Site icon Vistara News

Shri Thanedar: ಮೈಸೂರು ಪಾಕ್‌, ಧಾರವಾಡ ಪೇಡಾ ತಿಂದು ಬೆಳೆದೆ ಎಂದ ಅಮೆರಿಕ ಸಂಸದ; ಯಾರಿವರು?

Shri Thanedar

Grew up eating Mysore Pak and Dharwad Peda; Says U.S. Congressman Shri Thanedar

ನವದೆಹಲಿ: ಬ್ರಿಟನ್‌, ಅಮೆರಿಕ, ಕೆನಡಾ ಸೇರಿ ಹಲವು ದೇಶಗಳಲ್ಲಿ ಭಾರತೀಯರು ಸಂಸದರು, ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ಭಾರತ ಮೂಲದವರಾಗಿದ್ದಾರೆ. ಬೇರೆ ದೇಶಕ್ಕೆ ತೆರಳಿ, ಅಲ್ಲಿ ರಾಜಕೀಯವಾಗಿ ಏಳಿಗೆ ಹೊಂದಿದವರು ಭಾರತವನ್ನು ಮರೆತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ, ಬೆಳಗಾವಿ ಮೂಲದ ಶ್ರೀ ಥಾಣೆದಾರ್‌ (Shri Thanedar) ಅವರು ಅಮೆರಿಕ ಸಂಸದರಾದರೂ ಅವರು ಕನ್ನಡದ ನೆಲವನ್ನು ಮರೆತಿಲ್ಲ.

ಇದಕ್ಕೆ ನಿದರ್ಶನ ಎಂಬಂತೆ, ಎಎನ್‌ಐ ಪಾಡ್‌ಕಾಸ್ಟ್‌ ವೇಳೆ ಅವರು ಕರ್ನಾಟಕವನ್ನು ನೆನೆದಿದ್ದಾರೆ. “ನಾನು ಮೈಸೂರು ಪಾಕ್‌, ಧಾರವಾಡ ಪೇಡಾ ತಿಂದು ಬೆಳೆದವನು. ಮೈಸೂರು ಪಾಕ್‌ ಕರ್ನಾಟಕದ್ದೇ ಆಗಿದೆ. ನನಗೆ ಕನ್ನಡವೂ ಬರುತ್ತದೆ. ನಾನು ಬೆಳಗಾವಿಯಲ್ಲಿ ಬೆಳೆದಿದ್ದೇನೆ. ನಾನು ಬಡತನವನ್ನೂ ಕಂಡಿದ್ದೇನೆ” ಎಂದು ಬೆಳಗಾವಿಯಲ್ಲಿ ಅವರು ಕಳೆದ ಕಷ್ಟದ ದಿನಗಳನ್ನು ನೆನೆದಿದ್ದಾರೆ. ಹಾಗೆಯೇ, ಸಂದರ್ಶನದ ವೇಳೆ ಅವರು ಮೈಸೂರು ಪಾಕ್‌ ಸವಿದಿದ್ದಾರೆ.

ಮೋದಿ ಜತೆ ಮಾತುಕತೆ

ಕೆಲ ದಿನಗಳ ಹಿಂದೆ ಭಾರತಕ್ಕೆ ಬಂದಿರುವ ಶ್ರೀ ಥಾಣೆದಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗಿದ್ದಾರೆ. ಸಂದರ್ಶನದ ವೇಳೆ ಅವರು ಮೋದಿ ಜತೆಗಿನ ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ. “ನರೇಂದ್ರ ಮೋದಿ ಜತೆಗಿನ ಭೇಟಿ ಅದ್ಭುತವಾಗಿತ್ತು. ಅವರು ನನಗೆ ಹಲವು ರಾಜಕೀಯ ಸಲಹೆಗಳನ್ನು ನೀಡಿದ್ದರು. ಹಾಗೆಯೇ, ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗಿನ ಅನುಭವವನ್ನು ನನಗೆ ಹಂಚಿಕೊಂಡರು. ಮೋದಿ ಅವರು ಸ್ನೇಹಕ್ಕೆ ಎಷ್ಟು ಬೆಲೆ ನೀಡುತ್ತಾರೆ ಎಂಬುದು ಭೇಟಿ ಬಳಿಕ ಗೊತ್ತಾಯಿತು” ಎಂದಿದ್ದಾರೆ. ಭಾರತದ ಆರ್ಥಿಕತೆ, ನರೇಂದ್ರ ಮೋದಿ, ಅಮೆರಿಕ-ಭಾರತ ಸಂಬಂಧ ಸೇರಿ ಹಲವು ವಿಚಾರಗಳ ಕುರಿತು ಶ್ರೀ ಥಾಣೆದಾರ್‌ ತಿಳಿಸಿದ್ದಾರೆ.

ಸಂದರ್ಶನದ ಪೂರ್ತಿ ವಿಡಿಯೊ

ಇದನ್ನೂ ಓದಿ: Rishi Sunak: ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಅವರ ಫೇವರಿಟ್​ ಕ್ರಿಕೆಟಿಗ ಭಾರತೀಯನಂತೆ!

ಯಾರಿವರು ಶ್ರೀ ಥಾಣೆದಾರ್?‌

ಶ್ರೀ ಥಾಣೆದಾರ್‌ ಅವರು ಬೆಳಗಾವಿಯಲ್ಲಿ ಹುಟ್ಟಿ ಬೆಳೆದಿದ್ದಾರೆ. ಇವರು 1979ರಲ್ಲಿ ಅಮೆರಿಕಕ್ಕೆ ತೆರಳಿ ಪಿಎಚ್‌.ಡಿ ಅಧ್ಯಯನ ಮಾಡಿ, ಅಲ್ಲಿಯೇ ನೆಲೆಸಿದ್ದಾರೆ. ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದಿಂದ ಸ್ಪರ್ಧಿಸಿದ ಶ್ರೀ ಥಾಣೆದಾರ್‌ ಅವರು ಸಂಸತ್‌ ಪ್ರವೇಶಿಸಿದ್ದಾರೆ. ಕಳೆದ ನಾಲ್ಕು ದಶಕದಿಂದ ಇವರು ಅಮೆರಿಕದಲ್ಲಿಯೇ ನೆಲೆಸಿದ್ದಾರೆ. ಥಾಣೆದಾರ್‌ ಅವರು ಭಾರತದಲ್ಲಿ ವಿಜ್ಞಾನಿಯೂ ಆಗಿದ್ದರು.

Exit mobile version