ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷನ ಕೊಲೆಗೆ ಬಳಸಿದ ರಕ್ತಸಿಕ್ತ ಆಯುಧದ ಜತೆಗೆ ಪಾತಕಿಗಳು ಸೆಲ್ಫಿ ತೆಗೆದುಕೊಂಡಿದ್ದರು. ಹರ್ಷನನ್ನು ಕೊಚ್ಚುವಾಗ ʼಕಾಫಿರರನ್ನು ಕೊಲ್ಲೋಣʼ ಎಂದು ಘೋಷಣೆ ಕೂಗಿದ್ದರು ಎಂಬುದು ಬಯಲಾಗಿದೆ.
ಕೊಲೆ ಪ್ರಕರಣದ ಹಿಂದಿನ ಸ್ಫೋಟಕ ವಿವರಗಳನ್ನು ಎನ್‌ಐಎ ಬಿಚ್ಚಿಟ್ಟಿದ್ದು, ಎನ್‌ಐಎ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಈ ವಿವರಗಳು ದಾಖಲಾಗಿವೆ. 2022ರ ಫೆಬ್ರವರಿಯಲ್ಲಿ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ನಡೆದಿತ್ತು. ಹತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಂತರ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು. ಎನ್‌ಐಎನಿಂದ ಹತ್ತು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಹಲವು ಭಯಾನಕ ಸತ್ಯಗಳು ಬಹಿರಂಗಗೊಂಡಿವೆ.
ಕೊಲೆಯ ಸಂಪೂರ್ಣ ಮಾಹಿತಿಯನ್ನು ಆರೋಪಿ ಮಹಮ್ಮದ್ ಕಾಸೀಫ್ ಬಾಯ್ಬಿಟ್ಟಿದ್ದಾನೆ. ಹರ್ಷನ ಕೊಲೆ ಮಾಡುವಾಗ ʼಕಾಫೀರ್ ಭಜರಂಗ್ ದಳ್ ವಾಲೊಂಕೋ ಮಾರೋʼ ಎಂದು ಆರೋಪಿಗಳು ಕೂಗಾಡಿದ್ದರು. 23 ಮೂರು ಬಾರಿ ಹರ್ಷನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ನಂತರ ದೇಹದ, ಮಚ್ಚೇಟಿನ ಫೋಟೋ ಕೂಡ ತೆಗೆದುಕೊಂಡಿದ್ದರು. ಕೊಲೆ ಮಾಡಿದ ಕತ್ತಿಯ ಜೊತೆ ಸೆಲ್ಫಿ ತೆಗೆದುಕೊಂಡಿದ್ದರು. ಆರೋಪಿಗಳ ಮೊಬೈಲ್‌ಗಳಲ್ಲಿ ಮಚ್ಚೇಟಿನ ಚಿತ್ರಗಳು, ಸೆಲ್ಫಿಗಳು ಲಭ್ಯವಾಗಿವೆ.
ಕೊಲೆ ನಡೆದದ್ದು ಹೀಗೆ
ಪಾತಕಿಗಳು 2021ರ ನವೆಂಬರ್‌ನಿಂದ ಹರ್ಷನ ಕೊಲೆಗೆ ಪ್ಲಾನ್ ಮಾಡಿದ್ದರು. ಭದ್ರವಾತಿಗೆ ಹೋಗಿ ಕೊಲೆ ಮಾಡಲು ಲಾಂಗ್‌ಗಳನ್ನು ತಂದಿದ್ದರು. ಹರ್ಷನನ್ನ ಫಾಲೋ ಮಾಡಲು ಒಬ್ಬನನ್ನು ನೇಮಿಸಲಾಗಿತ್ತು. ಹರ್ಷ ಓಡಾಡುವ ಮಾಹಿತಿಯನ್ನ ಆತ ನೀಡುತ್ತಿದ್ದ. ಉಳಿದ ಆರೋಪಿಗಳು ಛತ್ತೀಸ್‌ಗಢ ರಿಜಿಸ್ಟ್ರೇಷನ್ ಕಾರಿನಲ್ಲಿ ಲಾಂಗ್ ಡ್ಯಾಗರ್‌ಗಳನ್ನು ಹಿಡಿದು ಕಾಯುತ್ತಿದ್ದರು.
ಸೀಗೆಹಟ್ಟಿ ಸರ್ಕಲ್ ಬಳಿ ಹರ್ಷ ಇರುವ ಮಾಹಿತಿ ದೊರೆತಾಗ ಸಾಬಿಕೇತ್‌ನಿಂದ ಎಲ್ಲರೂ ಸಿಗೇಹಟ್ಟಿ ಸರ್ಕಲ್ ಕಡೆ ಹೊರಟಿದ್ದರು. ಈ ವೇಳೆಗೆ ಹರ್ಷ ಮಟನ್ ಶಾಪ್ ಓಣಿಯಲ್ಲಿ ಹೋಗುತ್ತಿರುವ ಮಾಹಿತಿ ದೊರೆತಿತ್ತು. ಈ ವೇಳೆ ಸಪ್ತಗಿರಿ ಬಾರ್‌ಗೆ ಹರ್ಷ ಸ್ನೇಹಿತರೊಡನೆ ಹೋಗಬಹುದು ಎಂದು ಆರೋಪಿಗಳು ಅಂದಾಜಿಸಿ ಕೂಡಲೇ ಸಪ್ತಗಿರಿ ಬಾರ್ ಬಳಿ ಹೋಗಿದ್ದರು. ಹರ್ಷ ಅಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಡಿದ್ದರು. ಕೊನೆಗೆ ಎನ್‌ಟಿ ಪೇಟೆಯಲ್ಲಿ ಹರ್ಷ ಆರೋಪಿಗಳ ಕಣ್ಣಿಗೆ ಬಿದ್ದಿದ್ದ. ಕೂಡಲೇ ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಮನಸೋ ಇಚ್ಛೆ ಹರ್ಷನ ಮೇಲೆ ಅಟ್ಯಾಕ್ ನಡೆಸಿದ್ದರು. ನಂತರ ಹರ್ಷನ ದೇಹದ ಫೋಟೊಗಳನ್ನು ತೆಗೆದುಕೊಂಡು ಪರಾರಿಯಾಗಿದ್ದರು. ತುಂಗಾ ನದಿ ಬಳಿ ರಕ್ತ ಸಿಕ್ತ ಬಟ್ಟೆಗಳನ್ನು ಬಚ್ಚಿಟ್ಟು ಹೋಗಿದ್ದರು.
ಆರೋಪಿಗಳ ಫೋನ್‌ನಲ್ಲಿ ಆರ್‌ಎಸ್‌ಎಸ್ ಮುಖಂಡರ ಫೋಟೊಗಳು, ಒಸಮಾ ಬಿನ್ ಲಾಡೆನ್ ಚಿತ್ರಗಳೂ ಕಂಡುಬಂದಿವೆ. ಇತರ ಮುಖಂಡರನ್ನೂ ಕೊಲ್ಲುವ ಉದ್ದೇಶವಿದ್ದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಆರೋಪಿ ಕಾಸೀಫ್, ಎಸ್‌ಡಿಪಿಐ ಕೌನ್ಸಿಲರ್ ಜಿಲಾನಿ ಹಾಗೂ ಪಿಎಫ್‌ಐ ಅಧ್ಯಕ್ಷ ಶಾಹೀದ್ ಜೊತೆ ಸಂಪರ್ಕದಲ್ಲಿರುವುದು ಕೂಡ ಬಹಿರಂಗಗೊಂಡಿದೆ.