ಬೆಂಗಳೂರು: ರಾಮನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಭೂಮಿ ಪೂಜೆ ಕಾರ್ಯಕ್ರಮ ಭಾರಿ ಗದ್ದಲ ಎಬ್ಬಿಸಿದ್ದು, ಜೆಡಿಎಸ್-ಬಿಜೆಪಿ ತಿಕ್ಕಾಟಕ್ಕೆ ಕಾರಣವಾಗಿದೆ. ಅಲ್ಲದೆ, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದು, ಮುಖ್ಯಮಂತ್ರಿ ಹಾಗೂ ವಿಧಾನ ಪಡಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರನ್ನು ಕತ್ತಲೆಯಲ್ಲಿಟ್ಟು ಕಾಮಗಾರಿ ರಾಜಕೀಯ ಮಾಡಲಾಗುತ್ತಿದೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ನನಗೆ ಅಪಮಾನ ಮಾಡಲಾಗಿದೆ. ಅಲ್ಲಿನ ಅಧಿಕಾರಿಗಳು ನನ್ನ ಪಾಲಿಗೆ ಹಕ್ಕುಚ್ಯುತಿ ಎಸಗಿದ್ದಾರೆ. ಓರ್ವ ನಾಮನಿರ್ದೇಶಿತ ವಿಧಾನ ಪರಿಷತ್ ಸದಸ್ಯರ ರಾಜಕೀಯ ಹಿತರಕ್ಷಣೆ ಮಾಡುವ ಏಕೈಕ ಉದ್ದೇಶದಿಂದ ಎಲ್ಲ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ ರಾಜ್ಯ ಸರ್ಕಾರದ ಅಧಿಕಾರಿಗಳು ಅಪಚಾರ ಎಸಗಿದ್ದಾರೆ. ಶನಿವಾರ ಚನ್ನಪಟ್ಟಣದಲ್ಲಿ ನಡೆದಿರುವ ಎಲ್ಲ ಘಟನೆಗಳಿಗೂ ಸರ್ಕಾರ, ಅಧಿಕಾರಿಗಳು ಮತ್ತು ವಿಧಾನಪರಿಷತ್ ಸದಸ್ಯರೇ ಕಾರಣ ಎಂದು ಆರೋಪ ಮಾಡಿದರು.
ನಾನೊಬ್ಬ ಮಾಜಿ ಮುಖ್ಯಮಂತ್ರಿ. ನನ್ನಂಥವರಿಗೇ ಸರ್ಕಾರ ಈ ರೀತಿ ಕಿರುಕುಳ ನೀಡಿದರೆ, ಇತರೆ ಶಾಸಕರ ಪಾಡೇನು? ಶಾಸಕನಾದ ನನ್ನ ಹಕ್ಕುಚ್ಯುತಿಗೆ ಕಾರಣರಾದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್.) ಅಧಿಕಾರಿಗಳು ಹಾಗೂ ಜಿಲ್ಲೆಯ ಇನ್ನಿತರೆ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದರು.
ಸ್ಪೀಕರ್‌ಗೆ ಪತ್ರ ಬರೆದು ಆಗ್ರಹ
ವಿಧಾನಸಭೆಯ ಒಳಗೆ, ಹೊರಗೆ ಹೋರಾಟ ನಡೆಸುತ್ತೇನೆ. ಸದನದಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಲಾಗುವುದು. ಈ ಬಗ್ಗೆ ವಿಧಾನಸಭಾಧ್ಯಕ್ಷರಿಗೆ ದೂರು ನೀಡಲಾಗುವುದು. ಈ ಹಿಂದೆ ಮುಖ್ಯಮಂತ್ರಿಗಳಿಗೆ ಪತ್ರ ನಡೆದು ದೂರು ನೀಡಿದ್ದೆ. ಈವರೆಗೆ ಅವರು ನನಗೆ ಉತ್ತರ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ | ಗುದ್ದಲಿ ಪೂಜೆ ಗದ್ದಲ | ವಾಮಮಾರ್ಗ ಬೇಡ; ಮಾಜಿ ಸಿಎಂ ಎಚ್‌ಡಿಕೆ ವಿರುದ್ಧ ಅಶ್ವತ್ಥನಾರಾಯಣ ಕಿಡಿ
ಆರ್‌ಎಸ್‌ಎಸ್ ಹೇಳಿಕೊಟ್ಟಿದೆಯಾ?
ನನಗೆ ಆಗಿರುವ ಅಪಮಾನ ಕ್ಷೇತ್ರದ ಜನತೆಗೆ ಮಾಡಿರುವ ಅಪಮಾನ. ಕಾಮಗಾರಿಗೆ ಅಡಿಗಲ್ಲು ಹಾಕುವುದಾದರೆ ಶಾಸಕರನ್ನು ಹೊರಗಿಟ್ಟು ಮಾಡಬೇಕು ಎನ್ನುವ ನಿಯಮ ಇದೆಯೇ? ಇಷ್ಟು ದಿನಗಳಿಂದ ಸುಮ್ಮನಿದ್ದು, ಈಗ ವಿಧಾನ ಪರಿಷತ್ ಸದಸ್ಯರಿಗೆ ಚಿತಾವಣೆ ಮಾಡಿ ಅತಿ ಉತ್ಸಾಹದಿಂದ ಕಾಮಗಾರಿಗಳಿಗೆ ಚಾಲನೆ ನೀಡಲು ಹೊರಟ ಒಳಗುಟ್ಟು ಏನು? ಈ ರೀತಿ ಆಳ್ವಿಕೆ ನಡೆಸಲೆಂದು ಆರ್‌ಎಸ್‌ಎಸ್ ಕಲಿಸಿಕೊಟ್ಟಿರುವುದಾ? ನನ್ನನ್ನು ಕೆಣಕಿದರೆ ಸುಮ್ಮನೆ ಇರುವುದಿಲ್ಲ ಎಂದು ಎಚ್‌ಡಿಕೆ ಎಚ್ಚರಿಕೆ ನೀಡಿದರು.
ಇವತ್ತಿನ ದಿನ ನನ್ನ ಕ್ಷೇತ್ರ ಚನ್ನಪಟ್ಟಣದಲ್ಲಿ ಸರ್ಕಾರದ ಅನುದಾನ ಕಾರ್ಯಕ್ರಮದ ಶಂಕುಸ್ಥಾಪನೆ ಇತ್ತು. ಆದರೆ, ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾಜಕೀಯಕ್ಕೋಸ್ಕರ ಈ ಕಾರ್ಯಕ್ರಮ ಮಾಡಿದ್ದಾರೆ. ಕಡ್ಡಾಯವಾಗಿ ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿಯೇ ರಾಜ್ಯ ಸರ್ಕಾರದ ಎಲ್ಲ ಅನುದಾನದ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಖುದ್ದು ಮುಖ್ಯಮಂತ್ರಿಗಳೇ ಸದನದಲ್ಲಿ ಹೇಳಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಆಯೋಜಿಸುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದು ಅಧಿಕಾರಿಗಳ ಗಮನಕ್ಕೆ ಇಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಇತ್ತೀಚೆಗೆ ಕೆಐಎಡಿಬಿ ಸಭೆಯಲ್ಲೂ ಉಸ್ತುವಾರಿ ಸಚಿವರಾಗಿ ನಾನೇ ಎಲ್ಲ ಉದ್ಘಾಟನೆ ಕಾರ್ಯಕ್ರಮಗಳಿಗೆ ಬರುತ್ತೇನೆ ಎಂದು ರಾಮನಗರ ಉಸ್ತುವಾರಿ ಸಚಿವರು ಹೇಳಿದ್ದಾರೆ.ಈಚೆಗೆ ಮುದ್ರಿಸಿ ಹೊರಡಿಸಿರುವ ಆಹ್ವಾನ ಪತ್ರಿಕೆ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ. ವಿಧಾನ ಪರಿಷತ್ ಸದಸ್ಯರ ಕೋರಿಕೆ ಮೇರೆಗೆ 50 ಕೋಟಿ ರೂ. ಬಿಡುಗಡೆ ಮಾಡಿದ್ದಾರೆಂದು ಸಿ.ಪಿ. ಯೋಗೇಶ್ವರ್ ಹೆಸರು ಹಾಕಿದ್ದಾರೆ. ಯೋಗೇಶ್ವರ್ ಎಂಎಲ್‌ಸಿ ಆಗಿರುವುದು ಕಲಾವಿದರ ಕೋಟಾದಲ್ಲಿ. ಅವರ ಕೋರಿಕೆ ಮೇರೆಗೆ ಅನುದಾನ ಬಿಡುಗಡೆ ಮಾಡುವುದು ಎಂದರೆ ಏನರ್ಥ? ಯಾರ ಕಿಸೆಗೆ ಹಣ ಹರಿದು ಹೋಗಲು ಹೀಗೆ ಮಾಡಿದ್ದಾರೆ? ಒಬ್ಬ ಮಾಜಿ ಮುಖ್ಯಮಂತ್ರಿ ಕ್ಷೇತ್ರದಲ್ಲೇ ಈ ರೀತಿ ದಬ್ಬಾಳಿಕೆ ನಡೆದರೆ ಹೇಗೆ?ಇದರ ಬಗ್ಗೆ ಜಿಲ್ಲಾಧಿಕಾರಿ ಜತೆ ಮಾತಾಡಿದ್ದೇನೆ. ಅವರು ನನ್ನ ಗಮನಕ್ಕೆ ಕೂಡ ಬಂದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಿಲ್ಲ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡುವುದರಲ್ಲಿ ಸಿ.ಪಿ.ಯೋಗೇಶ್ವರ್ ಪಾತ್ರ ಏನು? ಆಗ ಅವರು ಯಾವ ಪಾಪದ ಹಣ ಬಳಸಿಕೊಂಡರು ಅನ್ನುವುದನ್ನು ನಾನು ಈಗ ಮಾತನಾಡುವುದಿಲ್ಲ. ಮುಂದಿನ ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಹಣ ಹೊಡೆಯೋಕೆ ಯೋಗೇಶ್ವರ್ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಎಚ್‌ಡಿಕೆ ಆರೋಪಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಶಾಸಕರಾಗಿದ್ದ, ಈಗ ಸಚಿವರಾಗಿರುವ ಒಬ್ಬರ ಕ್ಷೇತ್ರಕ್ಕೆ 1,700 ಕೋಟಿ ರೂ. ಅನುದಾನ ಕೊಟ್ಟಿದ್ದೆ. ಅವರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ನಾನೆಂದೂ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡಿದವನಲ್ಲ. ಇದನ್ನು ಬಿಜೆಪಿ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.
ನನ್ನ ಶಕ್ತಿ ಕುಂದಿಸಲು ಸಾಧ್ಯವಿಲ್ಲ
ಅಭಿವೃದ್ಧಿ ಕಾಮಗಾರಿಗಳಿಗೆ ಜನರನ್ನು ಸೇರಿಸಿಕೊಂಡು ಚಾಲನೆ ನೀಡಬೇಕು. ಅದನ್ನು ಹೊರತುಪಡಿಸಿ ಪೊಲೀಸ್ ಬೆಟಾಲಿಯನ್‌ಗಳನ್ನು ಇಟ್ಟುಕೊಂಡು ಶಂಕುಸ್ಥಾಪನೆ ಮಾಡಿದ್ದಾರೆ. ಇದರಿಂದ ನನ್ನ ಶಕ್ತಿಯನ್ನು ಕುಂದಿಸಲು ಸಾಧ್ಯವಿಲ್ಲ. ರಾಮನಗರ ಜನತೆಯೊಂದಿಗೆ ನನ್ನ ಒಡನಾಟ ಯಾವ ರೀತಿ ಇದೆ ಎಂದು ಎಲ್ಲರಿಗೂ ಗೊತ್ತು. ಅದನ್ನೇ ನನ್ನ ದೌರ್ಬಲ್ಯ ಅಂದುಕೊಂಡರೆ ಮುಂದಿನ ದಿನಗಳಲ್ಲಿ ನನ್ನ ಶಕ್ತಿ ಏನೆಂಬುದನ್ನು ನೋಡಬೇಕಾಗುತ್ತದೆ ಎಂದು ಎಚ್‌ಡಿಕೆ ನೇರವಾಗಿ ಎಚ್ಚರಿಕೆ ನೀಡಿದರು.
ಧಮ್ಮು, ತಾಖತ್ತು ಎಂದರೆ ಅದಕ್ಕೂ ಸಿದ್ಧರಿದ್ದೇವೆ
ಪ್ರೀತಿ, ವಿಶ್ವಾಸ ಮತ್ತು ಕಾನೂನಿಗೆ ತಲೆಬಾಗುತ್ತೇನೆ. ನೀವು ಧಮ್ಮು, ತಾಖತ್ತು ಎಂದು ಹೇಳಿ ತೋರಿಸುವುದಕ್ಕೆ ಬಂದರೆ ಅದಕ್ಕೆ ನಾವೂ ಸಿದ್ಧರಿದ್ದೇವೆ. ಹಿಂದಿನ ಮುಖ್ಯಮಂತ್ರಿ ಒಬ್ಬರು ಎಚ್.ಡಿ.ದೇವೇಗೌಡರ ಕುಟುಂಬವನ್ನು ಕೆಣಕಿ ಏನಾದರು? ಅದನ್ನು ಒಮ್ಮೆ ನೆನಪು ಮಾಡಿಕೊಂಡರೆ ಉತ್ತಮ. ಯಾವುದೇ ಕಾರಣಕ್ಕೂ ನನ್ನ ಪಕ್ಷದ ಕಾರ್ಯಕರ್ತರನ್ನು ಕೆರಳಿಸೋಕೆ ಹೋಗಬೇಡಿ ಎಂದು ಚಾಟಿ ಬೀಸಿದರು.
ಇದನ್ನೂ ಓದಿ | ಗುದ್ದಲಿ ಪೂಜೆ ಗದ್ದಲ | ಬಾರದ ಎಚ್‌ಡಿಕೆ, ಸಿಡಿದೆದ್ದ ಜೆಡಿಎಸ್; ಸಿಪಿವೈ ಕಾರಿಗೆ ಕಲ್ಲು, ಮೊಟ್ಟೆ ಎಸೆತ, ರಾಮನಗರ ಉದ್ರಿಕ್ತ
ಮಂಡ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಮುಗಿಸಬೇಕು ಎಂದು ಕಾಂಗ್ರೆಸ್, ಬಿಜೆಪಿ ಪಕ್ಷಗಳು ಒಂದಾಗಿದ್ದವು. ಈಗ ರಾಮನಗರದಲ್ಲಿ ಒಬ್ಬರನ್ನು ತಯಾರು ಮಾಡಿ ಬಿಟ್ಟಿದ್ದಾರೆ. ಈಗ ಚನ್ನಪಟ್ಟಣಕ್ಕೆ ವಿಧಾನಸಭೆ ಕ್ಷೇತ್ರದಲ್ಲಿ ನನ್ನನ್ನು ಕಟ್ಟಿಹಾಕಲು ಬಿಜೆಪಿ, ಕಾಂಗ್ರೆಸ್ ಒಂದಾಗಿವೆ ಅನ್ನುವುದೂ ನನಗೆ ಗೊತ್ತಿದೆ. ಆದರೆ ನಾನು ಅಲ್ಲಿ ಜನರ ಮನೆಯ ಮಗನಾಗಿದ್ದೇನೆ. ಅವರು ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ತನಿಖೆ ಮಾಡಿಸಲಿ
ಇಬ್ಬರು ಗುತ್ತಿಗೆದಾರರ ಬಗ್ಗೆ ಯೋಗೇಶ್ವರ್ ಮಾತನಾಡಿದ್ದಾರೆ. ಅವರು ಯಾವ ಗುತ್ತಿಗೆದಾರರು ಎನ್ನುವುದನ್ನು ಅವರು ಹೇಳಬೇಕು. ಅವರದೇ ಸರ್ಕಾರ ಇದೆ. ತನಿಖೆ ಮಾಡಿಸಲಿ. ಆ ಇಬ್ಬರು ಗುತ್ತಿಗೆದಾರರು ಹಿಂದೆ ಕಾಂಗ್ರೆಸ್, ಬಿಜೆಪಿ ಸರಕಾರಗಳ ಅವಧಿಯಲ್ಲಿ ಎಷ್ಟು ಕೆಲಸ ಮಾಡಿದ್ದಾರೆ? ಎಂದು ಜನರಿಗೂ ಗೊತ್ತಾಗಲಿ. ಯಾವುದೇ ಚರ್ಚೆಗೆ ನಾನು ತಯಾರಿದ್ದೇನೆ ಎಂದು ಎಚ್‌ಡಿಕೆ ಸವಾಲು ಹಾಕಿದರು.
ನಾನಿರುವು ಬ್ಲಾಕ್, ಬ್ಲ್ಯಾಕ್‌ಮೇಲ್ ಗೊತ್ತಿಲ್ಲ
ನಮ್ಮ ಪಕ್ಷದಲ್ಲಿ ಗೂಂಡಾಗಳು ಇಲ್ಲ, ಇರುವುದು ಕಾರ್ಯಕರ್ತರು ಮಾತ್ರ. ಹೊರಗಿನಿಂದ ಜನರನ್ನು ಕರೆ ತರುವಂಥ ಸ್ಥಿತಿ ನಮಗೆ ಬಂದಿಲ್ಲ. ನಾನು ಬ್ಲ್ಯಾಕ್‌ಮೇಲ್ ರಾಜಕೀಯ ಮಾಡುತ್ತಿದ್ದೇನೆ ಎಂದು ಯೋಗೇಶ್ವರ್ ಆರೋಪ ಮಾಡಿದ್ದಾರೆ. ಅಯ್ಯೋ ರಾಮ, ನಾನು ಯಾಕೆ ಬ್ಲ್ಯಾಕ್‌ಮೇಲ್ ಮಾಡಲಿ? ನಾನು ಇರುವುದು ಬ್ಲಾಕ್ (ಕಪ್ಪು) ಅಷ್ಟೇ. ನನಗೆ ಅದ್ಯಾವ ಬ್ಲ್ಯಾಕ್‌ಮೇಲ್ ಕೂಡಾ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಬಿಎಂಎಸ್‌ನಲ್ಲಿ ಜೈಲಿಗೆ ಹೋಗುತ್ತಾರೆ
ಬಿಎಂಎಸ್ ಟ್ರಸ್ಟ್ ಹಗರಣ ತನಿಖೆಯಾದರೆ ಯಾರ ತಲೆ ಉರುಳುತ್ತದೆಯೋ ಗೊತ್ತಿಲ್ಲ. ತನಿಖೆಯಾದರೆ ಒಬ್ಬೊಬ್ಬರ ಇತಿಹಾಸವೂ ಹೊರಬರುತ್ತದೆ ಎಂದು ಗುಡುಗಿದ ಎಚ್‌ಡಿಕೆ, ಚನ್ನಪಟ್ಟಣದಲ್ಲಿ ಈ ರೀತಿಯ ದೌರ್ಜನ್ಯಕ್ಕೆ ನಾನು ಹೆದರುವುದಿಲ್ಲ. ಶಂಕುಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ಹೋಗಿಲ್ಲ. ವಿಧಾನಪರಿಷತ್‌ನ ನಾಲ್ಕು ಚೇಲಾಗಳನ್ನು ಇಟ್ಟುಕೊಂಡು ಮಾಡುತ್ತೀರಾ? ಅಧಿಕಾರಿಗಳು ಅವರ ಜತೆ ಇದ್ದುಕೊಂಡೇ ಗುದ್ದಲಿಪೂಜೆ ಮಾಡುತ್ತೀರಾ? ಉಲ್ಲಂಘನೆ ಮಾಡಿರುವ ಅವರನ್ನು ಬಂಧಿಸಬೇಕು. ಅದು ಬಿಟ್ಟು ಧರಣಿ ಮಾಡುವವರನ್ನು ಬಂಧಿಸುತ್ತೀರಾ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಇದನ್ನೂ ಓದಿ | ಗುದ್ದಲಿ ಪೂಜೆ ಗದ್ದಲ | ₹50 ಕೋಟಿ ಅನುದಾನ ತಪ್ಪಿಸಲು ನೋಡಿದ ಎಚ್‌ಡಿಕೆ ಗೂಂಡಾಗಳ ಕರೆಸಿದರು: ಸಿಪಿವೈ