Site icon Vistara News

ದೇಶ ಎತ್ತ ಸಾಗುತ್ತಿದೆ?: ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ ಹಿಜಾಬ್‌ ಯುವತಿ ಆಲಿಯಾ

ಬೆಂಗಳೂರು: ಹಿಜಾಬ್‌ ಧಾರಣೆ ಕುರಿತು ಉಡುಪಿಯಿಂದ ಆರಂಭವಾದ ವಿವಾದದ ಕೇಂದ್ರ ಬಿಂದುವಾಗಿದ್ದ ಆರು ಯುವತಿಯರಲ್ಲಿ ಇಬ್ಬರು ಸರ್ಕಾರಕ್ಕೆ ಟ್ವಿಟ್ಟರ್‌ ಮೂಲಕ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.

ಉಡುಪಿಯ ಸರ್ಕಾರಿ ಕಾಲೇಜಿನ ಆರು ಯುವತಿಯರಲ್ಲೊಬ್ಬರಾದ ಆಲಿಯಾ ಅಸ್ಸಾದಿ 2021ರ ಅಕ್ಟೋಬರ್‌ನಲ್ಲಿ ಟ್ವಿಟ್ಟರ್‌ ಖಾತೆ ತೆರೆದಿದ್ದಾರೆ. ಮತ್ತೊಬ್ಬ ಯುವತಿ ಅಲ್ಮಾಸ್‌ 2022ರ ಫೆಬ್ರವರಿಯಲ್ಲಿ ಟ್ವಿಟ್ಟರ್‌ ಪ್ರವೇಶಿಸಿದ್ದಾರೆ.

ಆಗಿಂದಾಗ್ಗೆ ಹಿಜಾಬ್‌ ಕುರಿತು ವಿಡಿಯೋ, ಪೋಸ್ಟ್‌ಗಳನ್ನು ಯುವತಿಯರು ಷೇರ್‌ ಮಾಡುತ್ತಿದ್ದಾರೆ. ಶುಕ್ರವಾರದಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆಗಳು ಆರಂಭವಾಗಿವೆ. ಪರೀಕ್ಷೆಗೂ ಮುನ್ನವೇ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಹಿಜಾಬ್‌ ಧರಿಸಿ ಪರೀಕ್ಷೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ಆಲಿಯಾ ಅಸ್ಸಾದಿ ಹಾಗೂ ರೇಷಂ ಇಬ್ಬರೂ ಕೊನೆ ಕ್ಷಣದಲ್ಲಿ ಹಾಲ್‌ ಟಿಕೆಟ್‌ ಪಡೆದಿದ್ದರು. ಪರೀಕ್ಷೆ ದಿನ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದರು. ಹಿಜಾಬ್‌ ಧರಿಸಿ ಪರೀಕ್ಷೆಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದರು. ಹೈಕೋರ್ಟ್‌ ಆದೇಶ ಹಾಗೂ ಸರ್ಕಾರದ ಆದೇಶದ ಆಧಾರದಲ್ಲಿ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ ನಂತರ ಪರೀಕ್ಷೆ ಬರೆಯದೆ ಮನೆಗೆ ತೆರಳಿದ್ದರು.

ನಾಗೇಶ್‌ ಅವರ ಹೇಳಿಕೆಗೆ ಏಪ್ರಿಲ್‌ 19ರಂದು ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿದ್ದ ಅಲ್ಮಾಸ್‌, “ದ್ವಿತೀಯ ಪಿಯು ಪರೀಕ್ಷೆ ವೇಳೆಗೆ ಹಿಜಾಬ್‌ ಧರಿಸಲು ಅವಕಾಶವಿಲ್ಲವೆಂದು ಬಿ.ಸಿ. ನಾಗೇಶ್‌ ಹೇಳಿದ್ದಾರೆ. ಒಂದು ಬಟ್ಟೆಯ ತುಂಡಿಗಾಗಿ ಶಿಕ್ಷಣವನ್ನು ತಿರಸ್ಕರಿಸುವುದು ಶಿಕ್ಷಣ ಸಚಿವರಾಗಿ ನಿಮಗಿದು ನ್ಯಾಯವೇ? ಬಹಳ ದಿನಗಳಿಂದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ, ಈಗ ಅದೆಲ್ಲವೂ ವ್ಯರ್ಥವಾಗುತ್ತದೆ. ನಮಗೆ ಈ ಅನ್ಯಾಯ ಮಾಡಬೇಡಿ” ಎಂದು ತಿಳಿಸಿದ್ದರು.

ವಿದ್ಯಾರ್ಥಿನಿಯರು ಅಂತಿಮ ಕ್ಷಣದಲ್ಲಿ ಹಾಲ್‌ ಟಿಕೆಟ್‌ ಪಡೆದದ್ದಷ್ಟೆ ಅಲ್ಲದೆ ಹೈಕೋರ್ಟ್‌ ಆದೇಶವನ್ನೂ ಮೀರಿ ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಮುಂದಾಗಿದ್ದನ್ನು ಶಾಸಕ ರಘುಪತಿ ಭಟ್‌ ಆಕ್ಷೇಪಿಸಿದ್ದರು. ಹಿಜಾಬ್‌ ವಿವಾದ ಪೂರ್ವಯೋಜಿತ ಎನ್ನುವ ಅನುಮಾನ ಪ್ರಾರಂಭದಿಂದಲೂ ಇದೆ. ಈಗ ಅದಕ್ಕೆ ಸಾಕ್ಷಿ ಸಿಕ್ಕಿದೆ. ಪರೀಕ್ಷೆಗೆ ಒಂದು ದಿನ ಮುನ್ನವೇ ಹಾಲ್‌ ಟಿಕೆಟ್‌ ಪಡೆದುಕೊಳ್ಳಲು ಕಾಲೇಜು ಮಂಡಳೀ ತಿಳಿಸಿತ್ತು. ಆದರೆ ಈ ಇಬ್ಬರು ವಿದ್ಯಾರ್ಥಿನಿಯರು ತಡವಾಗಿ ಹಾಲ್‌ ಟಿಕೆಟ್‌ ಪಡೆದು ಪರೀಕ್ಷಾ ಕೇಂದ್ರದಲ್ಲಿ ಅನವಶ್ಯಕ ವಿವಾದ ಎಬ್ಬಿಸಿದ್ದಾರೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಪರೀಕ್ಷಾ ಕೇಂದ್ರದಲ್ಲಿ ಅಹಿತಕರ ವಾತಾವರಣವನ್ನು ನಿರ್ಮಿಸಲಾಯಿತು ಹಾಗೂ ಇನ್ನಿತರೆ ವಿದ್ಯಾರ್ಥಿಗಳಿಗೆ ತೊಂದರೆ ಉಂಟುಮಾಡಲಾಯಿತು.

ನಾವು ಹೈಕೋರ್ಟ್‌ ಆದೇಶವನ್ನು ಪಾಲಿಸುತ್ತೇವೆ, ಇಂತಹದ್ದನ್ನು ಭವಿಷ್ಯದಲ್ಲಿ ಸಹಿಸಬಾರದು. ಇಲ್ಲದಿದ್ದರೆ ಭವಿಷ್ಯದ ಶಿಕ್ಷಣಕ್ಕೆ ತೊಂದರೆ ಆಗುತ್ತದೆ. ಈ ಇಬ್ಬರು ವಿದ್ಯಾರ್ಥಿನಿಯರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಟ್ವೀಟ್‌ ಮಾಡಿದ್ದರು.

ರಘುಪತಿ ಭಟ್‌ ಅವರ ಟ್ವೀಟ್‌ಗೆ ಆಲಿಯಾ ಅಸ್ಸಾದಿ ಪ್ರತಿಕ್ರಿಯಿಸಿದ್ದಾರೆ. ಟ್ವಿಟ್ಟರ್‌ ಮೂಲಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ. “ಇಂದು ನನಗೆ ಹಾಗೂ ರೇಷ್ಮಾಗೆ ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಪದೇ ಪದೆ ನಮಗೆ ನಿರಾಸೆ ಎದುರಾಗುತ್ತಿದೆ. ನಾಳೆ ನಾವು ಪರೀಕ್ಷೆ ಬರೆಯಲು ಹೋದರೆ ಕ್ರಿಮಿನಲ್‌ ಮೊಕದ್ದಮೆ ಹೂಡುವುದಾಗಿ ಶಾಸಕ ರಘುಪತಿ ಭಟ್‌ ಬೆದರಿಸಿದ್ದಾರೆ. ಇಲ್ಲಿ ಅಪರಾಧ ಏನು ನಡೆದಿದೆ? ಈ ದೇಶ ಎತ್ತ ಸಾಗುತ್ತಿದೆ?” ಎಂದು ಹೇಳಿದ್ದಾರೆ.

ಮಾಧ್ಯಮದಲ್ಲಿ ಪ್ರಚಾರ ಪಡೆಯುವ ತಂತ್ರ

ವಿದ್ಯಾರ್ಥಿನಿಯರ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಯೂನಿಫಾರ್ಮ್‌ ಧರಿಸಿ ಶಾಲೆಗೆ ಆಗಮಿಸಬೇಕು ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಹೈಕೋರ್ಟ್‌ ಆದೇಶ ಮೀರಿ ಹಿಜಾಬ್‌ಗೆ ಕೆಲವರು ಬೆಂಬಲ ನೀಡುತ್ತಿದ್ದಾರೆ. ನೆಲದ ಕಾನೂನನ್ನು ಪಾಲನೆ ಮಾಡುವುದಿಲ್ಲ, ನ್ಯಾಯಾಲಯಕ್ಕೆ ಗೌರವ ಕೊಡುವುದಿಲ್ಲ ಎನ್ನುವಂತೆ ನಡೆಯುತ್ತಿದ್ದಾರೆ. ಇದು ಅವರ ಮಾನಸಿಕತೆ. ದೇಶದಲ್ಲಿ ಎಲ್ಲರೂ ಒಟ್ಟಾಗಿ ಬದುಕಬೇಕು ಎನ್ನುವುದು ನಮ್ಮ ಸಂಕಲ್ಪ. ಹೆಣ್ಣುಮಕ್ಕಳು ಶಿಕ್ಷಣ ಪಡೆದು ತಮ್ಮ ಕಾಲ ಮೇಲೆ ನಿಲ್ಲಬೇಕು ಎನ್ನುವುದು ನಮ್ಮ ಉದ್ದೇಶ. ಪಿಯು ಪರೀಕ್ಷೆ ಬರೆಯಬೇಕಿದ್ದವರು ಹಾಲ್‌ ಟಿಕೆಟ್‌ ಪಡೆದು ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಯಾವುದೋ ದೇಶದ ಭಯೋತ್ಪಾದಕರು ಬೆಂಬಲ ನೀಡಿ, ಭಾರತದಲ್ಲಿ ಏನೋ ನಡೆಯುತ್ತಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಇವರು ಶಿಕ್ಷಣ ಪಡೆದು ಸ್ವಾವಲಂಬಿ ಆಗಬೇಕು. ಈಗ ಅವರ ಹಿಂದಿರುವ ಸಂಘಟನೆ ಭವಿಷ್ಯದಲ್ಲಿ ಜತೆಗೆ ನಿಲ್ಲುವುದಿಲ್ಲ ಎನ್ನುವುದನ್ನು ತಿಳಿಯಬೇಕು ಕರಂದ್ಲಾಜೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಓದಿಗಾಗಿ: CET 2022 | ಸಿಇಟಿ ಅರ್ಜಿ ಸಲ್ಲಿಕೆಗೆ ಹೊಸ ಲಿಂಕ್‌

Exit mobile version