ರಾಮನಗರ: ಕನಕಪುರ ತಾಲೂಕಿನ ಹುಚ್ಚೇಗೌಡನ ದೊಡ್ಡಿ ಗ್ರಾಮದ ಸಣ್ಣ ಕೆರೆಯಲ್ಲಿ ಬಿದ್ದು, ಏಳು ವರ್ಷದ ಬಾಲಕಿಯೊಬ್ಬಳು (Drowned in Lake) ಮೃತಪಟ್ಟಿದ್ದಾಳೆ.
ರಾಮಚಂದ್ರ ಹಾಗೂ ಯಶೋದಾ ದಂಪತಿಯ ಪುತ್ರಿ ರಚನಾ (07) ಮೃತ ದುರ್ದೈವಿ. ಈಕೆ 2ನೇ ತರಗತಿ ಓದುತ್ತಿದ್ದಳು. ಯಶೋದಾ ಅವರು ಪಕ್ಕದ ಗ್ರಾಮದಲ್ಲಿರುವ ಸಣ್ಣ ಕೆರೆಗೆ ಎಂದಿನಂತೆ ಬಟ್ಟೆ ತೊಳೆಯಲು ಹೋಗಿದ್ದಾರೆ. ಹೋಗುವಾಗ ತನ್ನ ಮೂವರು ಮಕ್ಕಳನ್ನೂ ಜತೆಗೆ ಕರೆದೊಯ್ದಿದ್ದಾರೆ.
ಯಶೋದಾ ಅವರು ಬಟ್ಟೆ ತೊಳೆಯಲು ನಿರತರಾಗಿದ್ದರು. ಇತ್ತ ಮಕ್ಕಳು ನೀರಿನಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಹೀಗಾಗಿ ಮಕ್ಕಳ ಕಡೆ ಗಮನ ಹರಿಸದ ಯಶೋಧಾ ಅವರು ಬಟ್ಟೆ ತೊಳೆಯುತ್ತಿದ್ದರು. ಆದರೆ, ಈ ಸಮಯದಲ್ಲಿ ಮೂರು ಮಕ್ಕಳಲ್ಲಿ 2ನೇ ಪುತ್ರಿ ರಚನಾ ಆಳವಾದ ಗುಂಡಿಗೆ ಬಿದ್ದಿರುವುದು ಗಮನಕ್ಕೆ ಬಂದಿಲ್ಲ.
ಇದನ್ನೂ ಓದಿ: Hero MotoCorp : ಹೀರೊ ಮೊಟೊಕಾರ್ಪ್ ಎಲ್ಲ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ (VRS) ಘೋಷಣೆ ಮಾಡಿದ್ದೇಕೆ?
ವಿಷಯ ಗೊತ್ತಾಗುವುದರೊಳಗೆ ಕಾಲ ಮೀರಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಊರಿನ ಜನರೆಲ್ಲರೂ ಸೇರಿದ್ದಾರೆ. ಪೊಲೀಸರಿಗೂ ವಿಷಯ ಮುಟ್ಟಿಸಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃತದೇಹವನ್ನು ಹೊರಕ್ಕೆ ತಂದಿದ್ದಾರೆ. ಪ್ರಕರಣ ದಾಖಲಾಗಿದೆ.
ಈಜಲು ಹೋಗಿದ್ದ ಇಬ್ಬರು ಕುರಿಗಾಹಿ ಯುವಕರು ಸಾವು
ದಾವಣಗೆರೆ: ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಕೆರೆಯಲ್ಲಿ ಮಂಗಳವಾರ ಈಜಾಡಲು ಹೋಗಿದ್ದ ಇಬ್ಬರು ಕುರಿಗಾಹಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಅಲೂರು ಗ್ರಾಮದ ರಾಜು (19), ಚಿಕ್ಕಮಲ್ಲನಹೊಳೆ ಗ್ರಾಮದ ವಿಜಯ್ (19) ಮೃತ ಯುವಕರು. ಬೇಸಿಗೆ ರಜೆ ಇದ್ದ ಕಾರಣ ಕುರಿ ಮೇಯಿಸಲು ಕೆರೆಯ ಬಳಿ ಬಂದಿದ್ದ ಯುವಕರು, ಬಿಸಿಲು ಜಾಸ್ತಿ ಇದ್ದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಾಡಲು ಹೋಗಿದ್ದಾರೆ. ಈ ವೇಳೆ ಚೆನ್ನಾಗಿಯೇ ಈಜಾಡುತ್ತಿದ್ದ ರಾಜು ಸುಸ್ತಾಗಿ ನೀರಿನಲ್ಲಿ ಮುಳುಗಳು ಪ್ರಾರಂಭಿಸಿದ್ದಾನೆ. ಹೀಗಾಗಿ ಆತ ರಕ್ಷಣೆಗೆ ಕೂಗಿಕೊಂಡಿದ್ದಾನೆ. ಸ್ನೇಹಿತನಿಗೆ ತೊಂದರೆಯಾಗಿರುವುದನ್ನು ಗಮನಿಸಿದ ವಿಜಯ್ ಆತನನ್ನು ಕಾಪಾಡುವ ಸಂಬಂಧ ಸಮೀಪ ಹೋಗಿದ್ದಾನೆ. ಆದರೆ, ಈ ವೇಳೆ ಆತನಿಂದ ರಾಜುವಿನ ರಕ್ಷಣೆ ಸಾಧ್ಯವಾಗಲಿಲ್ಲ.
ಮೊದಲೇ ಭಯದಲ್ಲಿದ್ದ ರಾಜು, ರಕ್ಷಿಸಲು ಬಂದಿದ್ದ ವಿಜಯ್‌ನನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದರಿಂದ ಆತನಿಗೂ ತಪ್ಪಿಸಿಕೊಂಡು ಬರಲಾಗದೆ, ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 1ರಂದು ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಮೃತಪಟ್ಟಿದ್ದ ಮೂವರು
ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಏಪ್ರಿಲ್ 1ರಂದು ಈಜಲು ಹೋದ ಸಂದರ್ಭದಲ್ಲಿ ಇಬ್ಬರು ಯುವತಿರು ಸೇರಿ ಒಬ್ಬ ಯುವಕ ಮುಳುಗಿ (Drowned in Reservoir) ಮೃತಪಟ್ಟಿದ್ದರು. ಮೃತರೆಲ್ಲರೂ ಬೆಂಗಳೂರು ಮೂಲದವರಾಗಿದ್ದು, ಡಿ ಫಾರ್ಮಸಿ ವಿದ್ಯಾರ್ಥಿಗಳಾಗಿದ್ದರು. ರಾಧಿಕಾ, ಪೂಜಾ ಹಾಗೂ ಇಮ್ರಾನ್ ಮೃತರು.
ಬೆಂಗಳೂರಿನಿಂದ ಶ್ರೀನಿವಾಸ ಸಾಗರ ಜಲಾಶಯಕ್ಕೆ ಆರು ಜನರ ತಂಡವು ಪ್ರವಾಸಕ್ಕಾಗಿ ಬಂದಿತ್ತು. ಈ ವೇಳೆ ಜಲಾಶಯದಲ್ಲಿ ಇಳಿದಾಗ ಇವರಲ್ಲಿ ಒಬ್ಬರಿಗೆ ನೀರಿನಲ್ಲಿ ಕಾಲು ಜಾರಿದೆ. ಆಗ ಒಬರನ್ನೊಬ್ಬರು ಮೇಲೆತ್ತಲು ಹೋಗಿ ಈ ಅವಘಡ ಸಂಭವಿಸಿದೆ. ಚನ್ನಾರಾಮ್, ಸುನಿತಾ, ಬಿಕಾಷ್ ಬಚಾವಾಗಿದ್ದಾರೆ. ಇವರೆಲ್ಲರೂ ಬೆಂಗಳೂರಿನ ಸಾರಾಯಿ ಪಾಳ್ಯದ ನಿವಾಸಿಗಳಾಗಿದ್ದಾರೆ.
ಇದನ್ನೂ ಓದಿ: High court order : ಶಾಸಕ ನೆಹರು ಓಲೆಕಾರ್ ವಿರುದ್ಧದ 2 ವರ್ಷಗಳ ಶಿಕ್ಷೆಗೆ ತಡೆಯಾಜ್ಞೆ; ಅನರ್ಹತೆ ಭೀತಿಯಿಂದಲೂ ಪಾರು
ಈ ಮೂವರು ಮುಳುಗುತ್ತಿದ್ದಂತೆ ಗಾಬರಿಗೊಂಡ ಉಳಿದ ಮೂವರು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ಪೊಲೀಸರು ಶೋಧ ನಡೆಸಿ ಶವಗಳನ್ನು ಮೇಲಕ್ಕೆ ಎತ್ತಿದ್ದಾರೆ.