Site icon Vistara News

ಬಿಬಿಎಂಪಿ ಚುನಾವಣೆ ಮುಂದೂಡಲು ʼಬಾಹ್ಯ ಬೆಂಬಲʼ ಮೊರೆ ಹೋದ ಸರ್ಕಾರ?

ಬಿಬಿಎಂಪಿ

ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸಲು ಮನಸ್ಸಿಲ್ಲದ ಮನಸ್ಸಿಂದಲೇ ರಾಜ್ಯ ಸರ್ಕಾರ ಮುಂದಾಗಿದೆ. ಸುಪ್ರೀಂಕೋರ್ಟ್‌ ಗಡುವಿಗೆ ಕಟ್ಟುಬಿದ್ದು ಎರಡು ದಿನದ ಹಿಂದೆ ವಾರ್ಡ್‌ ಮರುವಿಂಗಡಣೆ ಮಾಡಲಾಗಿದೆಯಾದರೂ, ಪ್ರತಿಪಕ್ಷಗಳ ʼಬಾಹ್ಯ ಬೆಂಬಲʼ ಪಡೆದು ಮುಂದೂಡಿಕೆಗೆ ಪ್ರಯತ್ನ ನಡೆಸುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ.

ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಕೇವಲ ಹತ್ತು ತಿಂಗಳು ಮಾತ್ರ ಬಾಕಿ ಇದೆ. ಆದರೆ ಅದಕ್ಕೂ ಮೊದಲು ನಡೆಯಬೇಕಾದ ಬಿಬಿಎಂಪಿ ಚುನಾವಣೆ ನಡೆಸಲು ಮೂರೂ ಪಕ್ಷಗಳ ಶಾಸಕರಿಗೆ ಆಸಕ್ತಿ ಇಲ್ಲ. ಆಡಳಿತರೂಢ ಬಿಜೆಪಿಗೂ ನಗರದ ಚುನಾವಣೆ ಮಾಡುವ ಮನಸ್ಸಿಲ್ಲ. ಬಿಬಿಎಂಪಿ ಚುನಾವಣೆ ಮಾಡಬೇಕು ಎಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಮೇಟ್ಟಿಲು ಹತ್ತಿದ್ದ ಕಾಂಗ್ರೆಸ್‌‌ ನಾಯಕರಿಗೂ ಈಗ ಚುನಾವಣೆ ಬೇಡವಾಗಿದೆ.

ಇದನ್ನೂ ಓದಿ | 2011ರ ಜನಗಣತಿ ಆಧಾರದಲ್ಲಿ ವಾರ್ಡ್‌ ಮರು ವಿಂಗಡಣೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ನಗರದಲ್ಲಿ ಮಳೆ ಬಂದರೆ ಹಲವು ವಾರ್ಡ್‌ಗಳು ಜಲ ಸಮಾಧಿ ಆಗುತ್ತವೆ. ವಾರ್ಡ್‌ಲ್ಲಿ ಪ್ರಶ್ನೆ ಮಾಡಲು ಜನಪ್ರತಿನಿಧಿಗಳು ಇಲ್ಲ, ಶಾಸಕರು ಜನರ ಕೈಗೆ ಸಿಗುತ್ತಿಲ್ಲ. ಸಿಕ್ಕರೂ ಸಮಸ್ಯೆಗೆ ಸ್ಪಂದಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸಾಮಾನ್ಯರು ಇಷ್ಟೆಲ್ಲ ಸಮಸ್ಯೆ ಅನುಭವಿಸುತ್ತಿದ್ದರೂ ನಗರ ಶಾಸಕರಿಗೆ ಮಾತ್ರ ಮಹಾನಗರ ಪಾಲಿಕೆ ಚುನಾವಣೆ ಬೇಕಾಗಿಲ್ಲ.

ಚುನಾವಣೆ ನಡೆದರೆ ವಿಧಾನಸಭೆ ಚುನಾವಣೆಗೂ ಮುನ್ನ ಕ್ಷೇತ್ರಗಳಲ್ಲಿ ಅತೃಪ್ತಿ, ಬಂಡಾಯ ಉಂಟಾಗುತ್ತದೆ. ಈಗಾಗಲೆ ಪ್ರತಿ ಕ್ಷೇತ್ರದಲ್ಲಿ ನಾಲ್ಕೈದು ಜನ ಆಕಾಂಕ್ಷಿಗಳಿದ್ದಾರೆ. ಯಾರು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪರ ಉತ್ತಮವಾಗಿ ಕೆಲಸ ಮಾಡುತ್ತಾರೊ ಅವರಿಗೆ ಟಿಕೆಟ್‌ ಎಂಬ ಆಸೆ ತೋರಿಸಿ ಎಲ್ಲರ ಕಡೆಯಿಂದಲೂ ಚುನಾವಣೆ ಕೆಲಸ ಮಾಡಿಸಿಕೊಳ್ಳಬಹುದು. ಒಮ್ಮೆ ಚುನಾವಣೆ ನಡೆದರೆ ಕೆಲವರು ಬಂಡಾಯ ಏಳುತ್ತಾರೆ, ಇನ್ನು ಕೆಲವರು ಬೇರೆ ಪಕ್ಷಕ್ಕೆ ಹೋಗುತ್ತಾರೆ, ಉಳಿದವರು ಸೋಲುತ್ತಾರೆ. ಇವರ‍್ಯಾರೂ ತಮ್ಮ ಪರ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ. ಕಾಲಾಳುಗಳಿಲ್ಲದೆ ಚುನಾವಣೆ ನಡೆಸುವುದು ಕಷ್ಟ ಎನ್ನುವುದು ಶಾಸಕರಿಗಿರುವ ಮೊದಲ ಸಮಸ್ಯೆ.

ಚುನಾವಣೆ ಹತ್ತಿರವಾದಂತೆ ಬೆಂಗಳೂರು ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿದೆ. ಈ ಅನುದಾನದ ʼಲಾಭʼ, ʼಶ್ರೇಯʼ ಸಂಪೂರ್ಣವಾಗಿ ತಮಗೇ ಸಲ್ಲುತ್ತಿದೆ. ನಡುವೆ ಕಾರ್ಪೊರೇಟರ್‌ಗಳು ಬಂದುಬಿಟ್ಟರೆ ಎರಡೂ ಅಂಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದು ಇನ್ನೊಂದು ಭಯ.

ಚುನಾವಣೆ ನಡೆಸಲೇಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದ್ದರಿಂದ ಸರ್ಕಾರ ತರಾತುರಿಯಲ್ಲಿ ವಾರ್ಡ್‌ ಮರುವಿಂಗಡಣೆ ಪ್ರಕಟಿಸಿದೆ. ವಾರ್ಡ್‌ ಮರುವಿಂಗಡಣೆ ಮಾಡಿದರೆ ಸಾಲದು. ರಾಜ್ಯ ಚುನಾವಣಾ ಆಯೋಗ ಬಿಬಿಎಂಪಿ ಚುನಾವಣೆ ನಡೆಸಬೇಕೆಂದರೆ ಮೀಸಲಾತಿಯನ್ನೂ ಪ್ರಕಟಿಸಬೇಕು. ಇದೀಗ ಪ್ರಕಟಿಸಿರುವ ವಾರ್ಡ್‌ ಮರು ವಿಂಗಡಣೆ ಕರಡಿನ ಕುರಿತು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬಲವಾದ ಆಕ್ಷೇಪ ವ್ಯಕ್ತಪಡಿಸಿವೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಈ ಕರಡು ಸಿದ್ಧತೆ ಸೂಕ್ತ ಪ್ರಕ್ರಿಯೆ ಮೂಲಕ ನಡೆದಿಲ್ಲ. ಬಿಜೆಪಿ ಕಚೇರಿ, ಆರೆಸ್ಸೆಸ್‌ ಕಚೇರಿ, ಬಿಜೆಪಿ ಸಂಸದರ ಕಚೇರಿ ಹಾಗೂ ಶಾಸಕರ ಕಚೇರಿಗಳಲ್ಲಿ ನಡೆದಿದೆ. ಬಿಜೆಪಿ ಶಕ್ತಿಯುತವಾಗಿರುವ ಕಡೆಗಳಲ್ಲಿ ವಾರ್ಡ್‌ ಹೆಚ್ಚಳ ಮಾಡಿಕೊಂಡಿದ್ದಾರೆ. ಇದರಲ್ಲಿರುವ ಲೋಪದೋಷಗಳನ್ನು ಅವಲೋಕಿಸಿ ಕಾನೂನು ಪ್ರಕ್ರಿಯೆ ಆರಂಬದ ಕುರಿತು ಚಿಂತನೆ ಮಾಡಲಾಗುತ್ತದೆ ಎದಿದ್ದರು.

ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ಬೆಳಗ್ಗೆ ಸರಣಿ ಟ್ವೀಟ್‌ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಪಾಲಿಕೆಯಾಗಿದ್ದನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ನಾನು ಮಾಡಿದ್ದು ನಗರದ ಜನರಿಗೆ ಸ್ಥಳೀಯವಾಗಿ ಅತ್ಯುತ್ತಮ ಅಡಳಿತ, ಸೇವೆಗಳು ಲಭ್ಯವಾಗಲಿ ಎಂದು. ಆದರೆ, ಬಿಜೆಪಿ ಸರಕಾರವು ಬಿಬಿಎಂಪಿ ರಚನೆಯ ಮೂಲ ಆಶಯವನ್ನೇ ಬುಡಮೇಲು ಮಾಡಿ ರಾಜಕೀಯ ಸ್ವಾರ್ಥ ಸಾಧನೆಯ ಷಡ್ಯಂತ್ರ ನಡೆಸಿದೆ. ಕೋರ್ಟ್‌ ಹೇಳಿದರಷ್ಟೇ ಕೆಲಸʼ ಎನ್ನುವ ಚಾಳಿ ಬಿಜೆಪಿ ಸರಕಾರದ್ದು. ನ್ಯಾಯಾಲಯದ ಅದೇಶವನ್ನೇ ಧಿಕ್ಕರಿಸಿ ನಡೆದ ಈ ನಿರ್ಲಜ್ಜ ಸರಕಾರಕ್ಕೆ ಜನಹಿತಕ್ಕಿಂತ ಪಕ್ಷಹಿತವೇ ಸರ್ವಸ್ವ. ವಾರ್ಡ್‌ ವಿಂಗಡಣೆ ಸ್ವರೂಪ ನೋಡಿದರೆ ಬಿಜೆಪಿಯ ‘ಅಧಿಕಾರದ ವಿಕೃತಿ’ ಯಾವ ಮಟ್ಟದಲ್ಲಿದೆ ಎನ್ನುವುದು ಅರ್ಥವಾಗುತ್ತದೆ.” ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ವಾರ್ಡ್ ವಿಂಗಡಣೆಯಲ್ಲಿ ಬೆಂಗಳೂರು ನಗರದ ಸಮಗ್ರತೆ, ಅನನ್ಯತೆಯನ್ನು ಕಡೆಗಣಿಸಲಾಗಿದೆ. ಬೆಂಗಳೂರು ಎಂದರೆ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಮಾತ್ರವಲ್ಲ. ಇದು ಕೇವಲ ಬಿಜೆಪಿಯಿಂದ, ಬಿಜೆಪಿ ಶಾಸಕರಿಗಾಗಿ, ಬಿಜೆಪಿಯೇ ಮಾಡಿಕೊಂಡ ಮರು ವಿಂಗಡಣೆ ಎಂದಿರುವ ಕುಮಾರಸ್ವಾಮಿ, ಈ ಕುರಿತು ಭವಿಷ್ಯದಲ್ಲಿ ಕಾನೂನು ಸಮರಕ್ಕೂ ಮುಂದಾಗುವ ಮುನ್ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ನಡೆದಿದ್ದು ಬಿಜೆಪಿ ಕಚೇರಿ, ಕೇಶವ ಕೃಪಾದಲ್ಲಿ ಎಂದ ರಾಮಲಿಂಗಾರೆಡ್ಡಿ

ಮೀಸಲಾತಿ ನಂತರ ಮತ್ತಷ್ಟು ಕೇಸ್‌

ವಾರ್ಡ್‌ ಮರುವಿಂಗಡಣೆಗೆ ಸರ್ಕಾರವೇ ನೇರವಾಗಿ ವಿರೋಧ ವ್ಯಕ್ತಪಡಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಸುಪ್ರೀಂಕೋರ್ಟ್‌ ಆದೇಶವನ್ನು ಧಿಕ್ಕರಿಸಿದಂತಾಗುತ್ತದೆ. ಹಾಗಾಗಿ ಸರ್ಕಾರವು ಈ ಕಾರ್ಯಕ್ಕರ ವಿರೋಧ ಪಕ್ಷಗಳ ಬೆಂಬಲ ಪಡೆಯುತ್ತಿದೆ ಎಂದು ಬೆಂಗಳೂರು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ವಿರೋಧ ಪಕ್ಷಗಳೂ ತಾವೇ ನೇರವಾಗಿ ನ್ಯಾಯಾಲಯ ಕಟಕಟೆ ಹತ್ತಲು ಸಾಧ್ಯವಿಲ್ಲ. ಹಾಗಾಗಿ ಪಕ್ಷದ ಮಾಜಿ ಕಾರ್ಪೊರೇಟರ್‌ಗಳು ಅಥವಾ ಸಾರ್ವಜನಿಕರ ಮೂಲಕ ನ್ಯಾಯಾಲಯದಲ್ಲಿ ಖಟ್ಲೆ ಹೂಡಿಸುವ ಉಪಾಯ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ವಾರ್ಡ್‌ ಮರುವಿಂಗಡಣೆಗೇ ವಿರೋಧ ಪಕ್ಷಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇನ್ನೂ ಮೀಸಲಾತಿ ಪ್ರಕಟವಾಗಿಲ್ಲ. ಮೀಸಲಾತಿಯನ್ನು ನಿಗದಿ ಮಾಡಿದ ನಂತರ ಅದರಲ್ಲಿನ ದೋಷಗಳು ಸಾಕಷ್ಟಿರುತ್ತವೆ. ರೋಸ್ಟರ್‌ ಪಾಲನೆ ಮಾಡಲಾಗಿಲ್ಲ, ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಮುದಾಯವನ್ನು ಬಿಟ್ಟು ಬೇರೆ ಸಮುದಾಯಕ್ಕೆ ಮೀಸಲಾತಿ ನೀಡಲಾಗಿದೆ, ವಿರೋಧಿಗಳನ್ನು ತುಳಿಯುವ ಸಲುವಾಗಿ ಮೀಸಲಾತಿ ಬದಲಾವಣೆ ಮಾಡಲಾಗಿದೆ ಎಂಬ ಅನೇಕ ದೂರುಗಳು ಕೇಳಿಬರುತ್ತವೆ. ಈ ವಿಚಾರದಲ್ಲಿ ಮತ್ತಷ್ಟು ದೂರುಗಳು ಸಲ್ಲಿಕೆಯಾಗುತ್ತವೆ.

ಇದೆಲ್ಲವನ್ನೂ ನೋಡಿದರೆ, ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ಉಲ್ಲಂಘಿಸಲು ನ್ಯಾಯಾಂಗ ಮಾರ್ಗದಲ್ಲೇ ಸಾಗುವ ಉಪಾಯವನ್ನು ಬೆಂಗಳೂರು ರಾಜಕಾರಣಿಗಳು ಮಾಡಿದಂತಿದೆ. ಒಟ್ಟಿನಲ್ಲಿ, ತಮ್ಮನ್ನು ಶಾಸಕರಾಗಿಸಿರುವ ಚುನಾವಣೆ ವ್ಯವಸ್ಥೆಯನ್ನೇ ಮುಂದೂಡಲು ಸರ್ವಪಕ್ಷಗಳೂ ಪ್ರಯತ್ನದಲ್ಲಿದ್ದು, ಸರ್ಕಾರವು ಪ್ರತಿಪಕ್ಷಗಳ ʼಬಾಹ್ಯ ಬೆಂಬಲʼ ಪಡೆಯುತ್ತಿರುವುದು ನಿಚ್ಚಳವಾಗಿ ಕಾಣಿಸುತ್ತಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಇದನ್ನೂ ಓದಿ | ಬಿಬಿಎಂಪಿ ಚುನಾವಣೆಗೆ ಮತ್ತೊಂದು ಅಡೆ ನಿವಾರಣೆ: 198ರಿಂದ 243ಕ್ಕೆ ವಾರ್ಡ್‌ ಹೆಚ್ಚಿಸಿ ಕರಡು ಪ್ರಕಟ

Exit mobile version