ಚಿತ್ರದುರ್ಗ: ಚಿತ್ರದುರ್ಗ ಶಾಸಕರ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದ್ದು, ಈ ಕುರಿತು ದೂರು ನೀಡಲಾಗಿದೆ. ಇದು, ಹನಿ ಟ್ರ್ಯಾಪ್ ರಾಜ್ಯದಲ್ಲಿ ಎಷ್ಟೊಂದು ವ್ಯಾಪಕವಾಗಿದೆ ಎಂಬುದನ್ನು ಸಾಬೀತುಪಡಿಸಿದೆ.
ಇಬ್ಬರು, ಮೂವರು ಸ್ವಾಮೀಜಿಗಳನ್ನು ಹನಿ ಟ್ರ್ಯಾಪ್ ಮಾಡಿ ದುರ್ಲಾಭ ಪಡೆದುಕೊಂಡ, ಕಂಬಿ ಎಣಿಸಿದ ಪ್ರಕರಣಗಳು ಈಗಾಗಲೇ ವರದಿಯಾಗಿರುವ ಮಧ್ಯೆಯೇ, ಚಿತ್ರದುರ್ಗ ಶಾಸಕರನ್ನೂ ಹನಿಟ್ರ್ಯಾಪ್‌ಗೆ ಕೆಡವಲು ಯತ್ನಿಸಿದ್ದು ವರದಿಯಾಗಿದೆ. ಆದರೆ ಶಾಸಕರು ಸಕಾಲದಲ್ಲಿ ಎಚ್ಚೆತ್ತುಕೊಂಡು ದೂರು ನೀಡಿದ್ದಾರೆ. ಅದು ನಡೆದಿದ್ದು ಹೀಗೆ-
ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಮೊಬೈಲ್‌ಗೆ ಕೆಲ ದಿನ ಹಿಂದೆ ಅಪರಿಚಿತ ನಂಬರ್‌ನಿಂದ ಕರೆ ಬಂತು. ತಮ್ಮ ಕ್ಷೇತ್ರದವರಿರಬಹುದು ಎಂದು ಶಾಸಕರು ಕಾಲ್ ರಿಸೀವ್ ಮಾಡಿದ್ದರು. ಕರೆ ರಿಸೀವ್ ಮಾಡಿದಾಗ ಹಿಂದಿಯಲ್ಲಿ ಆಕೆ ಮಾತನಾಡಿದ್ದಳು. ನಂತರ ಕೆಲ ದಿನಗಳ ಬಳಿಕ ಮತ್ತದೇ ನಂಬರ್‌ನಿಂದ ವಾಟ್ಸ್ಯಾಪ್‌ನಲ್ಲಿ ವಿಡಿಯೋ ಕರೆ ಬಂತು. ಈ ಬಾರಿ ಯುವತಿ ನಗ್ನವಾಗಿ ವಿಡಿಯೋ ಕಾಲ್ ಮಾಡಿದ್ದಳು. ವಿಡಿಯೋ ಕಾಲ್ ರಿಸೀವ್ ಮಾಡಿದ್ದೇ ತಡ ಇದರಿಂದ ಆಘಾತಗೊಂಡು ಶಾಸಕರು ಕರೆ ಕಟ್ ಮಾಡಿದ್ದರು.
ಆದರೆ ಅಷ್ಟಕ್ಕೇ ನಿಲ್ಲಿಸದ ಆಕೆ ಶಾಸಕರ ನಂಬರ್‌ಗೆ ಅಶ್ಲೀಲ ವೀಡಿಯೋ ರವಾನಿಸಿದ್ದಳು. ಶಾಸಕರು ಕೂಡಲೇ ವಿಡಿಯೋ ಡಿಲೀಟ್ ಮಾಡಿ ನಂಬರ್ ಬ್ಲಾಕ್ ಮಾಡಿದ್ದರು. ನಂತರ ಈ ಸಂಬಂಧ ಚಿತ್ರದುರ್ಗ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಶಾಸಕರನ್ನು ಹನಿ ಟ್ರ್ಯಾಪ್ ಮಾಡಲು ಯಾರೋ ಪ್ರಯತ್ನಿಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಈ ಕುರಿತು ಚಿತ್ರದುರ್ಗ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಹನಿ ಟ್ರ್ಯಾಪ್ ಮೂಲಕ ಉದ್ಯಮಿಯಿಂದ ಹಣ ಸುಲಿಗೆ ಮಾಡಿದ ನಾಯಕ ನಟ ಯುವರಾಜ್ ಅರೆಸ್ಟ್