ಸಿಂಗ್‌ ಅವರು ತಮ್ಮ ಮನೆಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಒಂದೇ ಕುಟುಂಬದ 9 ಮಂದಿ ಮಂಗಳವಾರ ಹೊಸಪೇಟೆ ಎಸ್‌ಪಿ ಕಚೇರಿ ಎದುರು ಪೆಟ್ರೋಲ್ ಸುರಿದುಕೊಂಡು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಕೆಲ ಕಾಲ ಇಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

“ಸಚಿವ ಆನಂದ್ ಸಿಂಗ್ ಅವರು ನಮ್ಮ ಮನೆಗೆ ಬೆಂಕಿ ಹಾಕಿ ಸುಡುತ್ತೇನೆ ಎಂದು ಬೆದರಿಸಿದ್ದಾರೆ. ಹೀಗಾಗಿ ನಾವು ಪೆಟ್ರೋಲ್ ಸುರಿದುಕೊಂಡಿದ್ದೇವೆ, ಸಚಿವರು ಬಂದು ಬೆಂಕಿ ಹಚ್ಚಿ ನಮ್ಮನ್ನು ಕೊಲ್ಲಲಿ” ಎಂದು ಹೊಸಪೇಟೆಯ 6ನೇ ವಾರ್ಡ್‌ನ ಸುಣ್ಣದ ಬಟ್ಟಿ ಪ್ರದೇಶದ‌ ನಿವಾಸಿ ಡಿ.ಪೋಲಪ್ಪ ಕುಟುಂಬಸ್ಥರು ಪೆಟ್ರೋಲ್ ಸುರಿದುಕೊಂಡು ಆಕ್ರೋಶ ಹೊರಹಾಕಿದರು.

“ನೀವು ಇರುವುದು ನಮ್ಮ ಜಾಗ, ಮನೆ ಖಾಲಿ ಮಾಡಬೇಕು. ಇಲ್ಲವಾದಲ್ಲಿ ಮನೆಗೆ ಬೆಂಕಿ ಹಚ್ಚಿ ಸುಡುತ್ತೇನೆ ಎಂದು ಸಚಿವ ಆನಂದ್ ಸಿಂಗ್ ಬೆದರಿಕೆ ಹಾಕಿದ್ದಾರೆ. ಕಳೆದ ಐದಾರು ತಿಂಗಳಿನಿಂದ ಮನೆ ಖಾಲಿ ಮಾಡಿ ಎಂಬ ಒತ್ತಾಯ ಮಾಡಲಾಗುತ್ತಿದೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದೆವು. ಆದರೆ ಯಾವುದೇ ಕ್ರಮವಾಗಿಲ್ಲ” ಎಂದು ಡಿ.ಪೋಲಪ್ಪ ಆರೋಪಿಸಿದ್ದರು.

ಇದೀಗ ಗ್ರಾಮಾಂತರ ಪೊಲೀಸರು ನಾಲ್ವರ ವಿರುದ್ಧ ಸಿಆರ್‌ಪಿಸಿಯ 504, 506ನೇ ಸೆಕ್ಷನ್‌ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಏನಿದು ಪ್ರಕರಣ?
ಹೊಸಪೇಟೆಯ ಹಂಪಿ ರಸ್ತೆಯಲ್ಲಿ ಸುಣ್ಣದ ಬಟ್ಟೆ ಪ್ರದೇಶದಲ್ಲಿ ವಾಸವಿರುವ ಡಿ. ಪೋಲಪ್ಪ ಮತ್ತು ಹೊಸಪೇಟೆ ನಗರ ಸಭೆಯ ೬ನೇ ವಾರ್ಡ್‌ನ ಸದಸ್ಯ ಖದೀರ್‌ ಅವರು, ಸಚಿವ ಆನಂದ ಸಿಂಗ್ ಸರ್ಕಾರಿ ಜಾಗದಲ್ಲಿ ಆಕ್ರಮವಾಗಿ ಬಂಗಲೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ದಾಖಲೆ ಸಮೇತವಾಗಿ ಹೋರಾಟ ಮಾಡಿದ್ದರು.

ಈ ನಡುವೆ ನಗರಸಭೆ ಚುನಾವಣೆಯಲ್ಲಿ ಖದೀರ್‌ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದರು. ಇದರಿಂದ ಆನಂದ್‌ ಸಿಂಗ್‌ ಮತ್ತಷ್ಟು ಕೆರಳಿದರೆಂದು ಆರೋಪಿಸಲಾಗಿದೆ. ಈ ನಡುವೆ ಮಂಗಳವಾರ ಆನಂದ್‌ ಸಿಂಗ್‌ ಆಪ್ತರಾದ ಕೆಲವರು ಪೋಲಪ್ಪ ಅವರ ಮನೆಗೇ ಬೆಂಕಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ತಕ್ಷಣವೇ ಕುಟುಂಬಿಕರು ಎಸ್‌ಪಿ ಕಚೇರಿ ಎದುರು ಬಂದು ಪ್ರತಿಭಟಿಸಿದ್ದಾರೆ.

ಇದನ್ನೂ ಓದಿ| ಸಚಿವ ಆನಂದ್‌ ಸಿಂಗ್ ವಿರುದ್ಧ ಜೀವ ಬೆದರಿಕೆ ಆರೋಪ; ಪೆಟ್ರೋಲ್‌ ಸುರಿದುಕೊಂಡು 9 ಮಂದಿ ಪ್ರತಿಭಟನೆ

Exit mobile version