ಬೆಂಗಳೂರು: ಆಹಾರ ಧಾನ್ಯಗಳ ಮೇಲೆ ಕೇಂದ್ರ ಸರ್ಕಾರ ಶೇ. 5 ಜಿ.ಎಸ್.ಟಿ ತೆರಿಗೆಯನ್ನು ವಿಧಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರದ ಈ ಕ್ರಮ ವಿರೋಧಿಸಿ, ಈ ಕೂಡಲೇ ತೆರಿಗೆ ವಿಧಿಸುವ ನಿಲುವು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯ ಅಕ್ಕಿ ಗಿರಣಿದಾರರ ಸಂಘ ಪ್ರತಿಭಟನೆಗೆ ಕರೆ ನೀಡಿದೆ.
ಜುಲೈ 15ರಂದು ರಾಜ್ಯಾದ್ಯಂತ ಅಕ್ಕಿ ಗಿರಣಿಗಳ ಚಟುವಟಿಕೆಗಳನ್ನು ಬಂದ್ ಮಾಡಿ ಪ್ರತಿಭಟಿಸಲು ಸಂಘ ನಿರ್ಧರಿಸಿದೆ. ದೇಶಾದ್ಯಂತ ಜುಲೈ 18ರಂದು ಹೊಸ ನಿಯಮ ಜಾರಿಗೆ ಬರಲಿದೆ. ಈ ಜನ ವಿರೋಧಿ ತೆರಿಗೆ ನೀತಿಯನ್ನು ಜಿಎಸ್‌ಟಿ. ಕೌನ್ಸಿಲ್ ಪುನರ್ ಪರಿಶೀಲಿಸಬೇಕೆಂದು ಸಂಘ ಮನವಿ ಮಾಡಿದೆ.
ಈ ಪ್ರತಿಭಟನೆಗೆ ದಿ ಬೆಂಗಳೂರು ಹೋಲ್‌ಸೇಲ್ ಫುಡ್ ಗ್ರೈನ್ಸ್ & ಪಲ್ಟನ್ ಮರ್ಚೆಂಟ್ಸ್ ಅಸೋಸಿಯೇಷನ್, ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಅಸೋಸಿಯೇಷನ್, ಕರ್ನಾಟಕ ರೋಲರ್ ಫ್ಲೋರ್ ಮಿಲ್ಲರ್ಸ್ ಅಸೋಸಿಯೇಷನ್ ಮತ್ತು ನ್ಯೂ ತರಗುಪೇಟೆ ಮರ್ಚೆಂಟ್ಸ್ ಅಸೋಸಿಯೇಷನ್‌ಗಳು ಸಾಥ್ ಕೊಟ್ಟಿವೆ.
ಆಹಾರ ಧಾನ್ಯಗಳಾದ ಅಕ್ಕಿ, ಜೋಳ, ರಾಗಿ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ತೆರಿಗೆ ಹೆಚ್ಚಾದರೆ ಜನರಿಗೆ ನೇರವಾಗಿ ಇದರ ಸಂಕಷ್ಟ ತಟ್ಟುತ್ತದೆ. ಕೇಂದ್ರ ಸರಕಾರ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸಂಘ ಮನವಿ ಮಾಡಿದೆ.
ಇದನ್ನೂ ಓದಿ | GST | 12% ಜಿಎಸ್‌ಟಿ ಏರಿಕೆ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ