ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (dk shivakumar) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಡಿ ಕೆ ಶಿವಕುಮಾರ್ ಅಪಾಯದಿಂದ ಪಾರಾಗಿದ್ದಾರೆ. ಹೆಲಿಕಾಪ್ಟರ್‌ನ ಗಾಜುಗಳು ಸಂಪೂರ್ಣವಾಗಿ ಒಡೆದು ಹೋಗಿವೆ.
ಜಕ್ಕೂರಿನಿಂದ ಮುಳಬಾಗಿಲಿಗೆ ಈ ಹೆಲಿಕಾಪ್ಟರ್‌ನಲ್ಲಿ ಡಿ ಕೆ ಶಿವಕುಮಾರ್ ತೆರಳುತ್ತಿದ್ದರು. ಹಕ್ಕಿಡಿಕ್ಕಿಯಿಂದ ಹೆಲಿಕಾಪ್ಟರ್‌ನ ವಿಂಡ್‌ಶೀಲ್ಡ್‌ಗೆ ಹಾನಿಯಾಗಿದೆ. ಹೊಸ ಕೋಟೆ ಸಮೀಪ ಈ ಅಪಘಾತ ಸಂಭವಿಸಿದೆ. ಕೂಡಲೇ ಹೆಲಿಕಾಪ್ಟರ್ ಅನ್ನು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ಇದರಿಂದಾಗಿ ಭಾರಿ ಅಪಾಯದಿಂದ ಡಿ ಕೆ ಶಿವಕುಮಾರ್ ಪಾರಾದಂತಾಗಿದೆ.
ಹೆಲಿಕ್ಯಾಪ್ಟರ್‌ಗೆ ಹಾನಿಯಾಗುತ್ತಿದ್ದಂತೆಯೇ ಎಚ್ಚೆತ್ತ ಪೈಲಟ್ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಅದನ್ನು ಇಳಿಸುವ ತೀರ್ಮಾನ ತೆಗೆದುಕೊಂಡರು. ಇದರಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಸುದ್ದಿವಾಹಿನಿಯ ಸಿಬ್ಬಂದಿಯೋರ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಮುಳಬಾಗಿಲಿನಲ್ಲಿ ನಡೆಯಲಿದ್ದ ಕಾಂಗ್ರೆಸ್ ಪ್ರಚಾರದ ಬಹಿರಂಗ ಸಭೆಯಲ್ಲಿ ಅವರು ಭಾಗವಹಿಸಬೇಕಾಗಿತ್ತು.
ಈ ಅಪಘಾತದ ನಂತರ ಹೇಳಿಕೆ ನೀಡಿರುವ ಡಿ.ಕೆ. ಶಿವಕುಮಾರ್, ʻʻ ಇದೊಂದು ಆಕಸ್ಮಿಕ ಘಟನೆ. ನಾನು ಬದುಕಿ ಬಂದಿದ್ದೇ ಅದೃಷ್ಟ, ಹೆಲಿಕಾಪ್ಟರ್‌ನಲ್ಲಿ ಇದ್ದ ಎಲ್ಲರೂ ಸುರಕ್ಷಿತವಾಗಿದ್ದೇವೆ. ಯಾರೂ ಆತಂಕ ಪಡಬೇಕಾಗಿಲ್ಲʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Congress Manifesto : ಸಪ್ತ ಭಾಗ್ಯ, ಮೀಸಲಾತಿ ಏರಿಕೆ, ಬಜರಂಗದಳ ನಿಷೇಧ; ಕಾಂಗ್ರೆಸ್‌ನ TOP 25 ಭರವಸೆಗಳು