ಬೆಂಗಳೂರು: ರಾಜ್ಯದಲ್ಲಿ ಶಾಲೆಗಳು ಆರಂಭವಾಗಿ ತಿಂಗಳು ಕಳೆದರೂ ಮಕ್ಕಳಿಗೆ ಶಾಲಾ ಸಮವಸ್ತ್ರ ಹಾಗೂ ಶೂ, ಸಾಕ್ಸ್ ಸಿಕ್ಕಿಲ್ಲ. ಹೀಗಾಗಿ ಮಕ್ಕಳ ಪೋಷಕರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ವರ್ಷ ಶೂ ಸಾಕ್ಸ್ ನೀಡಲು ಹಣವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ ನಂತರವಂತೂ ಆಕ್ರೋಶ ಹೆಚ್ಚಾಗಿದ್ದರಿಂದ ರಾಜ್ಯ ಸರ್ಕಾ ಎಚ್ಚೆತ್ತಿದೆ. ಶಾಲಾಮಕ್ಕಳ ಶೂ, ಸಾಕ್ಸ್ ಹಂಚಿಕೆಗೆ 132 ಕೋಟಿ ರೂ. ಅನುಮೋದನೆ ನೀಡಿದೆ.
ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಹಂಚಿಕೆಗೆ 132 ಕೋಟಿ ರೂ. ಒದಗಿಸಿ ಅನುಮೋದನೆ ನೀಡಲಾಗಿದೆ. ಸಮವಸ್ತ್ರದ ವಿಚಾರದಲ್ಲಿ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ಸಮವಸ್ತ್ರ ತಯಾರಾಗಲು ಸ್ವಲ್ಪ ಸಮಯ ಹಿಡಿಯುತ್ತದೆ. ನಂತರ ಮಕ್ಕಳಿಗೆ ವಿತರಣೆಯಾಗಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದರು.
ಭಿಕ್ಷೆ ಬೇಡಿ ಹಣ ಸಂಗ್ರಹ ಮಾಡುತ್ತೇವೆ: ಡಿ.ಕೆ.ಶಿವಕುಮಾರ್
ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಕೊಡಲು ಸರ್ಕಾರದ ಬಳಿ ಹಣವಿಲ್ಲದಿದ್ದರೇ, ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಬಳಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ನೀಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದಕ್ಕೂ ಮುನ್ನ ತಿಳಿಸಿದ್ದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಿಎಸ್ಆರ್ ಜಾರಿಗೆ ತಂದಿದ್ದು, ರಾಜ್ಯದ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ನಾವೇ ಶೂ ಹಾಗೂ ಸಾಕ್ಸ್‌ಗಳನ್ನು ವಿತರಿಸುತ್ತೇವೆ ಎಂದು ಹೇಳಿದ್ದರು.
ಮಕ್ಕಳು ಶಾಲೆಗೆ ಹೋಗುವುದು ಪಾಠ ಕಲಿಯಲೇ ಹೊರತು ಶೂ ಹಾಕಿಕೊಳ್ಳಲು ಅಲ್ಲ ಎಂಬ ಶಿಕ್ಷಣ ಸಚಿವ ನಾಗೇಶ್ ಹೇಳಿಕೆಯನ್ನು ಪ್ರಸ್ತಾಪಿಸಿದ್ದ ಡಿ.ಕೆ.ಶಿವಕುಮಾರ್, ನಾಗೇಶ್ ಹೇಳಿಕೆಯಿಂದ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ. ಕೂಲಿ ಕಾರ್ಮಿಕರಿಂದ ಹಿಡಿದು ಚಾಲಕರವರೆಗೂ ಪ್ರತಿಯೊಬ್ಬರೂ ತಮ್ಮ ಮಕ್ಕಳು ಶೂ, ಸಮವಸ್ತ್ರಗಳೊಂದಿಗೆ ಶಾಲೆಗೆ ಶಿಸ್ತಿನಿಂದ ಹೋಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಅವರು ಸಾಲಸೋಲ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ.
ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡುವ ಯೋಜನೆಯನ್ನು ಮೊದಲಿನಿಂದಲೂ ಜಾರಿಗೆ ತರಲಾಗಿದೆ. ಶಿಕ್ಷಣ ಸಚಿವರು ಉತ್ತಮ ಬಟ್ಟೆ ಹಾಕಿಕೊಂಡು ಓಡಾಡುವುದಿಲ್ಲವೇ? ಅವರು ಕೇವಲ ಚಡ್ಡಿ ಬನೀಯನ್ ನಲ್ಲೇ ವಿಧಾನಸೌಧದಲ್ಲಿ ಓಡಾಡಬಹುದಲ್ಲವೇ? ಎಂದು ಕಿಡಿಕಾರಿದ್ದರು.
ಸಮವಸ್ತ್ರ ಸಕಾಲಕ್ಕೆ ಸಿಗದಿರುವುದು ಪರಂಪರೆಯಾಗಿದಬಿಟ್ಟಿದೆ. ಸರ್ಕಾರ ಶಾಲಾ ಮಕ್ಕಳ ಪರವಾಗಿ ಕೆಲಸ ಮಾಡದಿದ್ದರೆ, ಕಾಂಗ್ರೆಸ್ ಪಕ್ಷದವರು ಮಕ್ಕಳ ಪರವಾಗಿ ಕೆಲಸ ಮಾಡಲಿದ್ದಾರೆ. ನಾಗೇಶ್ ಅವರ ಹೇಳಿಕೆ ಗೌರವ ತರುವಂಥದಲ್ಲ. ಇದು ಬರೀ ಹಣದ ವಿಚಾರ ಮಾತ್ರವಲ್ಲ. ಇವರು ಸರ್ಕಾರಿ ಶಾಲಾ ಮಕ್ಕಳನ್ನು ಎಷ್ಟು ಅಗೌರವದಿಂದ ಕಾಣುತ್ತಿದ್ದಾರೆ ಎಂಬುದು ತಿಳಿಯುತ್ತದೆ ಎಂದಿದ್ದರು.
ಕೋವಿಡ್ ಸಮಯದಲ್ಲಿ ಬೇಡಿದ ಭಿಕ್ಷೆ ದುಡ್ಡು ಎಲ್ಲಿ ಹೋಯಿತು?
ಬೊಮ್ಮಾಯಿ ಅವರೇ, ನಿಮ್ಮ ಬಳಿ ಬಟ್ಟೆ, ಶೂ ಕೊಡಲು ಸಾಧ್ಯವಾಗದೇ ಇದ್ದರೆ ಹೇಳಿ. ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಎಲ್ಲಾ ಕಡೆ ಭಿಕ್ಷೆಬೇಡಿ ಬಟ್ಟೆ ಕೊಡಲಾಗುವುದು ಎಂದು ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ತಿರುಗೇಟು ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕೋವಿಡ್ ವೇಳೆ ಭಿಕ್ಷೆ ಬೇಡಿದರಲ್ಲ ಆ ಒಂದು ಕೋಟಿ ರೂಪಾಯಿ ಎಲ್ಲಿ ಹೋಯಿತು? ಆಗ ಮಾಡಿದ್ದ ರೀತಿಯೇ ಇದು ಕೂಡ ಎಂದು ಕಾಲೆಳೆದಿದ್ದರು.
ಮಾನ ಮರ್ಯಾದೆ ಇದೆಯೇ ಎಂದಿದ್ದ ಸಿದ್ದರಾಮಯ್ಯ
ಚಾಮರಾಜನಗರದಲ್ಲಿ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಈ ಸರ್ಕಾರ ಭಂಡತನಕ್ಕೆ ಬಿದ್ದಿದೆ. ಶಿಕ್ಷಣ ಸಚಿವ ನಾಗೇಶ್‌ಗೆ ಮಾನ ಮರ್ಯಾದೆ ಏನಾದರೂ ಇದೆಯೇ? ಶಾಲಾ ಮಕ್ಕಳಿಗೆ ಇನ್ನೂ ಸೈಕಲ್, ಶೂ, ಸಾಕ್ಸ್, ಯೂನಿಫಾರ್ಮ್ ಕೊಟ್ಟಿಲ್ಲ. ಬಡ ಮಕ್ಕಳು ಇವನ್ನು ಕೊಂಡುಕೊಳ್ಳಲಾಗದೆ ಶಾಲೆ ತೊರೆಯುತ್ತಿವೆ. ಒಂದು ಲಕ್ಷ ಮಕ್ಕಳು ಶಾಲೆತೊರೆದಿದ್ದಾರೆ. ಸರ್ಕಾರ ಇವರನ್ನೆಲ್ಲ ಅವಿದ್ಯಾವಂತರನ್ನಾಗಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ | ಸಿದ್ದರಾಮೋತ್ಸವ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ: ಡಿ.ಕೆ. ಶಿವಕುಮಾರ್ ಅಚ್ಚರಿಯ ಹೇಳಿಕೆ