ಮೈಸೂರು: ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿವಂಗತ ಆರ್. ಧ್ರುವನಾರಾಯಣ ಪುತ್ರ ದರ್ಶನ್‌ಗೋಸ್ಕರ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತ್ಯಾಗ (Karnataka Election 2023) ಮಾಡಿದ್ದಾರೆ. ಧ್ರುವನಾರಾಯಣ್ ಅವರ ನಿವಾಸಕ್ಕೆ ಡಾ. ಎಚ್.ಸಿ. ಮಹದೇವಪ್ಪ ಬುಧವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ನಿರ್ಧಾರವನ್ನು ಘೋಷಿಸಿದ್ದಾರೆ.
ಮೈಸೂರಿನ ವಿಜಯನಗರದಲ್ಲಿರುವ ಆರ್. ಧ್ರುವನಾರಾಯಣ್ ಅವರ ನಿವಾಸಕ್ಕೆ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಪುತ್ರ ಸುನೀಲ್ ಬೋಸ್ ಜತೆ ಭೇಟಿ ನೀಡಿದ್ದರು. ಈ ವೇಳೆ ಧ್ರುವನಾರಾಯಣ್ ಅವರ ಪುತ್ರ ದರ್ಶನ್‌ಗೆ ಸಾಂತ್ವನ ಹೇಳಿ ಆತ್ಮಸ್ತೈರ್ಯ ತುಂಬಿದ ಮಹದೇವಪ್ಪ, ನೀನು ಬೇರೆಯಲ್ಲ, ನನ್ನ ಮಗ ಬೇರೆಯಲ್ಲ. ನೀವಿಬ್ಬರೂ ನನಗೆ ಒಂದೇ. ನಿಮ್ಮ ಕುಟುಂಬಕ್ಕೆ ಅಗತ್ಯವಾದ ಎಲ್ಲ ರೀತಿಯ ನೆರವು ನೀಡುತ್ತೇನೆಂದು ಅಭಯ ನೀಡಿದರು.
ಇದನ್ನೂ ಓದಿ | V. Somanna: ವಿಜಯೇಂದ್ರ ವಯಸ್ಸೆಷ್ಟು? ನನ್ನ ವಯಸ್ಸೆಷ್ಟು?: ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಗರಂ ಆದ ಸಚಿವ ವಿ. ಸೋಮಣ್ಣ
ಇದೇ ವೇಳೆ ನಾನು ನಂಜನಗೂಡು ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ. ಧ್ರುವನಾರಾಯಣ್ ಅವರ ಪುತ್ರ ದರ್ಶನ್‌ಗೆ ನಾನು ಬೆಂಬಲ ನೀಡುತ್ತೇನೆ. ದರ್ಶನ್ ಅವರನ್ನು ಗೆಲ್ಲಿಸಲು ಮುಂದಾಗುತ್ತೇನೆ. ಧ್ರುವನಾರಾಯಣ್ ಹಠಾತ್ ನಿಧನರಾದಾಗಲೇ ನಾನು ಈ ನಿರ್ಧಾರ ಮಾಡಿದ್ದೆ. ಅದನ್ನು ಈಗ ನನ್ನ ಮಗ ಸುನೀಲ್ ಬೋಸ್ ಹಾಗೂ ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಸಮ್ಮುಖದಲ್ಲಿ ಬಹಿರಂಗಪಡಿಸಿದ್ದೇನೆ. ಈ ಸಂದರ್ಭದಲ್ಲಿ ನಾನು ನಂಜನಗೂಡು ಅಭ್ಯರ್ಥಿಯಾಗಲು ಬಯಸುವುದಿಲ್ಲ. ನಾನು ಸಾವಿನಲ್ಲಿ, ಸಮಾಧಿಯ ಮೇಲೆ ರಾಜಕೀಯ ಮಾಡುವುದಿಲ್ಲ ಎಂದು ಮಹದೇವಪ್ಪ ತಿಳಿಸಿದ್ದಾರೆ.