Site icon Vistara News

ಎಲೆಕ್ಷನ್‌ ಹವಾ | ಶ್ರವಣಬೆಳಗೊಳ | ಜೆಡಿಎಸ್‌ ನಿಷ್ಠೆ ಬಿಡದ ಮತದಾರರು, ಮನವೊಲಿಸುವುದೇ ಕಾಂಗ್ರೆಸ್‌?

Hassan Shravanabelagola

ಪ್ರತಾಪ್‌ ಹಿರೀಸಾವೆ, ಹಾಸನ
ಹಾಸನ ಜಿಲ್ಲೆಯಲ್ಲಿ ಒಕ್ಕಲಿಗರು ಪ್ರಾಬಲ್ಯ ಹೊಂದಿರುವ ಮತಕ್ಷೇತ್ರ ಶ್ರವಣಬೆಳಗೊಳ‌‌ ವಿಧಾನಸಭಾ ಕ್ಷೇತ್ರ. ಚನ್ನರಾಯಪಟ್ಟಣದ ಬಹುಭಾಗ ಈ ಕ್ಷೇತ್ರದಲ್ಲಿದೆಯಾದರೂ ವಿಶ್ವವಿಖ್ಯಾತ ಗೊಮ್ಮಟೇಶ್ವರನ ಕ್ಷೇತ್ರದ ಹೆಸರನ್ನು ವಿಧಾನಸಭಾ ಕ್ಷೇತ್ರಕ್ಕೆ ಇಡಲಾಗಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಕಲ್ಪವೃಕ್ಷ , ಕಬ್ಬು ಮೂಲ ಆರ್ಥಿಕ ಬೆಳೆಯಾಗಿದ್ದ ದಿನಗಳು ದೂರವಾಗಿ ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆ ಹಾಗೂ ಸಹಕಾರಿ ವ್ಯವಸ್ಥೆಯೇ ಕುಟುಂಬದ ಆರ್ಥಿಕ ಕೇಂದ್ರವಾಗಿ ಮಾರ್ಪಾಡುಗೊಳ್ಳುತ್ತಿದೆ. ಕೃಷಿ ಚಟುವಟಿಕೆಗಳತ್ತ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳದ ಯುವಶಕ್ತಿಗೆ ನಿರೀಕ್ಷಿತ ಕೆಲಸ ದೊರೆಯದಿರುವುದು ಮತ್ತೊಂದೆಡೆ ಸಮಸ್ಯೆಯಾಗಿ ಕಾಡುತ್ತಿದೆ.

ಪ್ರಕೃತಿಯ ಸಂರಕ್ಷಣೆಯಲ್ಲಿ ಸೋತ ಮಾನವಶಕ್ತಿ ಅದರ ಪರಿಣಾಮಗಳನ್ನು ದಿನಗಳು ಉರುಳಿದಂತೆ ಎದುರಿಸುತ್ತಿದ್ದು, ಮುಂದಿನ ಪೀಳಿಗೆಗೆ ದೊಡ್ಡ ಪಾಠವಾಗಿ ಪರಿಣಮಿಸಿದೆ. ಇನ್ನಾದರೂ ಈ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಸಾಗಬೇಕೆಂಬ ಸಂದೇಶ ಸಾರುತ್ತಿದೆ. ಈ ಕ್ಷೇತ್ರದಲ್ಲಿ ಚುನಾವಣೆಗಳು ಬಂತೆಂದರೆ ಬಿರುಸಿನ ಚಟುವಟಿಕೆಗಳು ಎಲ್ಲಕಡೆ ಗರಿಗೆದರಿಕೊಳ್ಳುತ್ತವೆ. ತಾಲೂಕಿನಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಾಗಿರುವುದರಿಂದ ಆ ಸಮುದಾಯದ ಅಭ್ಯರ್ಥಿಗಳೇ ಇದುವರೆವಿಗೂ ಆರಿಸಿ ಬಂದಿರುವುದು ಇತಿಹಾಸ. ಇದೇ ಮೊದಲ ಬಾರಿಗೆ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಾಗಿರುವುದರಿಂದ ಮುಂಬರುವ ದಿನಗಳಲ್ಲಿ ಕ್ಷೇತ್ರವನ್ನು ಮಹಿಳಾ ಮೀಸಲಾಗಿ ಮಾಡಬೇಕೆಂಬ ಸಂದೇಶ ಸಾರುವಂತಿದೆ.

ಅವಕಾಶಗಳನ್ನು ಬಳಸಿಕೊಂಡ ಬಾಲಕೃಷ್ಣ

ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯ ಮತಗಳು ಈ ಬಾರಿ ಧೃವೀಕರಣವಾಗುತ್ತಿದ್ದು, ಇದರ ಪ್ರಯೋಜನ ಯಾರಿಗೆ ದೊರೆಯಲಿದೆ ಎಂಬುದು ಫಲಿತಾಂಶವನ್ನು ನಿರ್ಧರಿಸಲಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದವರು ಎಂಬ ನಾಮಬಲದೊಂದಿಗೆ ತಮ್ಮ ವರ್ಚಸ್ಸನ್ನು ದಿನೇದಿನೆ ಹೆಚ್ಚಿಸಿಕೊಳ್ಳುತ್ತಿರುವ ಹಾಲಿ ಶಾಸಕ ಸಿ.ಎನ್‌.ಬಾಲಕೃಷ್ಣ ಇದುವರೆಗೆ ದೊರೆತ ಎಲ್ಲ ಅವಕಾಶಗಳನ್ನು ಸಕ್ರಿಯವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಮನೆಮಾತಾಗಿದ್ದಾರೆ. ತಾಲೂಕು ಪಂಚಾಯಿತಿ ಸದಸ್ಯರಾಗಿ, ಜಿಲ್ಲಾ ಪಂಚಾಯಿತಿ ಸದಸ್ಯ, ಅಧ್ಯಕ್ಷ , ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ , ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ, ಸದ್ಯ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಬಲವಾಗಿದೆ. ಆದರೆ ಜೆಡಿಎಸ್‌ ನಂತರ ಎರಡನೇ ಸ್ಥಾನಕ್ಕೆ ತೃಪ್ತಿ ಪಡುವಷ್ಟಕ್ಕೇ ಈ ಶಕ್ತಿ ಸೀಮಿತವಾಗಿದೆ. 2004 ಹಾಗೂ 2008ರಲ್ಲಿ ಜೆಡಿಎಸ್‌ನಿಂದ ಜಯಿಸಿದ್ದ ಸಿ.ಎಸ್‌. ಪುಟ್ಟೇಗೌಡರು 2013ರ ವೇಳೆಗೆ ಪಕ್ಷ ಬದಲಿಸಿದರು. ಅದಾಗಲೇ ಕ್ಷೇತ್ರದಲ್ಲಿ ಬಾಲಕೃಷ್ಣ ಸಕ್ರಿಯವಾಗಿದ್ದರು. 2013ರಲ್ಲಿ ಅವರಿಗೇ ಜೆಡಿಎಸ್‌ ಟಿಕೆಟ್‌ ಎಂದು ದೇವೇಗೌಡರ ಕುಟುಂಬ ನಿರ್ಧಾರ ಮಾಡಿತ್ತು. ಹೀಗಾಗಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದರು. ಎರಡೂ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಟಿಕೆಟ್‌ ಪಡೆಯಲು ಸಫಲರಾದರೂ ಸೋಲಿನ ಅಂತರ ಹೆಚ್ಚಾಗುತ್ತಲೇ ಹೋಗಿದೆ. 2008ರಲ್ಲಿ 24ಸಾವಿರ ಮತಗಳಿಂದ ಸೋತ್ತಿದ್ದ ಪುಟ್ಟೇಗೌಡರು 2013ರಲ್ಲಿ 53 ಸಾವಿರ ಮತಗಳಿಂದ ಸೋಲು ಎಂಎಲ್‌ಸಿ ಎಂ.ಎ. ಗೋಪಾಲಸ್ವಾಮಿಯವರೇ ಕಾರಣ ಎಂದು ಆರೋಪಿಸಲಾಗಿತ್ತು.

ಕ್ಷೇತ್ರದಲ್ಲಿ ಬಿಜೆಪಿ ತನ್ನ ನೆಲೆ ಕಂಡುಕೊಳ್ಳುವಲ್ಲಿ ಮೊದಲಿನಿಂದಲೂ ಹರಸಾಹಸ ಮಾಡುತ್ತಲೇ ಇದ್ದು, ಈ ಬಾರಿಯೂ ಅಂತಹ ಮತ್ತೊಂದು ಪ್ರಯತ್ನ ನಡೆಯುತ್ತಿದೆ. ಇದುವರೆಗಿನ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದವರಲ್ಲಿ ದಿ.ಎನ್‌.ಗಂಗಾಧರ್‌ ಅವರ ಗರಡಿಯಲ್ಲಿದ್ದ ಎಚ್‌.ಎಸ್‌.ಶ್ರೀಕಂಠಯ್ಯ 14 ಸಾವಿರ ಮತಗಳನ್ನು ಪಡೆದುಕೊಂಡಿದ್ದು ಬಿಟ್ಟರೆ ಇನ್ನಾರೂ ಆ ಸಂಖ್ಯೆಯನ್ನು ದಾಟಿಲ್ಲ. ಕಳೆದ ಬಾರಿಯಂತೂ ಬಿಜೆಪಿಯದ್ದು ಹೀನಾಯ ಪ್ರದರ್ಶನವಾಗಿದ್ದು 2 ಸಾವಿರದ ಗಡಿಯನ್ನೂ ದಾಟಲಿಲ್ಲವೆನ್ನುವುದು ತಾಲೂಕಿನಲ್ಲಿ ಪಕ್ಷ ಇಟ್ಟುಕೊಂಡಿರುವ ಹಿಡಿತವನ್ನು ಪ್ರದರ್ಶಿಸಿದೆ.

2023ರಲ್ಲಿ ಪೈಪೋಟಿ

ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ ಕ್ಷೇತ್ರ, ಮಾಜಿ ಸಚಿವ ಹೆಚ್.ಸಿ. ಶ್ರೀಕಂಠಯ್ಯನವರ ಮರಣದ ಬಳಿಕ ಜೆಡಿಎಸ್ ನ ಭದ್ರಕೋಟೆಯಾಗಿ ರೂಪುಗೊಂಡಿದೆ. ಕಳೆದ ಐದು ಭಾರಿಯಿಂದಲೂ ಕ್ಷೇತ್ರವನ್ನು ಜೆಡಿಎಸ್ ಗೆಲ್ಲುತ್ತಾ ಬಂದಿದೆ. ಈಗಲೂ ಕ್ಷೇತ್ರ ಜೆಡಿಎಸ್ ವಶದಲ್ಲಿದ್ದು, ಸಿ.ಎನ್. ಬಾಲಕೃಷ್ಣ ಶಾಸಕರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿಯೂ ಜೆಡಿಎಸ್ ನಿಂದ ಅವರೇ ಸ್ಪರ್ಧಿಸಲಿದ್ದು, ಟಿಕೆಟ್ ಅವರಿಗೇ ಸಿಗುವುದು ಬಹುತೇಕ ಖಚಿತವಾಗಿದೆ. ಹಾಗಾಗಿಯೇ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಾ ಇದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದಕ್ಕೆ ಭಾರೀ ಫೈಟ್ ನಡೆಯುತ್ತಾ ಇದೆ. ಮಾಜಿ‌ ಸಚಿವ ಹೆಚ್.ಸಿ. ಶ್ರೀಕಂಠಯ್ಯ ಅವರ ಮಗ ಹೆಚ್.ಎಸ್. ವಿಜಯ್ ಕುಮಾರ್ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದು, ಮಾಜಿ ಎಂಎಎಲ್‌ಸಿ ಎಂ.ಎ. ಗೋಪಾಲಸ್ವಾಮಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಹೆಚ್ಚಾಗಿದ್ದು, ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

ಬಿಜೆಪಿ ಇಲ್ಲಿ ಆಟಂಕ್ಕುಂಟು ಲೆಕ್ಕಕ್ಕಿಲ್ಲ. ಕ್ಯಾಂಡಿಡೇಟ್ ಒಬ್ಬರನ್ನು ಹಾಕಬೇಕು, ಎಂಬ ಲೆಕ್ಕಾಚಾರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ.

2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಸಿ.ಎನ್. ಬಾಲಕೃಷ್ಣ(ಜೆಡಿಎಸ್‌)
2. ಹೆಚ್.ಎಸ್. ವಿಜಯ್ ಕುಮಾರ್, ಎಂ.ಎ. ಗೋಪಾಲಸ್ವಾಮಿ, ದೀಪು(ಲಲಿತ್ ರಾಘವ್, ಜತ್ತೇನಹಳ್ಳಿ ರಾಮಚಂದ್ರ, ಮನೋಹರ್ (ಕಾಂಗ್ರೆಸ್‌)
3. ಅಣತಿ ಆನಂದ್ (ಬಿಜೆಪಿ )

ಇದನ್ನೂ ಓದಿ | ಎಲೆಕ್ಷನ್‌ ಹವಾ | ಕಲಘಟಗಿ‌ | ಸಂತೋಷ್ ಲಾಡ್ ಯಾವ ಪಾರ್ಟಿ ಟಿಕೆಟ್ ತರುತ್ತಾರೆ ಎನ್ನುವುದೇ ಚರ್ಚೆ

Exit mobile version