ಬೆಂಗಳೂರು: ಶಿವಮೊಗ್ಗದ ಹಿಂದು ಕಾರ್ಯಕರ್ತ ಹರ್ಷ ಕೊಲೆ (Harsha Murder Case) ಪ್ರಕರಣದಲ್ಲಿ ಸೆರೆಮನೆ ಸೇರಿದ್ದ ಆರೋಪಿಗಳು ಜೈಲಿನಲ್ಲೂ ಪುಂಡಾಟ ಮುಂದುವರಿಸಿದ್ದಾರೆ. ಹರ್ಷ ಕೊಲೆ ಕೇಸ್‌ನಲ್ಲಿ ಹತ್ತು ಮಂದಿ ಆರೋಪಿಗಳನ್ನು ಬೆಂಗಳೂರು, ಧಾರವಾಡ, ಬೆಳಗಾವಿ ಮತ್ತು ತುಮಕೂರು ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಇತ್ತೀಚೆಗಷ್ಟೇ ಈ ಹತ್ತು ಮಂದಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ (Bengaluru Central Jail) ಸ್ಥಳಾಂತರಿಸಲಾಗಿತ್ತು.
ಈಗ ಈ ಆರೋಪಿಗಳು ಒಂದೇ ಬ್ಯಾರಕ್‌ನಲ್ಲಿದ್ದು ಭದ್ರಾತಾ ಸಿಬ್ಬಂದಿಯನ್ನು ಬೆದರಿಸಿದ್ದಾರೆ. ಕಾರಾಗೃಹದ ನಿಯಮದಂತೆ ಹೊಸತಾಗಿ ಸೇರಿದ ಖೈದಿಗಳು ಹದಿನಾಲ್ಕು ದಿನ ಕ್ವಾರಂಟೈನ್ ಆಗಬೇಕು. ಆದರೆ ಆರು ಮಂದಿ ಆರೋಪಿಗಳು ಕ್ವಾರಂಟೈನ್ ಸೆಲ್‌ನಿಂದ ಸೆಂಟ್ರಲ್ ಸೆಲ್‌ಗೆ ಕಳುಹಿಸುಂತೆ ಆಗ್ರಹಿಸಿದ್ದಾರೆ. ʼನಮಗೇನು ಕೊರೊನಾ ಇದ್ಯಾ? ನಮ್ಮನ್ನು ಒಳಗೆ ಕಳುಹಿಸಿʼ ಎಂದು ಭದ್ರತಾ ಸಿಬ್ಬಂದಿಯ ಮೇಲೆ ಕೂಗಾಡಿದ್ದಾರೆ.
ಅನಾವಶ್ಯಕ ಕ್ಯಾತೆ ತೆಗದ ಆರೋಪಿಗಳು ಭದ್ರತಾ ಸಿಬ್ಬಂದಿಯನ್ನು ಹೆದರಿಸಲು ತಮ್ಮ ಕೈ ಕೊಯ್ದುಕೊಂಡಿದ್ದಾರೆ. ಹರ್ಷ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಹಮ್ಮದ್ ಖಾಸಿಫ್, ಅಬ್ದುಲ್ ರೋಷನ್ ಸೇರಿ ಆರು ಮಂದಿ ಆರೋಪಿಗಳು ಟೈಲ್ಸ್ ಒಡೆದು ಅದರ ಚೂರಿಂದ ಕೈ ಮತ್ತು ಮೈ ಕೊಯ್ದುಕೊಂಡಿದ್ದಾರೆ. ರಕ್ತ ಬರುವಂತೆ ಗಾಯ ಮಾಡಿಕೊಂಡು ಸೆಂಟ್ರಲ್ ಸೆಲ್‌ಗೆ ಕಳುಹಿಸುವಂತೆ ಜೈಲಾಧಿಕಾರಗಳನ್ನು ಬೆದರಿಸಿದ್ದಾರೆ.
ಈ ಕುರಿತು ಕ್ಷಣ ಕ್ರಮ ಕೈಗೊಂಡ ಭದ್ರತಾ ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸ್ ಸ್ಟೇಷನ್‌ಗೆ ಘಟನೆ ಬಗ್ಗೆ ಪ್ರಾಥಮಿಕ ರಿಪೋರ್ಟ್ ನೀಡಿದ್ದಾರೆ. ಹಾಗೂ ಜೈಲಿನ ಆಸ್ಪತ್ರೆ ಸಿಬ್ಬಂದಿಯಿಂದ ಆರು ಮಂದಿ ಆರೋಪಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಸದ್ಯ ಮೂವರು ಆರೋಪಿಗಳನ್ನು ಜೈಲಿನ ಒಳಗೆ ಬ್ಯಾರಕ್‌ಗೆ ಸ್ಥಳಾಂತರಿಸಿದ್ದಾರೆ ಹಾಗೂ ಉಳಿದವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಿದ್ದಾರೆ. ಘಟನೆ ಬಳಿಕ ಆರೋಪಿಗಳ ಭದ್ರತೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗಿದೆ. ಆರೋಪಿಗಳ ಕೈಗೆ ಯಾವುದೇ ಅಪಾಯಕಾರಿ ವಸ್ತು ಸಿಗದಂತೆ ಭದ್ರತಾ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮ ವಹಿಸಿದ್ದಾರೆ. ಅಲ್ಲದೆ, ಕಾರಾಗೃಹ ಇಲಾಖೆಗೂ ಆರೋಪಿಗಳ ನಡವಳಿಕೆ ಮತ್ತು ಘಟನೆ ಬಗ್ಗೆ ಮಾಹಿತಿ ರವಾನೆ ಮಾಡಿದ್ದಾರೆ.
ಹೆಚ್ಚಿನ ಓದಿಗಾಗಿ | ಜೈಲಿನಲ್ಲೇ ಕುಳಿತು ದರೋಡೆ ಸಂಚು ರೂಪಿಸಿದರು: 105 ಗ್ರಾಂ ಚಿನ್ನಾಭರಣದ ಜತೆಗೆ ಬಂಧನ