ಮೈಸೂರು: ಇತ್ತೀಚಿನ ದಿನಗಳಲ್ಲಿ ಹೃದಯ ಎನ್ನುವುದು ಯಾವ ಕ್ಷಣದಲ್ಲಿ ಹಿಂಡಿಬಿಡುತ್ತದೆ ಎಂದು ಹೇಳಲು ಸಾಧ್ಯವಿಲ್ಲದಷ್ಟು ಆಘಾತಕಾರಿಯಾಗಿದೆ. ಕುಳಿತಲ್ಲಿ, ನಿಂತಲ್ಲಿ, ನಡೆಯುವಾಗ.. ಎಲ್ಲಿ ಬೇಕಾದರೂ ಹೃದಯಾಘಾತ ಆಗಬಹುದು, ಯಾವುದೇ ಮುನ್ಸೂಚನೆಯನ್ನು ನೀಡದೆ..
ಮೈಸೂರಿನಲ್ಲಿ ನಡೆದಿರುವ ಈ ಒಂದು ಘಟನೆಯೂ ಅದನ್ನೇ ಸಾರಿ ಹೇಳುತ್ತಿದೆ. ಇಲ್ಲೊಬ್ಬರು ಜೆಡಿಎಸ್ ಮುಖಂಡರು ಗೆಳೆಯರ ಜತೆ ಸೇರಿ ಇಸ್ಪೀಟ್ ಆಡುತ್ತಲೇ ಹೃದಯಾಘಾತವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಜೆಡಿಎಸ್ ಮುಖಂಡ ಅಶ್ವತ್ ಅಲಿಯಾಸ್ ಚಿಯಾ ಮೃತರು.
ಜೆಡಿಎಸ್ ಮುಖಂಡರಾಗಿ ಗುರುತಿಸಿಕೊಂಡಿದ್ದ ಚಿಯಾ ಇತ್ತೀಚೆಗೆ ಅಷ್ಟಾಗಿ ರಾಜಕೀಯದಲ್ಲಿ ಸಕ್ರಿಯರಾಗಿ ಇರಲಿಲ್ಲ. ಆದರೆ, ಗೆಳೆಯರ ಒಡನಾಟವೆಲ್ಲ ಹಾಗೆಯೇ ಇತ್ತು. ಭಾನುವಾರ ಅವರು ತಮ್ಮ ಗೆಳೆಯರೊಂದಿಗೆ ಮೈಸೂರು- ಬೆಂಗಳೂರು ರಸ್ತೆಯ ರಿಕ್ರಿಯೇಷನ್ ಕ್ಲಬ್‌ವೊಂದಕ್ಕೆ ಬಂದಿದ್ದರು. ಅಲ್ಲಿ ಸ್ನೇಹಿತರೊಂದಿಗೆ ಇಸ್ಪೀಟು ಆಡುತ್ತಿದ್ದರು.
ಎಲ್ಲರೂ ಆಟವಾಡುತ್ತಿದ್ದ ಹಾಗೆಯೇ ಅಶ್ವಥ್ ಒಮ್ಮೆ ಬೆವರುತ್ತಿದೆ, ಸುಸ್ತಾಗುತ್ತಿದೆ ಎನ್ನುವಂತೆ ಮುಖ ಒರಸಿಕೊಂಡರು. ಅಷ್ಟೇ ಅಲ್ಲಿಗೇ ಅವರು ಒಂದು ಬದಿಗೆ ಒರಗಿದರು. ಕೂಡಲೇ ಗೆಳೆಯರು ಕೀ ಬಂಚ್ ಕೊಡುವುದು, ಗಾಳಿ ಹಾಕುವುದು, ಎದೆ ಒತ್ತುವುದು..ಹೀಗೆ ಏನೆಲ್ಲಾ ಮಾಡಿದರು. ಒಮ್ಮೆ ಚೇತರಿಸಿಕೊಂಡು ಮಾತನಾಡಿದರು ಎಂಬಂತೆ ಕಂಡರೂ ಮರುಕ್ಷಣವೇ ಉಸಿರು ನಿಲ್ಲಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಫಲ ಸಿಗಲಿಲ್ಲ.
ಮಕ್ಕಳಿಗೂ ಹೃದಯಾಘಾತ
ರಾಜ್ಯದಲ್ಲಿ ಕಳೆದ ಎರಡು ದಿನಗಳಲ್ಲಿ ಇಬ್ಬರು ಪುಟ್ಟ ಮಕ್ಕಳು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಓದುತ್ತಿದ್ದಾಗಲೇ ಕುಸಿದು ಬಿದ್ದಿದ್ದ ಅನುಶ್ರೀ
ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ಕೇವಲ ೧೩ ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಅಕ್ಟೋಬರ್ 28ರಂದು ಸಾವನ್ನಪ್ಪಿದ್ದಳು. ಹಟ್ಟಿಯಂಗಡಿಯ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಅನುಶ್ರೀ, ಮನೆಯಲ್ಲಿ ಓದುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಳು. ಅನುಶ್ರೀ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಕೊನೆಯುಸಿರೆಳೆದಿದ್ದಳು.
ಚಿಕ್ಕಮಗಳೂರಿನಲ್ಲಿ ೧೪ ವರ್ಷದ ಬಾಲಕಿ
ಚಿಕ್ಕಮಗಳೂರಿನಲ್ಲಿ 9ನೇ ತರಗತಿ ಬಾಲಕಿ ವೈಷ್ಣವಿ (14) ಎಂಬಾಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಈಕೆ ಚಿಕ್ಕಮಗಳೂರಿನ ಮೂಡಿಗೆರೆ ಪಟ್ಟಣದವಳು. ಶನಿವಾರ ಸಂಜೆ ಸುಮಾರು 7ಗಂಟೆ ಹೊತ್ತಿಗೆ ಕುಟುಂಬದವರೊಂದಿಗೆ ಸಮಯ ಕಳೆಯುತ್ತಿದ್ದ ವೈಷ್ಣವಿಗೆ ಹೃದಯಘಾತವಾಗಿದೆ. ಕೂಡಲೇ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರು. ವೈಷ್ಣವಿ ಆದಾಗಲೇ ಇಹಲೋಕ ತ್ಯಜಿಸಿದ್ದಳು.
ಇದನ್ನೂ ಓದಿ | Children Heart Attack | ಕುಂದಾಪುರದ ಅನುಶ್ರೀ ಸಾವಿನ ಬೆನ್ನಲ್ಲೇ 14 ವರ್ಷದ ಬಾಲಕಿ ವೈಷ್ಣವಿ ಹೃದಯಾಘಾತದಿಂದ ಸಾವು