ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಬಹು ವರ್ಷದ ಬಳಿಕ ಇದೇ ಮೊದಲ ಬಾರಿಗೆ ಗಣೇಶೋತ್ಸವ ಆಚರಿಸಲು ಮಹಾನಗರ ಪಾಲಿಕೆ ಅವಕಾಶ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಮತ್ತು ಅವಕಾಶ ನೀಡಬಾರದು ಎಂದು ಕೋರಿ ಹೈಕೋರ್ಟ್‌ನ ಮೊರೆ ಹೋಗಲಾಗಿತ್ತು. ಮಂಗಳವಾರ ಈ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠ ತೀರ್ಪನ್ನು ಕಾದಿರಿಸಿತ್ತು. ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರ ಪೀಠದ ಮುಂದೆ ವಿಚಾರಣೆ ನಡೆದಿತ್ತು. ಚಾಮರಾಜಪೇಟೆ ಮೈದಾನದ ವಿಚಾರ ಸುಪ್ರೀಂಕೋರ್ಟ್‌ನಲ್ಲಿದ್ದು, ಅದರ ತೀರ್ಪು ಮಂಗಳವಾರವೇ ಬರಲಿರುವ ಹಿನ್ನೆಲೆಯಲ್ಲಿ ಅದನ್ನು ನೋಡಿಕೊಂಡು ತೀರ್ಮಾನ ಮಾಡೋಣ ಎಂದು ಅವರು ತಿಳಿಸಿದ್ದರು. ಹೀಗಾಗಿ ಬೆಳಗ್ಗಿನ ವಿಚಾರಣೆಯನ್ನು ಮುಂದೂಡಲಾಗಿತ್ತು.
ಅರ್ಜಿದಾರರ ವಾದ ಏನಿತ್ತು?
ಮಹಾನಗರ ಪಾಲಿಕೆ ವಿಶೇಷ ಅನುಮತಿಯ ಮೂಲಕ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ʻʻಈದ್ಗಾ ಮೈದಾನದಲ್ಲಿ ವಿಶೇಷ ಅನುಮತಿಯ ಮೂಲಕ ಧಾರ್ಮಿಕ ಆಚರಣಗೆ ಅವಕಾಶ ನೀಡಿದ್ದು ಸರಿಯಲ್ಲ. 1947 ರ ಬಳಿಕ ಇದುವರೆಗೂ ಯಾವುದೇ ಧಾರ್ಮಿಕ ಆಚರಣೆಯೂ ನಡೆದಿಲ್ಲ. ಕೇವಲ ಎರಡು ಬಾರಿ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಲಾಗಿತ್ತು. 1937 ರ ಧಾರ್ಮಿಕ ಕಾಯಿದೆ ಪ್ರಕಾರ ಅಲ್ಲಿಯ ವರೆಗೂ ಇದ್ದ ಧಾರ್ಮಿಕ ಆಚರಣೆ ಬದಲಾವಣೆಗೆ ಅವಕಾಶ ಇಲ್ಲʼʼ ಎಂದು ಅರ್ಜಿದಾರರು ವಾದಿಸಿದರು.
ಇದಕ್ಕೆ ಸರಕಾರದ ಪರವಾಗಿ ಮಾಹಿತಿ ನೀಡಿದ ಸರ್ಕಾರದ ಪರ ಎಎಜಿ ಧ್ಯಾನ್ ಚಿನ್ನಪ್ಪ ಅವರು, ʻʻಚಾಮರಾಜಪೇಟೆ ಈದ್ಗಾ ಸಂಬಂಧ ದ್ವಿಸದಸ್ಯ ಪೀಠವು ಗಣೇಶೋತ್ಸವಕ್ಕೆ ಅವಕಾಶ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ ಎಂದು ಹೇಳಿದೆʼʼ ಎಂದರು.
ಆಗ ನ್ಯಾಯಮೂರ್ತಿಗಳು ವಿಭಾಗೀಯ ಪೀಠದ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶ ನೋಡಿಕೊಂಡು ಆದೇಶ ಮಾಡುವುದಾಗಿ ಹೇಳಿದರು. ಹೀಗಾಗಿ ವಿಚಾರಣೆಯನ್ನು ಸಂಜೆ ೩.೩೦ಕ್ಕೆ ವಿಚಾರಣೆಯನ್ನು ಮುಂದೂಡಲಾಯಿತು.
೩.೩೦ಕ್ಕೆ ಹೈಕೋರ್ಟ್‌ನಲ್ಲಿ ಮತ್ತೆ ವಿಚಾರಣೆ ಆರಂಭಗೊಂಡಾಗಲೂ ಚಾಮರಾಜಪೇಟೆ ಮೈದಾನಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ಬಂದಿರಲಿಲ್ಲ. ಅಲ್ಲಿನ ಪ್ರಕರಣವನ್ನು ದ್ವಿಸದಸ್ಯ ಪೀಠದಿಂದ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಪರಿಸ್ಥಿತಿಯನ್ನು ಅವಲೋಕಿಸಿದ ನ್ಯಾಯಮೂರ್ತಿ ಅಶೋಕ್ ಏಣಗಿ ಅವರು, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ನೀಡಿದರು. ಮತ್ತು ಗಣೇಶೋತ್ಸವ ಆಚರಣೆಗೆ ಕೋರಿ ಬರುವ ಅರ್ಜಿಗಳನ್ನು ಗಮನಿಸಿ ನಿರ್ಧರಿಸುವ ಅಧಿಕಾರವನ್ನು ಪಾಲಿಕೆ ಕಮಿಷನರ್ ಅವರಿಗೆ ನೀಡಿದರು.
ಒಂದೊಮ್ಮೆ ಸುಪ್ರೀಂಕೋರ್ಟ್ ಆದೇಶದ ನಂತರ, ಅರ್ಜಿದಾರರಿಗೆ ಮತ್ತೆ ಕೋರ್ಟ್‌ಗೆ ಬರಬೇಕು ಅನಿಸಿದರೆ ಬರಬಹುದು ಎಂಬ ಅವಕಾಶವನ್ನೂ ನ್ಯಾಯಮೂರ್ತಿಗಳು ನೀಡಿದರು.
ಇದನ್ನೂ ಓದಿ| ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಪಾಲಿಕೆಯಿಂದ ಅನುಮತಿ