Site icon Vistara News

ಎಲೆಕ್ಷನ್‌ ಹವಾ | ಬೇಲೂರು | ಐತಿಹಾಸಿಕ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಅಭ್ಯರ್ಥಿಗೇ ಮಣೆ

Hassan beluru

ಪ್ರತಾಪ್‌ ಹಿರೀಸಾವೆ, ಹಾಸನ
ಕನ್ನಡ ಪ್ರಥಮ ಶಿಲಾಶಾಸನ ದೊರೆತ ಕ್ಷೇತ್ರ ಇದೆಂಬುದು ಬೇಲೂರು ಹೆಗ್ಗಳಿಕೆ. ಚನ್ನಕೇಶವ ದೇಗುಲ, ಶಿಲ್ಪಕಲೆಗಳಿಂದ ವಿಶ್ವ ಪ್ರಸಿದ್ಧಿ ಕ್ಷೇತ್ರ. ಮಲೆನಾಡು-ಬಯಲು ಸೀಮೆ ಎರಡನ್ನೂ ಹೊಂದಿರುವುದು ವಿಶೇಷ. ಯಗಚಿ ಜಲಾಶಯ ಕ್ಷೇತ್ರಕ್ಕೊಂದು ಮುಕುಟ. ಪರಿಶಿಷ್ಟ ಸಮುದಾಯದ ಮತದಾರರು ಹೆಚ್ಚಿರುವ ಇಲ್ಲಿ 1952ರಲ್ಲಿ ಒಮ್ಮೆ ಸಾಮಾನ್ಯ ಕ್ಷೇತ್ರದಡಿ ಬೋರಣ್ಣಗೌಡರು ಶಾಸಕರಾಗಿದ್ದರು. ನಂತರ ಈ ಕ್ಷೇತ್ರ ಮೀಸಲು ಕ್ಷೇತ್ರವಾಗಿ ಬದಲಾಯಿತು. 2008 ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಿತು.

ರಾಜಕೀಯ ಇತಿಹಾಸ

ಸ್ವಾತಂತ್ರ್ಯ ನಂತರದಲ್ಲಿ ಸಕಲೇಶಪುರ- ಬೇಲೂರು-ಆಲೂರು ಪ್ರದೇಶಗಳನ್ನೊಳಗೊಂಡಂತೆ ವಿಧಾನಸಭಾ ಕ್ಷೇತ್ರವಾಗಿ, ಇಬ್ಬರು ಶಾಸಕರನ್ನು ಪಡೆದಿದ್ದ ಹೆಗ್ಗಳಿಕೆ ಹೊಂದಿದೆ. ಬದಲಾದ ಬೆಳವಣಿಗೆಯಲ್ಲಿ ಏಕ ಸದಸ್ಯತ್ವದ ಶಾಸನ ಸಭಾ ಕ್ಷೇತ್ರವಾಯಿತು. ಅಂತೆಯೇ ಎಸ್‌.ಎಚ್‌. ಪುಟ್ಟರಂಗನಾಥ್‌ ಅವರು ಕಾಂಗ್ರೆಸ್‌, ಸ್ವತಂತ್ರ ಪಕ್ಷ , ಭಾರತೀಯ ಜನತಾಪಕ್ಷ ಈ ಮೂರು ಪಕ್ಷಗಳಿಂದ ಆಯ್ಕೆ ಆಗಿರುವುದು ಕ್ಷೇತ್ರದ ವಿಶೇಷವೆ. ಅದೇ ರೀತಿ ಸ್ವತಂತ್ರ ಪಕ್ಷ ಹೊರತುಪಡಿಸಿ 8 ಬಾರಿ ಕಾಂಗ್ರೆಸ್‌, 6 ಬಾರಿ ಜೆಡಿಎಸ್‌, 1 ಬಾರಿ ಬಿಜೆಪಿ ಪಕ್ಷ ಕ್ಷೇತ್ರದಲ್ಲಿ ಗೆದ್ದಿದೆ. 4 ಬಾರಿ ಶಾಸಕರಾದ ಬಿ.ಎಚ್‌.ಲಕ್ಷ್ಮಣಯ್ಯ, 3 ಬಾರಿ ಶಾಸಕರಾದ ಎಸ್‌.ಎಚ್‌. ಪುಟ್ಟರಂಗನಾಥ್‌ ಹಾಗೂ ಎಚ್‌.ಕೆ.ಕುಮಾರಸ್ವಾಮಿ ಹ್ಯಾಟ್ರಿಕ್‌ ಪಟ್ಟಿಯಲ್ಲಿದ್ದಾರೆ.

ಇದುವರೆಗೆ 15 ವಿಧಾನಸಭಾ ಚುನಾವಣೆ, 8 ಶಾಸಕರನ್ನು ಕಂಡಿರುವ ಬೇಲೂರು ವಿಧಾನಸಭಾ ಕ್ಷೇತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದ 1952ರ ಆರಂಭದಲ್ಲಿ ಬೇಲೂರು-ಸಕಲೇಶಪುರ ತಾಲೂಕು ಹಾಗೂ ಹಾಸನ ತಾಲೂಕು ಸಾಲಗಾಮೆ ಹೋಬಳಿ ಸೇರಿಕೊಂಡಂತೆ ಮೀಸಲು ಮತ್ತು ಸಾಮಾನ್ಯ ಮೀಸಲಿನಡಿ ದ್ವಿಸದಸ್ಯ ಕ್ಷೇತ್ರವಾಗಿ ಮಾರ್ಪಟ್ಟು ಸಾಮಾನ್ಯ ವಿಧಾನಸಭಾ ಕ್ಷೇತ್ರದ ಪ್ರಥಮ ಶಾಸಕರಾಗಿ ಕಾಂಗ್ರೆಸ್ಸಿನ ಬೋರಣ್ಣಗೌಡರು, ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ಸಿನ ಸಿದ್ದಯ್ಯ ಶಾಸಕರಾದರು.

1957ರಲ್ಲಿ ಈ ಇಬ್ಬರೂ ಯಥಾವತ್ತು ಮೀಸಲಿನಡಿ ಮರು ಆಯ್ಕೆಯಾದರು. ಇದೇ ವೇಳೆ ಶಾಸಕ ಅವಧಿ ಇರುವಾಗಲೇ ಶಾಸಕ ಸಿದ್ದಯ್ಯ ಅವರು ಮೃತಪಟ್ಟರು. ಈ ಸ್ಥಾನಕ್ಕೆ ನಡೆದ ಮರು ಚುನಾವಣೆಯಲ್ಲಿ ಸಿದ್ದಯ್ಯ ಅವರ ಸಂಬಂಧಿ ಬಿ.ಎಚ್‌.ಲಕ್ಷ್ಮಣಯ್ಯ ಅವಿರೋಧ ಆಯ್ಕೆಯಾದರು. ನಂತರ 1962ರಲ್ಲಿ ಕ್ಷೇತ್ರ ವಿಭಜನೆಗೊಂಡು ಸಕಲೇಶಪುರ ಸಾಮಾನ್ಯ ಕ್ಷೇತ್ರವಾಗಿ ಬೇಲೂರು ಮೀಸಲು ಕ್ಷೇತ್ರವಾಗಿ ಪ್ರತ್ಯೇಕಗೊಂಡಿತು. ಮತ್ತೊಮ್ಮೆ ಮೀಸಲು ಕ್ಷೇತ್ರದಿಂದ ಬಿ.ಎಚ್‌.ಲಕ್ಷ್ಮಣಯ್ಯ ಕಾಂಗ್ರೆಸ್‌ ಪಕ್ಷದಿಂದ ಪುನರಾಯ್ಕೆಗೊಂಡರು.

1968ರಲ್ಲಿ ಸ್ವತಂತ್ರ ಪಕ್ಷ ದಿಂದ ಎಸ್‌.ಎಚ್‌.ಪುಟ್ಟರಂಗನಾಥ್‌ ಜಯಗಳಿಸಿದರು. ಇದೇ ಪುಟ್ಟರಂಗನಾಥ್‌ 1972ರಲ್ಲಿ ಆಡಳಿತ ಕಾಂಗ್ರೆಸ್ಸಿನಿಂದ (ಇಂದಿರಾ ಕಾಂಗ್ರೆಸ್‌) ಜಯ ಗಳಿಸಿದರು. ಇದಾದ ನಂತರ 1978ರಲ್ಲಿ ಬಿ.ಎಚ್‌.ಲಕ್ಷ್ಮಣಯ್ಯ ಜನತಾ ಪಕ್ಷ ದಿಂದ ಶಾಸಕರಾದರು. ನಂತರ 1983ರಲ್ಲಿ ಜನತಾ ಪಕ್ಷದಿಂದ ಡಿ. ಮಲ್ಲೇಶ್‌, 1985ರಲ್ಲಿ ಜನತಾದಳದಿಂದ ಎಚ್‌.ಕೆ.ಕುಮಾರಸ್ವಾಮಿ ಜಯ ಗಳಿಸಿದರು. 1989ರಲ್ಲಿ ಜನತಾದಳ ಇಬ್ಭಾಗವಾದಾಗ ಬಿ.ಎಚ್‌.ಲಕ್ಷ್ಮಣಯ್ಯ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಜಯಶಾಲಿಯಾದರು.

ಜನತಾದಳ ಒಗ್ಗೂಡಿದ ನಂತರ 1994ರಲ್ಲಿ ಎಚ್‌.ಕೆ.ಕುಮಾರಸ್ವಾಮಿ, 1999ರಲ್ಲಿ ಬಿಜೆಪಿಯಿಂದ ಎಸ್‌.ಎಚ್‌.ಪುಟ್ಟರಂಗನಾಥ್‌ ಶಾಸಕರಾದರು. 2004ರಲ್ಲಿ ಎಚ್‌.ಕೆ.ಕುಮಾರಸ್ವಾಮಿ ಮೀಸಲು ಕ್ಷೇತ್ರದಡಿ ಜನತಾದಳದಿಂದ ಶಾಸಕರಾದರು. 2008ರಲ್ಲಿ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಿತು. ವೈ.ಎನ್‌.ರುದ್ರೇಶಗೌಡರು ಬದಲಾದ ಸಾಮಾನ್ಯ ಕ್ಷೇತ್ರದಡಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಶಾಸಕರಾದರು. ಮತ್ತೆ 2013ರಲ್ಲೂ ಕಾಂಗ್ರೆಸ್‌ ಪಕ್ಷದಿಂದಲೇ ಸ್ಪರ್ಧಿಸಿ ವಿಜಯಿಯಾಗಿದ್ದರು.

ಜನತಾಪಕ್ಷದಿಂದ 1983ರಲ್ಲಿ ಶಾಸಕರಾಗಿದ್ದ ಡಿ.ಮಲ್ಲೇಶ್‌ ಅವರ ನೇರ ಹಾಗೂ ಕೋಪದ ಮಾತುಗಳು ಅವರನ್ನು ಜನತಾಪಕ್ಷದಿಂದ ದೂರ ಸರಿಯುವಂತೆ ಮಾಡಿತು ಎಂದೇ ಹೇಳಲಾಗುತ್ತದೆ. ಪರಿಣಾಮ ಹೊಳೆನರಸೀಪುರದಲ್ಲಿ ವಕೀಲ ವೃತ್ತಿಯಲ್ಲಿದ್ದ ಎಚ್‌.ಕೆ.ಕುಮಾರಸ್ವಾಮಿ ಅವರು ಬೇಲೂರಿಗೆ 1994ರಲ್ಲಿ ಕಾಲಿಟ್ಟಿದ್ದು ಮತ್ತೆ ಹೊಳೆನರಸೀಪುರದತ್ತ ತಿರುಗಿ ನೋಡದಂತೆ ಮತದಾರರು ವರ ಕರುಣಿಸಿದ್ದರು.

ಪರಿಶಿಷ್ಟರ ನಂತರ ಎರಡನೇ ಸ್ಥಾನದಲ್ಲಿರುವ ಲಿಂಗಾಯತರು ಕಳೆದ ಒಂದು ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಒಕ್ಕಲಿಗರು ಮೂರನೇ ಸ್ಥಾನದಲ್ಲಿದ್ದರೂ ಇತರ ವರ್ಗದ ಮತಗಳಿಕೆಯಲ್ಲಿ ಮುಂದಿರುವುದರಿಂದ ಗೆಲುವಿಗೆ ಅಡ್ಡಿಯಾಗಿಲ್ಲ.

ಯಾರದೊ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು 1999ರಲ್ಲಿ ಎಸ್‌.ಎಚ್‌.ಪುಟ್ಟರಂಗನಾಥ್‌ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಪಕ್ಷ ಬೇಧ ಮರೆತು ಗೆಲ್ಲಿಸಿದರು. ಜನತಾದಳದಲ್ಲಿ ಸಾಕಷ್ಟು ಹುದ್ದೆಗಳ ಅನುಭವಿಸಿದ್ದ ಹಾಲಿ ಶಾಸಕ ವೈ.ಎನ್‌.ರುದ್ರೇಶಗೌಡ ಅವರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿ ಎರಡು ಅವಧಿಗೆ ಶಾಸಕರಾಗಿದ್ದರು. 2018 ರಲ್ಲಿ ಕೆ.ಎಸ್. ಲಿಂಗೇಶ್ ಜೆಡಿಎಸ್‌ನಿಂದ ಮೊದಲ ಬಾರಿಗೆ ಶಾಸಕರಾದರು.

2023ರ ಪೈಪೋಟಿ

ಲಿಂಗಾಯುತ ಸಮುದಾಯದವರ ಸಂಖ್ಯೆ ಹೆಚ್ಚಾಗಿರುವ ಕ್ಷೇತ್ರದಲ್ಲಿ ಮೂರೂ ಪಕ್ಷದಿಂದ ಲಿಂಗಾಯುತ ಅಭ್ಯರ್ಥಿಗೇ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.‌ ಹಾಲಿ ಜೆಡಿಎಸ್‌ನ ಕೆ.ಎಸ್.‌ಲಿಂಗೇಶ್ ಕ್ಷೇತ್ರದ ಶಾಸಕರಾಗಿದ್ದು, ಮುಂದಿನ ಬಾರಿಯೂ ಅವರೇ ಜೆಡಿಎಸ್‌ನಿಂದ ಸ್ಪರ್ಧಿಸುವುದು ಖಾತ್ರಿಯಾಗಿದೆ. ಇತ್ತ ಬೆಜೆಪಿಯ ಜಿಲ್ಲಾಧ್ಯಕ್ಷರಾಗಿರುವ ಹುಲ್ಲಹಳ್ಳಿ ಸುರೇಶ್ ಕೂಡಾ ಈ‌ ಬಾರಿಯ ಟಿಕೆಟ್‌ಗೆ ಓಡಾಟ ನಡೆಸುತ್ತಾ ಇದ್ದಾರೆ. ಕಳೆದ ಬಾರಿ ಸುರೇಶ್‌ ಸ್ಪರ್ಧಿಸಿದರಾದರೂ 19,750 ಮತಗಳಿಂದ ಪರಾಭವಗೊಂಡಿದ್ದರು.

ಕಳೆದ ನಾಲ್ಕು ಚುನಾವಣೆಯಲ್ಲಿ ಇದು ಅತಿ ಹೆಚ್ಚಿನ ಸೋಲಿನ ಅಂತರವಾಗಿದೆ. ಹಾಸನ ಜಿಲ್ಲೆಯ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಸರುವಾಸಿಯಾಗಿದ್ದ , ವೀರಶೈವ ಲಿಂಗಾಯತ ಸಮುದಾಯದ ಕೆಂಚಾಂಬ ಕುಟುಂಬದ ಸಂತೋಷ್‌ ಕೆಂಚಾಂಬ ಕ್ಷೇತ್ರದಲ್ಲಿ ಸಕ್ರಿಯವಾಗಿ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ಟಿಕೆಟ್‌ ಬಯಸಿದ್ದಾರೆ. ಕೊರಟಗೆರೆ ಪ್ರಕಾಶ್, ಸಿದ್ದೇಶ್‌ ನಾಗೇಂದ್ರ, ಸಂತೋಷ್ ಕೆಂಚಾಂಬ, ಸುರಭಿ ರಘು ಅವರೂ ಬಿಜೆಪಿ ಟಿಕೆಟ್‌ಗಾಗಿ ಫೈಟ್ ಮಾಡ್ತಿದ್ದಾರೆ.

ಈ ಹಿಂದೆ ಇದ್ದ ಗಂಡಸಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ, ಗಂಡಸಿ ಶಿವರಾಮ್‌ ಎಂದೇ ಹೆಸರು ಪಡೆದ ಬಿ.ಶಿವರಾಮ್ ಕಾಂಗ್ರೆಸ್‌ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಸಚಿವರೂ ಆಗಿದ್ದ ಶಿವರಾಮ್‌, ಕ್ಷೇತ್ರ ಪುನರ್‌ವಿಂಗಡಣೆ ವೇಳೆ ಕ್ಷೇತ್ರ ಇಲ್ಲವಾದ್ಧರಿಂದ ರಾಜಕೀಯ ನೆಲೆಯನ್ನು ಕಳೆದುಕೊಂಡಿದ್ದರು. ರಾಜಶೇಖರ್ ಕೂಡಾ ಕಾಂಗ್ರೆಸ್‌ ಟಿಕೆಟ್‌ಗಾಗಿ ನಾಯಕರ ಮನೆಬಾಗಿಲು ಬಡಿಯುತ್ತಾ ಇದ್ದಾರೆ. ಸದ್ಯಕ್ಕೆ ಕ್ಷೇತ್ರದಲ್ಲಿ ಗೆಲುವು ಇವರಿಗೇ ಎಂದು ಹೇಳುವುದು ಕಷ್ಟವಾದರೂ, ಬೇರೆ ಅಭ್ಯರ್ಥಿಗಳಿಗೆ ಹೋಲಿಸಿದರೆ ಹಾಲಿ ಶಾಸಕರು ಪರವಾಗಿಲ್ಲ ಅನ್ನೋ ಮಾತುಗಳೂ ಕೂಡಾ ಇದೆ..

2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಕೆ.ಎಸ್.‌ಲಿಂಗೇಶ್ (ಜೆಡಿಎಸ್‌)
2. ಬಿ.ಶಿವರಾಮು, ರಾಜಶೇಖರ್, ಕೃಷ್ಣೇಗೌಡ(ಕಾಂಗ್ರೆಸ್‌)
3. ಹುಲ್ಲಹಳ್ಳಿ ಸುರೇಶ್, ಕೊರಟಗೆರೆ ಪ್ರಕಾಶ್, ಸಿದ್ದೇಶ್‌ ನಾಗೇಂದ್ರ, ಸಂತೋಷ್ ಕೆಂಚಾಂಬ, ಸುರಭಿ ರಘು (ಬಿಜೆಪಿ)

ಬೇಲೂರು
ಬೇಲೂರು
ಬೇಲೂರು

ಇದನ್ನೂ ಓದಿ | ಎಲೆಕ್ಷನ್‌ ಹವಾ | ಆಲೂರು – ಸಕಲೇಶಪುರ | ಹ್ಯಾಟ್ರಿಕ್‌ ಕ್ಷೇತ್ರವಾದರೂ ಪೈಪೋಟಿಗೇನೂ ಕಡಿಮೆ ಇಲ್ಲ

Exit mobile version