Site icon Vistara News

Gender Detection: ಭ್ರೂಣ ಹತ್ಯೆ 900 ಅಲ್ಲ, 1500ಕ್ಕೂ ಹೆಚ್ಚು! ಹಲವು ಜಿಲ್ಲೆಗಳಲ್ಲಿ ದಂಧೆ

Feticide in Bangalore

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾದ ಭ್ರೂಣ ಹತ್ಯೆ ದಂಧೆಯ (Feticide scam) ಹಿಂದಿನ ಕರಾಳ ಸತ್ಯಗಳು ಒಂದರ ಹಿಂದೊಂದರಂತೆ ಬಯಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಹೊರಬೀಳುತ್ತಿರುವ ಅಂಕಿ ಅಂಶಗಳನ್ನು ಕಂಡು ತಾವೇ ಶಾಕ್‌ ಆಗಿದ್ದಾರೆ. ಆರಂಭದಲ್ಲಿ 900 ಭ್ರೂಣಗಳ ಹತ್ಯೆ ನಡೆದಿರಬಹುದು ಎಂದು ಹೇಳಲಾಗಿತ್ತು. ಆದರೆ, ಈಗ ಅದು 1500ಕ್ಕೂ ಹೆಚ್ಚು ಅಂಶ ಬಯಲಾಗಿದೆ (Gender Detection). ಜತೆಗೆ ಇದೊಂದು ಕೋಟ್ಯಂತರ ರೂ. ದಂಧೆ ಎಂದು ಹೇಳಲಾಗುತ್ತಿದೆ.

ಭ್ರೂಣ ಹತ್ಯೆ ಕೇಸಲ್ಲಿ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಇಬ್ಬರು ವೈದ್ಯರು, ಮೂವರು ಲ್ಯಾಬ್ ಟೆಕ್ನಿಷಿಯನ್‌ಗಳು, ಮಧ್ಯವರ್ತಿಗಳು ಸೇರಿ ಒಟ್ಟು 9 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಈ ಆರೋಪಿಗಳು ಕಳೆದ ಎರಡು ವರ್ಷದಿಂದ ಈ ಕೃತ್ಯವೆಸಗುತ್ತಿರುವುದಾಗಿ ಬಾಯಿ ಬಿಟ್ಟಿದ್ದರು. ಆ ಮಾಹಿತಿ ಅಧಾರದ ಮೇಲೆ ಸುಮಾರು 900 ಭ್ರೂಣ ಹತ್ಯೆ ಮಾಡಿರಬಹುದು ಎನ್ನಲಾಗಿತ್ತು.. ಆದ್ರೆ ತನಿಖೆ ಮುಂದುವರೆಸಿದಂತೆ ಕಳೆದ ಮೂರು ತಿಂಗಳಲ್ಲೇ 242 ಭ್ರೂಣ ಹತ್ಯೆ ಮಾಡಿರೋದು ಪತ್ತೆಯಾಗಿದೆ. ಇದನ್ನು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ್‌ ಅವರು ದೃಢಪಡಿಸಿದ್ದಾರೆ.

ಆ ಲೆಕ್ಕದಲ್ಲಿ ನೋಡಿದ್ರೆ ಎರಡು ವರ್ಷದಲ್ಲಿ ವರ್ಷಕ್ಕೆ ಕನಿಷ್ಠ ಒಂದು ಸಾವಿರ ಅಂದ್ರೂ ಕೂಡ ಎರಡು ಸಾವಿರದಷ್ಟು ಭ್ರೂಣ ಹತ್ಯೆ ಮಾಡಿರೋದು ಗೊತ್ತಾಗಿದೆ.. ಭ್ರೂಣ ಪತ್ತೆಗೆ 20 ಸಾವಿರ ರೂ. ಚಾರ್ಜ್‌ ಮಾಡುತ್ತಿರುವ ದಂಧೆಕೋರರು ಅದು ಹೆಣ್ಣು ಭ್ರೂಣ ಎಂದು ತಿಳಿದ ಮೇಲೆ ಅದರ ಹತ್ಯೆಗೆ ಹೆಚ್ಚುವರಿಯಾಗಿ ಮೂವತ್ತು ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

ಈ ನಡುವೆ ದಂಧೆಯಲ್ಲಿ ಭಾಗಿಯಾಗಿದ್ದು ತಲೆ ಮರೆಸಿಕೊಂಡಿರುವ ಮತ್ತಿಬ್ಬರು ಮಧ್ಯವರ್ತಿಗಳ ಪತ್ತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ದಂಧೆಗೆ ಸಹಕಾರ ನೀಡುತ್ತಿರುವ ವೈದ್ಯರು ಹಾಗೂ ಹತ್ಯೆ ಮಾಡಿಸಿದ ಪೋಷಕರನ್ನು ಕೂಡಾ ಪತ್ತೆ ಹಚ್ಚುವ ಕೆಲಸವೂ ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಧೆಕೋರರು ಬೆಂಗಳೂರು ಮಾತ್ರವಲ್ಲದೆ ಮೈಸೂರು ಮತ್ತು ಮಂಡ್ಯದಲ್ಲೂ ಭ್ರೂಣ ಹತ್ಯೆ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಯ್ಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವ ಕುರಿತ ಎಫ್‌ಐಆರ್‌ನ್ನು ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಲಾಗಿತ್ತು.

ಇದನ್ನೂ ಓದಿ: Child Trade : ಒಂದು ಮಗು ಹೆತ್ತು ಕೊಟ್ರೆ ತಾಯಿಗೆ 3 ಲಕ್ಷ, ಏಜೆಂಟ್‌ಗೆ 5 ಲಕ್ಷ ರೂ.!

ಬಯ್ಯಪ್ಪನ ಹಳ್ಳಿಯಲ್ಲಿ ದಾಖಲಾದ ಎಫ್‌ಐಆರ್‌ಗಳ ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ. ಮಂಡ್ಯದಲ್ಲೂ ಮೂರು ಪ್ರಕರಣಗಳು ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಇಂಥ ಪ್ರಕರಣಗಳು ನಡೆಯುತ್ತಿರುವುದು ವಿಷಾದನೀಯ ಎಂದು ಮಂಡ್ಯ ಜಿಲ್ಲಾಧಿಕಾರಿ ಕುಮಾರ್‌ ತಿಳಿಸಿದರು.

ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಅನಧಿಕೃತವಾಗಿ ಹೆಣ್ಣು ಭ್ರೂಣ ಪತ್ತೆ ಮಾಡುವ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆ, ಸಿಇಓ ಜೊತೆ ಸಭೆ ಮಾಡಿದ್ದೇನೆ. ಭ್ರೂಣ ಹತ್ಯೆ ಬಗ್ಗೆ ಒಂದು ಆಂದೋಲನದ ಮೂಲಕ ಅರಿವು ಮೂಡಿಸಲಾಗುವುದು ಎಂದು ಹೇಳಿದರು. ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಕೂಡಾ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಂಧಿತ ಆರೋಪಿಗಳು ಯಾರೆಲ್ಲ?

ಭ್ರೂಣ ಹತ್ಯೆ ಪ್ರಕರಣದಲ್ಲಿ ಮೊದಲು ಬಂಧಿತರಾಗಿದ್ದವರು ಶಿವನಂಜೇಗೌಡ, ವೀರೇಶ್, ನವೀನ್ ಮತ್ತು ನಯನ್. ಇವರನ್ನು ವಿಚಾರಣೆಗೆ ಒಳಪಡಿಸಿದಾಗ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗಳ ಸಂಚು ಬಯಲಾಗಿತ್ತು. ಚನ್ನೈ ಮೂಲದ ಡಾ ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸಪ್ಷನಿಷ್ಟ್ ರೀಜ್ಮಾ, ಡಾ.ಚಂದನ್ ಬಲ್ಲಾಳ್ ಮತ್ತು ಪತ್ನಿ ಮೀನಾ, ಲ್ಯಾಬ್ ಟೆಕ್ನೀಶಿಯನ್ ನಿಸ್ಸಾರ್ ಅವರನ್ನು ಬಂಧಿಸಲಾಯಿತು. ಹೀಗೆ ಒಟ್ಟಾರೆ ಬಂಧಿತರ ಸಂಖ್ಯೆ 9.

Exit mobile version