ಮೈಸೂರು: ಜೂನ್ 21ರಂದು ನಡೆಯಲಿರುವ ಯೋಗ ಕಾರ್ಯಕ್ರಮಕ್ಕೆ (Yoga day)ಅರಮನೆ ನಗರಿ ಮೈಸೂರು ಸಜ್ಜುಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಈ ಕಾರ್ಯಕ್ರಮಕ್ಕೆ ರಾಜಮನೆತನದ ಕುಟುಂಬಕ್ಕೆ ಆಹ್ವಾನ ನೀಡಲು ನಿರ್ಧರಿಸಲಾಗಿದೆ.
ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ರಾಜಮನೆತನದವರಿಗೆ ಆಹ್ವಾನ ನೀಡುವ ವಿಚಾರ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿತ್ತು. ರಾಜಮನೆತನಕ್ಕೆ ಆಹ್ವಾನ ನೀಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲೂ ಅಭಿಯಾನ ನಡೆಸಲಾಗಿತ್ತು. ಈ ವಿಚಾರವಾಗಿ ಶನಿವಾರ ಮಾಹಿತಿ ನೀಡಿದ ಸಂಸದ ಪ್ರತಾಪ್ ಸಿಂಹ, ” ರಾಜಮನೆತನದವರು ಕಟ್ಟಿದ ಅರಮನೆಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಅವರಿಗೆ ಸಂಪೂರ್ಣ ಗೌರವ ನೀಡುವ ಕೆಲಸ ಮಾಡುತ್ತೇವೆ. ರಾಜಮನೆತನದ ಕುಟುಂಬಕ್ಕೆ ದಿನಾಚರಣೆಗೆ ಆಹ್ವಾನ ನೀಡುತ್ತಿದ್ದೇವೆ. ವೇದಿಕೆಯಲ್ಲೂ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಪ್ರಮೋದಾದೇವಿಯವರ ಆಹ್ವಾನದ ಮೇರೆಗೆ ಉಪಹಾರದಲ್ಲಿ ಪ್ರಧಾನಿಯವರು ಭಾಗಿಯಾಗಲಿದ್ದಾರೆʼʼ ಎಂದು ತಿಳಿಸಿದರು. ಅಲ್ಲದೆ, ಚಾಮುಂಡಿ ಬೆಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತೂ ವಿವರ ನೀಡಿದ ಸಂಸದರು, ಚಾಮುಂಡಿ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಶಾಶ್ವತ ಬೀದಿ ದೀಪ ಅಳವಡಿಕೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಅದರೆ ವನ್ಯಜೀವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಅರಮನೆಗೆ ೩ ದಿನ ನಿರ್ಬಂಧ: ಜೂ.೨೧ರಂದು ಯೋಗ ದಿನಾಚರಣೆ ಇರುವುದರಿಂದ ಹಾಗೂ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ೩ ದಿನಗಳ ಕಾಲ ಸಾರ್ವಜನಿಕರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅರಮನೆಯಲ್ಲಿ ಕಾಮಗಾರಿ ನಡೆಸಲಾಗುತ್ತಿರುವುದರಿಂದ ಜೂ.೧೯ರಿಂದಲೇ ಈ ನಿರ್ಬಂಧ ಅನ್ವಯವಾಗಲಿದ್ದು, ಜೂ.೨೧ರವರೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಅರಮನೆ ಆಡಳಿತ ಮಂಡಳಿ ನಿರ್ದೇಶಕ ಟಿ.ಎಸ್. ಸುಬ್ರಮಣ್ಯ ಅವರು ತಿಳಿಸಿದ್ದಾರೆ. ಅಲ್ಲದೆ ಶನಿವಾರದಿಂದ ಜೂನ್ 22ರವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: ಅರಮನೆ ಅಂಗಳದಲ್ಲಿ ಯೋಗ ದಿನ ಪೂರ್ವಾಭ್ಯಾಸ; ಭರ್ಜರಿ ಸಿದ್ಧತೆ