ಗದಗ: ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ (Bynduru BJP ticket) ಕೊಡಿಸುವುದಾಗಿ ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್ ಐದು ಕೋಟಿ ರೂ. ವಂಚಿಸಿದ ಪ್ರಕರಣ ಜಗಜ್ಜಾಹೀರಾಗಿದೆ. ಈ ಪ್ರಕರಣದ ಮೂರನೇ ಆರೋಪಿ ಹಿರೇಹಡಗಲಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ (Halashri swameeji) ಈಗ ಇನ್ನೊಂದು ದೋಖಾ ಮಾಡಿದ ಮಾಹಿತಿ ಬಯಲಾಗಿದೆ. ಅವರು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ (Shirahatti BJP Ticket) ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO-Panchayat development officer) ಒಬ್ಬರಿಂದ 1 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂದು ಮುಂಡರಗಿ ಠಾಣೆಯಲ್ಲಿ (Mundargi Station) ಪ್ರಕರಣ ದಾಖಲಾಗಿದೆ.
ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯ್ತಿ ಪಿಡಿಒ ಆಗಿದ್ದ ಸಂಜಯ್ ಚಡವಾಳ (Sanjay Chadavala) ಅವರಿಗೇ ಈ ವಂಚನೆ ನಡೆದಿರುವುದು. ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಜಯ್ ಅವರು ಹಾಲಶ್ರೀ ಅವರ ಜನಪ್ರಿಯತೆ, ಬಿಜೆಪಿ ನಾಯಕರ ಒಡನಾಟ ಕಂಡು ಅವರ ಮೂಲಕ ಟಿಕೆಟ್ ಪಡೆಯಬಹುದು ಎಂದು ಭಾವಿಸಿದ್ದರು. ಮಾತುಕತೆಯ ವೇಳೆ ಒಂದು ಕೋಟಿ ರೂ.ಗೆ ಡೀಲ್ ಆಗಿತ್ತು. ಸಂಜಯ್ ಒಂದು ಕೋಟಿ ರೂ. ಹಣವನ್ನು ಹಾಲಶ್ರೀ ಅವರಿಗೆ ನೀಡಿದ್ದರು ಎನ್ನಲಾಗಿದೆ.
ಆದರೆ, ಶಿರಹಟ್ಟಿ ಟಿಕೆಟ್ ಕೊಡಿಸುವಲ್ಲಿ ಹಾಲಶ್ರೀ ವಿಫಲರಾಗಿದ್ದರು. ಅದಾದ ಬಳಿಕ ಸಂಜಯ್ ತನ್ನ ಹಣ ವಾಪಸ್ ಕೊಡಬೇಕು ಎಂದು ಹಾಲಶ್ರೀ ಬೆನ್ನು ಬಿದ್ದಿದ್ದರು. ಆದರೆ, ಹಾಲಶ್ರೀ ದಿನ ದೂಡುತ್ತಲೇ ಇದ್ದರು. ಈ ನಡುವೆ, ಗೋವಿಂದ ಪೂಜಾರಿ ಪ್ರಕರಣ ಎದ್ದುಬಂದಿತ್ತು. ಸೆಪ್ಟೆಂಬರ್ 8ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಹಾಲಶ್ರೀ ತಮ್ಮ ಇನ್ನಷ್ಟು ಅಕ್ರಮಗಳು ಬಯಲಿಗೆ ಬರುವುದು ಬೇಡ ಎಂದು ಸಂಜಯ್ ಅವರಿಗೆ ಕರೆ ಮಾಡಿ ಹಣ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರು.
ಸಂಜಯ್ ಅವರು ಒಂದೆರಡು ದಿನ ಬಿಟ್ಟು ಹಣಕ್ಕಾಗಿ ಮಠಕ್ಕೆ ತೆರಳಿದರೆ ಅಷ್ಟು ಹೊತ್ತಿಗೆ ಹಾಲಶ್ರೀ ಮಠದಿಂದಲೇ ನಾಪತ್ತೆಯಾಗಿದ್ದರು. ಈ ವೇಳೆ ಸಂಜಯ್ ಅವರು ಹಾಲಶ್ರೀ ಚಾಲಕನ ಸಂಪರ್ಕ ಮಾಡಿದ್ದರು ಆಗ ಚಾಲಕ ಹಿರೇಹಡಗಲಿ ಮಠದಿಂದ ಮೈಸೂರಿನತ್ತ ತೆರಳಿ ಆಗಿತ್ತು.
ಈ ನಡುವೆ, ಹಾಲಶ್ರೀ ಕಾರು ಚಾಲಕ ಸಿಸಿಬಿ ಬಲೆಗೆ ಬಿದ್ದಿದ್ದ. ಈ ನಡುವೆ ಕಾರು ಚಾಲಕ ಮತ್ತು ಪಿಡಿಒ ಸಂಜಯ್ ನಡೆದಿರುವ ಮಾತುಕತೆ, ಫೋನ್ ಕಾಲ್ ಬೆನ್ನು ಹತ್ತಿ ಪಿಡಿಒ ಸಂಜಯ್‌ನನ್ನು ವಿಚಾರಣೆ ನಡೆಸಿದ್ದರು. ಆಗ ಹಾಲಶ್ರೀಯ ಇನ್ನೊಂದು ಹಗರಣ ಬೆಳಕಿಗೆ ಬಂದಿದೆ. ಸಿಸಿಬಿ ವಿಚಾರಣೆಯ ಬಳಿಕ ಸಂಜಯ್ ಈಗ ಮುಂಡರಗಿ ಠಾಣೆಗೆ ದೂರು ನೀಡಿದ್ದಾರೆ.
ಯಾರೀ ಕೋಟಿ ಕುಳ ಸಂಜಯ್, ದೂರಿನಲ್ಲೇನಿದೆ?
ಸಂಜಯ್ ಚವಡಾಳ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದವರು. ಎಸ್ ಸಿ (ಮಾದಿಗ) ಸಮುದಾಯಕ್ಕೆ ಸೇರಿದವರು. ಎಸ್ ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿಹೊಂದಿದ್ದ ಸಂಜಯ್ ಅರುಂಧತಿ ಫೌಂಡೇಷನ್ ಹೆಸರಲ್ಲಿ ಸಾಮಾಜಿಕ ಸೇವೆ ಮಾಡುತ್ತಿದ್ದರು. ಒಬ್ಬ ಪಿಡಿಒ ಆಗಿ ಕೋಟಿಗಟ್ಟಲೆ ಹಣ ಕೊಟ್ಟು ಟಿಕೆಟ್ ಪಡೆಯುವಷ್ಟು ಗಟ್ಟಿ ಕುಳಾನಾ ಎನ್ನುವ ಪ್ರಶ್ನೆಗೆ ಸಂಪೂರ್ಣ ವಿಚಾರಣೆ ಬಳಿಕವೇ ಉತ್ತರ ಸಿಗಬೇಕಾಗಿದೆ. ಅವರ ಘನಾಂದಾರಿ ಕೆಲಸಗಳಿಗಾಗಿ ಅವರು ಕರ್ತವ್ಯ ಲೋಪದ ಆರೋಪದಲ್ಲಿ ಸದ್ಯ ಅಮಾನತುಗೊಂಡಿದ್ದಾರೆ.
ಇದನ್ನೂ ಓದಿ: Halashri Swameeji: ಹಾಲ ಮಠದ ಚರಿತ್ರೆಯಲ್ಲಿ ಕಪ್ಪು ಚುಕ್ಕೆ; ಕರ್ನಾಟಕದ ಯೋಗಿಯಾಗುವ ಕನಸು ಹೊತ್ತಿದ್ದ ಹಾಲಶ್ರೀ!
ಹಾಲಶ್ರೀಯಿಂದ ತನಗೂ ಕೋಟಿ ರೂಪಾಯಿ ವಂಚನೆ ಆಗಿರುವ ಬಗ್ಗೆ ಸಿಸಿಬಿ ವಿಚಾರಣೆಯಲ್ಲಿ ಹೇಳಿಕೊಂಡಿರುವ ಸಂಜಯ್ ಶಿರಹಟ್ಟಿ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಜನರ ಮುಂದೆ ಬಿಂಬಿಸಿಕೊಂಡಿದ್ದರು. ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಹೇಳಿಕೊಂಡಿದ್ದರು.
ಸೆಪ್ಟೆಂಬರ್ 19 ನೇ ತಾರೀಕು ಮಧ್ಯರಾತ್ರಿ ಠಾಣೆ ಬಂದು ಸಂಜಯ್ ದೂರು ನೀಡಿದ್ದು ಅದರಲ್ಲಿ ಚುನಾವಣೆ ಮುಂಚಿತವಾಗಿ 1 ಕೋಟಿ ರೂಪಾಯಿ ಹಣವನ್ನು ಶ್ರೀಗಳಿಗೆ ನೀಡಿದ್ದಾಗಿ ಹೇಳಿದ್ದಾರೆ. ಮೂರು ಕಂತುಗಳಲ್ಲಿ ಹಣ ನೀಡಿದ್ದಾಗಿ ದೂರಿನಲ್ಲಿ ದಾಖಲಿಸಿದದಾರೆ. ಆದರೆ, ಸೂಕ್ತ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಕೇವಲ ಎನ್ ಸಿಆರ್ ದಾಖಲಿಸಿ ಕಳುಹಿಸಿರುವ ಮುಂಡರಗಿ ಪೊಲೀಸರು, ದಾಖಲೆ ತೆಗೆದುಕೊಂಡು ಬರುವಂತೆ ಸೂಚಿಸಿದ್ದಾರೆ.
ದೂರು ನೀಡಿದ ಬಳಿಕ ಸಂಜಯ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಸಂಜಯ್. ಒಟ್ಟಿನಲ್ಲಿ ಹಾಲಶ್ರೀ ಮಾಡಿಕೊಂಡಿರುವ ಭಾನಗಡಿ ಒಂದೆರಡಲ್ಲ!