ಬೆಂಗಳೂರು: ಲೈಂಗಿಕ ದೌರ್ಜನ್ಯ ಎಸಗಿದ್ದಾರೆ (Hassan Pen Drive Case) ಎಂದು ಆರೋಪಿಸಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಅವರ ಮನೆ ಕೆಲಸದಾಕೆಯೇ ದೂರು ನೀಡಿದ್ದಾಳೆ. ಇದರಿಂದ ತಂದೆ-ಮಗನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ರೇವಣ್ಣ ಕುಟುಂಬ ತಮ್ಮ ಮೇಲೆ ಯಾವುದೇ ರೀತಿಯ ದೌರ್ಜನ್ಯ ಮಾಡಿಲ್ಲ ಎಂದು ದೂರುದಾರೆಯ ಸಂಬಂಧಿಕರು ಹೇಳಿರುವುದು ಕಂಡುಬಂದಿದೆ.
ಹಾಸನ ಅಶ್ಲೀಲ ವಿಡಿಯೊ ಪ್ರಕರಣದ ಬಗ್ಗೆ ದೂರುದಾರೆಯ ಅತ್ತೆ ಗೌರಮ್ಮ ಸುದ್ದಿಗೋಷ್ಠಿ ನಡೆಸಿದ್ದು, ದೂರುದಾರೆಗೆ ಭವಾನಿ ರೇವಣ್ಣನವರೇ ಸಹಾಯ ಮಾಡಿ ಕೆಲಸ ಕೊಡಿಸಿದ್ದರು. ರೇವಣ್ಣನವರ ಕುಟುಂಬ ನಮ್ಮ ಮೇಲೆ ಯಾವುದೇ ದೌರ್ಜನ್ಯ ಮಾಡಿಲ್ಲ. ದೂರುದಾರೆಯನ್ನು ಕರೆದುಕೊಂಡು ಹೋಗಿ ಇರಿಸಿಕೊಳ್ಳಿ ಎಂದು ನಾವೇ ಭವಾನಿ ಅಮ್ಮನವರಿಗೆ ಹೇಳಿದ್ದೆವು. ಅವರು ಯಾವ ದೌರ್ಜನ್ಯವೂ ಮಾಡಿಲ್ಲ ಎಂದು ತಿಳಿಸಿದ್ದಾರೆ.
ರೇವಣ್ಣ ಅವರ ಮನೆಯಲ್ಲಿ ಮಹಿಳೆಯನ್ನು ನಾಲ್ಕು ವರ್ಷ ಕೆಲಸಕ್ಕೆ ಇರಿಸಿಕೊಂಡಿದ್ದರು ಮತ್ತೆ ನಾನು ಅಲ್ಲಿ ಇರೋದಿಲ್ಲ ಅಂತ ಆಕೆ ಹೇಳಿದ್ದಳು. ಐದು ವರ್ಷದಿಂದ ಸಮಸ್ಯೆ ಇಲ್ಲದೇ, ಈಗ ಯಾಕೆ ದೂರು ಕೊಟ್ಟಳು. ಅವರು ಯಾವುದೇ ದೌರ್ಜನ್ಯವೂ ಮಾಡಿಲ್ಲ. ಯಾರದೋ ಒತ್ತಡದಿಂದ ಮಹಿಳೆ ದೂರು ಕೊಟ್ಟಿದ್ದಾಳೆ. ಭವಾನಿ ರೇವಣ್ಣ ನಮಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ದೂರುದಾರೆ ಸಾಲ ಮಾಡಿಕೊಂಡಿದ್ದಾಗ, ಭವಾನಿ ರೇವಣ್ಣನವರೇ ಅವರಿಗೆ ಸಹಾಯ ಮಾಡಿ ಕೆಲಸ ಕೊಡಿಸಿದ್ದರು. ಚುನಾವಣೆ ಸಂದರ್ಭದಲ್ಲಿ ರೇವಣ್ಣನವರ ಕುಟುಂಬಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿರುವುದರಲ್ಲಿ ಸತ್ಯವಿಲ್ಲ. ರೇವಣ್ಣನವರ ಮನೆಯಲ್ಲಿ ಯಾರೂ ಕೂಡ ಹಿಂಸೆ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Hassan Pen Drive Case: ಪ್ರಜ್ವಲ್ ಉಚ್ಚಾಟನೆಗೆ ದೇವೇಗೌಡರ ಹಿಂದೇಟು; ದೊಡ್ಡ ಗೌಡರ ಭಯಕ್ಕೆ ಏನು ಕಾರಣ?
ಯಾವುದೋ ಒತ್ತಡಕ್ಕೆ ಸಿಲುಕಿ ದೂರುದಾರೆ ಈ ರೀತಿ ಮಾತನಾಡುತ್ತಿದ್ದಾಳೆ. ಸರಿಯಾದ ಹೆಂಗಸಾಗಿದ್ದರೆ ಐದು ವರ್ಷದ ಹಿಂದೆಯೇ ಪ್ರಶ್ನೆ ಮಾಡಬೇಕಿತ್ತು. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ವಿಚಾರ ಪ್ರಸ್ತಾಪ ಮಾಡಿಲ್ಲ. ಈಗ ಯಾವುದೋ ದುರುದ್ದೇಶ ಮತ್ತು ಒತ್ತಡದಿಂದ ಈ ರೀತಿ ಮಾಡಿದ್ದಾರೆ. ಅವರ ದೂರಿನಲ್ಲಿ ಯಾವುದೇ ಸತ್ಯವಿಲ್ಲ, ಸರಿಯಾದ ರೀತಿ ತನಿಖೆ ಆಗಬೇಕು. ಪ್ರಕರಣದಿಂದ ನಮ್ಮ ಹಾಗೂ ರೇವಣ್ಣನವರ ಸಂಬಂಧ ಹಾಳಾಗುವ ಹಾಗೆ ಆಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪ್ರಜ್ವಲ್ ರೇವಣ್ಣ ಕೇಸ್; ಎಸ್‌ಐಟಿ ತನಿಖೆ ಹೇಗಿರುತ್ತೆ? ತಪ್ಪಿಸಿಕೊಳ್ಳೋಕೆ ಇರೋ ಚಾನ್ಸ್ ಏನು?
ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ರಚನೆಯಾಗಿರುವ ಎಸ್‌ಐಟಿಯಿಂದ ಹೇಗೆ ಸಾಗಲಿದೆ? ಪ್ರಜ್ವಲ್ ಮುಂದಿರುವ ಕಾನೂನು ಅವಕಾಶಗಳೇನು ಎಂಬ ಬಗ್ಗೆ ಈಗ ಬಹುವಾಗಿ ಚರ್ಚೆಯಾಗುತ್ತಿದೆ.
ಇದು ಹೈಪ್ರೊಫೈಲ್ ಕೇಸ್ ಆಗಿದ್ದಲ್ಲದೆ, ಮಹಿಳೆಯರ ಮಾನ, ಮರ್ಯಾದೆಯ ವಿಚಾರವಾಗಿದೆ. ಜತೆಗೆ ದೂರುದಾರರ ರಕ್ಷಣೆಗೂ ಸಂಬಂಧಪಟ್ಟಿದೆ. ಈ ಕಾರಣದಿಂದಾಗಿ ಗೌಪ್ಯತೆಯಿಂದ ಸಂತ್ರಸ್ತೆಯಿಂದ ಸಿಆರ್‌ಪಿಸಿ 164 ಹೇಳಿಕೆಯನ್ನು ದಾಖಲು ಮಾಡಲಾಗುತ್ತದೆ. ಮಹಿಳಾ ಅಧಿಕಾರಿಗಳ ಸಮ್ಮುಖದಲ್ಲಿ ವಿಡಿಯೊ ರೆಕಾರ್ಡ್ ಮಾಡಿಕೊಳ್ಳುವ ಮೂಲಕ ಸಂತ್ರಸ್ತೆಯ ದೂರನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಇನ್ನು ದೂರುದಾರೆ ತನ್ನ ಮೇಲೆ ನಡೆದ ಲೈಂಗಿ ದೌರ್ಜನ್ಯದ ಸ್ಥಳವನ್ನೂ ಮಹಜರು ಮಾಡಲಾಗುತ್ತದೆ. ಹೀಗಾಗಿ ಘಟನೆ ನಡೆದ ಸ್ಥಳಕ್ಕೆ ವಿಶೇಷ ತನಿಖಾ ದಳದ ಅಧಿಕಾರಿಗಳು ಬಂದು ಸಂತ್ರಸ್ತೆ ಹೇಳಿದ ರೀತಿ ಸ್ಥಳ ಇದೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತಾರೆ.
ಇನ್ನು ಆರೋಪಿತ ಸ್ಥಾನದಲ್ಲಿರುವ ವ್ಯಕ್ತಿಯ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗುತ್ತದೆ. ಅದರಲ್ಲಿ ಇರುವಂಥ ಡಾಟ ರೀಟ್ರೈವ್ ಮಾಡಲಾಗುತ್ತದೆ. ಜತೆಗೆ ಕಾಲ್ ಡಿಟೇಲ್ಸ್, ವಿಡಿಯೊ ಕಾಲ್ ಮಾಹಿತಿ ಸೇರಿದಂತೆ ಎಲ್ಲವನ್ನೂ ಕಲೆ ಹಾಕಲಾಗುತ್ತದೆ. ನಂತರ ಕಲೆ ಹಾಕಿದ ಟೆಕ್ನಿಕಲ್ ಎವಿಡೆನ್ಸ್‌ಗಳ ಸಹಿತ ಇನ್ನಿತರ ಸಾಕ್ಷ್ಯಗಳನ್ನು ಎಫ್‌ಎಸ್ಎಲ್‌ಗೆ ರವಾನೆ ಮಾಡಲಾಗುತ್ತದೆ. ಎಫ್.ಎಸ್.ಎಲ್ ವರದಿ ಆಧಾರದ ಮೇಲೆ ತನಿಖೆ ಹಾಗೂ ವಿಚಾರಣೆ ಆರಂಭವಾಗುತ್ತದೆ.
ಆದರೆ, ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಅವರನ್ನು ವಿದೇಶದಿಂದ ಕರೆ ತರುವ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗುತ್ತದೆ. ಮೊದಲು ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್ ನೀಡಿ ಕಾಲಾವಕಾಶವನ್ನು ನಿಗದಿ ಮಾಡಬಹುದು. ಅದಾದ ಬಳಿಕವೂ ಹಾಜರಾಗದೇ ಇದ್ದರೆ ಪ್ರಕರಣದ ತನಿಖೆಯ ಗತಿ ಕುಂಠಿತವಾಗುತ್ತದೆ. ಆದರೆ, ಎಸ್‌ಐಟಿ ಅಧಿಕಾರಿಗಳು ವಿದೇಶಕ್ಕೆ ಹೋಗಿ ಕರೆತರುವ ಸಾಧ್ಯತೆಯೂ ಇದೆ. ಈ ವಿಚಾರವಾಗಿ ಎಸ್‌ಐಟಿ ಯಾವ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಎಲ್ಲವೂ ನಿರ್ಣಯವಾಗುತ್ತದೆ.
ಇದನ್ನೂ ಓದಿ: Hassan Pen Drive Case: ಪ್ರಜ್ವಲ್ ಉಚ್ಚಾಟನೆಗೆ ದೇವೇಗೌಡರ ಹಿಂದೇಟು; ದೊಡ್ಡ ಗೌಡರ ಭಯಕ್ಕೆ ಏನು ಕಾರಣ?
ಪ್ರಜ್ವಲ್ ರೇವಣ್ಣಗೆ ಇರುವ ಕಾನೂನು ಅವಕಾಶಗಳು?
ಹಾಗಾದರೆ ಈ ಪ್ರಕರಣದಿಂದ ಪಾರಾಗಲು ಪ್ರಜ್ವಲ್ ರೇವಣ್ಣ ಅವರಿಗೆ ಕಾನೂನಿನಲ್ಲಿ ಯಾವ ಅವಕಾಶ ಇದೆ ಎಂಬುದನ್ನು ನೋಡುವುದಾದರೆ, ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಬಹುದು. ಅಥವಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬೇಕು. ಏಳು ವರ್ಷದ ಒಳಗೆ ಶಿಕ್ಷೆ ಇರುವಂತಹ ಪ್ರಕರಣಗಳಿಗೆ ನೋಟಿಸ್ ನೀಡಬಹುದು. ಬಂಧನ ಮಾಡಿದರೂ ಜಾಮೀನು ಸಿಗುವಂತಹ ಪ್ರಕರಣ ಇದಾಗಿದ್ದರಿಂದ ಸದ್ಯ ನಿರೀಕ್ಷಣಾ ಜಾಮೀನು ಹಾಗೂ ಎಫ್‌ಐಆರ್ ಅನ್ನೇ ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ.