ಹುಬ್ಬಳ್ಳಿ: ರಾಷ್ಟ್ರಾದ್ಯಂತ ಸುದ್ದಿ ಮಾಡಿದ ಹುಬ್ಬಳ್ಳಿಯ ಈದ್ಗಾ ಮೈದಾನ ಗಣೇಶೋತ್ಸವ ಅತ್ಯಂತ ಶಾಂತವಾಗಿ ನಡೆಯುತ್ತಿದೆ. ಇಲ್ಲಿ ಗಣೇಶೋತ್ಸವ ನಡೆಸುವ ವಿಚಾರದಲ್ಲಿ ಮಹಾನಗರ ಪಾಲಿಕೆ ವಿವೇಚನಾಧಿಕಾರ ಬಳಸಿ ತೀರ್ಮಾನ ತೆಗೆದುಕೊಳ್ಳಬಹುದು ಎಂದು ರಾಜ್ಯ ಹೈಕೋರ್ಟ್ ಮಂಗಳವಾರ ರಾತ್ರಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯೇ ರಾಣಿ ಚೆನ್ನಮ್ಮ ಗಜಾನನ ಉತ್ಸವ ಸಮಿತಿಯಿಂದ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿದೆ. ಆ ಬಳಿಕ ಭಕ್ತರು ಬಂದು ದೇವರ ಪೂಜೆ, ದರ್ಶನ ಮತ್ತು ಪೂಜೆ ಮಾಡಿಕೊಂಡು ಹೋಗಲು ಅನುಮತಿ ನೀಡಲಾಗಿದೆ. ಇನ್ನು ಮೂರು ದಿನಗಳ ಕಾಲ ಗಣೇಶೋತ್ಸವ ನಡೆಯಲಿದ್ದು, ಶುಕ್ರವಾರ ವಿಸರ್ಜನಾ ಮೆರವಣಿಗೆ ಆಯೋಜಿಸಲು ತೀರ್ಮಾನಿಸಲಾಗಿದೆ.
1991ರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಭಾರಿ ಹೋರಾಟದ ಮೂಲಕ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಲಾಗಿತ್ತು. ಆ ಬಳಿಕ ವಾದ ವಿವಾದಗಳು ಮುಂದುವರಿದು ೨೦೧೧ರಲ್ಲಿ ಸುಪ್ರೀಂಕೋರ್ಟ್ ಇಲ್ಲಿ ವರ್ಷದಲ್ಲಿ ಎರಡು ಬಾರಿ ರಾಷ್ಟ್ರ ಧ್ವಜಾರೋಹಣ ನಡೆಸಲು ಅಧಿಕೃತ ಅನುಮತಿ ನೀಡಿತ್ತು. ಜಿಲ್ಲಾಡಳಿತದ ವತಿಯಿಂದ ಅಧಿಕಾರಿಗಳ ನೇತೃತ್ವದಲ್ಲೇ ಇಲ್ಲಿ ಧ್ವಜಾರೋಹಣ ನಡೆಯುತ್ತಿದೆ.
ಈ ನಡುವೆ, ರಾಷ್ಟ್ರ ಧ್ವಜಾರೋಹಣದ ಬಳಿಕ ಗಣೇಶೋತ್ಸವಕ್ಕೂ ಅವಕಾಶ ಕೊಡಬೇಕು ಎನ್ನುವ ಬೇಡಿಕೆ ಹೆಚ್ಚಾಗಿತ್ತು. ಶ್ರೀರಾಮ ಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ಮತ್ತು ಸ್ಥಳೀಯ ಕೆಲವು ಸಂಘಟನೆಗಳು ಪ್ರತಿ ವರ್ಷವೂ ಅವಕಾಶ ಕೇಳುತ್ತಿದ್ದವು. ಆದರೆ, ಈ ಬಾರಿ ಹಲವು ಬಾರಿ ಪ್ರತಿಭಟನೆ, ಮನವಿ ಸಲ್ಲಿಕೆ, ಹೋರಾಟದ ಎಚ್ಚರಿಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಂತಿಮವಾಗಿ ಮಹಾನಗರ ಪಾಲಿಕೆ ಗಣೇಶೋತ್ಸವಕ್ಕೆ ಅನುಮತಿ ನೀಡಿತ್ತು.
ಆದರೆ, ಇದನ್ನು ಪ್ರಶ್ನಿಸಿ ಅಂಜುಮನ್ ಇಸ್ಲಾಮ್ ಸಂಸ್ಥೆ ಹೈಕೋರ್ಟ್ ಮೊರೆ ಹೊಕ್ಕಿತ್ತು. ಮಂಗಳವಾರ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು ಗಣೇಶೋತ್ಸವಕ್ಕೆ ಅನುಮತಿ ನೀಡಲಾಯಿತು. ಅದೇ ಸಂದರ್ಭದಲ್ಲಿ ಬೆಂಗಳೂರಿನ ಚಾಮರಾಜಪೇಟೆಯ ಮೈದಾನ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ಅದರ ತೀರ್ಪು ಹೊರಬಿದ್ದ ಬಳಿಕ ಅಂಜುಮನ್ ಇಸ್ಲಾಂ ಸಂಸ್ಥೆ ಪರ ವಕೀಲರು ಅಗತ್ಯವಿದ್ದರೆ ಮತ್ತೊಮ್ಮೆ ಕೋರ್ಟ್‌ಗೆ ಬರಬಹುದು ಎಂಬ ಅವಕಾಶ ನೀಡಲಾಗಿತ್ತು. ಅಂತೆಯೇ ವಕೀಲರು ರಾತ್ರಿಯೇ ಇನ್ನೊಮ್ಮೆ ಕೋರ್ಟ್ ಕದ ತಟ್ಟಿದ್ದರು. ವಿಶೇಷ ಪ್ರಕರಣವೆಂದು ಪರಿಗಣಿಸಿ ಮಂಗಳವಾರ ರಾತ್ರಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಅಂತಿಮವಾಗಿ ಗಣೇಶೋತ್ಸವಕ್ಕೆ ಅನುಮತಿ ನೀಡುವ ಅಧಿಕಾರವನ್ನು ಪಾಲಿಕೆಗೆ ನೀಡಿತು. ಅಂದರೆ, ಅಲ್ಲಿಗೆ ಹೈಕೋರ್ಟ್ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ನೀಡಿದಂತಾಯಿತು.
ಬೆಳಗ್ಗೆಯೇ ಗಣಪನ ಪ್ರತಿಷ್ಠಾಪನೆ
ಸಾಮಾನ್ಯವಾಗಿ ಹುಬ್ಬಳ್ಳಿಯಲ್ಲಿ ಗಣೇಶೋತ್ಸವ ನಡೆದಾಗ ದೇವರ ಪ್ರತಿಷ್ಠಾಪನೆ ನಡೆಯುವುದು ಮಧ್ಯಾಹ್ನದ ಹೊತ್ತಿಗೆ. ಆದರೆ, ಒಂದೊಮ್ಮೆ ಅಂಜುಮಾನ್ ಇಸ್ಲಾಂ ಸಂಸ್ಥೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದರೆ ಮತ್ತೆ ಸಮಸ್ಯೆಯಾಗುತ್ತದೆ ಎಂಬ ಆತಂಕದಿಂದ ರಾಣಿ ಚೆನ್ನಮ್ಮ ಗಜಾನನ ಉತ್ಸವ ಸಮಿತಿ ಬೆಳಗ್ಗೆಯೇ ಸಣ್ಣದೊಂದು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿತು.
ಮೊದಲು ಪುಟ್ಟ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ನಿರ್ವಹಿಸಿದ ಗಜಾನನ ಉತ್ಸವ ಸಮಿತಿ ಮುಖಂಡರು, ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಳಿಕ ನಾಲ್ಕು ಅಡಿ ಎತ್ತರದ ದೊಡ್ಡ ಗಣೇಶನನ್ನು ಕೂರಿಸಿದ್ದಾರೆ. ವಾದ್ಯ ಮೇಳದೊಂದಿಗೆ ಪೂಜೆ ಪುನಸ್ಕಾರಗಳು ನಡೆದಾಗ ಆಯೋಜಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗಣೇಶ ಪೆಂಡಾಲ್ ಎದುರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ್ದಾರೆ. ಪರಸ್ಪರ ಸಿಹಿ ಹಂಚಿದರು.
ಹೇಗಿದೆ ಪೆಂಡಾಲ್ ವ್ಯವಸ್ಥೆ?
ಹುಬ್ಬಳ್ಳಿಯ ಈದ್ಗಾ ಮೈದಾನ ಎನ್ನುವುದು ಅತಿ ವಿಶಾಲವಾದ ಪ್ರದೇಶವಾಗಿದ್ದು ಮಧ್ಯಭಾಗಕ್ಕಿಂತ ಸ್ವಲ್ಪ ಹಿಂದಕ್ಕೆ ಪ್ರಾರ್ಥನಾ ಗೋಡೆ ಇದೆ. ಪೊಲೀಸರು ಈ ಗೋಡೆಯ ಭಾಗದಿಂದ ಸುಮಾರು ೨೦ ಅಡಿ ಮಧ್ಯಭಾಗಕ್ಕೆ ಒಂದು ಕಬ್ಬಿಣದ ಗೋಡೆಯನ್ನು ನಿರ್ಮಿಸಿ ಮೈದಾನವನ್ನು ಎರಡು ಭಾಗಗಳಾಗಿ ಪ್ರತ್ಯೇಕಿಸಿದ್ದಾರೆ. ಈಗ ಈದ್ಗಾ ಕಟ್ಟಡಕ್ಕೆ ಹೋಗುವವರಿಗೆ ಒಂದು ಭಾಗದಿಂದ ಪ್ರವೇಶ ದ್ವಾರವಿದೆ. ಇನ್ನೊಂದು ಭಾಗದ ದ್ವಾರದಿಂದ ಗಣೇಶ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಂದೇ ದ್ವಾರದಿಂದ ಹೋಗಿ ಬರಲು ವ್ಯವಸ್ಥೆ ಮಾಡಲಾಗಿದೆ. ಜನ ಸರತಿ ಸಾಲಿನಲ್ಲಿ ಸಾಗುತ್ತಿದ್ದು, ಯಾವುದೇ ಗದ್ದಲಗಳು ಕಾಣಿಸುತ್ತಿಲ್ಲ. ಹಿರಿಯ ನಾಯಕರು, ಬಿಜೆಪಿ ಮುಖಂಡರು ಬಂದಾಗಲಷ್ಟೇ ಒಂದಷ್ಟು ಹೆಚ್ಚುವರಿ ಜನ ಬರುತ್ತಿದ್ದಾರೆ ಬಿಟ್ಟರೆ ಯಾವುದೇ ಒತ್ತಡವಿಲ್ಲ.
ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲ
ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಒಮ್ಮೆಗೇ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿಸಲು ಅವಕಾಶವಿಲ್ಲ. ಏಕಕಾಲದಲ್ಲಿ ಸೀಮಿತ ಸಂಖ್ಯೆಯ ಜನರಿಗೆ ಗಣೇಶನ ದರ್ಶನ ಅವಕಾಶವಿರುತ್ತದೆ. ಗಣೇಶೋತ್ಸವ ಪೆಂಡಾಲ್‌ನಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿದೆ. ಆದರೆ, ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತಿಲ್ಲ. ಮೈದಾನದಲ್ಲಿ ಮೂರು ದಿನಗಳ ಕಾಲ ಪೂಜೆಗೆ ಅವಕಾಶ ನೀಡಲಾಗಿದೆ.
ನ್ಯಾಯ ಸಿಕ್ಕಿತು ಎಂದ ಮುತಾಲಿಕ್
ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ಆಗಮಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು. ಗಣೇಶನ ದರ್ಶನದ ಬಳಿಕ ಮಾತನಾಡಿದ ಪ್ರಮೋದ್ ಮುತಾಲಿಕ್, ನಮ್ಮ ಹೋರಾಟಕ್ಕೆ ಈಗ ನ್ಯಾಯ ಸಿಕ್ಕಿದೆ, ನಿನ್ನೆ ರಾತ್ರಿ ಆನಂದದ ಸಂಗತಿ ಸಿಕ್ಕಿತು. ಗಣೇಶನನ್ನು ವಿರೋಧಿಸಿದವರಿಗೆ ಛೀಮಾರಿ ಹಾಕಬೇಕು ಎಂದಿದ್ದಾರೆ. ಗಣೇಶ ಉತ್ಸವ ಆರಂಭಿಸಿ ೧೨೯ ವರ್ಷವಾಗಿದೆ. ಬ್ರಿಟಿಷರು ಗಣೇಶೋತ್ಸವ ವಿರೋಧ ಮಾಡಲಿಲ್ಲ. ಆದರೆ ಕಾಂಗ್ರೆಸ್ ನವರು ಕುಮ್ಮಕ್ಕು ಕೊಟ್ಟು ಮುಸ್ಲಿಮರನ್ನು ಕೋರ್ಟ್‌ಗೆ ಕಳಿಸುತ್ತಿದ್ದಾರೆ. ಇವತ್ತು ಕೋರ್ಟ್ ಗೆ ಹೋಗಿ ಗಣೇಶೋತ್ಸವ ತಡೆಯಲು ಯತ್ನಿಸುತ್ತಿರುವವರಿಗೆ ಗಣೇಶನ ಶಾಪ ತಟ್ಟುತ್ತೆ. ವಿರೋಧಿಸಿದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಮನೆಗೆ ಕಳಿಸಲು ಅಭಿಯಾನ ಮಾಡುತ್ತೇವೆ ಎಂದರು.
ಮುಂದಿನ ದಿನಗಳಲ್ಲಿ ಅದ್ಧೂರಿ ಆಚರಣೆ
ಈದ್ಗಾ ಮೈದಾನಕ್ಕೆ ಆಗಮಿಸಿದ ಮಾಜಿ ಸಿಎಮ್ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪೂಜೆ ಸಲ್ಲಿಸಿದರು. ʻʻಗಣೇಶೋತ್ಸವವನ್ನು ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುವುದುʼʼ ಎಂದಿರುವ ಪ್ರಲ್ಹಾದ್ ಜೋಶಿ, ಇದೇ ಸ್ಥಳದಲ್ಲಿ 30 ವರ್ಷಗಳ ಹಿಂದೆ ರಾಷ್ಟ್ರ ಧ್ವಜ ಹಾರಿಸಲು ಹೋರಾಟ ಆಗಿತ್ತು. ಸಾಕಷ್ಟು ಹೋರಾಟ ನಡೆದು ಇಡೀ ಜಗತ್ತಿನ ಗಮನ ಸಹ ಸೆಳೆದಿತ್ತು ಎಂದು ಸ್ಮರಿಸಿಕೊಂಡರು.
ಬಿಗಿ ಪೊಲೀಸ್ ಬಂದೋಬಸ್ತ್
ಈದ್ಗಾ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್ ಸೇರಿದಂತೆ ಇನ್ನೂರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ಗಣೇಶ ಪೆಂಡಾಲ್ ಸುತ್ತಮುತ್ತ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ| ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಪೂಜೆ ಪ್ರಾರಂಭ