ಹುಣಸೂರು: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಹುಣಸೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಮತ್ತು ಅವರ ಪುತ್ರ ಹರೀಶ್ ಗೌಡ ಅವರನ್ನು ಹಾಡಿ ಹೊಗಳಿದ್ದಾರೆ. ಜತೆಯಾಗಿ ಕುಳಿತು ಕಷ್ಟ ಸುಖ ಹಂಚಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಗೌಡರ ಕುಟುಂಬಕ್ಕೆ ಆತ್ಮೀಯರಾಗಿದ್ದ, ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಜಿ.ಟಿ. ದೇವೇಗೌಡ ಅವರು ಈಗ ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರು ಪಕ್ಷದ ಯಾವುದೇ ಚಟುವಟಿಕೆಯಲ್ಲೂ ಹೆಚ್ಚು ಸಕ್ರಿಯರಾಗಿಲ್ಲ. ಅವರು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಯಾವುದೇ ಪಕ್ಷವನ್ನು ಯಾವ ಕ್ಷಣವಾದರೂ ಸೇರಬಹುದು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಹೊತ್ತಿನಲ್ಲಿ ಅವರನ್ನು ಮತ್ತೆ ಒಲಿಸಿಕೊಳ್ಳುವ, ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನವೋ ಎಂಬಂತೆ ಎಚ್.ಡಿ. ಕುಮಾರಸ್ವಾಮಿ ಅವರು ಇಬ್ಬರೂ ನಾಯಕರನ್ನು ಸಾರ್ವಜನಿಕ ವೇದಿಕೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹೊಗಳಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.
ಕುಮಾರಸ್ವಾಮಿ ಅವರು ಹೇಳಿದ್ದೇನು?
– ಜಿ.ಡಿ.ಹರೀಶ್ ಗೌಡರು ಸದಾ ಹುರುಪಿನಿಂದ ಕೆಲಸ ಮಾಡುವ ಯುವ ನಾಯಕ. ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವ ಅವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶ ಇದೆ.
– ಜಿ.ಟಿ ದೇವೇಗೌಡ್ರು ಪ್ರಥಮ ಬಾರಿಗೆ ಮೈಸೂರು ಜಿಲ್ಲೆಯಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮಾಡಿದ್ದಾರೆ. ನಿಜವೆಂದರೆ ಜಿ.ಟಿ ದೇವೇಗೌಡರು ಮೂರು ವರ್ಷಗಳಿಂದ ನನ್ನ ಜತೆ ಮಾತನಾಡಿರಲಿಲ್ಲ. ಮೈತ್ರಿ ಸರ್ಕಾರದ ನಂತರ ವೇದಿಕೆಯಲ್ಲಿ ನಾವು ಜತೆಯಾಗಿ ಕಾಣಸಿಕೊಂಡಿರಲಿಲ್ಲ. ಬಹುವರ್ಷದ ಬಳಿಕ ಪ್ರಥಮವಾಗಿ ನಾನು, ಜಿ.ಟಿ ದೇವೇಗೌಡರು ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದೇವೆ.
– ನನ್ನ ಮತ್ತು ಜಿ.ಟಿ. ದೇವೇಗೌಡರ ನಡುವೆ ಬಿರುಕಿದೆ ಎಂದೆಲ್ಲ ಹೇಳುತ್ತಿದ್ದರು. ಅದರೆ, ನಮ್ಮ ಸಂಬಂಧ ಚೆನ್ನಾಗಿಯೇ ಇದೆ. ಹುಣಸೂರು ಜಿ.ಟಿ. ದೇವೇಗೌಡರ ಕರ್ಮಭೂಮಿ. ಈ ಕಾರ್ಯಕ್ರಮದ ಮೂಲಕ ಅವರು ನನಗೆ ಸಲಹೆ ನೀಡಿದ್ದಾರೆ. ನಾನು ಅವರ ಸಲಹೆಯನ್ನು ಸ್ವೀಕರಿಸಿದ್ದೇನೆ. ಮುಂದಿನ ರಾಜಕಾರಣದ ಬಗ್ಗೆ ತಾಯಿ ಚಾಮುಂಡೇಶ್ವರಿಯೇ ಅವರ ಮೂಲಕ ಹೇಳಿ ಕಳುಹಿಸಿದ್ದಾಳೆ.
– ಮಾಜಿ ಶಾಸಕರಾಗಿರುವ ಚಿಕ್ಕಮಾದು ಅವರು ಪ್ರತಿ ಬಾರಿ ಹುಣಸೂರಿನಿಂದ ಸ್ಪರ್ಧೆ ಮಾಡಲು ಆಸೆ ಹೊಂದಿದ್ದರು. ನಿಜವೆಂದರೆ, ಎಚ್.ಡಿ ಕೋಟೆಯಲ್ಲಿ ಚಿಕ್ಕಮಾದು ಶಾಸಕರಾಗಲು ಜಿ.ಟಿ. ದೇವೇಗೌಡರೇ ಕಾರಣ. ಚಿಕ್ಕ ಮಾದು ಅವರಿಗೆ ರಾಜಕೀಯವಾಗಿ ಜಿ.ಟಿ. ದೇವೇಗೌಡರು ಹೊಸ ಶಕ್ತಿಯನ್ನು ನೀಡಿದ್ದರು.
– ದೊಡ್ಡ ದೇವೇಗೌಡರು (ಎಚ್.ಡಿ. ದೇವೇಗೌಡ) ಮತ್ತು ಜಿ.ಟಿ. ದೇವೇಗೌಡರು.. ಇಬ್ಬರೂ ಎಲ್ಲರನ್ನೂ ಒಂದೇ ರೀತಿ ನೋಡುವ ಗುಣವನ್ನು ಹೊಂದಿದ್ದಾರೆ.
– ವೈಯಕ್ತಿಕವಾಗಿ ನನಗೆ ಮತ್ತು ಎಚ್ ವಿಶ್ವನಾಥ್ ಅವರಿಗೆ ಯಾವುದೇ ವೈಮನಸ್ಸುಗಳಿಲ್ಲ. ವಿಶ್ವನಾಥ್ ಅವರಿಗೂ ಹುಣಸೂರಿನ ಜತೆ ಶಕ್ತಿಯನ್ನು ಕೊಟ್ಟಿದ್ದಾರೆ.
– ಮುಂದಿನ ದಸರಾ ಮಹೋತ್ಸವದ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಆಹ್ವಾನಿಸುವ ವಿಚಾರವನ್ನು ಗಮನಿಸಿದ್ದೇನೆ. ಸೂಕ್ತ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ.
ಡಿ.ಕೆ. ಶಿವಕುಮಾರ್ ಬಗ್ಗೆ ಹೇಳಿದ್ದೇನು?
– ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವ ಆಸೆ ಹೊಂದಿದ್ದಾರೆ. ದೇವರು ಎಲ್ಲವನೂ ನಿರ್ಧಾರ ಮಾಡುತ್ತಾನೆ. ಮುಂದಿನ ದಿನಗಳಲ್ಲಿ ಭಗವಂತ ಎಲ್ಲವನ್ನೂ ತೀರ್ಮಾನ ಮಾಡುತ್ತಾನೆ. ಡಿ.ಕೆ ಶಿವಕುಮಾರ್ ಭಾಷಣ ಕೇಳಬೇಕು ಅಂದುಕೊಂಡಿದ್ದೆ. ಆದರೆ ಬೇರೆ ಕಾರ್ಯಕ್ರಮಕ್ಕೆ ಹೋಗಬೇಕಾದರಿಂದ ಇಲ್ಲಿಂದ ತೆರಳುತ್ತೇನೆ.
ಯಾರನ್ನೂ ಕಡೆಗಣಿಸಿಲ್ಲ ನಾನು
ʻʻನಾನು ರಾಜಕೀಯ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ ಯಾವುದೇ ಸಮಾಜವನ್ನು ಕಡೆಗಣಿಸಿಲ್ಲ. ಒಕ್ಕಲಿಗ ಸಮಾಜ ಯಾರನ್ನು ಕಡೆಗಣಿಸಿಲ್ಲ. ನಾಡಿಗೆ ಬಂದಿರುವ ಆಪತ್ತನ್ನು ಸರಿಪಡಿಸಬೇಕಾದ ಸೂಕ್ಷ್ಮ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈ ನಾಡನ್ನು ಕಟ್ಟಲು ನಿಮ್ಮೆಲ್ಲರ ಸಹಕಾರ ಮುಖ್ಯʼʼ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಗೆ ಸಹಕಾರ ಬೇಕು ಎಂದು ಸೂಚ್ಯವಾಗಿ ಹೇಳಿದರು.
ಇದನ್ನೂ ಓದಿ | ಡಿ.ಕೆ. ಶಿವಕುಮಾರ್ ನನ್ನ ವೈರಿ ಅಲ್ಲ, ಅವರ ಬಗ್ಗೆ ಸಿಂಪಥಿಯೂ ಇಲ್ಲ ಎಂದ ಕುಮಾರಸ್ವಾಮಿ