Site icon Vistara News

Gruhalakshmi Scheme : ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸುವಾಗ 1 ಪೈಸೆನೂ ಕೊಡ್ಬೇಡಿ, ಅದೂ ಫುಲ್‌ ಫ್ರೀ ಎಂದ ಹೆಬ್ಬಾಳ್ಕರ್‌

Gruhalakshmi scheme Lakshmi Hebbalkar

ಬೆಳಗಾವಿ: ಮನೆಯೊಡತಿಯ ಖಾತೆಗೆ ತಿಂಗಳಿಗೆ 2000 ರೂ.ವನ್ನು ನೇರವಾಗಿ ಹಾಕುವ ರಾಜ್ಯದ ಕಾಂಗ್ರೆಸ್‌ ಸರ್ಕಾರದ (Congress Government) ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ (Gruhalakshmi scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಆಗಲೇ ಅರ್ಜಿ ಸಲ್ಲಿಕೆ ಹೆಸರಿನಲ್ಲಿ ಕೆಲವು ವ್ಯಕ್ತಿಗಳು, ಏಜೆನ್ಸಿಗಳು ಹಣ ವಸೂಲಿಗೆ ಇಳಿದಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಅವರು ಈ ಯೋಜನೆಗೆ ಅರ್ಜಿ ಸಲ್ಲಿಕೆ ಒಂದು ರೂ. ಕೂಡಾ ಕೊಡಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಬಳ್ಳಾರಿ ಸೇರಿದಂತೆ ರಾಜ್ಯದ ಹಲವೆಡೆ ಗೃಹಲಕ್ಷ್ಮಿ ಯೋಜನೆಯ ನಕಲಿ ಅರ್ಜಿ ಹಿಡಿದುಕೊಂಡುಬಂದು ಅದನ್ನು ತುಂಬಿಸಲು 150 ರೂ. ಶುಲ್ಕ ವಸೂಲಿ ಮಾಡಿದ್ದರ ಬಗ್ಗೆ ವಿಸ್ತಾರ ನ್ಯೂಸ್‌ ವರದಿ ಪ್ರಕಟಿಸಿತ್ತು. ಇದರ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಬಳ್ಳಾರಿಯಲ್ಲಿ ಈ ರೀತಿ ಪ್ರಕರಣ ನಡೆದಿರುವುದರ ಬಗ್ಗೆ ಮಾಹಿತಿ ಬಂದಿದೆ. ಇದರ ಬಗ್ಗೆ ತನಿಖೆ ಮಾಡುತ್ತೇವೆ. ಅದಕ್ಕಿಂತಲೂ ಹೆಚ್ಚಾಗಿ ಈ ಅರ್ಜಿ ಸಲ್ಲಿಕೆಗೆ ಒಂದು ರೂ. ಕೂಡಾ ಕೊಡಬೇಕಾಗಿಲ್ಲ ಎಂದರು.

20 ರೂ. ಸೇವಾ ಶುಲ್ಕ ಕೂಡಾ ಸರ್ಕಾರವೇ ಭರಿಸಲಿದೆ

ʻʻನನ್ನ ಎಲ್ಲ ಇಲಾಖೆಯ ಸಿಬ್ಬಂದಿಗೂ ಈಗಾಗಲೇ ಸೂಚನೆ ನೀಡಿದ್ದೇನೆ. ರಾಜ್ಯದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಒಂದೂ ರೂಪಾಯಿ ಖರ್ಚು ಮಾಡುವುದು ಬೇಡ. ಅರ್ಜಿ ಸಲ್ಲಿಕೆ ಸೇವಾ ಕೇಂದ್ರಗಳಿಗೆ ನೀಡಬೇಕಾಗಿರುವ 20 ರೂ. ಸೇವಾ ಶುಲ್ಕವನ್ನು ಕೂಡಾ ಸರ್ಕಾರವೇ ಭರಿಸಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೇವಾ ಕೇಂದ್ರಗಳಿಗೆ 20 ರೂ. ಹಣ ನೀಡುವ ನಿರ್ಧಾರ ತೆಗೆದುಕೊಂಡಿದ್ದೇವೆʼʼ ಎಂದು ಹೇಳಿದರು.

ʻʻಸೇವಾ ಸಿಂಧು, ಗ್ರಾಂ ಒನ್, ನಾಡಕಚೇರಿ, ಬಾಪೂಜಿ ಸೇವಾ ಕೇಂದ್ರಗಳಿಗೆ ನಾವೇ ಹಣ ಭರಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ನನ್ನ ಇಲಾಖೆಯಿಂದಲೇ ಪ್ರತಿ ಅರ್ಜಿಗೆ 20 ರೂ. ಸೇವಾ ಕೇಂದ್ರಗಳಿಗೆ ನೀಡುತ್ತೇವೆʼʼ ಎಂದು ಹೇಳಿದರು.

ಮಧ್ಯವರ್ತಿಗಳ ಆಮಿಷಗಳಿಗೆ ಕಿವಿಗೊಡಬೇಡಿ

ʻʻಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ರಾಜ್ಯದ ಮಹಿಳೆಯರು ಮಧ್ಯವರ್ತಿಗಳ ಆಮಿಷಗಳಿಗೆ ಒಳಗಾಗಬಾರದು, ಕಿವಿಗೊಡಬಾರದು. ಅರ್ಜಿ ಸಲ್ಲಿಕೆ ವೇಳೆ ಯಾರೂ ಒಂದು ರೂಪಾಯಿ ನೀಡಬಾರದುʼʼ ಎಂದು ಹೆಬ್ಬಾಳ್ಕರ್ ಮನವಿ ಮಾಡಿದರು.

ʻʻಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಯಾವುದೇ ಟೈಮ್ ಲಿಮಿಟ್‌ ಇಲ್ಲ. ಅರ್ಜಿ ಸ್ವೀಕಾರ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ಹೀಗಾಗಿ ಅವಸರ ಮಾಡುವ ಅಗತ್ಯವೂ ಇಲ್ಲʼʼ ಎಂದು ಹೇಳಿದ ಅವರು, ಭ್ರಷ್ಟಾಚಾರ ಆಗಬಾರದು, ಸಾರ್ವಜನಿಕರ ಹಣ ಹೋಗಬಾರದು ಎಂಬುದೇ ನಮ್ಮ ಸರ್ಕಾರದ ಆಶಯ ಎಂದು ಸ್ಪಷ್ಟಪಡಿಸಿದರು.

ಹಾಲು ಕೊಡಲಾಗದಿದ್ದರೆ ಬೇರೆ ಬೇರೆ ಆಹಾರ ಕೊಡುತ್ತೇವೆ

ಅಂಗನವಾಡಿಗಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಲಿನ ವಿತರಣೆ ಸ್ಥಗಿತವಾಗಿದೆ ಎಂಬ ವಿಚಾರದ ಬಗ್ಗೆ ಕೇಳಿದಾಗ, ʻʻಕಳೆದ ನಾಲ್ಕು ತಿಂಗಳಿಂದ ನನ್ನ ಇಲಾಖೆಯಿಂದ ಹಾಲು ಪೂರೈಕೆ ಆಗುತ್ತಿಲ್ಲ. ಹಾಲಿನ ಬೆಲೆ ಏರಿಕೆಯಾಗಿದೆ. ಹಿಂದಿನ ದರಕ್ಕೆ ಪೂರೈಕೆ ಅಸಾಧ್ಯ ಎಂದು ಕೆಎಂಎಫ್ ಹಾಲು ಪೂರೈಸುತ್ತಿಲ್ಲ. ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡಬೇಕೆಂಬುದು ನಮ್ಮ ಉದ್ದೇಶ. ಹಾಲು ಕೊಡಲಾಗದಿದ್ದರೆ ಬೇರೆ ಪೌಷ್ಟಿಕ ಆಹಾರ ಕೊಡಲು ನಾನು ಚರ್ಚೆ ಮಾಡುತ್ತೇನೆʼʼ ಎಂದು ಹೆಬ್ಬಾಳ್ಕರ್ ಹೇಳಿದರು.

ಇದನ್ನೂ ಓದಿ : Gruhalakshmi Scheme : ಗೃಹಲಕ್ಷ್ಮಿಯರೇ ಹುಷಾರು, ಅರ್ಜಿ ಹೆಸರಲ್ಲಿ ವಂಚನೆ ಮಾಡೋರು ಬರ್ತಿದ್ದಾರೆ!

Exit mobile version