ಬೆಂಗಳೂರು: ತಮಿಳುನಾಡಿಗೆ ಪರಾರಿಯಾಗಿದ್ದ ಆ್ಯಸಿಡ್ ನಾಗೇಶ್, ಪೊಲೀಸರಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಈ ಕುರಿತು ಸ್ವತಃ ಬೆಂಗಳೂರು ಪೊಲೀಸ್ ಕಮಿಷನರ್ ಅನೇಕ ಅಂಶಗಳನ್ನು ಹೊರಗೆಡವಿದ್ದಾರೆ. ಆರೋಪಿಯನ್ನು ಬಂಧಿಸಿದ ನಂತರ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ನಾಗೇಶನನ್ನು ಬಂಧಿಸಲು 16 ದಿನ ಪೊಲೀಸರು ಕಷ್ಟ ಪಟ್ಟಿದ್ದಾರೆ. ಬರೊಬ್ಬರಿ 100 ಪೊಲೀಸ್ ಸಿಬ್ಬಂದಿ ಪರಿಶ್ರಮದಿಂದಾಗಿ ಪತ್ತೆ ಮಾಡಲು ಸಾಧ್ಯವಾಗಿದೆ ಎಂದಿದ್ದಾರೆ. ನಾಗೇಶನ ಬಂಧನದ ಸ್ಟೋರಿ ಯಾವುದೇ ಸಿನಿಮಾ ಕಥೆಗೂ ಕಡಿಮೆ ಇಲ್ಲದಂತೆ ತೋರುತ್ತಿದೆ.
ಸೋಲಾರ್‌ಗೆ ಸಂಬಂಧಿಸಿದ ಖಾಸಗಿ ಕಂಪನಿಯಲ್ಲಿನ ಲೆಟರ್ ಹೆಡ್ ಬಳಸಿ ನಾಗೇಶ್ ಆಸಿಡ್ ಖರಿದಿಸಿದ್ದ. ಆದರೆ ಆಕೆ ಒಪ್ಪಬಹುದೆಂಬ ಕಾರಣಕ್ಕೆ ಸುಮ್ಮನಿದ್ದ. 22ನೇ ತಾರೀಕು ಕೂಡ ಯುವತಿ ಕೆಲಸ ಮಾಡುವ ಕಂಪನಿಗೆ ಹೋಗಿ ಮದುವೆ ಆಗು ಎಂದು ಕೇಳಿದ್ದ. ಆಗ ಯುವತಿ ಸ್ಪಷ್ಟವಾಗಿ ನಿರಾಕರಿಸಿದ್ದಳು. ಕಂಪನಿಯ ಮ್ಯಾನೇಜರ್ ಕೂಡ ಆ್ಯಸಿಡ್ ನಾಗೇಶ್‌ಗೆ ಬೈದಿದ್ದಾರೆ. ನಂತರ ಆಸಿಡ್ ಹಾಕಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ | Acid Attack | ಪಾಪ ತೊಳೆಯಲು ದೇವಸ್ಥಾನದಲ್ಲಿ ಅಡಗಿದ್ದ ಆ್ಯಸಿಡ್ ನಾಗೇಶ್ ಅರೆಸ್ಟ್
ಆ್ಯಸಿಡ್ ನಾಗೇಶ್ ಈ ಹಿಂದೆ ಕಂಪನಿ ಶುರು ಮಾಡುತ್ತೇನೆ ಎಂದು ಸೈಟು ಕೂಡ ಮಾರಿದ್ದ. ಆ ಹಣ ಕೂಡ ಈತನ ಬಳಿ ಇತ್ತು. ಪರಾರಿಯಾದ ಬಳಿಕ ಅಣ್ಣನಿಗೆ ಮಾಹಿತಿ ಹಂಚಿಕೊಂಡಿದ್ದ. ರಾಜಗೋಪಾಲನಗರ ಪೊಲೀಸರಿಗೆ ಸರೆಂಡರ್ ಆಗು ಎಂದು ಸಹೋದರ ಹೇಳಿದ್ದಾನೆ. ಆದರೂ ಕೋರ್ಟ್‌ಗೆ ಹೋಗುವುದಾಗಿ ಹೇಳಿದ ನಾಗೇಶ್ ತಮಿಳುನಾಡಿಗೆ ಪರಾರಿಯಾಗಿದ್ದಾನೆ. ದೈವಭಕ್ತನಾಗಿರುವ ಕಾರಣ ಹಲವು ಆಶ್ರಮಗಳನ್ನ ಪೊಲೀಸರು ಹುಡುಕಾಡಿದ್ದರು.
ನಾಗೇಶನ ಹುಡುಕಾಟಕ್ಕೆ ಪೊಲೀಸರು ವಿವಿಧ ಟೀಂ ರಚಿಸಿ ಕಳಿಸಿದ್ದರು. ನಂತರ ತಿರುವಣ್ಣಾಮಲೈನಲ್ಲಿರುವ ಆಶ್ರಮದಿಂದ ಇನ್‌ಸ್ಪೆಕ್ಟರ್ ಪ್ರವೀಣ್, ನಾಗೇಶನ ಫೊಟೋಗಳನ್ನ ಕಳಿಸುವಂತೆ ಹೇಳಿದ್ದರು. ಎಎಸ್‌ಐ ಶಿವಣ್ಣ , ಕಾನ್‌ಸ್ಟೇಬಲ್ ರವಿ ಅದೇ ಜಾಗದಲ್ಲಿ ಹೋಗುತ್ತಿದ್ದರು. ಇಬ್ಬರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲಿನ ಜನರಿಗೆ ಈತನ ವಿಚಾರವನ್ನ ತಿಳಿ ಹೇಳಿದ್ದಾರೆ. ನಂತರ ಇನ್ನೊಂದು ಟೀಂಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಹದಿನೈದು ದಿನದಲ್ಲಿ ಸತತವಾಗಿ 100 ಜನ ಪೊಲೀಸರು ನಾಗೇಶನನ್ನು ಹಿಡಿಯಲು ಕೆಲಸ ಮಾಡಿದ್ದಾರೆ. ಸಾರ್ವಜನಿಕರು ಕೂಡ ಮಾಹಿತಿ ಕೊಟ್ಟಿದ್ದಾರೆ. ಅವರಿಗೂ ನಾವು ಅಭಿನಂದನೆ ಅರ್ಪಿಸುತ್ತೇವೆ ಎಂದು ಕಮಲ್‌ಪಂತ್ ಹೇಳಿದರು.
ಆ್ಯಸಿಡ್ ನಾಗೇಶ್ ಬಂಧನಕ್ಕೆ ಗೃಹಸಚಿವರ ಅಭಿನಂದನೆ
ಆ್ಯಸಿಡ್ ನಾಗೇಶ್ ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಯಾಗಿದ್ದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಹರ್ಷ ವ್ಯಕ್ತ ಪಡಿಸಿದ್ದಾರೆ. ಈ ಹಿಂದೆ ಅನೇಕ ದಿನಗಳಾದರೂ ನಾಗೇಶ್ ಸಿಗದಿದ್ದಾಗ ಪದೇಪದೆ ಸುದ್ದಿಗಾರರು ಈ ಬಗ್ಗೆ ಗೃಹಸಚಿವರನ್ನು ಪ್ರಶ್ನಿಸುತ್ತಿದ್ದರು. ಒಮ್ಮೆ ತುಸು ಕೋಪದಿಂದಲೇ ಉತ್ತರ ನೀಡಿದ್ದ ಆರಗ ಜ್ಞಾನೇಂದ್ರ, ಆತ ಭೂಮಿಯ ಮೇಲೆ ಬದುಕಿದ್ದರೆ ಅರೆಸ್ಟ್ ಮಾಡುತ್ತೇವೆ ಎಂದಿದ್ದರು.
ಇದೀಗ ಬಂಧನದ ನಂತರ ಮಾತನಾಡಿರುವ ಜ್ಞಾನೇಂದ್ರ, ಆರೋಪಿಯನ್ನು ಬಂಧಿಸಿ ಹೆಡೆಮುರಿ ಕಟ್ಟುವುದರ ಮೂಲಕ ನಮ್ಮ ಪೊಲೀಸರು, ದೇಶದಲ್ಲಿಯೇ ವೃತ್ತಿಪರ ಪಡೆಯೆಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ತಮಿಳು ನಾಡು ಪೊಲೀಸರೂ, ಹೀನ ಕೃತ್ಯ ನಡೆಸಿದ ಅಪರಾಧಿಯನ್ನು ಬಂಧಿಸುವ ಕಾರ್ಯದಲ್ಲಿ ನಮ್ಮ ಪೊಲೀಸರಿಗೆ ನೆರವಾಗಿದ್ದಾರೆ. ಅಪರಾಧಿಗೆ ಉಗ್ರ ಶಿಕ್ಷೆಯಾಗುವಂತೆ, ಅಪರಾಧಿಯನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು. ಆರೋಪಿಯ ವಿಚಾರಣೆ ನಡೆಸಿ ಎಲ್ಲ ರೀತಿಯ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆರೋಪಿಗೆ ತಕ್ಕ ಶಿಕ್ಷೆ ಆಗುವ ಮೂಲಕ ಸಂತ್ರಸ್ತ ಮಹಿಳೆಗೆ ಹಾಗೂ ಕುಟುಂಬ ವರ್ಗಕ್ಕೆ ಸ್ವಲ್ಪವಾದರೂ ನೆಮ್ಮದಿ ದೊರಕಿದಂತಾಗುವುದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಸಂತ್ರಸ್ತ ಮಹಿಳೆ, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ |Acid Attack | ಪಾಪ ತೊಳೆಯಲು ದೇವಸ್ಥಾನದಲ್ಲಿ ಅಡಗಿದ್ದ ಆ್ಯಸಿಡ್ ನಾಗೇಶ್ ಅರೆಸ್ಟ್