Site icon Vistara News

Karnataka Election 2023: ನಾನು ತುಂಡ್ ಮಂತ್ರಿ, ವಸತಿ ಖಾತೆ ಮಂತ್ರಿಗಿರಿನೇ ಅಲ್ಲ: ವಿ. ಸೋಮಣ್ಣ

Housing is not a ministerial berth says V Somanna Karnataka Election 2023 updates

ಮೈಸೂರು: ನಾನು ತುಂಡ್ ಮಂತ್ರಿ. ವಸತಿ ಖಾತೆ ಮಂತ್ರಿಗಿರಿನೇ ಅಲ್ಲ. ವಸತಿ ಖಾತೆಯನ್ನು ಏನೋ ಮಂತ್ರಿ ಕೊಡಬೇಕು ಅಂತ ಮಾಡಿಕೊಂಡಿರುವ ವ್ಯವಸ್ಥೆಯಾಗಿದೆ ಎಂದು ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ವಿ. ಸೋಮಣ್ಣ (V Somanna) ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತ ಸಂಘದಿಂದ ಆಯೋಜನೆ ಮಾಡಿದ್ದ ಸಂವಾದದಲ್ಲಿ ಮಾತನಾಡಿದ ವಿ. ಸೋಮಣ್ಣ, ಈ ಸಚಿವಗಿರಿ ಬಗ್ಗೆ ಗೊತ್ತಿದ್ದರೂ ಸಿದ್ದರಾಮಯ್ಯ ನನ್ನ ಮೇಲೆ ದೂರುತ್ತಾರೆ. ಒಂದೇ ಒಂದು ಮನೆ ಕೊಟ್ಟಿಲ್ಲ ಎಂದು ಹೇಳುತ್ತಾರೆ. ಈ ಮೂರೂವರೆ ವರ್ಷದಲ್ಲಿ ವರುಣಕ್ಕೆ 4045 ಮನೆಯನ್ನು ಕೊಟ್ಟಿದ್ದೇನೆ. ಹೊಸಕೋಟೆ ಸಮೀಪದ ಗ್ರಾಮದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಾರ್ಯಕ್ರಮ ಆಗಿತ್ತು. ಆಗ 8000 ಮನೆಗಳನ್ನು ಹಂಚಿಕೆ ಮಾಡಿದ್ದೆವು‌. ಆಗ ಇದೇ ಸಿದ್ದರಾಮಯ್ಯ ಅವರೇ ನನ್ನನ್ನು ಹೊಗಳಿದ್ದಾರೆ ಎಂದು ವಿ. ಸೋಮಣ್ಣ ಹೇಳಿದರು.

ಇದನ್ನೂ ಓದಿ: Narendra Modi Road Show: ಬೆಂಗಳೂರಿನ ಜತೆಗೆ ಶಿವಮೊಗ್ಗ, ನಂಜನಗೂಡಿನಲ್ಲೂ ಇಂದು ಮೋದಿ ಕಮಾಲ್‌

ಈ ಎರಡು ದಿನ ಸುಮ್ಮನಿದ್ದು ಬಿಡಿ

ನಿಮಗೆ ಜಾಣ ಕುರುಡುತನವೇ ಅಥವಾ ಬೇರೆಯವರ ಕೆಲಸ ಹೊಗಳಬೇಕು ಅಂತ ಬೇರೆ ಥರ ಮಾತನಾಡುತ್ತಿದ್ದೀರಾ ಸಿದ್ದರಾಮಯ್ಯ ಅವರೇ ಎಂದು ಪ್ರಶ್ನೆ ಮಾಡಿರುವ ವಿ. ಸೋಮಣ್ಣ, ವರುಣದಲ್ಲಿ ಶಾಲೆ, ಆಸ್ಪತ್ರೆ, ಕಾಲೇಜು, ರಸ್ತೆ ಏನೂ ಇಲ್ಲ. ಇದೇನಾ ನಿಮ್ಮ ಆಡಳಿತ? ಮೊದಲು ನೀವು ನಾಲ್ಕು ಜನದ ಪಟಾಲಮ್ಮು ಬಿಟ್ಟು ಹೊರಬನ್ನಿ. ನಾನು, ನೀವು ಎಲ್ಲರೂ ಒಂದು ಕಡೆ ಇದ್ದು ಬಿಡೋಣ. ಮೇ 8, 9ರಂದು ಎರಡು ರಾತ್ರಿ ಸುಮ್ಮನೆ ಇದ್ದುಬಿಡೋಣ. ಯಾರೂ ಹೊರಗೆ ಹೋಗೋದು ಬೇಡ. ಚುನಾವಣೆಯನ್ನು ಜನರಿಗೆ ಬಿಡೋಣ. ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡೋಣ ಎಂದು ಸವಾಲು ಹಾಕಿದರು.

ಸಿದ್ದರಾಮ್ಯರಷ್ಟು ಅದೃಷ್ಟವಂತರು ಯಾರೂ ಇಲ್ಲ

ಸಿದ್ದರಾಮಯ್ಯ ಅವರೇ ನಿಮ್ಮಷ್ಟು ಅದೃಷ್ಟವಂತ ಯಾರೂ ಇಲ್ಲ. ವರುಣವನ್ನು ತಾಲೂಕು ಮಾಡಿಲ್ಲ. ಒಂದು ಪಟ್ಟಣ ಪಂಚಾಯಿತಿಯನ್ನಾಗಿಯೂ ಮಾಡಿಲ್ಲ. ಆದರೂ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರಾಗಿದ್ದೀರಿ. 14 ಬಜೆಟ್ ಅನ್ನು ಮಂಡಿಸಿದ್ದಾರೆ. ನೀವು ಏನೂ ಮಾಡಿಲ್ಲ. ಆದರೂ ಇಷ್ಟೆಲ್ಲ ಸಿಕ್ಕಿದೆ. ದೇವರ ಕೈಯಲ್ಲಿ ಬರೆಸಿಕೊಂಡು ಬಂದವರು ಯಾರೂ ಇಲ್ಲ. ನಿಮ್ಮಷ್ಟು ಅದೃಷ್ಟವಂತ ಯಾರೂ ಇಲ್ಲ‌. ನಿಮ್ಮ ಕಾರ್ಯವೈಖರಿ ನಿಮಗೆ ತೃಪ್ತಿಯಾಗಿದೆಯೇ ಹೇಳಿ? ಎಂದು ಸೋಮಣ್ಣ ಪ್ರಶ್ನೆ ಮಾಡಿದರು.

ನಿಮಗೆ ಚಾಲೆಂಜ್ ಮಾಡಲ್ಲ, ಮನವಿ ಮಾಡುತ್ತೇನೆ. ವರುಣ ಕ್ಷೇತ್ರಕ್ಕೆ ಹೋಗೋಣ ಬನ್ನಿ. ಏನಾಗಬೇಕಿತ್ತು ಎಂಬುದನ್ನು ನೋಡೋಣ ಬನ್ನಿ. ರಾತ್ರಿ 1 ಗಂಟೆಗೆ ಮಲಗುತ್ತೇನೆ. ಬೆಳಗ್ಗೆ 4.30ಕ್ಕೆ ಏಳುತ್ತೇನೆ. ನನ್ನಷ್ಟು ಜನರ ಹತ್ತಿರಕ್ಕೆ ಹೋಗುವ ರಾಜಕಾರಣಿ ಯಾರೂ ಇಲ್ಲ. ಇದನ್ನು ನಾನು ಅಹಂಕಾರದಿಂದ ಹೇಳಿಕೊಳ್ಳುತ್ತೇನೆ ಎಂದು ಸೋಮಣ್ಣ ತಿಳಿಸಿದರು.

ಇದನ್ನೂ ಓದಿ: Modi in Karnataka : ಎಲೆಕ್ಟ್ರಿಕ್‌ ಐಟಮ್‌ಗಳ ಜತೆ ಮೋದಿ ರೋಡ್‌ ಶೋ ನೋಡಲು ಬಂದ ವ್ಯಕ್ತಿಯ ವಿಚಾರಣೆ

ವರುಣ ಟಾಸ್ಕ್‌ ನೀಡಿದ್ದು ಅಮಿತ್‌ ಶಾ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಮ್ಮ ಮನೆಗೆ ಬಂದು ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಟಾಸ್ಕ್ ನೀಡಿದ್ದರು ಎಂದು ವಿ. ಸೋಮಣ್ಣ ವರುಣ ಸ್ಪರ್ಧೆಯ ಗುಟ್ಟನ್ನು ಬಿಚ್ಚಿಟ್ಟರು. ಅಮಿತ್ ಶಾ ಮನೆಗೆ ಬರುವುದಾಗಿ ಹೇಳಿದ್ದರು. ಬಿ.ಎಲ್. ಸಂತೋಷ್ ಅವರಿಗೆ ಕರೆ ಮಾಡಿ ಬೇಡ, ನಾನೇ ಬರುತ್ತೇನೆ ಅಂದೆ. ಆದಿಚುಂಚನಗಿರಿ ಮಠಕ್ಕೆ ಬರುತ್ತಾರೆ. ಅಲ್ಲಿಂದ ನಿಮ್ಮ ಮನೆಗೆ ಬಂದು ಟೀ ಕುಡಿದು ಹೋಗುತ್ತಾರೆ ಅಂದರು. ಅಮಿತ್ ಶಾ ನನ್ನ ಮನೆಗೆ ಬಂದರು. ಚೀಟಿ ತೆಗೆದು ನಾಲ್ಕೈದು ಪ್ರಶ್ನೆ ಕೇಳಿದ್ದರು. ಅದಾದ 8-12 ನಿಮಿಷದಲ್ಲಿ ದೆಹಲಿಗೆ ಬುಲಾವ್ ಬಂತು.
ಅಲ್ಲಿ ದೊಡ್ಡವರನ್ನು ಭೇಟಿ ಮಾಡಿಸಿದರು. ಮಗನಿಗೆ ಟಿಕೆಟ್ ಕೊಟ್ಟುಬಿಡಿ ಅಂತ ಕೇಳಿಕೊಂಡೆ. ನೀನು ಹೋಗಿ ನಿಲ್ಲಬೇಕು ಅಂತ ಸೂಚನೆ ನೀಡಿದರು. ಇದನ್ನು ಚಾಲೆಂಜ್ ಆಗಿ ಸ್ವೀಕಾರ ಮಾಡಿದ್ದೇನೆ. ಬಿನ್ನಿಪೇಟೆ, ಗೋವಿಂದರಾಜನಗರ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ. ವರುಣ, ಚಾಮರಾಜನಗರದ ಹಳ್ಳಿಹಳ್ಳಿ ಸುತ್ತಿದ್ದೇನೆ ಎಂದು ಹೇಳಿದರು.

Exit mobile version