Site icon Vistara News

Hubballi Ganeshotsava : ಹುಬ್ಬಳ್ಳಿ ಈದ್ಗಾ ಗಣೇಶೋತ್ಸವಕ್ಕೆ ಹೈಕೋರ್ಟ್‌ ಗ್ರೀನ್‌ಸಿಗ್ನಲ್‌; ಇನ್ನೂ ಅನುಮತಿ ಕೊಡದ ಪಾಲಿಕೆ

hubballi Ganeshotsava Issue

ಬೆಂಗಳೂರು/ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ (Hubballi Idgah Maidan) ಮುಂದಿನ ಐದು ವರ್ಷಗಳ ಕಾಲ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಮಹಾನಗರಪಾಲಿಕೆಯಲ್ಲಿ ಠರಾವು (City Muncipality resolution) ಮಾಡಿದ್ದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ (Anjuman Islam Institute) ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್‌ನ (Karnataka High Court) ಧಾರವಾಡ ಪೀಠ ತಿರಸ್ಕರಿಸಿದೆ. ಈ ಠರಾವಿಗೆ ತಡೆಯಾಜ್ಞೆ ನೀಡಬೇಕು ಎಂದು ಅಂಜುಮಾನ್‌ ಇಸ್ಲಾಂ ಮನವಿಯನ್ನು ತಳ್ಳಿ ಹಾಕಿದೆ (High court dismisses Anujuman plea). ಈ ಮೂಲಕ ಮೈದಾನದಲ್ಲಿ ಮೂರು ದಿನಗಳ ಕಾಲ ಗಣೇಶೋತ್ಸವ (Hubballi Ganeshotsava) ಆಚರಣೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ (High court Green Signal) ನೀಡಿದಂತಾಗಿದೆ. ಆದರೆ, ಹುಬ್ಬಳ್ಳಿ ಪಾಲಿಕೆಯ ಆಯುಕ್ತರು (Hubballi Muncipality Commissioner) ಇನ್ನೂ ಅನುಮತಿ ನೀಡದೆ ಇರುವುದು ಬಿಜೆಪಿ ಮತ್ತು ಹಿಂದು ಮುಖಂಡರನ್ನು ಕೆರಳಿಸಿದೆ.

ಹುಬ್ಬಳ್ಳಿಯ ಪ್ರತಿಷ್ಠಿತ ರಾಣಿ ಕಿತ್ತೂರು ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಬಂಧಿಸಿ ಮಹಾನಗರ ಪಾಲಿಕೆ ಠರಾವನ್ನು ತೆಗೆದುಕೊಂಡಿತ್ತು. ಮುಂದಿನ ಐದು ವರ್ಷಗಳ ಕಾಲ ಇಲ್ಲಿ ಗಣೇಶೋತ್ಸವ ನಡೆಸಲು ಈ ಠರಾವು ಅವಕಾಶ ನೀಡುತ್ತಿತ್ತು. ಆದರೆ, ಅಂಜುಮನ್‌ ಇಸ್ಲಾಂ ಸಂಸ್ಥೆ ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲು ಹತ್ತಿತ್ತು. ವಿಚಾರಣೆ ನಡೆಸಿದ ನ್ಯಾ. ಸಚಿನ‌ ಮಗದುಮ್ಮ‌ ಅವರಿದ್ದ ಏಕಸದಸ್ಯ ಪೀಠವು ಮೇಲ್ಮನವಿ ಅರ್ಜಿ ತಿರಸ್ಕರಿಸಿ ತೀರ್ಪು ನೀಡಿದೆ.

ಇದು ಮುಸ್ಲಿಮರಿಗೆ ಮಾತ್ರ ಪ್ರಾರ್ಥನೆ ಮಾಡಲು ಇರುವ ಮೈದಾನ. ಇಲ್ಲಿ ಬೇರೆ ಧರ್ಮದವರಿಗೆ ಅವಕಾಶ ಕೊಡಬಾರದು ಎಂದು ಅಂಜುಮನ್‌ ಇಸ್ಲಾಂ ಸಂಸ್ಥೆ ಪರವಾಗಿ ವಕೀಲರು ವಾದ ಮಾಡಿದ್ದರು. ಆದರೆ ಇದನ್ನು ಆಕ್ಷೇಪಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ್ ನಾವಡಗಿ ಅವರು ಇಲ್ಲಿ ರಮಜಾನ್ ಮತ್ತು ಬಕ್ರೀದ್ ಸಮಯದಲ್ಲಿ ಪ್ರಾರ್ಥನೆ ಮಾತ್ರ ಅವಕಾಶ ಇದೆ ಎಂದು ತಿಳಿಸಿದ್ದರು. ಇದನ್ನು ಪರಿಗಣಿಸಿದ ಹೈಕೋರ್ಟ್‌ನ ಧಾರವಾಡ ಪೀಠ ಅರ್ಜಿಯನ್ನು ವಜಾಗೊಳಿಸಿತು.

ಹೈಕೋರ್ಟ್‌ ತೀರ್ಪು ಬರುತ್ತಿದ್ದಂತೆಯೇ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಅರವಿಂದ ಬೆಲ್ಲದ್‌, ಮಹೇಶ್‌ ಟೆಂಗಿನಕಾಯಿ ಸ್ವಾಗತ

ʻʻಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸಿದವರಿಗೆ ಹೈಕೋರ್ಟ್ ಸರಿಯಾಗಿ ಪಾಠ ಕಲಿಸಿದೆ. ವಿರೋಧಿಗಳ ಅರ್ಜಿ ತಿರಸ್ಕರಿಸಿ ಆದೇಶ ನೀಡಿದೆ. ಈ ಬಾರಿ ವಿಜೃಂಭಣೆಯಿಂದ ಗಣೇಶೋತ್ಸವ ಮಾಡುತ್ತೇವೆʼʼ ಎಂದು ಶಾಸಕ ಅರವಿಂದ ಬೆಲ್ಲದ್‌ ಹೇಳಿದರು. ʻʻಕಳೆದ ಬಾರಿ ಶಾಂತರೀತಿಯಿಂದ ಗಣೇಶೋತ್ಸವ ಮಾಡಿದ್ದೆವು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪಾಲಿಕೆಯಲ್ಲಿ ಠರಾವು ಪಾಸ್ ಮಾಡಲಾಗಿದೆ. ಆದರೂ ಪಾಲಿಕೆ ಆಯುಕ್ತರು ಅನುಮತಿ ಕೊಡಲು ವಿಳಂಬ ಮಾಡುತ್ತಿರುವುದು ಸರಿಯಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ಸೂಚನೆಯಂತೆ ಕಮೀಷನರ್ ಹೀಗೆ ಮಾಡಿದ್ದಾರೆ. ಗಣೇಶನ ವಿಚಾರದಲ್ಲಿ ಹೀಗೆ ಮಾಡಿದ್ದು ವಿಷಾದನೀಯ ಎಂದು ಹೇಳಿದರು.

ʻʻಮಹಾನಗರ ಪಾಲಿಕೆಯಲ್ಲಿ ಠರಾವು ಪಾಸ್ ಆದ್ರೂ ಅನುಮತಿ ಕೊಡದೆ ಪಾಲಿಕೆ ಆಯುಕ್ತರು ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಅವರು ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಅನುಮತಿ ಕೊಡುತ್ತಿಲ್ಲ. ಯಾವುದೇ ರೀತಿಯ ಅನಾಹುತಗಳಿಗೆ ಅವಕಾಶವಾಗದಂತೆ ಅನುಮತಿ ಕೊಡಬೇಕುʼʼ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹಿಸಿದರು.

ಪಾಲಿಕೆ ಕಚೇರಿ ಎದುರು ಬಿಜೆಪಿ ಪ್ರತಿಭಟನೆ ಪ್ರತಿಕೃತಿ ದಹನ

ರಾಜ್ಯ ಹೈಕೋರ್ಟ್‌ ಪಾಲಿಕೆ ಠರಾವಿಗೆ ತಡೆಯಾಜ್ಞೆ ನೀಡಲು ನಿರಾಕರಿಸುವ ಮೂಲಕ ಗಣೇಶ ಪ್ರತಿಷ್ಠಾಪನೆಗೆ ಗ್ರೀನ್‌ ಸಿಗ್ನಲ್‌ ನೀಡಿದೆಯಾದರೂ ಪಾಲಿಕೆ ಆಯುಕ್ತರು ಮಾತ್ರ ಅನುಮತಿ ನೀಡಲು ಮೀನ ಮೇಷ ಎಣಿಸುತ್ತಿರುವುದರ ವಿರುದ್ಧ ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿಯ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಧ್ಯಾಹ್ನದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಪಾಲಿಕೆ ಆಯುಕ್ತರು ಅತ್ತ ಸುಳಿದಿಲ್ಲ.

ರಾಜ್ಯ ಸರ್ಕಾರದ ಸೂಚನೆಯಂತೆ ಪಾಲಿಕೆ ಆಯುಕ್ತರು ಅನುಮತಿ ನೀಡುತ್ತಿಲ್ಲ ಎಂದು ಆರೋಪ ಮಾಡಲಾಗಿದೆ. ಶಾಸಕ ಅರವಿಂದ ಬೆಲ್ಲದ್, ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಪಾಲಿಕೆ ಎದುರು ರಾಜ್ಯ ಸರ್ಕಾರದ ಪ್ರತಿಕೃತಿ ದಹನ ಮಾಡಲಾಗಿದೆ. ಈ ನಡುವೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಲು ಮುಂದಾದಾಗ ಪೊಲೀಸ್‌ ಕಮೀಷನರ್‌ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಸಿದ್ಧವಾಗುತ್ತಿದೆ ಗಣಪತಿ ಮೂರ್ತಿ

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ವಿವಾದಗಳು ಮುಂದುವರಿದಿರುವ ನಡುವೆಯೇ ಇಲ್ಲ ಪ್ರತಿಷ್ಠಾಪನೆಗಾಗಿ ಗಣಪತಿ ಮೂರ್ತಿ ಸಿದ್ಧಗೊಳ್ಳುತ್ತಿದೆ. ಐದು ಅಡಿ ಎತ್ತರದ‌‌ ಮಣ್ಣಿನ ಗಣೇಶ ಮೂರ್ತಿಯನ್ನು ಧಾರವಾಡದ ಚರಂತಿಮಠ ಗಾರ್ಡನ್‌ನಲ್ಲಿ ತಯಾರಿಸಲಾಗುತ್ತಿದೆ. ಮೂರ್ತಿ ಕಲಾವಿದ ಸುರೇಶ್ ಕರಿಗಾರ ಕೈಚಳಕದಲ್ಲಿ ಮೂರ್ತಿ ಸಿದ್ಧವಾಗುತ್ತಿದೆ. ರಾಣಿ ಚೆನ್ನಮ್ಮ ಮೈದಾನ ಗಜಾನನೋತ್ಸವ ಸಮಿತಿ ಭರ್ಜರಿ ಸಿದ್ಧತೆ ಆರಂಭಿಸಿದೆ.

10 ದಿನದ ಗಣೇಶೋತ್ಸವ, 31 ರೌಡಿಗಳ ಗಡಿಪಾರು

ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಈ ವರ್ಷ 10 ದಿನದ ಗಣೇಶೋತ್ಸವ ನಡೆಯಲಿದ್ದು, ಈ ವೇಳೆ ಶಾಂತಿ ಸೌಹಾರ್ದತೆ ಕಾಪಾಡಲು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 31 ರೌಡಿಗಳನ್ನು ಗಡಿಪಾರು ಮಾಡಿದ್ದಾರೆ. ಡಿಸಿಪಿ, ಎಸಿಪಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳು 700ಕ್ಕೂ ಹೆಚ್ಚು ರೌಡಿಗಳನ್ನು ಠಾಣೆಗಳಿಗೆ ಕರೆಸಿ ಎಚ್ಚರಿಕೆ ನೀಡಿದ್ದು, 16 ರೌಡಿಗಳಿಂದ ಬಾಂಡ್‌ ಬರೆಸಿಕೊಂಡು ₹4.70ಲಕ್ಷ ದಂಡ ವಿಧಿಸಿದ್ದಾರೆ. ಇಬ್ಬರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ, ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ 1,150 ಮಂದಿ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 5 ಡಿಸಿಪಿ, 15 ಎಸಿಪಿ, 50 ಪಿಐ, 150 ಪಿಎಸ್‌ಐ, 250 ಎಎಸ್‌ಐ, 2,000 ಹೆಡ್‌ ಕಾನ್‌ಸ್ಟೇಬಲ್ಸ್‌ ಹಾಗೂ 1,000 ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲು ಮುಂದಾಗಿದೆ. 20 ಕೆಎಸ್‌ಆರ್‌ಪಿ ಮತ್ತು 5 ಕೇಂದ್ರ ಮೀಸಲು ಪಡೆ ತುಕಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗಣೇಶಮೂರ್ತಿ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೂ 5ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಬಂದೋಬಸ್ತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

Exit mobile version