ಮೈಸೂರು: ನನ್ನ ಗಂಡ ಹುಲಿ ಥರ ಇದ್ದ ಸರ್, ಹತ್ತು ಜನ ಎದುರು ನಿಂತರೂ ಎದುರಿಸೋ ಶಕ್ತಿ ಇತ್ತು. ನಾನು ಅವನನ್ನು ಹಾಗೆ ಬೆಳೆಸಿದ್ದೇನೆ. ಆದರೆ, ಅವನನ್ನು ಮೋಸ ಮಾಡಿ ಕೊಂದ್ರು (Murder Case) ಸರ್. ಇಲ್ಲಂದ್ರೆ ಸಾಬಿಯನ್ನು ಕರೆಸಿ ಚುಚ್ಚಿ ಚುಚ್ಚಿ ಸಾಯಿಸ್ಬೇಕಾಗಿತ್ತು? ಹಿಂಸೆ ನೀಡಿ ಕೊಲೆ ಮಾಡಬೇಕಾಗಿತ್ತಾ? ಹಾಗಿದ್ದರೆ ನನ್ನ ಗಂಡ ಧರ್ಮದ ರಕ್ಷಣೆಗೆ ನಿಂತಿದ್ದೇ ತಪ್ಪಾಯಿತಾ?- ಹೀಗೆ ಸಾಲು ಸಾಲು ಪ್ರಶ್ನೆಗಳೊಂದಿಗೆ ಬಿಜೆಪಿ ಸತ್ಯಶೋಧನಾ ಸಮಿತಿಯನ್ನು (BJP Fact Finding Committee) ಎದುರುಗೊಂಡರು ಪೂರ್ಣಿಮಾ (Venugopala Nayaks wife Poornima).
ಮೈಸೂರು ಜಿಲ್ಲೆಯ ತಿ. ನರಸೀಪುರ ಪಟ್ಟಣದಲ್ಲಿ ನಡೆದ ಹನುಮ ಜಯಂತಿಯ ನೇತೃತ್ವ ವಹಿಸಿ ಅದನ್ನು ಅದ್ಧೂರಿಯಾಗಿ ನಡೆಸಿದ ಬಳಿಕ ದುಷ್ಕರ್ಮಿಗಳಿಂದ ಕೊಲೆಯಾದ ಯುವ ಬ್ರಿಗೇಡ್ ಕಾರ್ಯಕರ್ತ (Yuva Brigade activist) ವೇಣುಗೋಪಾಲ್ ಅವರ ಪತ್ನಿ ಪೂರ್ಣಿಮಾ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ನೇತೃತ್ವದ ಸತ್ಯಶೋಧನಾ ಸಮಿತಿಯ ಮುಂದೆ ಕಣ್ಣೀರಿಸುತ್ತಲೇ ಗಂಡನ ಕೊಲೆಯ ವಿವರ ನೀಡಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶಾಸಕರಾದ ಡಾ. ಸಿ.ಎನ್ ಅಶ್ವತ್ಥ ನಾರಾಯಣ, ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕರಾದ ಎನ್.ಮಹೇಶ್, ಪ್ರೊ.ಕೆ.ಆರ್.ಮಲ್ಲಿಕಾರ್ಜುನ್, ಮೇಯರ್ ಶಿವಕುಮಾರ್, ಮುಖಂಡ ಅಪ್ಪಣ್ಣ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಅವರನ್ನು ಒಳಗೊಂಡ ನಿಯೋಗ ತಿ.ನರಸೀಪುರದ ಅಂಗಡಿ ಬೀದಿ ಬಡಾವಣೆಯಲ್ಲಿರುವ ಮನೆಗೆ ಭೇಟಿ ನೀಡಿದರು.
ಸತ್ಯಶೋಧನಾ ಸಮಿತಿ ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದಂತೆಯೇ ಮೃತ ವೇಣುಗೋಪಾಲ್ ನಾಯಕ್ ಪತ್ನಿ ಪೂರ್ಣಿಮಾ ಅವರು ಕಣ್ಣೀರಿಡುತ್ತಲೇ ಕೊಲೆ ಮತ್ತು ಅದಕ್ಕೆ ಕಾರಣವಾದ ವಿದ್ಯಮಾನಗಳ ವಿವರ ನೀಡಿದರು.
ʻʻನನ್ನ ಗಂಡ ಧರ್ಮ ಉಳಿಸಲು ಮುಂದಾಗಿದ್ದೆ ತಪ್ಪಾಯಿತಾ? ನಾವು ಹನುಮ ಜಯಂತಿ ಮಾಡಿ ತಪ್ಪು ಮಾಡಿದ್ವಾ? ನಾಳೆ ನಮ್ಮ ಮಗಳಿಗೆ ಏನಾದರೂ ಮಾಡಿದ್ರೆ ಏನು ಮಾಡೋದುʼʼ ಎಂದು ಬಿಜೆಪಿ ಸತ್ಯಶೋಧನ ಸಮಿತಿ ಮುಂದೆ ಗೋಳಾಡಿದರು ವೇಣುಗೋಪಾಲ್ ಪತ್ನಿ.
ಹಲ್ಲೆ ಮಾಡಿದ್ದರು, ನಂತರ ಸಂಧಾನಕ್ಕೆ ಕರೆದರು
ಊರಿನಲ್ಲಿ ಹನುಮ ಜಯಂತಿ ನಡೆಯುತ್ತಿದುದೇ ನನ್ನ ಗಂಡನ ಕಾರಣದಿಂದ. ಹುಡುಗರನ್ನು ಕಟ್ಟಿಕೊಂಡು ಎಲ್ಲವನ್ನೂ ಅವರು ಮಾಡುತ್ತಿದ್ದರು. ಹನುಮ ಜಯಂತಿ ವಿಚಾರದಲ್ಲಿ ಜಗಳ ಆಗಿತ್ತು. ಹನುಮ ಜಯಂತಿಯ ಮರುದಿನ ನನ್ನ ಗಂಡನ ಮೇಲೆ ಕೆಲವರು ಹಲ್ಲೆ ಮಾಡಿದ್ದರು. ಅದು ಬೇರೆಯವರಿಗೆ ಗೊತ್ತಾಗಿ ನಾಳೆ ದೊಡ್ಡ ದೊಂಬಿಯೇ ನಡೆಯುತ್ತದೆ ಎನ್ನುವ ಆತಂಕ ನನ್ನ ಗಂಡನಿಗಿತ್ತು. ಈ ನಡುವೆ, ವಿಷಯವನ್ನು ರಾಜಿಯಲ್ಲಿ ಮುಗಿಸೋಣ ಎಂಬ ಕರೆ ಬಂತು. ಜಗಳ ಮುಂದುವರಿಸುವುದು ಬೇಡ, ಜನ ದೊಂಬಿಗೇಳುವುದು ಬೇಡ ಎಂದು ವೇಣುಗೋಪಾಲ್ ಸಂಧಾನಕ್ಕೆ ಹೋಗಲು ಮುಂದಾದರು. ನಾನೇ ತುತ್ತು ತಿನ್ನಿಸಿ ಅವರನ್ನು ಕಳಿಸಿಕೊಟ್ಟೆ- ಎಂದು ಭಾನುವಾರ ರಾತ್ರಿ ಸಂಧಾನಕ್ಕೆ ಹೋಗುವ ಮೊದಲಿನ ವಿದ್ಯಮಾನಗಳನ್ನು ಸಿ.ಟಿ. ರವಿ ಅವರ ಮುಂದೆ ವಿವರಿಸಿದರು ಪೂರ್ಣಿಮಾ.
ನಾನು ಹೋಗಬೇಕಾ ಎಂದು ಕೇಳಿದೆ. ಆದರೆ, ನಮ್ಮ ಹುಡುಗರು ದೊಂಬಿಯೇಳುವುದನ್ನು ತಡೆಯಬೇಕು. ಹೀಗಾಗಿ ರಾಜಿ ಮಾತುಕತೆ ಆಗಲಿ ಎಂದು ಹೇಳಿ ಹೊರಟರು. ನಂತರ ಅವರನ್ನು ನಾನು ನೋಡಿದ್ದು ಶವವಾಗಿ ಎಂದು ಪೂರ್ಣಿಮಾ ವಿವರಿಸಿದರು.
ಮಾತುಕತೆಗೆ ಎಂದು ಕರೆದ ದುಷ್ಕರ್ಮಿಗಳು ವೇಣುಗೋಪಾಲ್ ಅವತ ಮುಖ ಮತ್ತು ತಲೆಯ ಭಾಗಕ್ಕೇ ಚುಚ್ಚಿ ಚುಚ್ಚಿ ಕೊಂದರು. ನನ್ನ ಗಂಡ ಸಾಮಾನ್ಯ ಶಕ್ತಿವಂತನಲ್ಲ. ಹತ್ತಾರು ಜನರನ್ನು ಎದುರಿಸುವ ತಾಕತ್ತು ಅವನಿಗಿದೆ. ನಾನು ಅವನನ್ನು ಹಾಗೆ ಬೆಳೆಸಿದ್ದೇನೆ. ಆದರೆ, ಅವರು ಅವನ ತಲೆಗೇ ಹೊಡೆದರು. ಮುಖಕ್ಕೆ ಬಾಟಲಿಯಿಂದ ಚುಚ್ಚಿದರು. ಹಾಗಾಗಿ ಅವನು ಅಸಹಾಯಕನಾಗಿ ಪ್ರಾಣ ಕಳೆದುಕೊಂಡ. ಅವನಿಗೆ ಚಿತ್ರ ಹಿಂಸೆ ನೀಡಲು ಚುಚ್ಚಲು ಸಾಬಿಯನ್ನು ಕರೆಸಿಕೊಂಡರು (ಪ್ರಕರಣದಲ್ಲಿ ಹ್ಯಾರಿಸ್ ಎಂಬ ಆರೋಪಿ ಒಬ್ಬನಿದ್ದಾನೆ). ಅವನ ದೇಹದ ಕೆಳಭಾಗಕ್ಕೆ ಯಾವ ಗಾಯವೂ ಆಗಿಲ್ಲ. ಕೇವಲ ಮುಖ ಮತ್ತು ತಲೆಗೆ ಚುಚ್ಚಿ ಕೊಲೆ ಮಾಡಿದ್ದಾರೆ. ಪೋಸ್ಟ್ ಮಾರ್ಟಂ ವೇಳೆ ಆಸ್ಪತ್ರೆಯಲ್ಲಿದ್ದ ನಮ್ಮವರು ಇದನ್ನು ಹೇಳಿದರು ಎಂದು ಪೂರ್ಣಿಮಾ ವಿವರಿಸಿದರು.
ಇದನ್ನೂ ಓದಿ : Murder Case : ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಹಿಂದೆ ಸಚಿವ ಮಹದೇವಪ್ಪ ಪುತ್ರ; ಸೂಲಿಬೆಲೆ ಆರೋಪ
ಇದನ್ನೂ ಓದಿ: Murder Case : ವೈಯಕ್ತಿಕ ಕೊಲೆಗೆ ನಾನು ಹೇಗೆ ಹೊಣೆ; ಸೂಲಿಬೆಲೆಗೆ ತಲೆ ಸರಿ ಇಲ್ಲ ಎಂದ ಬೋಸ್
ನಾವು ಎಲ್ಲಿ ಹೋಗಬೇಕು? ಪಾಕಿಸ್ತಾನಕ್ಕಾ?
ಹಿಂದೂಗಳ ಕೊಲೆಯನ್ನೇ ಮಾಡಲಾಗುತ್ತಿದೆ. ಹೀಗಾದರೆ ಹತ್ತು ವರ್ಷದಲ್ಲಿ ನಾವು ಪಾಕಿಸ್ತಾನಕ್ಕೆ ಹೋಗಬೇಕಾಗುತ್ತದೆ ಎಂದು ಕೂಡಾ ಆಕ್ರೋಶದಿಂದ ಹೇಳಿದರು ಪೂರ್ಣಿಮಾ.
ಸಿ.ಟಿ. ರವಿ ಅವರ ಕಾಲಿಗೆ ಬಿದ್ದ ವೇಣುಗೋಪಾಲ್ ತಾಯಿ
ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕಿದ ವೇಣುಗೋಪಾಲ್ ಅವರ ತಾಯಿ ಮಣಿಯಮ್ಮ ಅವರು, ಸಿ.ಟಿ. ರವಿ ಅವರ ಕಾಲಿಗೆ ಬಿದ್ದೇ ಬಿಟ್ಟರು.
ಮನೆಯವರಿಗೆ ಸಾಂತ್ವನ ಹೇಳಿದ ಸಿ.ಟಿ ರವಿ ಅವರು, ಪತ್ನಿ ಕೈಗೆ 5 ಲಕ್ಷ ರೂ. ಚೆಕ್ ನೀಡಿದರು. ನೀವು ಎದೆಗುಂದಬೇಡಿ ನಿಮ್ಮ ಪರವಾಗಿ ನಾವೀದ್ದೇವೆ. ಈ ವಿಚಾರವಾಗಿ ಸದನದ ಒಳಗು ಹೊರಗೂ ಹೋರಾಟ ಮಾಡುತ್ತೇವೆ ಎಂದು ಭರವಸೆ ನೀಡಿದರು. ಮನೆಯ ಹೊರಗಡೆ ನೂರಾರು ಮಂದಿ ಜಮಾಯಿಸಿದ್ದರು.