ಬೆಂಗಳೂರು: ರಾಜ್ಯದಲ್ಲಿ ವಾತಾವರಣ ದಿನಕ್ಕೊಂದು ರೀತಿಯಲ್ಲಿ ಬದಲಾಗುತ್ತಿದೆ. ಬೆಳಗ್ಗೆ ಬಿಸಿಲು ಇದ್ದರೆ ಮಧ್ಯಾಹ್ನ ಮೋಡ ಕವಿದ ವಾತಾವರಣ. ಸಂಜೆಯಾಯಿತು ಎಂದರೆ ಸಾಕು, ಬಿಟ್ಟೂ ಬಿಡದೆ ಕಾಡುವ ಮಳೆರಾಯನ ಅಬ್ಬರ. ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಸದ್ಯ ಹವಾಮಾನ ಇಲಾಖೆ 5 ದಿನಗಳ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರ ಕಾರ್ಯಕ್ರಮಗಳಿಗೆ ಮಳೆರಾಯ ಅಡ್ಡಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ | Modi In Karnataka | ಸರ್‌ಎಂವಿ ಟರ್ಮಿನಲ್ ಉದ್ಘಾಟನೆ, ಸಬ್‌ಅರ್ಬನ್ ಶಂಕು ಸ್ಥಾಪಿಸಿದ ಮೋದಿ
ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮುಗಿಸಿ ಪ್ರಧಾನಿ ಮೋದಿ ಮೈಸೂರಿನತ್ತ ತೆರಳಿದ್ದಾರೆ. ಅಲ್ಲಿ ಮೊದಲಿಗೆ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಂಗಳವಾರ ಬೆಳಗ್ಗೆ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಎಲ್ಲೋ ಅಲರ್ಟ್ ಘೋಷಣೆ ಮಾಡಿರುವ ಹವಾಮಾನ ತಜ್ಞರು ತಮಿಳುನಾಡು, ಕೇರಳ ರಾಜ್ಯವು ಸೇರಿದಂತೆ ದಕ್ಷಿಣ ಹಾಗು ಉತ್ತರ ಒಳನಾಡು, ಕರಾವಳಿ ಕರ್ನಾಟಕದ ಜತೆಗೆ ದಕ್ಷಿಣ ಭಾರತದ ಹಲೆವೆಡೆ ಮಳೆಯಾಗಲಿದೆ ಎಂದಿದ್ದಾರೆ. ಮೊದಲ ಮೂರು ದಿನ ಎಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಉಳಿದೆರೆಡು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ. ಸಾಧಾರಣದಿಂದ ಶುರುವಾಗಿ ತೀವ್ರ ಮಳೆಯಾಗುವ ಸಾಧ್ಯತೆ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಎಚ್ಚರ ವಹಿಸುವಂತೆ ಮೈಸೂರು ಜಿಲ್ಲಾ ಡಿಸಿಗೆ ಹವಾಮಾನ ಇಲಾಖೆ ಸೂಚನೆ
ಅರಮನೆ ನಗರಿಯಲ್ಲಿ ಮಳೆ ಕಾಟ
ಸೋಮವಾರ ಸಂಜೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಮೋದಿ ಸಂವಾದ ಇರಲಿದೆ. ಸಂವಾದ ಕಾರ್ಯಕ್ರಮಕ್ಕೆ ತಂಡೋಪತಂಡವಾಗಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ.
ಸುಮಾರು 20 ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಲಿದ್ದು, ವೇದಿಕೆ ಮುಂಭಾಗ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಆದರೆ ಕಾರ್ಯಕ್ರಮಕ್ಕೆ ಮಳೆ ಕಾಟ ಶುರುವಾಗಿದ್ದು, ಸಣ್ಣದಾಗಿ ತುಂತುರು ಮಳೆ ಆರಂಭವಾಗಿದೆ. ಮುಂಜಾಗ್ರತಾ ಕ್ರಮವಾಗಿ ವಾಟರ್ ಪ್ರೂಫ್ ಶಾಮಿಯಾನ, ಚೇರ್, ಬೃಹತ್ ಎಲ್ಇಡಿ ವ್ಯವಸ್ಥೆ ಮಾಡಲಾಗಿದೆ. ಸುಮಾರು 1 ಲಕ್ಷ ಜನರಿಗೆ ಭಾಗವಹಿಸುವ ಅವಕಾಶ ಇದ್ದು, ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಮೈದಾನಕ್ಕೆ ಬಿಡಲಾಗುತ್ತಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ಪರಿಶೀಲನೆ ಕಾರ್ಯ ಮುಂದುವರೆದಿದೆ.
ಯೋಗಕ್ಕೂ ತೊಂದರೆ?
ರಾಜ್ಯದಲ್ಲಿ 8ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಣೆಗೆ ಅದ್ದೂರಿ ತಯಾರಿ ನಡೆದಿದ್ದು, ಅರಮನೆ ನಗರಿಯಲ್ಲಿ ಕೊನೇ ಕ್ಷಣದ ಯೋಗಭ್ಯಾಸಕ್ಕೆ ಮಳೆ ತಡೆಯೊಡ್ಡಿದೆ. ಅನೇಕ ದಿನಗಳಿಂದ ಸಂಜೆ ವೇಳೆ ಮಳೆಯಾಗುತ್ತಿದೆ, ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ ನಡೆಯಲಿದೆ. ಆಗ ಮಳೆ ಬೀಳುವ ಆತಂಖ ಇಲ್ಲ. ಆದರೆ ಹಿಂದಿನ ದಿನ ಮಳೆ ಸುರಿದರೆ ಬೆಳಗ್ಗೆ ಬಹಿರಂಗವಾಗಿ ಯೋಗ ಆಚರಿಸಲು ಸಮಸ್ಯೆ ಆಗುತ್ತದೆಯೇ ಎಂಬ ಚಿಂತೆ ಆಯೋಜಕರನ್ನು ಕಾಡುತ್ತಿದೆ.
ಇದನ್ನೂ ಓದಿ | Modi In Karnataka | 40 ವರ್ಷದಲ್ಲಿ ಆಗದ ಕೆಲಸವನ್ನು 40 ತಿಂಗಳಲ್ಲಿ ಮಾಡುವೆ ಎಂದ ಮೋದಿ