Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಶಾಮಿಯಾನ ಗುತ್ತಿಗೆ ನೀಡದ್ದಕ್ಕೆ ಪುರುಷೋತ್ತಮ ಬಿಳಿಮಲೆ ಸುಳ್ಳು ಆರೋಪ: ಡಾ. ಮಹೇಶ್‌ ಜೋಶಿ ಹೇಳಿಕೆ

Mahesh joshi rejects charges against him

ಹಾವೇರಿ: ತಾವು ಹೇಳಿದವರಿಗೆ ಶಾಮಿಯಾನ ಹಾಕಲು ಗುತ್ತಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ಪುರುಷೋತ್ತಮ ಬಿಳಿಮಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮಹೇಶ್‌ ಜೋಶಿ ಹೇಳಿದ್ದಾರೆ.

ಹಾವೇರಿ ಸಮ್ಮೇಳನದಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿಲ್ಲ ಎಂದು ಪುರುಷೋತ್ತಮ ಬಿಳಿಮಲೆ ಆರೋಪಿಸಿದ್ದರು. ಇದರ ವಿರುದ್ಧ ಪರ್ಯಾಯ ಸಮ್ಮೇಳನ ಮಾಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಸಹ ಮಾಡುತ್ತಿದ್ದರು. ಈ ಆರೋಪಗಳನ್ನು ಈಗಾಗಲೆ ಪತ್ರಿಕಾ ಹೇಳಿಕೆ ಮೂಲಕ ನಿರಾಕರಿಸಿದ್ದ ಮಹೇಶ್‌ ಜೋಶಿ, ಇದೀಗ ಸುದ್ದಿಗೋಷ್ಠಿ ನಡೆಸಿದ್ದಾರೆ.

ಸಾಮರಸ್ಯದ ಭಾವ ಕನ್ನಡದ ಜೀವ ಎಂದು ಸಮ್ಮೇಳನದ ಧ್ಯೇಯವನ್ನು ಇರಿಸಲಾಗಿದೆ. ಕನಕ, ಶರೀಪ, ಸರ್ವಜ್ಞನ ಹೆಸರನ್ನು ಪ್ರಧಾನ ವೇದಿಕೆಗೆ ಇಡಲಾಗಿದೆ. ಇದು ಧರ್ಮ, ಜಾತಿ, ಕುಲದ ಸಮ್ಮೇಳನ ಅಲ್ಲ. ಇದು ಕನ್ನಡ ಸಾಹಿತ್ಯ ಸಮ್ಮೇಳನ. ಕನ್ನಡವೇ ಇಲ್ಲಿ ಮಾನದಂಡವಾಗಿದೆ. ನಾನು ಆರೋಪಗಳಿಗೆ ಹೆದರುವ ವ್ಯಕ್ತಿಯಲ್ಲ. ನನ್ನ ಮೇಲೆ ನೇರವಾಗಿ ಆರೋಪ ಮಾಡಿದ್ದರು, ನೇರವಾಗಿ ದಾಖಲೆ ಸಮೇತ ಉತ್ತರಿಸಿದ್ದೇನೆ.

ಸಮ್ಮೇಖನದ ಬಗ್ಗೆ ಮೂರು ಜನರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. 11 ಜನ ಮುಸ್ಲಿಮರಿಗೆ ಹಾವೇರಿ ಸಮ್ಮೇಳನದಲ್ಲಿ ಅವಕಾಶ ನೀಡಲಾಗಿದೆ. ಕಲಾವಿದನನ್ನು ಕಲೆಯಿಂದ ನೋಡಬೇಕು. ಹೀಗೆ ನೋಡುವುದು ಅಕ್ಷಮ್ಯ ಅಪರಾದ. ದ್ವೇಷ ಸಾಹಿತ್ಯ, ದ್ವೇಷ ಸಮ್ಮೇಳನ ಎಂದು ಆರೋಪ ಮಾಡಲಾಗಿದೆ. ನನ್ನ ಜತೆ ಯಾವ ರಾಜಕಾರಣಿಗಳಿದ್ದಾರೆ? ಮೂರೂ ಪಕ್ಷದ ಅಧ್ಯಕ್ಷರು ಸಮಾರೋಪದಲ್ಲಿದ್ದಾರೆ.

ನಾನು ಗೋವಿಂದ ಭಟ್ಟರ ಮೊಮ್ಮಗ. ನನ್ನ ಮೇಲಿನ‌‌ ಆರೋಪ ಹೊಸದಲ್ಲ. ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಡಬೇಕು. ಹಾವೇರಿ ಸಮ್ಮೇಳನದ ಶಾಮಿಯಾನ ಹಾಕಲು ಮುಸ್ಲಿಂಮರಿಗೆ ಅವಕಾಶ ನೀಡುವಂತೆ ಪುರುಷೋತ್ತಮ‌ ಬಿಳಿಮಲೆ ನನಗೆ ಕೇಳಿದ್ದರು. ಶಾಮಿಯಾನ ಜವಾಬ್ದಾರಿ ಜಿಲ್ಲಾಡಳಿತದ್ದು ಎಂದು ಹೇಳಿದ್ದೆ. ಅವರಿಗೆ ನಾನು ಸ್ಪಂದಿಸದಿದ್ದಾಗ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ನನ್ನ ಮೇಲೆ ಬೇಕಾದರೆ ಮಾನನಷ್ಟ ಮೊಕದ್ದಮೆ ಹಾಕಿಕೊಳ್ಳಲಿ ಎಂದರು.

ಹಾವೇರಿ ಜಿಲ್ಲೆಗೆ ಆಗಮಿಸಿದ ಕನ್ನಡದ ರಥ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದಾದ್ಯಂತ ಸಂಚಾರ ಮಾಡಿದ್ದ ರಥ ಹಾವೇರಿ ಜಿಲ್ಲೆಗೆ ಗುರುವಾರ ಆಗಮಿಸಿದೆ. ಸವಣೂರು ಪಟ್ಟಣಕ್ಕೆ ಆಗಮಿಸಿದ ರಥಕ್ಕೆ ಕಸಾಪ, ತಾಲೂಕು ಆಡಳಿತ, ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು.

ಡೊಳ್ಳುಮೇಳ, ಜಾಂಜ್ ಮೇಳ, ಪಿ.ಯು ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ಕೋಲಾಟ, ಲಂಬಾಣಿ ನೃತ್ಯ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಭವ್ಯ ಮೆರವಣಿಗೆ ಮಾಡಲಾಯಿತು. ಬುಧವಾರ ಪೇಟೆ, ಸಿಂಪಿಗಲ್ಲಿ, ಮಾರ್ಗವಾಗಿ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ಮೆರವಣಿಗೆ ಮೂಲಕ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ರಥ ಸಂಚಾರ ಮಾಡಲಿದೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸಮ್ಮೇಳನವನ್ನು ಧರ್ಮದ ಆಧಾರದಲ್ಲಿ ನೋಡುವುದು ಕನ್ನಡದ ಪರಂಪರೆಗೆ ಅವಮಾನ: ಮಹೇಶ್‌ ಜೋಶಿ

Exit mobile version