ಮಂಡ್ಯ: ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ವಿರುದ್ಧ ಪ್ರಚೋದನಕಾರಿ ಭಾಷಣ, ಮಹಿಳೆಯರ ಚುಡಾವಣೆ, ಲೈಂಗಿಕ ನಿಂದನೆ, ಧಾರ್ಮಿಕ ನಿಂದನೆ, ಗಲಭೆಗೆ ಪ್ರಚೋದನೆ ಇತ್ಯಾದಿ ಹತ್ತು ಹಲವಾರು ದೂರುಗಳನ್ನು ದಾಖಲಿಸಲಾಗಿದೆ. ಒಂದೇ ಭಾಷಣ ಆಧರಿಸಿ ನೀಡಿರುವ ಈ ದೂರನ್ನು ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ ದಾಖಲಿಸಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಹನುಮ ಜಯಂತಿ ಅಂಗವಾಗಿ ನಡೆದ ಸಂಕೀರ್ತನಾ ಯಾತ್ರೆ ವೇಳೆ ಕಲ್ಲಡ್ಕ ಪ್ರಭಾಕರ ಭಟ್ ಭಾಷಣ ಮಾಡಿದ್ದರು. ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರಿಗೆ ತ್ರಿವಳಿ ತಲಾಕ್ (Triple Talaq) ಹೇಳುವ ಅವಕಾಶ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಸರ್ಕಾರದಿಂದಾಗಿ ತ್ರಿವಳಿ ತಲಾಕ್ ರದ್ದಾಗಿದೆ. ಬಹು ಪತ್ನಿತ್ವ ಪಿಡುಗು ಮತ್ತು ತ್ರಿವಳಿ ತಲಾಕ್ ಕಾಟದಿಂದಾಗಿ ಈ ಹಿಂದೆ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ (Permanent Husband) ಇರಲಿಲ್ಲ. ತ್ರಿವಳಿ ತಲಾಕ್ ರದ್ದುಪಡಿಸುವ ಮೂಲಕ ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರವಾಗಿದೆ ಎಂದು ಕಲ್ಲಡ್ಕ ಹೇಳಿದ್ದರು.
ಮುಸ್ಲಿಂ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಹೋರಾಟಗಾರ್ತಿ ನಜ್ಮಾ ನಜೀರ್ ದೂರು ಆಧರಿಸಿ FIR ದಾಖಲು ಮಾಡಲಾಗಿದೆ. ರೌಡಿ ಶೀಟರ್ ತೆರೆಯುವಂತೆಯೂ ಅವರು ದೂರು ನೀಡಿದ್ದಾರೆ.
ಮಹಿಳೆಯರನ್ನು ಚುಡಾಯಿಸಿರುವುದು, ಲೈಂಗಿಕವಾಗಿ ಅವಮಾನಿಸಿರುವುದು, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದಿಸಿರುವುದು, ಸಾರ್ವಜನಿಕವಾಗಿ ಬೆದರಿಕೆಯೊಡ್ಡಿರುವುದು, ಧರ್ಮವನ್ನು ಅವಮಾನಿಸಿರುವುದು, ಧರ್ಮಗಳ ಮಧ್ಯೆ ಎತ್ತಿಕಟ್ಟಿ ಗಲಭೆ ನಡೆಸಿರುವುದು, ಸಾವು ನೋವುಗಳನ್ನು ಪ್ರಚೋದಿಸಿರುವುದು ಮುಂತಾದ ಆರೋಪಗಳಲ್ಲಿ ನಜ್ಮಾ ದೂರು ಆಧರಿಸಿ, IPC ಸೆಕ್ಷನ್ 354, 294, 509, 506, 153A, 295, 295A, 298ರಡಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಮುಸಲ್ಮಾನ ಹುಡುಗರು ಅಷ್ಟೇ ಅಲ್ಲ, ಮುಸ್ಲಿಂ ಮಹಿಳೆಯರೂ ಮತಾಂತರ ಮಾಡುತ್ತಿದ್ದಾರೆ. ನಿಮ್ಮ ಮುಸ್ಲಿಂ ಸಮಾಜದಲ್ಲಿ ಹುಡುಗಿಯರು ಇಲ್ಲವಾ? ಹಿಂದೂ ಹುಡುಗಿಯರನ್ನು ಯಾಕೆ ಟಾರ್ಗೆಟ್ ಮಾಡ್ತೀರಾ? ನಿಮಗೆ ತ್ರಿವಳಿ ತಲಾಖ್ ನೀಡುವ ಪದ್ಧತಿಯನ್ನು ತೆಗೆದು ಹಾಕಿದ್ದು ನರೇಂದ್ರ ಮೋದಿ ಅಲ್ಲವೇ ಎಂದು ಭಟ್ ಪ್ರಶ್ನಿಸಿದ್ದರು.
ನಿಮಗೆ ತಾಕತ್ ಇದ್ದರೆ ಹಿಜಾಬ್ ನಿಷೇಧ ವಾಪಸ್ ಪಡೆಯಿರಿ. ಶಾಲೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ. ಸಮವಸ್ತ್ರ ಜಾರಿ ಮಾಡಿದ್ದೇ ಏಕರೂಪತೆ ತರುವ ಉದ್ದೇಶದಿಂದಾಗಿದೆ. ಸಿಎಂ ಸಿದ್ದರಾಮಯ್ಯ ಅವರೇ, ಮಕ್ಕಳಲ್ಲಿ ಯಾಕೆ ತಾರತಮ್ಯ ಹುಟ್ಟು ಹಾಕುತ್ತೀರಿ? ಅಲ್ಪಸಂಖ್ಯಾತರ ಅಭಿವೃದ್ಧಿಗೆ 10,000 ಕೋಟಿ ರೂ. ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಯಾರಪ್ಪನ ಮನೆಯ ದುಡ್ಡು ಕೊಡುತ್ತೀರಿ? ತೆರಿಗೆ ಕಟ್ಟುವವರು ಹಿಂದುಗಳು. ನಮ್ಮ ಹಣ ಅಲ್ಪಸಂಖ್ಯಾತರಿಗೆ ಕೊಡುತ್ತೀರಾ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಪ್ರಶ್ನಿಸಿದ್ದರು.
ಶಾಲೆಯೊಳಗೆ ಜೈ ಶ್ರೀರಾಮ್ ಕೂಗುತ್ತೇವೆ. ಹಿಜಾಬ್ ನಿಷೇಧ ವಾಪಸ್ ತೆಗೆಯುತ್ತಾರಂತೆ. ಅವರು ಹಿಜಾಬ್ ಹಾಕಿಕೊಂಡು ಬರಲಿ. ನಾವು ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ. ಕೇಸರಿ ಟೋಪಿ ಹಾಕಿಕೊಂಡು ಬರುತ್ತೇವೆ ಎಂದು ಕಲ್ಲಡ್ಕ ಕಿಡಿಕಾರಿದ್ದರು.
ರಾಮ ಸರ್ವ ಶ್ರೇಷ್ಠ ರಾಜ. ರಾಮನ ಆದರ್ಶಗಳು ನಮಗೆ ಮೇಲ್ಪಂಕ್ತಿ ಆಗಬೇಕು. ಸಾವಿರಾರು ವರ್ಷಗಳಿಂದ ಭಾರತ ವಿಜೃಂಭಣೆಯಿಂದ ನಡೆದುಕೊಂಡು ಬಂದಿದೆ. ಭಾರತದ ಅಸ್ತಿತ್ವಕ್ಕೆ ಯಾವಾಗಲೂ ಧಕ್ಕೆ ಬಂದಿಲ್ಲ. ಅಲೆಕ್ಸಾಂಡರ್ ದಿ ಗ್ರೇಟ್ ಅವರ ದೇಶಕ್ಕೆ ಮಾತ್ರ. ಅಲೆಕ್ಸಾಂಡರ್ ನಮ್ಮ ಒಬ್ಬ ರಾಜನನ್ನು ಸೋಲಿಸಲು ಸಾಧ್ಯವಾಗದೆ ಓಡಿ ಹೋಗಿ ಸತ್ತ. ಕ್ರೈಸ್ತ, ಇಸ್ಲಾಂ ಆಳ್ವಿಕೆಯ ಕಾಲದಲ್ಲಿ ಧರ್ಮ ವಿಸ್ತರಣೆಯೇ ಉದ್ದೇಶವಾಗಿತ್ತು. ನಮ್ಮ ಸ್ವಾರ್ಥಕ್ಕಾಗಿ ಸತ್ಯ- ಅಸತ್ಯ, ಮಾನ- ಅಪಮಾನ ಗೊತ್ತಾಗಲಿಲ್ಲ. ಕಾಂಗ್ರೆಸ್ ನಾಯಕರ ವೈಫಲ್ಯತೆಯಿಂದ ದೇಶ ವಿಭಜನೆ ಆಯಿತು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: PM Modi: ಮುಸ್ಲಿಂ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ ಸಿಕ್ಕಿದ್ದು ಮೋದಿಯಿಂದಾಗಿ: ಕಲ್ಲಡ್ಕ ಪ್ರಭಾಕರ್ ಭಟ್