ರಾಮನಗರ: ಜೆಡಿಎಸ್ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ (Karnataka Election) ಅಧಿಕಾರಕ್ಕೆ ತರಲೇಬೇಕು ಎಂದು ಪಣ ತೊಟ್ಟಿರುವ ದಳಪತಿಗಳು ರಾಜ್ಯಾದ್ಯಂತ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ಮಗ ಎಚ್.ಡಿ.ಕುಮಾರಸ್ವಾಮಿ ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ಮತಯಾಚನೆ ಮಾಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡುಬಂದಿದೆ. ಇನ್ನು ಪುತ್ರ ಎಚ್.ಡಿ.ಕುಮಾರಸ್ವಾಮಿಯನ್ನು ಮತ್ತೊಮ್ಮೆ ಸಿಎಂ ಮಾಡಲು ಸಂಕಲ್ಪ ಮಾಡಿರುವ ಅವರು, 90ನೇ ವಯಸ್ಸಿನಲ್ಲೂ ಉತ್ಸಾಹದಿಂದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರಂತೆ ಚನ್ನಪಟ್ಟಣ, ಚಿಕ್ಕಮಗಳೂರು ಸೇರಿ ವಿವಿಧೆಡೆ ಪ್ರಚಾರ ನಡೆಸಿದ್ದಾರೆ.
ಹಿಂದುಸ್ತಾನದಲ್ಲಿ ರೈತರ ಸಾಲಮನ್ನಾ ಮಾಡಿದ ಏಕೈಕ ಸಿಎಂ ಕುಮಾರಸ್ವಾಮಿ
ರಾಮನಗರ: ಹಿಂದುಸ್ತಾನದಲ್ಲಿ ರೈತರ ಸಾಲಮನ್ನಾ ಮಾಡಿದ ಏಕೈಕ ಸಿಎಂ ಕುಮಾರಸ್ವಾಮಿ. ಬಿಸಿಲ ಬೇಗೆಯಲ್ಲಿ ಕೆಲಸ ಮಾಡೋ ರೈತರಿಗೆ 5 ಸಾವಿರ ಮಾಸಾಶನ ಕೊಡಲು ಎಚ್‌ಡಿಕೆ ನಿರ್ಧರಿಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಚನ್ನಪಟ್ಟಣದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ನಿಲ್ಲಲು ಎಚ್‌ಡಿಕೆಗೆ ಹೇಳಿದ್ದರು. ಆದರೆ ಅವರು ಅಲ್ಲಿ ನಿಲ್ಲಲಿಲ್ಲ. ಇದು ಅವರ ಕರ್ಮಭೂಮಿ, ಹಾಗಾಗಿ ಇಲ್ಲಿಯೇ ಸ್ಪರ್ಧೆ ಮಾಡಿದ್ದಾರೆ. ಇದೇ 10ನೇ ತಾರೀಖು ನೀವು ಕುಮಾರಣ್ಣನ ಮರೆಯಬಾರದು. ಯಾರು ಎಷ್ಟೇ ದುಡ್ಡು ಕೊಟ್ಟು ಅಪಪ್ರಚಾರ ಮಾಡಬಹುದು, ಯಾರೂ ತಲೆಕೆಡಿಸಿಕೊಳ್ಳಬೇಡಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ನೀವೆಲ್ಲ ಪಣತೊಡಿ ಎಂದು ಕರೆ ನೀಡಿದರು.
ಕಾಶ್ಮೀರಕ್ಕೆ 10 ವರ್ಷ ಯಾವ ಪ್ರಧಾನಿಯೂ ಹೋಗಿರಲಿಲ್ಲ, ಪ್ರಧಾನಿಯಾಗಿದ್ದಾಗ ಕಾಶ್ಮೀರಕ್ಕೆ ಹೋಗಿದ್ದೆ. ಹೋದರೆ ಹೊಡೆದು ಹಾಕುತ್ತಾರೆ ಎಂಬ ಭಯ ಇತ್ತು. ನಾನು ಸತ್ತರೆ ಹೊಳೆನರಸೀಪುರದಲ್ಲಿ ಮಣ್ಣು ಮಾಡುವಂತೆ ಹೇಳಿ ನಾನು ಹೋಗಿದ್ದೆ. ನಾಲ್ಕು ಬಾರಿ ಕಾಶ್ಮೀರಕ್ಕೆ ಹೋಗಿ ಅಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸಿದ್ದೆ. ಮುಸ್ಲಿಂ ಬಾಂಧವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪಕ್ಷವನ್ನು ಅಧಿಕಾರಕ್ಕೆ ತಂದು ಕಣ್ಣು ಮುಚ್ಚಬೇಕು
ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ನಾವು. ಬಿಜೆಪಿಯ ಬಣ್ಣದ ಮಾತಿಗೆ ಮರುಳಾಗಬೇಡಿ. ಕಾಂಗ್ರೆಸ್ ಕೂಡ ನಿಮಗೆ ಮೀಸಲಾತಿ ಕೊಟ್ಟಿಲ್ಲ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಕ್ಕೆ ಒತ್ತು ನೀಡಿದ್ದಾರೆ. ಆದರೆ ಕರ್ನಾಟಕದಲ್ಲಿ ಏನು ಆಗಿದೆಯೋ ಗೊತ್ತಿಲ್ಲ. ಕರ್ನಾಟಕದ ಜನತೆ ತೀರ್ಮಾನ ಮಾಡಬೇಕು. ಕುಮಾರಸ್ವಾಮಿ ಇಷ್ಟು ಕೆಲಸ ಮಾಡಿದರೂ ಕೂಡ ನಾನು ಬಂದು ವೋಟು ಕೇಳಬೇಕಾಗಿದೆ. 90 ವರ್ಷದ ವಯಸ್ಸಿನಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತಂದು ಕಣ್ಣು ಮುಚ್ಚಬೇಕು ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಭಾವುಕರಾಗಿ ಹೇಳಿದ್ದಾರೆ.
ಇದನ್ನೂ ಓದಿ | Karnataka Election 2023: ಈ ಜನಸಾಗರ ನೋಡಿದ್ರೆ ಬಿಜೆಪಿಯದ್ದೇ ಗೆಲುವು ಖಚಿತ; ಸಮೀಕ್ಷೆಗಳಿಗೆ ಪಿಎಂ ಮೋದಿ ಟಾಂಗ್
ಪ್ರಾದೇಶಿಕ ಪಕ್ಷ ಉಳಿಸಲು ಬಂದಿದ್ದೇನೆ
ನಾನು ನಿಖಿಲ್ ಹಾಗೂ ಕುಮಾರಸ್ವಾಮಿ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಈ ವಯಸ್ಸಿನಲ್ಲಿ ನಾನು ಬೆಳಗ್ಗೆ 6 ರಿಂದ 7 ಕಾರ್ಯಕ್ರಮ ಮುಗಿಸಿ ಬಂದಿದ್ದೇನೆ. ನಾನೇನು, ನನ್ನ ವಯಸ್ಸೇನು? ಬಿಜೆಪಿ, ಕಾಂಗ್ರೆಸ್ ಬಗ್ಗೆ ಗೊತ್ತಿದೆ. ಹೀಗಾಗಿ ನಾನು ಪ್ರಾದೇಶಿಕ ಪಕ್ಷ ಉಳಿಸಲು ಬಂದಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೇಳಿದರು.
ಚನ್ನಪಟ್ಟಣದಲ್ಲಿ ಜೆಡಿಎಸ್ ಬಹಿರಂಗ ಸಭೆಗೂ ಮುನ್ನ ಅವರು ಮಾತನಾಡಿದ್ದಾರೆ. ಮಂಡ್ಯದಲ್ಲಿ ಸುಮಲತಾ ಗೆಲ್ಲಿಸಿ ತಪ್ಪು ಮಾಡಿಬಿಟ್ಟೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ತಪ್ಪು ಮಾಡಿದರು ಅದು ನನಗೆ ಕೇಳಬಾರದು, ನನಗೆ ಸಂಬಂಧವಿಲ್ಲ ಎಂದರು. ಇನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ವಿಚಾರಕ್ಕೂ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಕಾಫಿನಾಡಲ್ಲಿ ದೇವೇಗೌಡರಿಂದ ಮತಬೇಟೆ
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ಮತಬೇಟೆ ನಡೆಸಿದರು. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಪರ ಮತಯಾಚನೆ ಮಾಡಿದರು. ಶೃಂಗೇರಿ ಪಟ್ಟಣದ ಗೌರಿಶಂಕರ ಸಮುದಾಯದ ಭವನದಲ್ಲಿ ಜೆಡಿಎಸ್ ಕಾರ್ಯಕತರ ಸಮಾವೇಶದಲ್ಲಿ ಭಾಗಿಯಾಗಿ ಪ್ರಚಾರ ನಡೆಸಿದರು.
ಇದನ್ನೂ ಓದಿ | Karnataka Election 2023: ಸ್ಟ್ರೆಚರ್ ಮೇಲೆಯೇ ಬಂದು ಪ್ರಚಾರ ಮಾಡಿದ ಬಾಬುರಾವ್ ಚಿಂಚನಸೂರ್; ಸೆರಗೊಡ್ಡಿ ಮತ ಬೇಡಿದ ಪತ್ನಿ!
ಏನು ಜೆಡಿಎಸ್ ಮುಗಿದೆ ಹೋಯಿತಾ? ಹಾ…: ನಾರಾಯಣ ಗೌಡ ವಿರುದ್ಧ ಕಿಡಿ
ಮಂಡ್ಯ: ಕೆ.ಆರ್.ಪೇಟೆಗೆ ನೀರು ತಂದು ಕೊಟ್ಟಿದ್ದು ಯಾರು? ಮೊನ್ನೆ ಒಬ್ಬರು ಮಾತನಾಡುತ್ತಾರೆ, ಜೆಡಿಎಸ್ ಮುಗಿದೆ ಹೋಯ್ತು ಅಂತ. ಏನು ಜೆಡಿಎಸ್ ಮುಗಿದೆ ಹೋಯಿತಾ? ಹಾ… ಎಂದು ಸಚಿವ ಕೆ.ಸಿ.ನಾರಾಯಣ ಗೌಡ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಿಡಿಕಾರಿದರು.
ಕೆ.ಆರ್.ಪೇಟೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೆ.ಆರ್.ಪೇಟೆಯಲ್ಲಿ ಒಬ್ಬ ಮಹಾನ್ ವ್ಯಕ್ತಿ ಒಂದು ಮಾತು ಹೇಳುತ್ತಾರೆ. ಜೆಡಿಎಸ್‌ನ ನಾನು ಮುಗಿಸಿ ಬಿಟ್ಟೆ ಎಂದು ಮಾತನಾಡುತ್ತಾರೆ. ಅವರ ಮಾತನ್ನು ಕೇಳಿದ್ರೆ ನನ್ನ ರಕ್ತ ಕುದಿಯುತ್ತೆ ಎಂದು ವಾಗ್ದಾಳಿ ನಡೆಸಿದರು.
ನನ್ನ ಮಂಡ್ಯ ಜಿಲ್ಲೆಯಲ್ಲಿ 7ಕ್ಕೆ 7 ಸ್ಥಾನ ಜೆಡಿಎಸ್ ಗೆಲ್ಲಲೇಬೇಕು. ಕುಮಾರಣ್ಣ ಸಿಎಂ ಆಗಲೇಬೇಕು ಎಂದ ಅವರು, 1982ರಲ್ಲಿ ಕೆ.ಆರ್. ಪೇಟೆಯ ಕೆರೆ ಹೊಡೆದು ಹೋಗಿತ್ತು. ಬೆಳೆಗಳು ಮಣ್ಣು ಪಾಲಾಗಿ ಹೋಯಿತು. ರಾತ್ರಿ 8 ಗಂಟೆಗೆ ದೆಹಲಿಯಿಂದ ಓಡೋಡಿ ಬಂದೆ. ಕೆ.ಆರ್. ಪೇಟೆಯಲ್ಲಿ ಒಂದು ಬ್ರಿಡ್ಜ್ ಕಟ್ಟಲು ನಾನೇ ಬೇಕಾಯಿತು ಎಂದು ಹೆಸರು ಪ್ರಸ್ತಾಪಿಸಿದೆ ಬಿ.ಎಸ್.ವೈ ಹಾಗೂ ಡಿಕೆಶಿ ವಿರುದ್ಧ ಆಕ್ರೋಶ ಹೊರಹಾಕಿದರು.
ದೇವೇಗೌಡರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ
ಮಂಡ್ಯ: ಮೈಸೂರಿನಲ್ಲಿ ನಡೆದ ಜೆಡಿಎಸ್‌ನ ಪಂಚರತ್ನ ಸಮಾವೇಶದ ನಂತರ ದೇವೇಗೌಡರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡು ಬಂದಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕೆ.ಆರ್. ಪೇಟೆಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಅವರು, ಅಂದಿನ ಸಭೆಗೂ ಮೊದಲು ದೇವೇಗೌಡರ ಆರೋಗ್ಯದ ದೃಷ್ಟಿಯಿಂದ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರು. ಆದರೆ ಅಂದಿನ ಸಭೆಯಲ್ಲಿ ಜನರನ್ನು ನೋಡಿದ ದೇವೇಗೌಡರು ಈಗ ಸ್ವಲ್ಪ ಸುಧಾರಿಸಿಕೊಂಡಿದ್ದಾರೆ. ಜನರ ಆಶೀರ್ವಾದದಿಂದಾಗಿ ಅವರು ಈಗ ಮೂರ್ನಾಲ್ಕು ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಜೆಡಿಎಸ್ ಸರ್ಕಾರ ಬರುವುದನ್ನು ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ತಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.