ಬೆಂಗಳೂರು: ಪ್ರೀತಿ ಕುರುಡು ನಿಜ, ಆದರೆ ಲೆಕ್ಕ ಕುರುಡಲ್ಲ. ಇಲ್ಲೊಬ್ಬ ಬಿಬಿಎಂಪಿ ಕಚೇರಿಯಲ್ಲಿ ಎಸ್‌ಡಿಎ (ದ್ವಿತೀಯ ದರ್ಜೆ ಸಹಾಯಕ) ತನ್ನ ಪ್ರೇಯಸಿಗೆ ಇಲಾಖೆಯ ಲಕ್ಷ ಲಕ್ಷ ರೂಪಾಯಿ ವರ್ಗಾವಣೆ ಮಾಡಿ ಈಗ ಆಡಿಟಿಂಗ್ ವೇಳೆ ಸಿಕ್ಕಿಬಿದ್ದಿದ್ದಾನೆ.
ಇಲ್ಲಿನ ಬ್ಯಾಟರಾಯನಪುರದ ಬಿಬಿಎಂಪಿ ಕಚೇರಿಯಲ್ಲಿ ಎಸ್‌ಡಿಎ ಆಗಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಎಂಬಾತನ ಮೇಲೆ ಹಣ ದುರಪಯೋಗದ (Fraud Case) ಆರೋಪ ಕೇಳಿ ಬಂದಿದೆ. ಕಳೆದ ಒಂದು ವರ್ಷದಿಂದ ಪ್ರೇಯಸಿಯ ಅಕೌಂಟ್‌ಗೆ ಹಣ ವರ್ಗಾವಣೆ ಮಾಡುತ್ತಿದ್ದ ಪ್ರಕಾಶ್ ಆಡಿಟಿಂಗ್ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬಿಬಿಎಂಪಿ ಅಧಿಕಾರಿ ಪ್ರಕಾಶ್ ತನ್ನ ಪ್ರಿಯತಮೆ ಕಾಂಚನ ಎಂಬಾಕೆಯ ಚಿನ್ನದ ಆಸೆಗೆ ಜನರ ಹಣಕ್ಕೆ ಕನ್ನ ಹಾಕಿದ್ದಾನೆ. ಇಲಾಖೆಯಿಂದ ಲಕ್ಷ ಲಕ್ಷ ಹಣವನ್ನು ದೋಚಿದ್ದಾನೆ. ಬಿಬಿಎಂಪಿ ಇಇ ರಾಜೇಂದ್ರ ನಾಯ್ಕ್ ಆಡಿಟಿಂಗ್ ನಡೆಸಿದಾಗ ಪ್ರಕಾಶ್ ಬಂಡವಾಳ ಬಯಲಾಗಿದೆ. ಹಣ ವರ್ಗಾವಣೆ ಬಗ್ಗೆ ಬ್ಯಾಂಕ್ ಅಕೌಂಟ್ ಪರಿಶೀಲನೆ ನಡೆಸಿದಾಗ ಈ ವೇಳೆ 14 ಲಕ್ಷದ 70 ಸಾವಿರ ರೂಪಾಯಿ ಮಹಿಳೆಯ ಅಕೌಂಟ್‌ಗೆ ವರ್ಗಾವಣೆ ಆಗಿರುವುದು ತಿಳಿದು ಬಂದಿದೆ.
ಈ ಸಂಬಂಧ ರಾಜೇಂದ್ರ ನಾಯ್ಕ್ ಅವರು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಪ್ರಕಾಶ್ ಮತ್ತು ಕಾಂಚಾನಳನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತನ್ನ ಅಕೌಂಟ್‌ಗೆ ಬಂದ ಹಣದಲ್ಲಿ ಕಾಂಚನ ಚಿನ್ನ ಖರೀದಿಸಿರುವುದರ ಜತೆಗೆ ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದಾಳೆಂದು ತಿಳಿದು ಬಂದಿದೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರಿದಿದೆ.