Site icon Vistara News

RAIN NEWS: ಬೆಂಗಳೂರು-ಮೈಸೂರು ರೋಡ್‌ಗೆ ನುಗ್ಗಿದ ನೀರು, ಸಂಚರಿಸಬೇಡಿ ಎಂದು ಮನವಿ ಮಾಡಿದ ಎಚ್‌ಡಿಕೆ

Male channapatna

ಬೆಂಗಳೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಇಡೀ ರಾಜ್ಯ ಕಂಗೆಟ್ಟಿದೆ. ಅದರಲ್ಲೂ ಮುಖ್ಯವಾಗಿ ರಾಜ್ಯದ ಎರಡು ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಮೈಸೂರನ್ನು ಸೇರಿಸುವ ರಾಷ್ಟ್ರೀಯ ಹೆದ್ದಾರಿಯೇ ಈ ಬಾರಿ ಮುಳುಗಿದ್ದು ಸಂಚಾರಕ್ಕೆ ಭಾರಿ ಅಡಚಣೆಯಾಗಿದೆ. ಹಲವಾರು ಬಸ್‌ಗಳು ನೀರಲ್ಲಿ ಮುಳುಗಿ ಹೋಗಿದ್ದು, ಕಾರು ಮತ್ತಿತರ ಸಣ್ಣ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇದು ಭಾರಿ ಅಪಾಯದ ಮುನ್ಸೂಚನೆ ನೀಡಿದ್ದು, ಸಾಧ್ಯ ಇರುವ ಎಲ್ಲರೂ ಈ ದಾರಿಯಾಗಿ ಸಂಚಾರ ಮಾಡದಂತೆ ಸಲಹೆ ನೀಡಲಾಗಿದೆ.

ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬೆಂಗಳೂರಿನಿಂದಲೇ ರಸ್ತೆ ಹೊಳೆಯಾಗುವ ಪ್ರಕ್ರಿಯೆ ಆರಂಭಗೊಂಡಿದೆ. ರಾಮನಗರ ಭಾಗದಲ್ಲಂತೂ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದೆ. ಭಾರಿ ಮಳೆಯಿಂದಾಗಿ ರಾಮ ನಗರ ಭಾಗದಲ್ಲಿ ಕೆರೆಗಳ ಕಟ್ಟೆ ಮುರಿದು ನೀರು ರಾಷ್ಟ್ರೀಯ ಹೆದ್ದಾರಿಗೇ ನೀರು ನುಗ್ಗುತ್ತಿದೆ.

ರಾಮನಗರ ಭಾಗದಲ್ಲಿ ಅಂಡರ್‌ ಪಾಸ್‌ನಲ್ಲಿ ನೀರು ನುಗ್ಗಿದ್ದರಿಂದ ಕೆಲವು ಬಸ್‌ಗಳೇ ನೀರಿನಲ್ಲಿ ಮುಳುಗಿವೆ. ಕಾರುಗಳು ಪಲ್ಟಿಯಾಗಿವೆ. ವಾಹನಗಳು ಸಂಚರಿಸುವ ಸ್ಥಿತಿಯೇ ಇಲ್ಲಿಲ್ಲ. ಆದರೂ ಕೆಲವರು ದುಸ್ಸಾಹಸಕ್ಕೆ ಇಳಿಯುತ್ತಿದ್ದಾರೆ. ರಾಮನಗರದಲ್ಲಿ ಹೆದ್ದಾರಿ ಬದಿಯ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದು, ಹೋಟೆಲ್‌ಗಳ ಪಾತ್ರೆ ಪಗಡೆಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿದ್ದು ಅವುಗಳನ್ನು ರಕ್ಷಿಸಿಕೊಳ್ಳಲು ಹೋಟೆಲ್‌ ಸಿಬ್ಬಂದಿ ನಡೆಸುವ ಪ್ರಯತ್ನಗಳ ವಿಡಿಯೊಗಳು ಬೇಸರ ಮೂಡಿಸುತ್ತಿವೆ.

ಮಳೆಯಿಂದ ರಸ್ತೆಯಲ್ಲೆಲ್ಲ ನೀರು

ಚನ್ನಪಟ್ಟಣದಲ್ಲೂ ನೀರು ಹೆದ್ದಾರಿಗೇ ನುಗ್ಗಿದೆ. ಇಲ್ಲಿ ಹೆದ್ದಾರಿ ಮಾತ್ರವಲ್ಲ‌, ರೈಲು ನಿಲ್ದಾಣವೂ ನೀರಿನಲ್ಲಿ ಮುಳುಗಿದ್ದು ರೈಲು ಸಂಚಾರಕ್ಕೂ ಸಂಚಕಾರ ಎದುರಾಗುವ ಅಪಾಯವಿದೆ. ಮಂಡ್ಯದಲ್ಲಂತೂ ಭಾರಿ ಮಳೆಯಿಂದ ಶಾಲೆ ಕಾಲೇಜಿಗೆ ರಜೆ ನೀಡಲಾಗಿದೆ. ಇಲ್ಲೂ ಸಂಚಾರ ಅಸ್ತವ್ಯಸ್ತವಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿಯೂ ನೀರು ಅಲ್ಲಲ್ಲಿ ನಿಂತು ಕೊಳಗಳನ್ನು ಸೃಷ್ಟಿಸಿದೆ.

ಮಾಗಡಿಯಲ್ಲಿ ಉಂಟಾಗಿರುವ ಮಳೆ ಅನಾಹುತವನ್ನು ಪರಿಶೀಲಿಸಿದ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ

ಪ್ರಯಾಣಿಸಬೇಡಿ ಎಂದ ಎಚ್‌ಡಿಕೆ
ಈ ನಡುವೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರಾಮನಗರದಿಂದ ಬೆಂಗಳೂರಿಗೆ ಬರುವ ದಾರಿಯಲ್ಲಿ ಮಾಗಡಿ ಬಳಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರು ಅಲ್ಲಿನ ಪರಿಸ್ಥಿತಿಯ ಅವಲೋಕನಕ್ಕಾಗಿ ಇಳಿದಿದ್ದರು. ಈ ಭಾಗದಲ್ಲಿ ಪ್ರವಾಹ ಸದೃಶ ಪರಿಸ್ಥಿತಿ ಇರುವುದವನ್ನು ಮತ್ತು ಮೈಲು ಗಟ್ಟಲೆ ವಾಹನಗಳು ಸಾಲುಗಟ್ಟಿರುವುದನ್ನು ಉಲ್ಲೇಖಿಸಿ ಸಂಚಾರ ಬೇಡ ಎಂದು ಸಲಹೆ ನೀಡಿದ್ದಾರೆ.

ʻʻವಿಪರೀತ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರವಾಹಸದೃಶ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಜನರು ಇಂದು ಈ ಹೆದ್ದಾರಿಗೆ ಬರದೇ ಇರುವುದು ಒಳಿತು. ಅನಿವಾರ್ಯವಾಗಿ ಸಂಚರಿಸಲೇಬೇಕಾದರೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿʼʼ ಎಂದು ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.

ʻʻಬೆಂಗಳೂರು-ಬೆಂಗಳೂರು ಹೆದ್ದಾರಿಯ ವಿವಿಧ ಭಾಗಗಳಲ್ಲಿ ಮಳೆ ನೀರು ತುಂಬಿದೆ. ಅನೇಕ ಕಡೆ ಹೆದ್ದಾರಿ ಜಲಾವೃತವಾಗಿದೆ. ಅಲ್ಲಲ್ಲಿ ವಾಹನಗಳು ನೀರಿನಲ್ಲಿ ಸಿಲುಕಿವೆ. ಹೀಗಾಗಿ ವಾಹನ ಸಂಚಾರ ಮಾಡುವುದು ಅಪಾಯಕಾರಿʼʼ ಎಂದಿದ್ದಾರೆ ಅವರು.

Exit mobile version